ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ದೂರಿತನ, ಕಥೆಗೆ ನಿಷ್ಠೆ...

Last Updated 12 ನವೆಂಬರ್ 2015, 19:30 IST
ಅಕ್ಷರ ಗಾತ್ರ

‘ಈ ಸಿನಿಮಾ ನೋಡಿದರೆ ಮೂಲ ಚಿತ್ರದವರು ಮತ್ತೆ ರೀಮೇಕ್‌ ರೈಟ್ಸ್ ತೆಗೆದುಕೊಳ್ಳಲು ಮುಂದೆ ಬರುತ್ತಾರೆ’.

–‘ರಾಮ್‌ಲೀಲಾ’ ನಿರ್ದೇಶಕ ವಿಜಯ್ ಕಿರಣ್‌ ತಮ್ಮ ಸಿನಿಮಾದ ಗುಣಮಟ್ಟದ ಕುರಿತು ಹೇಳುವುದು ಹೀಗೆ. ತೆಲುಗಿನಲ್ಲಿ ಯಶಸ್ಸು ಕಂಡಿದ್ದ ‘ಲೌಕ್ಯಂ’ ಚಿತ್ರದ ಕನ್ನಡ ಅವತರಣಿಕೆ ‘ರಾಮ್‌ಲೀಲಾ’ ನಿನ್ನೆ (ಗುರುವಾರ) ತೆರೆಕಂಡಿದೆ.

ರೀಮೇಕ್ ಆಗಿದ್ದರೂ ಇದು ಮೂಲ ಚಿತ್ರಕ್ಕಿಂತ ಭಿನ್ನವಾಗಿ ಮತ್ತು ಅದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿಕೊಳ್ಳುತ್ತಾರೆ ವಿಜಯ್ ಕಿರಣ್‌. ಚಿತ್ರ ವೀಕ್ಷಿಸಿದ ಮೂಲ ಚಿತ್ರದ ನಿರ್ಮಾಪಕರು ನಾಯಕನಿಗೆ ಕರೆ ಮಾಡಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರಂತೆ.

‘ಲೌಕ್ಯಂ’ನ ಚಿತ್ರಕಥೆಯ ಹೆಣಿಗೆಗಳನ್ನು ಕಳಚಿ ಕನ್ನಡ ಪ್ರೇಕ್ಷಕರಿಗಾಗಿ ಹೊಸದಾಗಿ ಹೆಣೆಯಲಾಗಿದೆ. ಹೀಗಾಗಿ ಮೂಲಚಿತ್ರ ನೋಡಿದರೂ ಇದು ವಿಭಿನ್ನ ಎನಿಸುತ್ತದೆ. ಆ ಚಿತ್ರದಲ್ಲಿ ಇಲ್ಲದ ಕೆಲವು ಪಾತ್ರಗಳು ಇಲ್ಲಿ ಅಡಕವಾಗಿವೆ. ಪಾತ್ರಗಳ ಸ್ವರೂಪದಲ್ಲಿಯೂ ಕೆಲವು ಬದಲಾವಣೆಗಳಾಗಿವೆ. ಅತ್ಯಂತ ಗುಣಮಟ್ಟದ ಕ್ಯಾಮೆರಾ ಬಳಸಿದ್ದೇವೆ.

ಮೂರು ಹಾಡುಗಳನ್ನು ಜಾರ್ಜಿಯಾದಲ್ಲಿ ಇದುವರೆಗೆ ಭಾರತೀಯ ಚಿತ್ರರಂಗದಲ್ಲಿ ಯಾರೂ ಚಿತ್ರೀಕರಣ ನಡೆಸದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಇಡೀ ಚಿತ್ರದಲ್ಲಿ ಅದ್ದೂರಿತನ ಎದ್ದು ಕಾಣುತ್ತದೆ. ಆದರೆ ಕಥೆಗೆ ನಿಷ್ಠನಾಗಿದ್ದೇನೆ ಎನ್ನುವುದು ಅವರ ವಿವರಣೆ.

ಕನ್ನಡ ಸಿನಿಮಾಗಳು ಯಾವ ಭಾಷೆಯ ಸಿನಿಮಾಕ್ಕೂ ಕಡಿಮೆ ಇಲ್ಲ ಎನ್ನುವಂತೆ ಚಿತ್ರ ಗುಣಮಟ್ಟದಲ್ಲಿ ಅದ್ದೂರಿಯಾಗಿ ಮೂಡಿಬಂದಿದೆ ಎನ್ನುವ ಹಲವು ನಿರ್ದೇಶಕರ ಮಾತನ್ನು ವಿಜಯ್‌ ಸಹ ಉಚ್ಚರಿಸುತ್ತಾರೆ. ಹಾಡು, ಚಿತ್ರೀಕರಣದ ಸ್ಥಳಗಳು, ಪಾತ್ರವರ್ಗ, ತಾಂತ್ರಿಕತೆಗಳಲ್ಲಿ ಇದು ಢಾಳಾಗಿ ಕಾಣಿಸುತ್ತದೆಯಂತೆ.

ಕನ್ನಡದ ಜನರು ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಕನ್ನಡ ಸಿನಿಮಾಗಳ ಗುಣಮಟ್ಟವನ್ನು ಅವುಗಳೊಂದಿಗೆ ಹೋಲಿಸುತ್ತಾರೆ. ಕನ್ನಡದಲ್ಲಿಯೂ ಅದಕ್ಕಿಂತ ಗುಣಮಟ್ಟದ ಚಿತ್ರಗಳನ್ನು ನೀಡಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗುತ್ತದೆ ಎನ್ನುತ್ತಾರೆ ಅವರು.

ಪರಭಾಷೆಯ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕ ನೋಡುವಾಗ ರೀಮೇಕ್‌ ಅಗತ್ಯವೇಕೆ ಎಂಬ ಪ್ರಶ್ನೆಗೆ ಅವರು, ಚಿತ್ರದಲ್ಲಿ ಮಾಡಿಕೊಂಡ ಬದಲಾವಣೆಗಳನ್ನು ವಿವರಿಸುತ್ತಾರೆ. ಇದು ಯಥಾವತ್ ನಕಲು ಅಲ್ಲ. ಅದರ ಮೂಲಭಾಗವನ್ನು ಮಾತ್ರ ತೆಗೆದುಕೊಂಡಿದ್ದೇವೆ. ಹೊಸ ಸಿನಿಮಾ ನೋಡಿದ ಅನುಭವ ದೊರಕುತ್ತದೆ ಎಂಬ ಸಮರ್ಥನೆ ನೀಡುತ್ತಾರೆ. ಸ್ವಮೇಕ್‌ ಚಿತ್ರಕ್ಕಿಂತ ರೀಮೇಕ್‌ ಮಾಡುವುದು ಕಷ್ಟ ಎನ್ನುತ್ತಾರೆ ವಿಜಯ್‌. ರೀಮೇಕ್‌ ತಪ್ಪಲ್ಲ. ಒಳ್ಳೆಯ ಸಿನಿಮಾಗಳನ್ನು ಇಲ್ಲಿನ ಪ್ರೇಕ್ಷಕರಿಗೆ ನೀಡುವುದೇ ಅದರ ಉದ್ದೇಶ ಎಂದು ಅವರು ಹೇಳುತ್ತಾರೆ.

ನಿರ್ದೇಶಕರ ಅನುಭವದಂತೆ ಯಾವ ಭಾಷೆಯ ಪ್ರೇಕ್ಷಕರಾದರೂ ಬಯಸುವುದು ನಗಿಸುವ ಸಿನಿಮಾಗಳನ್ನು. ಅದು ಇಲ್ಲಿ ದುಪ್ಪಟ್ಟು ಸಿಗುತ್ತದೆ. ನಗಿಸುವ ಕಲಾವಿದರ ದಂಡು ಹಿರಿದಾಗಿದೆ ಎನ್ನುತ್ತಾರೆ ಅವರು.

ಸಮಸ್ಯೆಗಳನ್ನು ತಣ್ಣಗೆ ಬಗೆಹರಿಸುವ ರಾಮ್‌ ಎಂಬ ಯುವಕನ ಲೀಲೆಗಳೇ ‘ರಾಮ್‌ಲೀಲಾ’. ಹಿಂದಿಯ ‘ರಾಮ್‌ಲೀಲಾ’ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆ್ಯಕ್ಷನ್‌, ಹಾಸ್ಯ ಸೇರಿದಂತೆ ಎಲ್ಲಾ ಪ್ರಕಾರಗನ್ನೂ ಚಿರಂಜೀವಿ ಸರ್ಜಾ ಚೆನ್ನಾಗಿ ನಿಭಾಸುತ್ತಾರೆ. ಹಾಗೆಯೇ ಇಲ್ಲಿಯೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನುತ್ತಾರೆ ವಿಜಯ್.

ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಅವರಿಗೆ ಅನಿಸಿದೆ. ಚಿತ್ರೀಕರಣ ಶುರುವಾದಾಗಿನಿಂದೇ ಅವರಲ್ಲಿ ಈ ಬಗ್ಗೆ ಸಕಾರಾತ್ಮಕತೆ ಅವರಲ್ಲಿ ಮೂಡಿದೆಯಂತೆ. ಶೇ 200ರಷ್ಟು ಗೆಲ್ಲುವ ಸಿನಿಮಾ ಇದು ಎನ್ನುತ್ತಾರೆ ಅವರು.

***
ರಾಮ್‌ಲೀಲಾ: ಭಾರಿ ಮೇಳ!
‘ರಾಮ್‌ಲೀಲಾ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ನಿರ್ಮಾಪಕ ಸೌಂದರ್ಯ ಜಗದೀಶ್ ವಿಶೇಷ ದಾರಿ ಅನುಸರಿಸಿದ್ದರು. ಶಿವರಾಜಕುಮಾರ್, ಅರ್ಜುನ್ ಸರ್ಜಾ, ಉಪೇಂದ್ರ, ಪುನೀತ್, ದರ್ಶನ್, ಗಣೇಶ್ ಅವರಿಂದ ತಲಾ ಒಂದೊಂದು ಹಾಡು ಬಿಡುಗಡೆ ಮಾಡಿಸಲಾಗಿತ್ತು. ಆಡಿಯೋ ಸಿ.ಡಿ ಮಾರಾಟ ಭರ್ಜರಿಯಾಗಿ ನಡೆದಿದೆ ಎಂಬ ಖುಷಿಯನ್ನು ಹಂಚಿಕೊಳ್ಳಲು ಜಗದೀಶ್ ಸಂತೋಷಕೂಟ ಆಯೋಜಿಸಿದ್ದರು.

‘ಅದ್ದೂರಿತಕ್ಕೆ ಇನ್ನೊಂದು ಹೆಸರೇ ರಾಮ್‌ಲೀಲಾ ಎಂಬಂತಿದೆ. ಗುಣಮಟ್ಟ ಚೆನ್ನಾಗಿರಲಿ ಎಂಬ ಉದ್ದೇಶದಿಂದ ನಾನೆಲ್ಲೂ ರಾಜಿ ಮಾಡಿಕೊಂಡಿಲ್ಲ. ಚಿತ್ರ ಈ ಹಂತಕ್ಕೆ ಬರಲು ಎಲ್ಲ ಕಲಾವಿದರ ಸಹಕಾರವೇ ಕಾರಣ’ ಎಂದು ಜಗದೀಶ್ ಕೃತಜ್ಞತೆ ಸಲ್ಲಿಸಿದರು. ಸೌಂದರ್ಯ ಜಗದೀಶ್ ಅವರ ಚಿತ್ರದಲ್ಲಿ ಕೆಲಸ ಮಾಡುವುದು ನಾಯಕ ನಟ ಚಿರಂಜೀವಿ ಸರ್ಜಾ ಅವರಿಗೆ ಹೆಚ್ಚು ಖುಷಿ ಕೊಟ್ಟಿದೆ.

‘ಇವರ ಬ್ಯಾನರ್‌ ಒಂದರ್ಥದಲ್ಲಿ ಬಾಲಿವುಡ್ಡಿನ ರಾಜಶ್ರೀ ಬ್ಯಾನರ್‌ನಂತೆ’ ಎಂಬ ಬಣ್ಣನೆ ಅವರದು. ಹಿರಿಯ ಹಾಗೂ ಕಿರಿಯ ಕಲಾವಿದರಿಂದ ತಾವು ಸಾಕಷ್ಟು ಕಲಿತಿದ್ದಾಗಿ ಸರ್ಜಾ ಹೇಳಿಕೊಂಡರು. ‘ನಿರ್ಮಾಪಕರಿಗೆ ಸಿನಿಮಾ ಎಂಬುದು ಪ್ಯಾಶನ್. ನಿರ್ದೇಶಕರಿಗೆ ದೂರದೃಷ್ಟಿ ಇದೆ. ಕಣ್ಣಿಗೆ ಹಬ್ಬ ಎಂಬಂತೆ ದೃಶ್ಯ ಕೊಡುವ ಗುರಿ ಛಾಯಾಗ್ರಾಹಕ ಭರಣಿ ಅವರದು. ಹೀಗಿದ್ದಾಗ ಸಿನಿಮಾ ಅತ್ಯುತ್ತಮವಾಗಿಯೇ ಬರಲಿದೆ’ ಎಂದರು.

‘ಪರಭಾಷೆಯ ಚಿತ್ರಗಳಲ್ಲಿ ಎಲ್ಲ ಕಲಾವಿದರು ಪ್ರಚಾರ ಕಾರ್ಯಕ್ಕೆ ತಪ್ಪದೇ ಬರುತ್ತಾರೆ. ನಮ್ಮ ಕನ್ನಡ ಚಿತ್ರರಂಗದಲ್ಲೂ ಅದು ನಡೆಯಬೇಕು’ ಎಂದು ರಾಮ್‌ಲೀಲಾದಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿರುವ ರವಿಶಂಕರ್ ಸಲಹೆ ಮಾಡಿದರು. ಅವಕಾಶ ನೀಡಿದ ನಿರ್ಮಾಪಕ– ನಿರ್ದೇಶಕರಿಗೆ ನಾಯಕಿ ಅಮೂಲ್ಯ ಧನ್ಯವಾದ ಸಲ್ಲಿಸಿದರು.

ತೆಲುಗು ಚಿತ್ರವೊಂದರ ಎಳೆಯನ್ನಷ್ಟೇ ತೆಗೆದುಕೊಂಡು, ಕನ್ನಡದ ಸೊಗಡಿಗೆ ತಕ್ಕಂತೆ ಚಿತ್ರ ಮಾಡಿದ್ದಾಗಿ ನಿರ್ದೇಶಕ ವಿಜಯಕಿರಣ್ ಮಾಹಿತಿ ನೀಡಿದರು. ಚಿತ್ರೀಕರಣದ ಸಮಯದಲ್ಲಿ ಒಂದಷ್ಟು ಪಾತ್ರಗಳನ್ನು ಹೆಚ್ಚಿಗೆ ಸೇರಿಸಿರುವುದು, ಸಿನಿಮಾಕ್ಕೆ ಇನ್ನಷ್ಟು ಕಳೆ ನೀಡಿದೆ ಎಂದು ಅವರು ಹೇಳಿದರು.

ಕಲಾವಿದರಾದ ಚಿಕ್ಕಣ್ಣ, ಸಂಜನಾ, ವಿಜಯಪ್ರತಾಪ್, ಆರು ಹಾಡುಗಳಿಗೆ ಸಂಗೀತ ನೀಡಿರುವ ಅನೂಪ್‌ ರುಬೆನ್ಸ್‌ ಹಾಗೂ ಆನಂದ ಆಡಿಯೋದ ಶ್ಯಾಮ್ ಮಾತನಾಡಿದರು. ಬಳಿಕ ಚಿತ್ರದ ಹಾಡುಗಳ ಸಿ.ಡಿ ಬಿಡುಗಡೆ ಮಾಡಿ, ಎಲ್ಲ ಹಾಡುಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT