ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೃಷ್ಟ ಚೆನ್ನಾಗಿತ್ತು; ಪುನರ್ಜನ್ಮ ಸಿಕ್ಕಿದೆ...

ಖಾಸಗಿ ಬಸ್‌ ದುರಂತದಲ್ಲಿ ಬದುಕುಳಿದವರ ಕಥೆ
Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದಾವಣಗೆರೆ: ಎಲ್ಲರೂ ಸವಿನಿದ್ರೆಯಲ್ಲಿದ್ದರು. ಒಮ್ಮೆಲೇ ದೊಡ್ಡ ಶಬ್ದವೊಂದು ಕಿವಿಗೆ ಅಪ್ಪಳಿಸಿತು. ಏನಾಯಿತು ಎಂದು ಕಣ್ಣುಬಿಟ್ಟು ನೋಡುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಬಸ್‌ ಆವರಿಸಿತ್ತು. ಕ್ಷಣಾರ್ಧದಲ್ಲಿ ಹೊಗೆಯಿಂದ ಉಸಿರು­ಕಟ್ಟುವ ವಾತಾವರಣ ನಿರ್ಮಾಣ­ವಾಯಿತು. ತಕ್ಷಣವೇ ಎಚ್ಚರಗೊಂಡು ಕಿಟಕಿಯ ಗಾಜು ಒಡೆದು ಹೊರಗೆ ಜಿಗಿದೆ. ಆದರೆ, ಪಕ್ಕದಲ್ಲಿಯೇ ಇದ್ದ ನಮ್ಮ ಮಾವನನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ; ಎಷ್ಟು ಕೂಗಿಕೊಂಡರೂ ಅವರಿಗೆ ನನ್ನ ಕೂಗು ಕೇಳಿಸಲೇ ಇಲ್ಲ....

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮೇಟಿ­ಕುರ್ಕೆ ಬಳಿ ಬುಧವಾರ ಮುಂಜಾನೆ ನಡೆದ ಖಾಸಗಿ ಬಸ್‌ ದುರಂತದಲ್ಲಿ ಬದುಕುಳಿದು ಬಂದ ಡಿಪ್ಲೊಮಾ ಪದವೀಧರ ಮಹಮ್ಮದ್‌ ಮುಸ್ತಾಫ, ದಾವಣ­ಗೆರೆ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯಲ್ಲಿ ‘ಪ್ರಜಾವಾಣಿ’ ಎದುರು ಹೀಗೆ ಕಣ್ಣೀರು ಸುರಿಸಿದರು.

ಮುಸ್ತಾಫ ಅವರಿಗೆ ಬೆನ್ನಿನ ಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾ­ಗಿವೆ. ಅವರ ಕೈ– ಕಾಲು, ಪಾದ ನೋಡಿದರೆ ಅವಘಡದ ಭೀಕರತೆ ಅರಿವಾಗುತ್ತದೆ. ಮಹಮ್ಮದ್‌ ಮುಸ್ತಾಫ ಹಾಗೂ ಅವರ ಮಾವ ಮಹಮ್ಮದ್‌ ರಫೀಕ್‌ ಎಸ್‌ಪಿಆರ್‌ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ನಲ್ಲಿ ಅಕ್ಕಪಕ್ಕದ ಸೀಟ್‌ನಲ್ಲಿಯೇ ಆಸೀನರಾ­ಗಿದ್ದರು. ಹರಿಹರದಲ್ಲಿ ರಫೀಕ್‌ ಅವರು ಸೋನಿ ಫುಟ್‌ವೇರ್‌ ಹೆಸರಿನ ಅಂಗಡಿ ನಡೆಸುತ್ತಾರೆ. ಹೀಗಾಗಿ, ಇಬ್ಬರು ಸಗಟು ಮಾರುಕಟ್ಟೆಯಲ್ಲಿ ಚಪ್ಪಲಿ ಖರೀದಿಸಲು ಬೆಂಗಳೂರಿಗೆ ತೆರಳುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಯಿತು.

‘ಮಂಗಳವಾರ ಮಧ್ಯರಾತ್ರಿ 12ರ ಸುಮಾರಿಗೆ ದಾವಣಗೆರೆಯ ರೈಲು­ನಿಲ್ದಾಣ ಸಮೀಪದಿಂದ ಬಸ್‌ ಹೊರಟಿತ್ತು. ಬಸ್‌ ನಿಧಾನಕ್ಕೆ ಚಲಿಸುತ್ತಿತ್ತು. ನಾನು ಬಸ್‌ನಿಂದ ಜಿಗಿದ ಅರ್ಧ ಗಂಟೆಯ ಬಳಿಕ ಆಂಬುಲೆನ್ಸ್‌ವೊಂದು ಬಂತು. ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಸಹ ನೀಡಿದರು. ಆದರೆ, ಮಾವ ರಫೀಕ್‌ ಪಕ್ಕದಲ್ಲಿದ್ದರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅವರಿಗೆ ಏನಾಯಿತು ಎಂಬುದು ತಿಳಿದಿಲ್ಲ’ ಎಂದು ಮುಸ್ತಾಫ ಹೇಳಿದರು.

ಚಾಲಕ ಕೂಗಿಕೊಂಡ: ಮೈಸೂರಿನಲ್ಲಿ ಪೌರೋಹಿತ್ಯ ನಡೆ­ಸುವ ಹರಿಹರದ ಸಂಜಯ ಆಚಾರ್ಯ ಹಾಗೂ ಅವರ ಪತ್ನಿ ಶ್ರೀಪ್ರಿಯಾ ಕೆಲಸದ ನಿಮಿತ್ತ ಬೆಂಗ­ಳೂರಿಗೆ ತೆರಳುತ್ತಿದ್ದರು. ಶ್ರೀಪ್ರಿಯಾ ಅವರಿಗೆ ಶೇ 60ರಷ್ಟು ಸುಟ್ಟ ಗಾಯಗಳಾಗಿವೆ. ಸಂಜಯ ಆಚಾರ್ಯ ಮಾತನಾಡುವ ಸ್ಥಿತಿಯಲ್ಲಿದ್ದರು.

‘ಚಾಲಕನಿಗೆ ಬೆಂಕಿ ಬಿದ್ದಿರುವುದು ಅರಿವಿಗೆ ಬಂತು. ಆತ ತಕ್ಷಣವೇ ಕೂಗಿಕೊಂಡು ಕೆಳಗೆ ಹಾರಿದ. ಆತನ ಕೂಗು ನನ್ನನ್ನು ಎಚ್ಚರಗೊಳಿಸಿತು. ತಕ್ಷ­ಣವೇ ಪತ್ನಿಯನ್ನೂ ಎಚ್ಚರಗೊಳಿಸಿದೆ. ಆಕೆಗೆ ತಕ್ಷ­ಣವೇ ಜಿಗಿಯಲು ಸಾಧ್ಯವಾಗಲಿಲ್ಲ. ಇದರಿಂದ ಹೆಚ್ಚಿನ ಗಾಯಗಾಳಾಗಿವೆ’ ಎಂದ ಸಂಜಯ ಆಚಾರ್ಯ ಪಕ್ಕದ ಬೆಡ್‌ನಲ್ಲಿದ್ದ ಪತ್ನಿ ಕಡೆಗೆ ತಿರುಗಿನೋಡಿದರು.

‘ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಉದ್ದೇಶವಿತ್ತು. ಆದರೆ, ಚುನಾವಣಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ನಿಯೋಜಿಸ­ಲಾಗಿತ್ತು. ನಮ್ಮ ಸಮಯಕ್ಕೆ ಸರ್ಕಾರಿ ಬಸ್‌ಗಳೂ ಸಿಗಲಿಲ್ಲ. ಅದೃಷ್ಟವಶಾತ್‌ ನಮ್ಮ ತಾಯಿಯನ್ನು ರೈಲಿನಲ್ಲಿ ಮೈಸೂರು ಕಡೆಗೆ ಹತ್ತಿಸಿ, ನಾವು ಮಾತ್ರ ಬೆಂಗಳೂರಿಗೆ ತೆರಳುತ್ತಿದ್ದೆವು’ ಎಂದು ಸಂಜಯ ಕಣ್ಣೀರು ಹಾಕಿದರು.

ಹೊಸಕೋಟೆ ಸೂಲಿಬೆಲೆಯ ಕಾಶೀನಾಥ್‌ ಸಹ ಬಸ್‌ನಲ್ಲಿದ್ದರು. ಅವರು ನನಗೆ ಪುನರ್ಜನ್ಮ ಸಿಕ್ಕಿದೆ ಎಂದು ವಿವರಿಸಿದರು. ನಾಯಕನಹಟ್ಟಿ ಶಾಲೆಯೊಂದರ ಶಿಕ್ಷಕ ಮಹಮ್ಮದ್‌ ಶೊಯೇಬ್‌ ಬಸ್‌ನಿಂದ ಜಿಗಿದ ರಭಸಕ್ಕೆ ಅವರ ಕಾಲಿಗೂ ಬಲವಾದ ಪೆಟ್ಟಾಗಿದೆ.

10 ಮಂದಿ ರಕ್ಷಿಸಿದ ಧೀರ!
ದಾವಣಗೆರೆ:
ಬಸ್‌ನ 23ನೇ ಸೀಟ್‌ನಲ್ಲಿದ್ದ ಹರಪನಹಳ್ಳಿ ತಾಲ್ಲೂಕು ಕವಲಹಳ್ಳಿಯ ಯುವಕ ಪ್ರಶಾಂತ್‌ 10 ಮಂದಿ ಪ್ರಯಾಣಿಕ­ರನ್ನು ರಕ್ಷಿಸುವಲ್ಲಿ ಯಶಸ್ವಿ­ಯಾಗಿ­ದ್ದಾರೆ. ಅವರು ಬೆಂಗಳೂರಿನ ಮೈಕ್ರೋ ಸನ್‌ ಸೋಲಾರ್‌ ಕಂಪೆನಿ ಉದ್ಯೋಗಿ.

‘ಮೊದಲಿಗೆ ದಿಕ್ಕೇ ತೋಚದಾಯಿತು. ಗಾಜು ಒಡೆದೆ; ಕೆಲವರು ನನ್ನ ಕಾಲನ್ನೇ ಹಿಂದಕ್ಕೆ ಎಳೆಯುತ್ತಿದ್ದರು. ಆದರೆ, ಹೆದರದೆ ಇಬ್ಬರು ಮಹಿಳಾ ಪ್ರಯಾಣಿಕರನ್ನು ಕೆಳಗೆ ಜಿಗಿ­ಯಲು ಸಹಾಯ ಮಾಡಿದೆ. ಬಳಿಕ ನಾನೂ ಜಿಗಿದೆ. ಮತ್ತೆ ಕೆಳಗೆನಿಂತು ಎಂಟು ಮಂದಿ ಪ್ರಯಾ­ಣಿಕರನ್ನು ರಕ್ಷಣೆ ಮಾಡಿದೆ. ಅಷ್ಟರಲ್ಲಿ ಬೆಂಕಿ ಜೋರಾಯಿತು. ನಾನೂ ದೂರ ಸರಿದೆ’ ಎಂದು ಪ್ರಶಾಂತ್‌ ಘಟನೆಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT