ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಂದ ಚುರುಕುಗೊಂಡ ತನಿಖೆ

ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ
Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಸಂಶೋಧಕ ಪ್ರೊ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಡೆದು ಆರು ದಿನಗಳಾದರೂ ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ.
ಆದರೆ, ಇದೇ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ. ಕ್ಯಾಮೆರಾ ಪತ್ತೆ ಮಾಡಿರುವ ಸಿಐಡಿ ಅಧಿಕಾರಿಗಳು, ಅದರಲ್ಲಿ ಹಂತಕರ ಜಾಡು ಸಿಗಬಹುದೇ ಎಂದು ಶೋಧನಾ ಕಾರ್ಯ ಮುಂದುವರಿಸಿದ್ದಾರೆ.

ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರ ಮನೆಯ ಮುಂದೆ ಈ ಕ್ಯಾಮೆರಾ ಅಳವಡಿಸಲಾಗಿದೆ. ಹತ್ಯೆ ನಡೆದ ದಿನ ತನಿಖೆ ಕೈಗೊಂಡಿದ್ದಾಗ ಶ್ವಾನ ದಳಕ್ಕೆ ಈ ಕ್ಯಾಮೆರಾ ಇರುವ ಪ್ರದೇಶದ ವರೆಗೆ ಹಂತಕರು ಬಂದಿರುವ ಸುಳಿವು ನೀಡಿತ್ತು.  ಮುಂದೆ ಆರೋಪಿಗಳು ಎಲ್ಲಿ ಹೋದರು ಎಂಬುದು ಪತ್ತೆಯಾಗಿರಲಿಲ್ಲ.   ಈಗ ಸಿಕ್ಕಿರುವ ಈ ಕ್ಯಾಮೆರಾದ ಡಿವಿಆರ್‌ ಮೂಲಕ ಹಂತಕರ ಜಾಡು ಸಿಗಬಹುದೇ ಎಂಬುದರ ನಿರೀಕ್ಷೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ ದಿನದಿಂದ ಪ್ರತಿನಿತ್ಯ ಕಲ್ಯಾಣ ನಗರಕ್ಕೆ ಭೇಟಿ ನೀಡುತ್ತಿರುವ ಪೊಲೀಸ್ ಅಧಿಕಾರಿಗಳು ಕಲಬುರ್ಗಿ ಅವರ ಕುಟುಂಬ ವರ್ಗ ಹಾಗೂ ಅಕ್ಕಪಕ್ಕದವರಿಂದ ಮಾಹಿತಿ ಸಂಗ್ರಹಿಸುತ್ತಲೇ ಇದ್ದಾರೆ. ಶುಕ್ರವಾರವೂ ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿದ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಸಿ.ರಾಜಪ್ಪ ನೇತೃತ್ವದ ತಂಡ ಮಾಹಿತಿ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿಐಡಿ ಅಧಿಕಾರಿಯೊಬ್ಬರು ಆರೋಪಿಯ ಸುಳಿವು ಶೀಘ್ರವೇ ಸಿಗುವ ಭರವಸೆ ಇದೆ ಎಂದು ಪತ್ರಕರ್ತರಿಗೆ ತಿಳಿಸಿದರು.

ತನಿಖೆಗೆ ಸಹಕರಿಸುತ್ತೇವೆ...
ಕಲಬುರ್ಗಿ ಅವರ ಮನೆಯ ಎದುರಿನ ವಿಶ್ವಾಸ್‌ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು, ಅಲ್ಲಿರುವ ನಿವಾಸಿಗಳ ಹೇಳಿಕೆ ದಾಖಲಿಸಿಕೊಂಡರು. ಸಿಐಡಿ ಅಧಿಕಾರಿಗಳು ಅಪಾರ್ಟ್‌ಮೆಂಟ್‌ ಪ್ರವೇಶಿಸುತ್ತಿದ್ದಂತೆ ಹೊರಗಿನವರ ಪ್ರವೇಶ ನಿರ್ಬಂಧಿಸಿದರು. ನಂತರ ಬಹಳ ಹೊತ್ತಿನವರೆಗೂ ಅಧಿಕಾರಿಗಳು ಅಲ್ಲಿಯೇ ಇದ್ದು, ಆರೂ ಮನೆಗಳ ನಿವಾಸಿಗಳಿಂದ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಮುಚ್ಚಯದ ನಿವಾಸಿಯೊಬ್ಬರು, ‘ಸಿಐಡಿ ಅಧಿಕಾರಿಗಳು ಗೊತ್ತಿರುವ ಮಾಹಿತಿ ನೀಡುವಂತೆ ಕೇಳಿದರು. ಇಂಥ ವಿಷಯದಲ್ಲಿ ನಮಗೆ ಗೊತ್ತಿರುವ ಮಾಹಿತಿ ನೀಡುವುದು ನಮ್ಮ ಕರ್ತವ್ಯ ಕೂಡಾ. ಪ್ರಕರಣ ನಡೆದ ದಿನ ಭಾನುವಾರವಾಗಿದ್ದರಿಂದ ಮನೆಯವರೆಲ್ಲರೂ ಬೆಳಿಗ್ಗೆ ಏಳುವುದು ತಡವಾಗಿತ್ತು. ಅಷ್ಟು ಹೊತ್ತಿಗಾಗಲೇ ಕಲಬುರ್ಗಿ ಅವರ ಮಗಳು ಕೂಗಿಕೊಂಡು ಸಹಾಯಕ್ಕಾಗಿ ಮೊರೆ ಇಡುತ್ತಿದ್ದ ಶಬ್ದ ಕೇಳಿಸಿತು. ಸದಾ ನಿಶ್ಶಬ್ದವಾಗಿರುವ ರಸ್ತೆಯಲ್ಲಿ ಒಮ್ಮೆಲೇ ಇಂಥ ಆಕ್ರಂದನ ಕೇಳಿ ಹೊರಗೆ ಓಡಿ ಬಂದೆವು. ಅಷ್ಟರಲ್ಲಿ ಕಲಬುರ್ಗಿ ಅವರ ಅಕ್ಕಪಕ್ಕದ ಮನೆಯವರು ಸೇರಿದ್ದರು. ನಂತರ ಕಾರಿನಲ್ಲಿ ಅವರನ್ನು ಕರೆದುಕೊಂಡು ಹೋಗುವುದನ್ನು ಕಂಡೆವು’ ಎಂದರು.

‘ಈ ರಸ್ತೆಯಲ್ಲಿ ಮಂಗಗಳ ಹಾವಳಿ ವಿಪರೀತ. ಹೀಗಾಗಿ ಕಲಬುರ್ಗಿ ಅವರ ಮನೆಯವರೂ ಸೇರಿದಂತೆ ಆಗಾಗ ಪಟಾಕಿ ಹೊಡೆಯುತ್ತಿದ್ದರು. ಅಂದು ಹತ್ಯೆಗೂ ಮುನ್ನ ನಡೆದಿದೆ ಎನ್ನಲಾದ ಗುಂಡಿನ ಸದ್ದು ಕೂಡಾ ನಮಗೆ ಅದೇ ಪಟಾಕಿಯಂತೆಯೇ ಕೇಳಿಸಿತು. ಹೀಗಾಗಿ ಅದರತ್ತ ಹೆಚ್ಚು ಗಮನ ನೀಡಲಿಲ್ಲ. ಆದರೆ ಅವರ ಮಗಳು ಕೂಗಿಕೊಂಡಾಗಲೇ ಅನಾಹುತ ನಡೆದ ಕುರಿತು ತಿಳಿದು ಬಂತು’ ಎಂದರು.

ನಿರ್ದೇಶಕರ ಭೇಟಿ:ಪ್ರೊ.ಕಲಬುರ್ಗಿ ಅವರ ಮನೆಗೆ ಶುಕ್ರವಾರ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರು ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಸಂಘದ ಅಧ್ಯಕ್ಷ ಎಂ.ಎಸ್‌.ರಮೇಶ, ಉಪಾಧ್ಯಕ್ಷ ನಾಗೇಂದ್ರ ಪ್ರಸಾದ್‌, ಮಳವಳ್ಳಿ ಸಾಯಿಕೃಷ್ಣ, ಯೋಗೇಶ ಸೇರಿದಂತೆ ಇತರರು ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ನಾಗೇಂದ್ರ ಪ್ರಸಾದ್‌, ‘ಪ್ರೊ.ಕಲಬುರ್ಗಿ ಹಂತಕರ ಶೋಧ ಕಾರ್ಯ ಚುರುಕುಗೊಳ್ಳಬೇಕು. ಸಾಹಿತ್ಯಿಕ ಜಿಲ್ಲೆಯಾಗಿರುವ ಧಾರವಾಡದಲ್ಲಿ ಇಂಥ ಘಟನೆ ನಡೆದಿದ್ದು, ತೀವ್ರ ಬೇಸರ ತಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT