ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಬರೀ ಕಾನೂನು ಸುವ್ಯವಸ್ಥೆ ಸಮಸ್ಯೆಯಲ್ಲ...

ಅಕ್ಷರ ಗಾತ್ರ

ಸ್ತ್ರೀವಾದವು ತನ್ನದೇ ಆದಂತಹ ಏಳುಬೀಳುಗಳನ್ನು ಎದುರಿಸುವು­ದರೊಂದಿಗೆ ‘ಜಗತ್ತು  ಎಲ್ಲರಿಗೂ ಸಮಾನತೆ ಮತ್ತು ಸ್ವಾತಂತ್ರ್ಯದಿಂದ ಬದುಕಲು ಮುಕ್ತ ಅವಕಾಶಗಳನ್ನು ನೀಡಿದೆ. ನಾವು ಅದನ್ನು ಅರ್ಥ­ಮಾಡಿಕೊಂಡು ಸಮಾನತೆಯ ನೆಲೆ­ಯಿಂದ ಸಮಾಜವನ್ನು ರೂಪಿಸಿಕೊಳ್ಳಬೇಕು’ ಎಂಬ ತಾತ್ವಿಕತೆಯ ಆಧಾರದ ಮೇಲೆ ಕಾಲದಿಂದ ಕಾಲಕ್ಕೆ ಸ್ತ್ರೀಪರವಾದ ಧೋರಣೆಗಳಿಗೆ ತೆರೆದು ಕೊಳ್ಳುವಂತೆ ಆಳುವವರನ್ನು  ಬರವಣಿಗೆ, ಹೋರಾಟ, ಚಳವಳಿ  ಮುಂತಾದ ಮಾಧ್ಯಮ­ಗಳ ಮೂಲಕ ಒತ್ತಾಯಿಸುತ್ತಲೇ ಬಂದಿದೆ.

ಹಲವಾರು ವರ್ಷಗಳ ನಿರಂತರವಾದ ಈ ಪ್ರಯತ್ನಗಳ ಹೊರತಾಗಿಯೂ ಪ್ರಸ್ತುತ ದೇಶ­ದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯು-­ತ್ತಿರುವ ಅತ್ಯಾಚಾರ ಪ್ರಕರಣಗಳು ಸರ್ಕಾರವು ಸ್ತ್ರೀಪರವಾದ ನೀತಿಗಳನ್ನು ತನ್ನ ಆಲೋಚನೆಯ ಭಾಗವಾಗಿ ಒಪ್ಪಿಕೊಳ್ಳುವಲ್ಲಿ ಮತ್ತು ಅವುಗ­ಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸು­ವಲ್ಲಿ ಇದುವರೆಗೂ ತೋರಿಸುತ್ತಿರುವ ನಿರ್ಲಕ್ಷ್ಯ­ವನ್ನು ಬಯಲು ಮಾಡಿವೆ.

ಹಾಗೆ ನೋಡಿದರೆ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ, ಶತಮಾನಗಳ ಕಾಲ ಪ್ರಭುತ್ವವು ಮಹಿಳಾಪರ­ವಾದ ತನ್ನ ಧೋರಣೆಗಳನ್ನು ತನ್ನ ನೀತಿ ನಿರೂಪಣೆಗಳಲ್ಲಿ ಮುಕ್ತವಾಗಿ ಒಪ್ಪಿಕೊಳ್ಳದಿ­ರುವುದರ ಫಲಿತಾಂಶವೇ  ಆಗಿದೆ. ಸಮಕಾಲೀನ ಸಂದರ್ಭದಲ್ಲಿ ಸರ್ಕಾರದ ನೀತಿಗಳ ಹಿಂದಿರುವ ಈ ಪುರುಷತ್ವದ ಮನೋಭಾವವನ್ನು ಪ್ರಶ್ನಿಸ­ಬೇಕಾದ, ಪ್ರಭುತ್ವವನ್ನು ಹೆಚ್ಚು ಹೆಚ್ಚು ಸ್ತ್ರೀಪರವಾದ ನೀತಿಗಳಿಗೆ ತೆರೆದುಕೊಳ್ಳುವಂತೆ ಒತ್ತಾಯಿಸಬೇಕಾಗಿದ್ದ ಹೋರಾಟ ಮತ್ತು ಚರ್ಚೆ­ಗಳು ಅತ್ಯಾಚಾರದಂತಹ  ನೀಚ ಕೃತ್ಯವೆಸ­ಗಿದ ಅತ್ಯಾಚಾರಿಯನ್ನು ಕಾನೂನು ಯಾವ ಮಾದರಿಯ ಕ್ರೂರ ಶಿಕ್ಷೆಗೆ ಒಳಪಡಿಸಬೇಕು, ಅತ್ಯಾಚಾರಿಗೆ ವಿಧಿಸುವ ಶಿಕ್ಷೆಯನ್ನು ಇನ್ನಷ್ಟು ಕ್ರೂರಗೊಳಿಸುವ ನಿಟ್ಟಿನಲ್ಲಿ ಕಾನೂನುಗಳಿಗೆ ಯಾವ ಯಾವ ತಿದ್ದುಪಡಿ ತರಬೇಕು ಎಂಬ ಮಾದರಿಯ ಸಂಕುಚಿತ ಚರ್ಚೆಗಳಾಗಿ ಬದಲಾಗಿ­ಬಿಟ್ಟಿವೆ. ಆ ಮೂಲಕ ಹೆಣ್ಣಿನ ಮೇಲಿನ ಅತ್ಯಾ­ಚಾರ­ವನ್ನು ಕೇವಲ ಪರಿಣಾಮಕಾರಿ ಕಾಯ್ದೆ ಇಲ್ಲದಿರುವುದರಿಂದ ಉದ್ಭವಿಸಿರುವ ಸಮಸ್ಯೆ ಎಂದು ತೀರ ಸರಳೀಕರಿಸಿ ವಿಶ್ಲೇಷಿಸಿ­ಬಿಟ್ಟಿವೆ.

ಆದರೆ ಖಂಡಿತವಾಗಿ ವಾಸ್ತವ ಅದಲ್ಲ! ದಿನದಿಂದ ದಿನಕ್ಕೆ ಮಹಿಳೆ ಮತ್ತು ಮಕ್ಕಳ ಮೇಲೆ ನಡೆ­ಯುತ್ತಿರುವ ದೌರ್ಜನ್ಯಗಳಿಗೆ ಮುಖ್ಯ ಕಾರಣ, ನಮ್ಮನ್ನು ಆಳುವ ಸರ್ಕಾರವು ಸ್ತ್ರೀ ಸಂವೇದನೆಯನ್ನು ಹೊಂದಿಲ್ಲದಿರುವುದೇ ಆಗಿದೆ. ಮಹಿಳಾ ಶೋಷಣೆಯನ್ನು ಒಂದು ಕಾನೂನು ಸಮಸ್ಯೆ ಎನ್ನುವ ಮಾದರಿಯ ವಿಶ್ಲೇಷಣೆ ಮಾಡುವುದರ ಮೂಲಕ, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಕುರಿತಾದ ಸರ್ಕಾರದ ಇದುವರೆಗಿನ ಧೋರಣೆಗಳನ್ನು ಪ್ರಶ್ನಿಸುವ ಅವಕಾಶವನ್ನು ನಾವೂ ಕಳೆದುಕೊಳ್ಳುತ್ತಿದ್ದೇವೆ.

ಹಾಗಾದರೆ ಇಲ್ಲಿ ಏಳುವ ಮುಖ್ಯ ಪ್ರಶ್ನೆ, ಮಹಿಳೆ ಕೂಡ ಏಕೆ ಇಷ್ಟು ಸಂಕುಚಿತವಾಗಿ ಯೋಚಿಸು­ತ್ತಿ­ದ್ದಾಳೆ? ತನ್ನ   ಮೇಲಿನ ದೌರ್ಜನ್ಯ­ಗಳಿಗೆ ಒಂದು ಶಾಶ್ವತ ಪರಿಹಾರವನ್ನು ಒದಗಿ­ಸುವ ಪರ್ಯಾಯಗಳ ಕುರಿತು ಏಕೆ ಯೋಚಿಸು­ತ್ತಿಲ್ಲ? ಎಂದು ನೋಡಿದರೆ ಹಿಂದಿ­ನಿಂದಲೂ ನಮ್ಮ ವ್ಯವಸ್ಥೆ ಮಹಿಳೆಯರನ್ನು ಸ್ವತಂತ್ರ ವ್ಯಕ್ತಿಯಾಗಿ ಗುರುತಿಸದೆ ಪುರುಷತ್ವಕ್ಕೆ ಪೂರಕವಾಗುವ ತಾಯಿ, ಪತ್ನಿ, ವೇಶ್ಯೆ ಇನ್ನಿತರ ಸಿದ್ಧಮಾದರಿ­ಯಲ್ಲಿ ಗುರುತಿಸಿದೆ.

ಜೊತೆಗೆ ನಾವು ಕಟ್ಟಿಕೊಂಡ ಪ್ರಭುತ್ವವು ಸ್ತ್ರೀಯ ಬೆಳವಣಿಗೆ, ಅವಳಿಗೆ ನೀಡುವ ಶಿಕ್ಷಣ, ಅವಳನ್ನು ಬೆಳೆಸುವ  ಸಾಮಾ­ಜಿಕ ಪರಿಸ್ಥಿತಿ ಎಲ್ಲವೂ  ಆಕೆ­ಯನ್ನು ಒಂದು ಪೂರ್ವ­ನಿರ್ಧರಿತ ಚೌಕಟ್ಟಿನಲ್ಲಿ ವಿವರಿಸಿ ಮಹಿಳೆಯೇ ತನ್ನ ಪರಾಧೀನ ಸ್ಥಿತಿಯನ್ನು ಒಪ್ಪಿ­ಕೊಳ್ಳುವಂತೆ ಮಾಡಿಬಿಟ್ಟಿವೆ ಎಂಬ ವಿಶ್ಲೇಷಣೆ­ಯನ್ನು ಮಹಿಳಾ ಅಧ್ಯಯನಗಳು ಸಮರ್ಥವಾಗಿ ನಮ್ಮ ಮುಂದಿಡುತ್ತವೆ. ಆದ್ದ­ರಿಂದ ೨೧ನೇ ಶತಮಾನದಲ್ಲಿ ನಿಂತು ಯೋಚಿ­ಸುತ್ತಿರುವ ನಾವು ಇನ್ನಾದರೂ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಮುಖ್ಯ ಕಾರಣ ಅವರನ್ನು ಕುರಿತು ಪ್ರಭುತ್ವ ಹೊಂದಿರುವ ಧೋರಣೆಗಳು ಎಂಬುದನ್ನು ಅರ್ಥಮಾಡಿ­ಕೊಂಡು, ಪ್ರಭುತ್ವವು ಹೆಚ್ಚು ಹೆಚ್ಚು ಮಹಿಳಾ ನೆಲೆಯನ್ನು ಒಳಗೊಂಡು ಆಲೋಚಿಸುವಂತೆ ಒತ್ತಾಯಿಸಬೇಕು.

ಮಹಿಳಾ ಸುರಕ್ಷತೆ, ಆಕೆಯ ಸಬಲೀಕರಣ­ಗಳನ್ನು ಪ್ರಭುತ್ವ ಕೈಗೊಳ್ಳುವ ನೀತಿಯ ಮುಖ್ಯ ಆದ್ಯತೆಯಾಗಿಸುವ ವಾದಗಳನ್ನು ಕಟ್ಟಬೇಕಿದೆ. ಏಕೆಂದರೆ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್‌ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾ­ಚಾರ  ಪ್ರಕರಣದ ನಂತರ ತಿದ್ದುಪಡಿ­ಗೊಳಗಾದ ಕಾನೂನು ಜಾರಿಯಲ್ಲಿ ಇದ್ದರೂ ಸಹ ಆತ್ಯಚಾರದಂತದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗು­ತ್ತಿರುವುದು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಈ ಘಟನೆಗಳನ್ನು ತಡೆಯ­ಬಹುದು ಎಂಬ ಮಿಥ್ಯೆಯನ್ನು ಒಡೆದುಹಾಕಿದೆ.

ಆದ್ದರಿಂದ ಇಂದು ನಮಗೆ ಬೇಕಿರುವುದು ಮಹಿಳೆಯನ್ನು ಕುರಿತಾದ ಪ್ರಭುತ್ವದ ಮನಸ್ಥಿತಿ­ಯಲ್ಲಿ ಬದಲಾವಣೆಯೇ ಹೊರತು ಪ್ರಕರಣದ ನಂತರ ಸುರಿಸುವ ಕಣ್ಣೀರು ಅಥವಾ ಭಾವನಾ­ತ್ಮಕ ಮಾತುಗಳಲ್ಲ. ಇನ್ನು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಶಿಕ್ಷಣ ಇಲಾಖೆ ಹದಿಹರೆಯದವರಿಗೆ ಲೈಂಗಿಕತೆಯ ಕುರಿತ ನೈತಿಕತೆಯನ್ನು ಪಠ್ಯದ ಭಾಗವಾಗಿಸಬೇಕು ಮತ್ತು ಅದನ್ನು ಬೋಧಿಸಲು ನುರಿತ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಮಕ್ಕಳಿಗೆ ಸಲಹೆ, ಸೂಚನೆ ನೀಡುವ ಆಪ್ತ ಸಲಹೆಗಾರ ರನ್ನು ಪ್ರತಿಯೊಂದು ಶಾಲೆಯಲ್ಲಿ ನೇಮಿಸಿ ಕೊಳ್ಳ ಬೇಕಿದೆ.

ಏಕೆಂದರೆ ಘಟನೆ ಆದ ನಂತರ ನಾವು ಕಾರ್ಯ ಪ್ರವೃತ್ತರಾಗುವುದಕ್ಕಿಂತ ಘಟನೆ ನಡೆಯದ ಹಾಗೆ ನೋಡಿಕೊಳ್ಳುವುದು ಅಥವಾ ವ್ಯಕ್ತಿ ಆ ಮಾದರಿಯ ಘಟನೆಗಳನ್ನು ಮಾಡ ದಂತೆ ಅವನನ್ನು ಶಿಕ್ಷಿತನನ್ನಾಗಿಸುವುದು ಮುಖ್ಯ ವಾಗುತ್ತದೆ. ‘ಶಿಕ್ಷಣ’, ‘ಶಿಕ್ಷೆ’ಗಿಂತ ಪರಿಣಾಮ­ಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಸತ್ಯವನ್ನು ಇತಿಹಾಸ ಹಲವು ಸಂದರ್ಭ­ಗಳಲ್ಲಿ ನಿರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT