ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕಿಂತ ಸಾಮರಸ್ಯ ಮುಖ್ಯ

Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

ಅವಳು ಮನೆಗೆಲಸ ಮಾಡುತ್ತಾಳೆ, ಅವ ಮೆಕ್ಯಾನಿಕ್, ನಾಲ್ಕು ಮಕ್ಕಳು, ಅವ ಮೊದಲೇ ಸೋಮಾರಿ, ಕೆಲಸವಿದ್ದರೆ ಮಾಡಿದ ಇಲ್ಲವೆಂದರೆ ಪೋಲಿ ಗೆಳೆಯರೊಡನೆ ಓಡಾಟ, ಅವನಿಗೋಸ್ಕರ ಸಾಲ ತೆಗೆದುಕೊಂಡು ಬೈಕ್ ಕೊಡಿಸಿದ್ದಾಳೆ, ಮನೆಯಲ್ಲಿ ಮಕ್ಕಳಿಗೆ ಸರಿಯಾದ ಬಟ್ಟೆಗಳಿಲ್ಲದಿದ್ದರೂ ಹೆಂಡತಿಯ ದುಡಿಮೆಯಲ್ಲಿ ಬೈಕ್ ತೆಗೆದುಕೊಂಡು ಓಡಿಸುವಾಟ, ಜೊತೆಗೆ ಆಗಾಗ ಅವಳಿಗೆ ಅವನಿಂದ ಹೊಡೆತ, ವರ್ಷಕ್ಕೊಂದು ಮಗು ಕೈಗೆ, ಸಂಸಾರ ನಿರ್ವಹಣೆಯಲ್ಲಿ ಅವಳದೇ ಮುಖ್ಯ ಪಾತ್ರ, ಆದರೆ ಜವಾಬ್ದಾರಿ ಮಾತ್ರ ಅವಳದು, ನಿರ್ಣಯಗಳನ್ನು ತೆಗೆದು ಕೊಳ್ಳುವುದಿರಲಿ, ಅವಳಿಗೆ ಯಾವುದೇ ಸ್ವಾತಂತ್ರ್ಯವಿಲ್ಲ.

ಹೀಗೊಂದು ಜೋಡಿ, ಗಂಡ ಹೆಂಡತಿಯರಿಬ್ಬರೂ ಸಾಮರಸ್ಯದಿಂದಲೇ ಇದ್ದರು, ಹೆಂಡತಿ ಗೃಹಿಣಿ, ಅವಳನ್ನು ಇಷ್ಟಪಟ್ಟು ಮೆಚ್ಚುಗೆಯಿಂದಲೇ ಮದುವೆ ಆದದ್ದು ಆದರೆ ಹಣಕಾಸಿನ ಬಗ್ಗೆ ಯಾವುದನ್ನೂ ಹೆಂಡತಿಗೆ ತಿಳಿಸುವ ಅಗತ್ಯವಿಲ್ಲವೆಂದು ಅವನ ಭಾವನೆ, ಅವಳ ಬೇಕು ಬೇಡಗಳನ್ನೆಲ್ಲ ನಾನು ತೀರಿಸುತ್ತಿದ್ದೇನಲ್ಲವೇ ಎನ್ನುವ ವಿಚಾರ, ಹೀಗಾಗಿ ಅವ ಕೊಟ್ಟ ಕೆಲ ಕೈ ಸಾಲಗಳ ವಿಷಯವನ್ನೂ ಹೆಂಡತಿಗೆ ತಿಳಿಸಿರಲಿಲ್ಲ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಅಕಸ್ಮಾತಾಗಿ ಗಂಡನ ಸಾವುಂಟಾದಾಗ ಸಾಲ ತೆಗೆದುಕೊಂಡ ಅನೇಕರು ಜಾರಿ ಕೊಂಡರು. ಸಾಲ ಕೊಟ್ಟವರು ಮಾತ್ರ ಬಿಡಲಿಲ್ಲ, ಸಂಸಾರ ಸಂಕಷ್ಟಕ್ಕೆ ಸಿಲುಕಿತು. ಗಂಡನಿಗೆ ಪ್ರತಿಯೊಂದು ವಿಷಯದಲ್ಲೂ ಸಹಕಾರ ನೀಡುತ್ತಿದ್ದ ಹೆಂಡತಿಗೆ ಕನಿಷ್ಠ ಹಣಕಾಸಿನ ಮಾಹಿತಿ ನೀಡಿದ್ದರೆ ಒಳಿತಾಗುತ್ತಿತ್ತಲ್ಲವೇ, ಅಷ್ಟಾದರೂ ಅಧಿಕಾರ ಅವಳಿಗೆ ನೀಡಬಹುದಿತ್ತಲ್ಲವೇ?

ಇಲ್ಲೊಂದು ನಲವತೈದು ವರ್ಷದ ಅನುರೂಪದ ದಾಂಪತ್ಯ ಎನ್ನಬಹುದು. ಗಂಡ ಹೆಂಡತಿಯರ ಆಸೆ ಆಸಕ್ತಿಗಳು ಬೇರೆ ಬೇರೆ, ಹೆಂಡತಿ ಹೊರಗೆ ಹೋಗಿ ದುಡಿಯುವುದಿಲ್ಲ,  ಆದರೆ ಇವರ ಸಂಸಾರದ ಯಶಸ್ಸಿಗೆ ಇಬ್ಬರೂ ಕಾರಣ ಎಂದು ಪರಸ್ಪರರಿಬ್ಬರ ಅಭಿಪ್ರಾಯ.

ಹಣ ಸಂಪಾದನೆಯನ್ನೇನೂ ಹೆಂಡತಿ ಮಾಡುವುದಿಲ್ಲ ಅಂದ ಮಾತ್ರಕ್ಕೆ ಅವಳು ಏನೂ ಮಾಡುವುದಿಲ್ಲವೆಂದು ಅರ್ಥವಲ್ಲ. ಕೆಲಸಕ್ಕೆ ಹೋಗಿ ದುಡಿಯುವುದು ಗಂಡನ ಜವಾಬ್ದಾರಿಯಾದರೆ ಸಂಸಾರದ ನಿರ್ವಹಣೆ, ಮಕ್ಕಳ ಪಾಲನೆ, ಪೋಷಣೆ, ಬಂದ ಆದಾಯದಲ್ಲಿ ಉಳಿತಾಯ, ಲೆಕ್ಕ ಪತ್ರಗಳು, ಬ್ಯಾಂಕಿನ ವ್ಯವಹಾರ ಎಲ್ಲದರಲ್ಲೂ ಹೆಂಡತಿಯದು ಮುಖ್ಯ ಪಾತ್ರವಿತ್ತು. ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಪರಸ್ಪರರಿಬ್ಬರೂ ಆಲೋಚಿಸಿ ಕುಳಿತು ಒಂದು ಅಭಿಪ್ರಾಯಕ್ಕೆ ಬರುವುದು ರೂಢಿ. ಇದೇ ಸೂತ್ರದಲ್ಲಿ ಮೂವರು ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿ ಅವರನ್ನು ಒಂದು ನೆಲೆಗೆ ತರುವುದರಲ್ಲಿ ಇಬ್ಬರ ಪಾತ್ರವೂ ಇತ್ತು. ಸಂಸಾರದಲ್ಲಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಇಬ್ಬರ ಅಭಿಮತವೂ ಬೇಕು. ಪರಸ್ಪರ ಸಮಾಲೋಚನೆಯಂತೂ ಖಂಡಿತ ಅಗತ್ಯ ಎನ್ನುವ ಸೂತ್ರ ಈ ಜೋಡಿಯದು.

ಹೆಣ್ಣು ಹಣವನ್ನು ಸಂಪಾದಿಸಲಿ ಅಥವಾ ಇಲ್ಲದಿದ್ದರೂ ಸರಿ, ಜವಾಬ್ದಾರಿಯನ್ನು ಖಂಡಿತ ಸಮನಾಗಿ ಹಂಚಿಕೊಳ್ಳುವುದರಲ್ಲಿ ಅವಳು ಎಂದೂ ಮುಂದು, ಅಂತೆಯೇ ಅವಳ ಅಭಿಪ್ರಾಯಗಳಿಗೂ ಮನ್ನಣೆ ಅಗತ್ಯ, ಸಮನಾದ ಅಧಿಕಾರ ಎನ್ನುವುದಕ್ಕಿಂತ ಸಾಮರಸ್ಯ ಖಂಡಿತಾ ಮುಖ್ಯ. ಈ ಸಾಮರಸ್ಯದಿಂದಲೇ ಭಾರತೀಯ ಕುಂಟುಂಬ ವ್ಯವಸ್ಥೆ ಇನ್ನೂ ಜೀವಂತವಾಗಿರುವುದು ಅಲ್ಲವೇ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT