ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಪ್ರೀತಿ, ಅದೇ ಅಕ್ಕರೆ...

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಐಪಿಎಲ್‌ ಮೇಲೆ ನಿಷೇಧ ಹೇರಿ. ಇದು ಪ್ರೀಮಿಯರ್‌ ಲೀಗ್‌ ಅಲ್ಲ, ಪೈಸಾ ವಸೂಲ್‌ ಲೀಗ್‌. ಐಪಿಎಲ್‌ ಭ್ರಷ್ಟರ ಆಟ. ಕಳ್ಳಾಟದಲ್ಲಿ ಸಿಕ್ಕಿಬಿದ್ದಿರುವ ಆಟಗಾರರನ್ನು ಜೈಲಿಗೆ ಕಳುಹಿಸಿ’ ಎಂದು ಕೂಗುತ್ತಾ ಕೆಲ ದಿನಗಳ ಹಿಂದೆಯಷ್ಟೇ ಕ್ರಿಕೆಟ್‌ ಪ್ರೇಮಿಗಳು ಬೀದಿಗಿಳಿದಿದ್ದರು. ಅದಕ್ಕೆ ಕಾರಣ ಐಪಿಎಲ್‌ನಲ್ಲಿ ಭಾರಿ ಸದ್ದು ಮಾಡಿದ ಬೆಟ್ಟಿಂಗ್‌ ಹಾಗೂ ಕಳ್ಳಾಟ ಪ್ರಕರಣ.

ಈಗ ಅದೇ ಅಭಿಮಾನಿಗಳು ಸ್ಕೋರ್‌ ಎಷ್ಟಾಯಿತು ಸರ್‌? ಅಯ್ಯೋ, ಮುಂಬೈ ಇಂಡಿಯನ್ಸ್‌ ಸೋಲಬಾರದಿತ್ತು, ಲಸಿತ್‌ ಮಾಲಿಂಗ ಚೆನ್ನಾಗಿಯೇ ಬೌಲ್ ಮಾಡಿದರು. ಅಬ್ಬಾ, ಯುವಿ ಮತ್ತೆ ಫಾರ್ಮ್‌ ಕಂಡುಕೊಂಡಿದ್ದಾರೆ. ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಪ್ರಶಸ್ತಿ ಗ್ಯಾರಂಟಿ ಎನ್ನುತ್ತಿದ್ದಾರೆ.

ಅದು ಐಪಿಎಲ್‌ ಸೃಷ್ಟಿಸಿರುವ ಹವಾ. ಈ ಬಾರಿಯ ಟೂರ್ನಿ ಸಾವಿರಾರು ಮೈಲುಗಳ ದೂರದಲ್ಲಿ ನಡೆಯುತ್ತಿದ್ದರೂ ಅದೇ ಉತ್ಸಾಹ, ಅದೇ ಕಾತರ, ಅದೇ ಕುತೂಹಲ. ‘ಗಲ್ಫ್‌ ನಾಡಿನ ಕ್ರಿಕೆಟ್‌ ವಾತಾವರಣ ಗಮನಿಸಿದರೆ ಯುಎಇನಲ್ಲಿಯೇ ಭಾರತ ಇರುವಂತೆ ಭಾಸವಾಗುತ್ತಿದೆ’ ಎಂದು  ರಾಜಸ್ತಾನ ರಾಯಲ್ಸ್‌ನ ಶೇನ್‌ ವಾಟ್ಸನ್‌ ಟ್ವೀಟ್‌ ಮಾಡಿದ್ದಾರೆ.

ಹೌದು, ಅರಬ್ಬರ ನಾಡಿನಲ್ಲಿ ಈಗ ಐಪಿಎಲ್‌ ಕಲರವ. ಕ್ರೀಡಾಂಗಣಗಳು ತುಂಬಿ ತುಳುಕುತ್ತಿವೆ. ಅಲ್ಲಿನ ಕ್ರಿಕೆಟ್ ಪ್ರೇಮಿಗಳು ತುಂಬಾ ಖುಷಿಯಾಗಿದ್ದಾರೆ. ಮೊದಲ ವಾರದ ಪಂದ್ಯಗಳ ಎಲ್ಲಾ ಟಿಕೆಟ್‌ ‘ಸೋಲ್ಡ್‌ಔಟ್‌’. ಐಪಿಎಲ್‌ನಲ್ಲಿ ಏನೇ ವಿವಾದವಿದ್ದರೂ ರೋಚಕತೆಗೆ ಭಂಗವಿಲ್ಲ. ಭಾರತದಲ್ಲಿ ನಡೆಯಲಿ, ಬೇರೆ ಯಾವುದೇ ದೇಶದಲ್ಲಿ ಜರುಗಲಿ ಚುಟುಕು ಕ್ರಿಕೆಟ್‌ ಲೀಗ್‌ನ  ಟಿಆರ್‌ಪಿ ಮಾತ್ರ ಕಡಿಮೆಯಾಗುವುದಿಲ್ಲ. ಬಿಸಿಸಿಐ ಆದಾಯಕ್ಕೆ ಕೊಂಚ ಹೊಡೆತ ಬೀಳಬಹುದು ಅಷ್ಟೆ.

ಟ್ವೆಂಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಸೋಲಿನಿಂದ ನಿರಾಸೆಗೆ ಒಳಗಾಗಿದ್ದ ಕ್ರಿಕೆಟ್‌ ಪ್ರೇಮಿಗಳು ಮತ್ತೆ ಖುಷಿಯಾಗಿದ್ದಾರೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಶಾರ್ಜಾ, ಅಬುಧಾಬಿ ಹಾಗೂ ದುಬೈನಲ್ಲಿ ನಡೆಯುತ್ತಿರುವ ಪಂದ್ಯಗಳನ್ನು ಟಿವಿಯ ಮೂಲಕ ಆಸ್ವಾದಿಸುತ್ತಿದ್ದಾರೆ. ಭಾರತದ ಕ್ರಿಕೆಟ್‌ ಪ್ರಿಯರಿಗೆ ಹಾಗೂ ಪ್ರಾಯೋಜಕರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಪಂದ್ಯಗಳ ಸಮಯ ನಿಗದಿಮಾಡಲಾಗಿದೆ. ಕೆಲವರು ಪ್ರವಾಸದ ನೆಪದಲ್ಲಿ ಭಾರತದಿಂದ ಯುಎಇಗೆ ಹೋಗಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಭಾರತ ಹಾಗೂ ಯುಎಇನ ಟ್ರಾವೆಲ್‌ ಏಜೆನ್ಸಿಗಳು ಅಭಿಮಾನಿಗಳಿಗೆ ಹೊಸ ಹೊಸ ಆಫರ್‌ ನೀಡುತ್ತಿವೆ.

ಭಾರತದಲ್ಲಿರುವಷ್ಟೇ ಕ್ರಿಕೆಟ್‌ ಪ್ರೀತಿ ಯುಎಇನಲ್ಲೂ ಇದೆ. ಇದಕ್ಕೆ ಕಾರಣ ಅಲ್ಲಿರುವ ಹೆಚ್ಚಿನವರು ಉಪಖಂಡದವರು. ಉದ್ಯೋಗ ಅರಸಿ ಪಾಕ್‌ ಹಾಗೂ ಭಾರತದಿಂದ ವಲಸೆ ಹೋದವರೇ ಅಧಿಕ. ಉನ್ನತ ದರ್ಜೆಯ ಕ್ರೀಡಾಂಗಣಗಳು ಅಲ್ಲಿವೆ. ಅಷ್ಟೇ ಏಕೆ? ಐಸಿಸಿಯ ಕೇಂದ್ರ ಕಚೇರಿ ಇರುವುದು ದುಬೈನಲ್ಲಿ.

ಭಾರತ-ಯುಎಇ  ನಡುವಿನ ಕ್ರಿಕೆಟ್‌ ಸಂಬಂಧ ಹೊಸದೇನಲ್ಲ. ನಿಮಗೆ ‘ಡೆಸರ್ಟ್‌್ ಸ್ಟಾರ್ಮ್‌’ ಕಥೆ ಗೊತ್ತಿರಬಹುದು. 1990ರ ದಶಕದಲ್ಲಿ ಶಾರ್ಜಾದಲ್ಲಿ ನಡೆದ ಕ್ರಿಕೆಟ್‌ ಟೂರ್ನಿಗಳಲ್ಲಿ ಸಚಿನ್‌ ತೆಂಡೂಲ್ಕರ್ ಎಬ್ಬಿಸಿದ ಹವಾ ಅದು. ಸತತ ಎರಡು ಶತಕ ಸಿಡಿಸಿ ಶೇನ್‌ ವಾರ್ನ್‌ ಅವರನ್ನು ಕಾಡಿದ ಪರಿ ಇಂದಿಗೂ ನೆನಪಾ­­ಗುತ್ತಿರುತ್ತದೆ. ಅಂದು ಆಸ್ಟ್ರೇಲಿಯಾ­­ವನ್ನು ಮಣಿಸಲು ಸಚಿನ್‌ ಕಟ್ಟಿದ ಆ ಇನಿಂಗ್ಸ್‌ಗಳು  ಕಾರಣವಾಗಿದ್ದವು.

1986ರಲ್ಲಿ ನಡೆದ ಆಸ್ಟ್ರಲ್‌ ಏಷ್ಯಾ ಕಪ್‌ ಫೈನಲ್‌ನಲ್ಲಿ ಭಾರತದ ಚೇತನ್‌ ಶರ್ಮ ಹಾಕಿದ ಕೊನೆಯ ಎಸೆತದಲ್ಲಿ ಜಾವೇದ್‌ ಮಿಯಾಂದಾದ್‌ ಸಿಕ್ಸರ್‌ ಎತ್ತಿ ಪಾಕ್‌ ತಂಡವನ್ನು ಗೆಲ್ಲಿಸಿದ ಪರಿಯನ್ನು ಯಾರು ಮರೆಯುತ್ತಾರೆ ಹೇಳಿ? 1984ರಿಂದ 2003ರವರೆಗೆ ಶಾರ್ಜಾ ಕ್ರೀಡಾಂಗಣದಲ್ಲಿ 198 ಏಕದಿನ ಪಂದ್ಯಗಳು ಜರುಗಿವೆ.  ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಆ ದಿನಗಳಲ್ಲಿ ಭಾರತ-ಪಾಕ್‌ ತಂಡಗಳಿಗೆ ಶಾರ್ಜಾ ನಗರಿ ಕ್ರಿಕೆಟ್‌ ಆಡಲು ತಟಸ್ಥ ತಾಣವಾಗಿತ್ತು.

ಆದರೆ ಕಳ್ಳಾಟ ಹೊಗೆಯಾಡಿದ್ದು ಈ ನಗರಿಗೆ ಶಾಪವಾಗಿ ಪರಿಣಮಿಸಿತು. ಕ್ರಿಕೆಟ್‌ನಲ್ಲಿ ಮೊದಲ ಬಾರಿ ಫಿಕ್ಸಿಂಗ್‌ ಬಹಿರಂಗವಾಗಿದ್ದೇ ಶಾರ್ಜಾದಲ್ಲಿ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಕ್ರೀಡಾಂಗಣದಲ್ಲಿಯೇ ಕುಳಿತು ಕ್ರಿಕೆಟ್‌ ವೀಕ್ಷಿಸಿದ್ದ. 2000ರ ಬಳಿಕ ಶಾರ್ಜಾದಲ್ಲಿ ಆಡದಂತೆ ಭಾರತ ತಂಡದ ಮೇಲೆ ನಿಷೇಧ ಹೇರಲಾಯಿತು. ಶಾರ್ಜಾದಲ್ಲಿ ಭಾರತ ಕ್ರಿಕೆಟ್‌ ಆಡಿ ಬರೋಬ್ಬರಿ 14 ವರ್ಷಗಳು ಕಳೆದು ಹೋಗಿವೆ. ಅಬುಧಾಬಿಯಲ್ಲಿ 2006ರಲ್ಲಿ ಎರಡು ಪಂದ್ಯ ಆಡಿತ್ತು. ಈಗ ಮತ್ತೆ ಭಾರತದ ಆಟಗಾರರು ಅರಬ್ಬರ ನಾಡಿನಲ್ಲಿದ್ದಾರೆ.

ಈಗಾಗಲೇ ಐಪಿಎಲ್‌ ಮೇಲೆ ಹಲವು ಕಳಂಕಗಳಿವೆ. ಇಷ್ಟೆಲ್ಲಾ ಇದ್ದರೂ ಯುಎಇನಲ್ಲಿಯೇ ಏಕೆ ಐಪಿಎಲ್‌ ಆಯೋಜಿಸಿದ್ದೀರಿ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಕೂಡ ಕ್ರಿಕೆಟ್‌ ಮಂಡಳಿಯನ್ನು ಪ್ರಶ್ನಿಸಿದೆ. ದುಬೈ ನಗರಿಯನ್ನು ‘ಕ್ರಿಕೆಟ್‌ ಬೆಟ್ಟಿಂಗ್‌ನ ಸ್ವರ್ಗ’ ಎನ್ನುತ್ತಾರೆ. ಅದೇ ಕ್ರೀಡಾ ಪ್ರೇಮಿಗಳ ಆತಂಕಕ್ಕೆ ಪ್ರಮುಖ ಕಾರಣ. ಮರಳುಗಾಡಿನ ದೇಶದಲ್ಲಿ ಏಪ್ರಿಲ್‌ 30ರವರೆಗೆ ಒಟ್ಟು 20 ಪಂದ್ಯಗಳು ಜರುಗಲಿವೆ. 

ವಿವಾದದ ಕಾರಣ ಈ ಬಾರಿ ಟೂರ್ನಿಯಲ್ಲಿ ಮನರಂಜನೆ ಕಡಿಮೆಯಾಗಿದೆ. ಚಿಯರ್‌ ಗರ್ಲ್ಸ್‌ ಇದ್ದರಾದರೂ ತುಂಡು ಬಟ್ಟೆ ತೊಟ್ಟು ಕುಣಿಯುವಂತಿಲ್ಲ. ‘ಈ ಬಾರಿ ಕ್ರಿಕೆಟ್‌ಗೆ ಮೊದಲ ಸ್ಥಾನ’ ಎಂದು ಯುಎಇಗೆ ತೆರಳುವ ಮೊದಲೇ ಸುನಿಲ್‌ ಗಾವಸ್ಕರ್‌ ಹೇಳಿದ್ದರು.
ವಿದೇಶದಲ್ಲಿ ನಡೆಯುತ್ತಿರುವುದರಿಂದ ಬಿಸಿಸಿಐ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಹಾಗೇ, ಈ ಟೂರ್ನಿ ಆಯೋಜಿಸಿರುವ ಯುಎಇಗೆ ಎಲ್ಲಾ ರೀತಿಯಿಂದಲೂ ಲಾಭವಾಗಿದೆ. ಅದು ಪ್ರವಾಸೋದ್ಯಮ ಇರಬಹುದು, ಕ್ರಿಕೆಟ್‌ ಪ್ರಗತಿ ದೃಷ್ಟಿಯಿಂದ ಆಗಿರಬಹುದು. ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿಗೂ ಅಪಾರ ಲಾಭವಾಗುತ್ತಿದೆ. ಮುಂದಿನ ವರ್ಷವೂ ಐಪಿಎಲ್‌ ಇಲ್ಲಿಯೇ ನಡೆಯಲಿ ಎಂದು ಡಿನ್ನರ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುಎಇ ಸಚಿವರೊಬ್ಬರು ಹೇಳಿದ್ದಾರೆ. ವಿದೇಶದಲ್ಲಿ ಐಪಿಎಲ್‌ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು.

ಯಾರು ಬಲಿಷ್ಠರು...?
ಈ ಬಾರಿ ಯಾರು ಚಾಂಪಿಯನ್ ಆಗಬಹುದು ಎಂದು ಈಗಲೇ ಅಭಿಮಾನಿಗಳು ಚರ್ಚೆ ಶುರುವಚ್ಚಿಕೊಂಡಿದ್ದಾರೆ. ಆದರೆ ಬಲಿಷ್ಠ ತಂಡ ಎಂದು ಯಾರನ್ನು ಈಗಲೇ ನಿಖರವಾಗಿ ಹೇಳುವಂತಿಲ್ಲ. ಏಕೆಂದರೆ ಈ ಬಾರಿ ತಂಡದಲ್ಲಿ ಭಾರಿ ಬದಲಾವಣೆಯಾಗಿದೆ.  2013ರ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಈ ಬಾರಿಯ ತನ್ನ ಮೊದಲ ಪಂದ್ಯದಲ್ಲಿಯೇ ಮುಗ್ಗರಿಸಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಈ ತಂಡದಲ್ಲಿ ಕ್ರಿಸ್‌ ಗೇಲ್‌, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಎಬಿ ಡಿವಿಲಿಯರ್ಸ್‌ ಅವರಂಥ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದಾರೆ.

ಮೊದಲ ಪಂದ್ಯದಲ್ಲಿಯೇ ಯುವಿ ಐದು ಸಿಕ್ಸರ್‌ ಎತ್ತಿ ತಮ್ಮ ಕೈಚಳಕ ತೋರಿಸಿದ್ದಾರೆ. ಬ್ಯಾಟಿಂಗ್‌ ವಿಭಾಗದಲ್ಲಿ ಈ ತಂಡವನ್ನು ಮೀರಿಸುವವರಿಲ್ಲ. ಆದರೆ ಇದೇ ವಿಷಯವನ್ನು ಬೌಲಿಂಗ್‌ ವಿಭಾಗದಲ್ಲಿ ಹೇಳಲಾಗದು. ಚೆನ್ನೈ ಸೂಪರ್‌ ಕಿಂಗ್ಸ್‌ ಸಮತೋಲನದಿಂದ ಕೂಡಿರುವ ತಂಡ. ಈಗಾಗಲೇ ಎರಡು ಬಾರಿ ಚಾಂಪಿಯನ್‌ ಆಗಿರುವ ಈ ತಂಡವನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಕಾರಣ ಈ ತಂಡದ ನಾಯಕ ಎಂ.ಎಸ್.ದೋನಿ. ಎಮಿರೇಟ್ಸ್‌ನಲ್ಲಿ ಈಗ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ. ಈ ಸವಾಲಿನ ನಡುವೆ ಆಡಬೇಕಾಗಿದೆ.

ಯುಎಇನಲ್ಲಿ ಐಪಿಎಲ್‌ ನಡೆಯುತ್ತಿರುವುದು ಕೆಲ ಕ್ರಿಕೆಟಿಗರಿಗೆ ಪೂರ್ಣ ಖುಷಿ ನೀಡಿಲ್ಲ. ಅವರೆಲ್ಲಾ ಭಾರತದಲ್ಲಿ ಆಡಲು ಕಾಯುತ್ತಿದ್ದಾರೆ. 
ಮೇ 2ರಿಂದ ಭಾರತದಲ್ಲಿಯೇ ಪಂದ್ಯಗಳು ನಡೆಯಲಿವೆ. ಆಗ ಉದ್ಭವಿಸುವ ವಾತಾವರಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.  l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT