ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಪಿಂಚಣಿ ತಡೆ ಹಿಡಿಯಿರಿ

ಆರ್‌ಟಿಐ: ಮಾಹಿತಿ ನೀಡದವರ ವಿರುದ್ಧ ಮಾಜಿ ಸಚಿವ ಎಸ್‌.ಕೆ ಕಾಂತಾ ಆಗ್ರಹ
Last Updated 4 ಜುಲೈ 2015, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕುರಿತಂತೆ ಅಧಿಕಾರಿಗಳಲ್ಲಿ ಅಂಜಿಕೆ ಇಲ್ಲವಾಗಿದೆ. ಆದ್ದರಿಂದ, ಆರ್‌ಟಿಐ ಅಡಿ ಮಾಹಿತಿ ಕೊಡದ ಅಧಿಕಾರಿಗಳಿಗೆ ದಂಡದ ಜತೆಗೆ ಪಿಂಚಣಿ ತಡೆಹಿಡಿಯುವ ಕಠಿಣ ಕ್ರಮ ಜಾರಿಗೊಳಿಸಬೇಕು’ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಆಗ್ರಹಿಸಿದರು.

ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಮತ್ತು ಆ್ಯಕ್ಟಿವ್‌ ಸಿಟಿಜನ್‌ ನೆಟ್‌ವರ್ಕ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮಾಹಿತಿ ಹಕ್ಕು ದಶಮಾನೋತ್ಸವ’ದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಶೇ 90 ಜನರು ಶುದ್ಧಹಸ್ತರಾಗಿದ್ದಾರೆ. ಆದರೆ, ಮೇಲ್ಮಟ್ಟದವರು ತಂದ ಜಾತಿ ವ್ಯವಸ್ಥೆಯಿಂದಾಗಿ ಇವರೆಲ್ಲ ಒಂದಾಗುತ್ತಿಲ್ಲ. ಇದರಿಂದಾಗಿ, ಕಡಿಮೆ ಸಂಖ್ಯೆಯ ಭ್ರಷ್ಟರಿಂದ ಶೋಷಣೆ ಹೆಚ್ಚುತ್ತಿದೆ. ಇದರ ವಿರುದ್ಧ ಜನಶಕ್ತಿ ಸಬಲವಾಗಬೇಕು’ ಎಂದು ಹೇಳಿದರು.
‘ದೇಶದಲ್ಲಿ ಪಾರದರ್ಶಕತೆ ಇಲ್ಲವಾಗಿದೆ. ಅಕ್ಷರಸ್ಥರಿಂದಲೇ ವ್ಯವಸ್ಥೆ ಹೊಲಸಾಗಿದೆ. ಮೇಲ್ಮಟ್ಟದಿಂದ ಹಳ್ಳಿಗಳ ವರೆಗೆ ಭ್ರಷ್ಟಾಚಾರ ವ್ಯಾಪಿಸಿಕೊಂಡಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ’ ಎಂದರು. ‘ಆರ್‌ಟಿಐ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ರಾಜ್ಯದಲ್ಲಿ ಮಾಹಿತಿ ಆಯೋಗದ ಪೂರ್ಣ ಪ್ರಮಾಣದ ಪೀಠವಿಲ್ಲದ ಕಾರಣ ಅರ್ಜಿ ವ್ಯಾಜ್ಯಗಳ ವಿಚಾರಣೆ 6–8 ತಿಂಗಳಿಗೊಮ್ಮೆ ಬರುತ್ತಿವೆ.  ಇದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಆದ್ದರಿಂದ, ಸರ್ಕಾರ  ಪ್ರತಿ ವಿಭಾಗಕ್ಕೊಂದು ಶಾಖೆ ತೆರೆದು ಆಯುಕ್ತರನ್ನು ನೇಮಕ ಮಾಡಬೇಕು’ ಎಂದರು.

ಮುಖ್ಯ ಮಾಹಿತಿ ಆಯುಕ್ತ ಎ.ಕೆ.ಎಂ.ನಾಯಕ್‌ ಮಾತನಾಡಿ, ‘ವ್ಯವಸ್ಥೆ ಸುಧಾರಣೆ ಕುರಿತು ಬರುವ ಸಲಹೆಗಳನ್ನು ನಾವು ಸ್ವೀಕರಿಸಲು ಸಿದ್ಧರಿದ್ದೇವೆ. ಆದರೆ, ಆರ್‌ಟಿಐ ಕಾರ್ಯಕರ್ತರಲ್ಲೇ ಬಿನ್ನಾಭಿಪ್ರಾಯಗಳಿವೆ. ಆದ್ದರಿಂದ, ಜನಸ್ಪಂದನದಂತಹ ಉತ್ತಮ ಕಾರ್ಯಕ್ರಮವೊಂದು ನಿಂತು ಹೋಯಿತು’ ಎಂದರು.

‘ಒಬ್ಬೊಬ್ಬ ಕಾರ್ಯಕರ್ತರೇ ನೂರಾರು ಅರ್ಜಿ ಸಲ್ಲಿಸುವುದರಿಂದ ಅರ್ಜಿಗಳ ಸಂಖ್ಯೆ ಹೆಚ್ಚಾಗಿ ಕಾಣಿಸುತ್ತದೆ. ಜತೆಗೆ, ಇದರಿಂದ ಅನೇಕ ಅರ್ಜಿದಾರರಿಗೆ ಸಮಸ್ಯೆಯಾಗುತ್ತದೆ. ಆಯೋಗ ಅರ್ಜಿ ವಿಲೇವಾರಿ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ’ ಎಂದರು.

ಅಧ್ಯಯನ ಕೇಂದ್ರದ ಟ್ರಸ್ಟಿ ಬಿ.ಎಚ್‌.ವೀರೇಶ್‌ ಮಾತನಾಡಿ, ‘ಆರ್‌ಟಿಐ ಜಾರಿಗೆ ಬಂದ ಕಳೆದ 10 ವರ್ಷದಲ್ಲಿ ರಾಜ್ಯದಲ್ಲಿ ಮೂವರು ಸೇರಿ ದೇಶದಲ್ಲಿ ಸುಮಾರು 70 ಕಾರ್ಯಕರ್ತರ ಕಗ್ಗೊಲೆ ನಡೆದಿವೆ. ಆದ್ದರಿಂದ, ಗಂಭೀರ ಪ್ರಕರಣಗಳಲ್ಲಿ ಕಾರ್ಯಕರ್ತರು ಏಕಾಂಗಿಯಾಗಿ ಹೋರಾಡುವ ಬದಲು ಗುಂಪಾಗಿ ಹೋರಾಟ ನಡೆಸುವುದು ಕ್ಷೇಮಕರ’ ಎಂದು ಅಭಿಪ್ರಾಯಪಟ್ಟರು.

‘ಆರ್‌ಟಿಐ ಅಡಿ ನೀಡುವ ಮಾಹಿತಿಯನ್ನು ಆಯಾ ಇಲಾಖೆ ಜಾಲತಾಣದಲ್ಲಿ ಪ್ರಕಟಿಸಬೇಕು. ಆನ್‌ಲೈನ್‌ ಅರ್ಜಿ ಸಲ್ಲಿಕೆ ವ್ಯವಸ್ಥೆ ಜಾರಿಗೆ ತರಬೇಕು. ಮೂರು ತಿಂಗಳಿಗೊಮ್ಮೆ ಅರ್ಜಿದಾರರ ಜತೆ ಸಮಾಲೋಚನಾ ಸಭೆ ನಡೆಸಬೇಕು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಪೀಠಗಳ ಸ್ಥಾಪನೆಯಾಗಬೇಕು. ಜಿಲ್ಲಾವಾರು ವಿಚಾರಣೆ ನಡೆಸುವ ವ್ಯವಸ್ಥೆ ತರಬೇಕು’ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ‘ಮಾಹಿತಿ ಹಕ್ಕು ಮಾರ್ಗದರ್ಶಿ ಆರ್‌ಟಿಐ ಅಂಡ್‌ ಪೊಲೀಸ್‌’ ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.

* ಗುತ್ತಿಗೆದಾರರದೇ ರಾಜ್ಯವಾಗಿದೆ. ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ. ಅಧಿಕಾರಿಗಳು ಅವರನ್ನೂ ಮೀರಿಸಿದ್ದಾರೆ. ಈ ವ್ಯವಸ್ಥೆ ಸರಿಪಡಿಸಲು ಚರ್ಚೆ ನಡೆಯುವ ಅಗತ್ಯವಿದೆ

-ಎಸ್.ಕೆ.ಕಾಂತಾ
ಮಾಜಿ ಸಚಿವ


ಮುಖ್ಯಾಂಶಗಳು
* ಆರ್‌ಟಿಐ ದಶಮಾನೋತ್ಸವ ಕಾರ್ಯಕ್ರಮ

* ವಿವಿಧ ಜಿಲ್ಲೆಗಳಿಂದ ಬಂದಿದ್ದ ಆರ್‌ಟಿಐ ಕಾರ್ಯಕರ್ತರು
* ಅರ್ಜಿ ತ್ವರಿತ ವಿಲೇವಾರಿಗೆ ಒತ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT