ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಗೈರು: ಸಭೆ ಬಹಿಷ್ಕಾರ

ಕುಷ್ಟಗಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 19 ಡಿಸೆಂಬರ್ 2014, 6:58 IST
ಅಕ್ಷರ ಗಾತ್ರ

ಕುಷ್ಟಗಿ:  ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಪದೇಪದೇ ಗೈರು ಹಾಜರಾಗುತ್ತಿದ್ದಾರೆ ಎಂದು ಆರೋಪಿಸಿ ಸದಸ್ಯರು ಗುರುವಾರ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಕಾದು ಕುಳಿತರೂ ಬಹುತೇಕ ಇಲಾಖೆಗಳ ಅಧಿಕಾರಿಗಳು ಸಭೆಯತ್ತ ಸುಳಿಯಲಿಲ್ಲ. ಸಭೆ ಒಂದು ತಾಸು ತಡವಾಗಿ ಆರಂಭಗೊಂಡಿತು. ಆದರೆ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಇಲ್ಲವೆಂದ ಮೇಲೆ ನಾವು ಯಾರೊಂದಿಗೆ ಚರ್ಚಿಸಬೇಕು ಎಂದು ಸದಸ್ಯರು ಕಾರ್ಯ­ನಿರ್ವಹಣಾಧಿ­ಕಾರಿ ಎಂ.ವಿ.ಬದಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೇ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ­ಗಳನ್ನು ಸಕಾರಣ ಇಲ್ಲದೇ ಅಮಾನತು­ಗೊಳಿಸಲಾಗಿತ್ತು.
ನಂತರ ಅಮಾನತು ಆದೇಶ ತೆರವುಗೊಳಿಸುವುದಕ್ಕೆ ವಿಳಂಬ ಧೋರಣೆ ಅನುಸರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಆಡಳಿತ ಕಾರ್ಯವೈಖರಿ ಜನತಂತ್ರ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದ ಪ್ರಸಂಗವೂ ನಡೆಯಿತು. ಸದಸ್ಯರ ಆಕ್ಷೇಪಗಳಿಗೆ ಕಾರ್ಯ­ನಿರ್ವಾಹಕ ಅಧಿಕಾರಿಯಿಂದ ಸಮರ್ಪಕ ಉತ್ತರ ಬರದಿದ್ದಾಗ ಆಕ್ರೋಶಗೊಂಡ ಸದಸ್ಯರು ಸಭೆಯಲ್ಲಿ ಇರುವುದು ಪ್ರಯೋಜನ ಇಲ್ಲ ಎಂದು ಸಭೆ ಬಹಿಷ್ಕರಿಸಿರುವುದಾಗಿ ಅಧ್ಯಕ್ಷೆ ಸುವರ್ಣ ತುರಾಯಿ ಅವರಿಗೆ ಹೇಳಿ ಹೊರನಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಪರಶುರಾಮಪ್ಪ ನಂದ್ಯಾಳ ಮತ್ತು ಇತರೆ ಪ್ರಮುಖ ಸದಸ್ಯರು, ತಾಲ್ಲೂಕಿನಲ್ಲಿ ಅನೇಕ ಸಮಸ್ಯೆಗಳು ಇವೆ, ಅಭಿವೃದ್ಧಿ ಕುಂಠಿತಗೊಂಡಿದೆ. ಜನರ ಸಮಸ್ಯೆಗಳ ಮೇಲೆ ಸಭೆಯಲ್ಲಿ ಬೆಳಕು ಚೆಲ್ಲುವುದಕ್ಕೆಂದೆ ಸಭೆಗೆ ಬಂದಿದ್ದೇವೆ.
ಆದರೆ ಅಧಿಕಾರಿಗಳು ಗೈರು ಹಾಜರಾಗುವುದು ಸಾಮಾನ್ಯ ಸಂಗತಿಯಾಗಿದೆ. ಇಂಥ ಅನೇಕ ಉದಾಹರಣೆಗಳು ಈ ಹಿಂದೆ ನಡೆದರೂ ಒಬ್ಬರ ವಿರುದ್ಧವೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರ ಮನ ಒಲಿಸಲು ಯತ್ನಿಸಿದ ಎಂ.ವಿ.ಬದಿ, ಇಲಾಖೆ ಪ್ರತಿನಿಧಿಗಳಾಗಿ ಬಂದಿರುವವರು ತಂದಿರುವ ಪ್ರಗತಿ ವರದಿಯನ್ನು ಪರಾಮರ್ಷಿಸೋಣ, ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ. ಅಲ್ಲದೇ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ. ಹಾಗಾಗಿ ಸಭೆ ಬಹಿಷ್ಕರಿಸಬೇಡಿ ಎಂದು ಮನವಿ ಮಾಡಿದರು. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ಸದಸ್ಯರು ಸಭೆಯಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT