ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

ತುಮಕೂರು ತಾಲ್ಲೂಕು ಗಳಿಗೇನಹಳ್ಳಿಯಲ್ಲಿ ಆನೆ ತುಳಿದು ಸಾವು; ರೈತರ ಆಕ್ರೋಶ
Last Updated 21 ಏಪ್ರಿಲ್ 2014, 6:57 IST
ಅಕ್ಷರ ಗಾತ್ರ

ತುಮಕೂರು: ಆನೆ ತುಳಿದು ರೈತ ಮೃತಪಟ್ಟಿ­ರುವು­ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಗಳಿಗೇನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗಳಿಗೇನಹಳ್ಳಿಯಲ್ಲಿ ಗ್ರಾಮದ ನರಸಿಂಹ­ಮೂರ್ತಿ (53) ಎಂಬುವರನ್ನು ಭಾನು­ವಾರ ಮುಂಜಾನೆ ಆನೆಗಳು ತುಳಿದು ಕೊಂದಿದ್ದು, ರೈತರು ಆಕ್ರೋಶಗೊಂಡಿದ್ದರು. ಮುಂಜಾನೆ ತೋಟಕ್ಕೆ ಹೋಗಿದ್ದ ಅವರನ್ನು ಎರಡು ಆನೆಗಳು ಸೇರಿ ತುಳಿದು ಹಾಕಿವೆ. ನರಸಿಂಹಮೂರ್ತಿ ಪುತ್ರ ಶಶಿಕುಮಾರ್‌ ಆನೆ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದಾರೆ.

ಅಪ್ಪ ಮತ್ತು ಮಗ ಇಬ್ಬರೂ ಮುಂಜಾನೆಯೇ ತೋಟಕ್ಕೆ ಹೋಗಿದ್ದರು. ತೋಟದಲ್ಲಿ ಬಹಿರ್ದೆಸೆಗೆ ಹೋಗಿದ್ದ ನರಸಿಂಹಮೂರ್ತಿ ನೀರು ಮುಟ್ಟಲು ಹೋದಾಗ ಆನೆಗಳು ದಾಳಿ ನಡೆಸಿವೆ. ಒಂದು ಆನೆ ಅವರನ್ನು ಕೆಡವಿದ್ದು, ಮತ್ತೊಂದು ತಲೆ ಮೇಲೆ ಕಾಲಿಟ್ಟು ರೋಷ ತೀರಿಸಿಕೊಂಡಿದೆ. ಈ ಸಂದರ್ಭ ಅವರ ಪುತ್ರ ಶಶಿಕುಮಾರ್‌ ಸಹ ಅಲ್ಲಿಯೇ ಇದ್ದು, ಆನೆ ದಾಳಿಯಿಂದ ತಪ್ಪಿಸಿಕೊಂಡು ಊರಿಗೆ ಓಡಿ ಬಂದಿದ್ದಾರೆ.

‘ಆನೆಗಳು ಗ್ರಾಮದ ಸುತ್ತಮುತ್ತ ಶನಿವಾರ ರಾತ್ರಿ ಬೆಳೆ ನಾಶ ಮಾಡಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನೀವು ಕೊಡುವ ಪುಡಿ­ಗಾಸು ಪರಿಹಾರದಿಂದ ಪ್ರಯೋಜನ ಏನು’ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದು­ಕೊಂಡರು.
ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದ ಆನೆ ದಾಳಿ ನಿರಂತರವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಆನೆಗಳು ಇತ್ತ ಬರದಂತೆ ತಡೆಯಲು ಅರಣ್ಯ ಇಲಾಖೆ ಅಥವಾ ಸರ್ಕಾರ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

₨ 5 ಲಕ್ಷ ಪರಿಹಾರ
ದಾಳಿಯಿಂದ ಸಾವನ್ನಪ್ಪಿದ ನರಸಿಂಹಮೂರ್ತಿ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ₨ 5 ಲಕ್ಷ ಪರಿಹಾರದ ಚೆಕ್‌ ವಿತರಿಸಲಾಯಿತು. ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ, ಡಿಸಿಎಫ್‌ ಅಮರನಾಥ್‌, ಎಸಿಎಫ್‌ ದೇವರಾಜ್‌, ಎಎಸ್ಪಿ ಲಕ್ಷ್ಮಣ್‌ ಮುತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.

ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲಿ ಆನೆ ದಾಳಿ­ಯಿಂದ ಮೂವರು ಸಾವನ್ನಪ್ಪಿದ್ದಾರೆ. ಕಳೆದ 15 ದಿನಗಳಿಂದ ಆನೆಗಳು ತಾಲ್ಲೂಕಿನಲ್ಲಿ ಬೀಡು ಬಿಟ್ಟಿದ್ದವು. 7 ಆನೆಗಳು ಇಲ್ಲಿದ್ದು, ಕೆಲವು ದಿನಗಳ ಹಿಂದೆ 5 ಆನೆಗಳು ಸಾವನದುರ್ಗದ ಕಡೆಗೆ ತೆರಳಿವೆ. ಗುಂಪಿನಿಂದ ಬೇರ್ಪಟ್ಟಿರುವ ಎರಡು ಆನೆಗಳು ಜಿಲ್ಲೆಯ ವಿವಿಧ ಕಡೆ ಕಾಣಿಸಿಕೊಂಡು ದಾಂದಲೆ ನಡೆಸುತ್ತಿವೆ.

ಕಳೆದ ವಾರ ಜಿಲ್ಲೆಯಿಂದ ಹೊರಹೋಗಿದ್ದ ಆನೆಗಳು, ಹುಳಿಯಾರು ಸಮೀಪದ ಬೋರನ ಕಣಿವೆ, ಹಿರಿಯೂರು ತಾಲ್ಲೂಕಿನ ಮಾರಿ ಕಣಿವೆವರೆಗೂ ಹೋಗಿ ಮತ್ತೆ ಹಿಂತಿರುಗಿದ್ದವು. ಚಿಕ್ಕನಾಯಕನಹಳ್ಳಿ, ತಿಪಟೂರು ಸುತ್ತಮುತ್ತ ಸುತ್ತಾಡಿಕೊಂಡು ಶನಿವಾರ ಗುಬ್ಬಿ ತಾಲ್ಲೂಕಿನ ಬೆಲವತ್ತ ಕೆರೆಗೆ ತಲುಪಿದ್ದ ಆನೆಗಳು ರಾತ್ರಿಯೇ ತುಮಕೂರು ತಾಲ್ಲೂಕಿಗೆ ಬಂದಿವೆ. ಅರಣ್ಯ ಇಲಾಖೆ ಸಿಬ್ಬಂದಿ ಜಿಲ್ಲೆಯಿಂದ ಆನೆಗಳನ್ನು ಓಡಿಸಲು ಹಲವು ದಿನಗಳಿಂದ ಪ್ರಯತ್ನ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ.

ಅತ್ತಿಂದಿತ್ತ ಅಲೆದಾಟ
ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಅತ್ತಿಂದಿತ್ತ ಓಡಿಸುವಲ್ಲಿ ನಿರತರಾಗಿದ್ದಾರೆಯೇ ಹೊರತು ಅವುಗಳನ್ನು ಅರಣ್ಯ ಪ್ರದೇಶಕ್ಕೆ ತಲುಪಿಸುತ್ತಿಲ್ಲ. ತಮ್ಮ ಗಡಿ ದಾಟಿಸಿ ಪಕ್ಕದ ತಾಲ್ಲೂಕಿನ ಕಡೆಗೆ ಕಳುಹಿಸಿ ಜವಾಬ್ದಾರಿಯಿಂದ ಕೈತೊಳೆದು­ಕೊಳ್ಳುತ್ತಿದ್ದಾರೆ.

ಇದರಿಂದ ಆನೆಗಳು ಸಿಕ್ಕಿಸಿಕ್ಕ ಕಡೆಗೆ ಚಲಿಸುವಂತಾಗಿದೆ. ನೆಲಮಂಗಲದಿಂದ ಸಮೀಪದ ತುಮಕೂರಿಗೆ ಓಡಿಸಲಾಗುತ್ತಿದೆ. ಬದಲಿಗೆ ಇಲಾಖೆಯ ಎಲ್ಲ ವಲಯಗಳ ಅಧಿಕಾರಿಗಳು ಸೇರಿ ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಕಳುಹಿಸ­ಬಹುದು. ಆದರೆ ಇಂಥ ಕೆಲಸ ಅರಣ್ಯ ಇಲಾಖೆಯಲ್ಲಿ ಒಗ್ಗಟ್ಟಿನಿಂದ ನಡೆಯುತ್ತಿಲ್ಲ ಎನ್ನಲಾಗಿದೆ.

ಶಾಸಕ ಭೇಟಿ
ಗಳಿಗೇನಹಳ್ಳಿ ಗ್ರಾಮಕ್ಕೆ ಶಾಸಕ ಬಿ.ಸುರೇಶ್‌­ಗೌಡ ಭೇಟಿ ನೀಡಿ ಆನೆ ದಾಳಿಯಿಂದ ಸಾವನ್ನಪ್ಪಿದ ರೈತನ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಾಲ್ಲೂಕಿನ ಆನೆಗಳು ಆಗಾಗ ಬರುತ್ತಿದ್ದು, ಈ ಬಗ್ಗೆ ಶಾಶ್ವತ ಪರಿಹಾರ ರೂಪಿಸುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವುದಾಗಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT