ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ದುರ್ಬಳಕೆ ಮಾಡಿಲ್ಲ

2ಜಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಸಿಂಗ್‌
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಮಾಜಿ ಅಧ್ಯಕ್ಷ  ಪ್ರದೀಪ್‌ ಬೈಜಾಲ್‌ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ‘ನನಗೋಸ್ಕರ, ನನ್ನ ಕುಟುಂಬ ಅಥವಾ ಸ್ನೇಹಿತರ ಹಿತಕ್ಕಾಗಿ  ಯಾವತ್ತೂ ನನ್ನ ಅಧಿಕಾರವನ್ನು ಬಳಸಿಕೊಂಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಕ್ಷುಲ್ಲಕ ವಿಷಯಗಳತ್ತ ಜನರ ಗಮನವನ್ನು ಹರಿಸುವುದಕ್ಕಾಗಿ ಬಿಜೆಪಿ  ಸರ್ಕಾರವು ಭ್ರಷ್ಟಾಚಾರದ ಕಥೆ ಹೆಣೆಯುತ್ತಿದೆ’ ಎಂದು ಖಾರವಾಗಿ ಹೇಳಿದ್ದಾರೆ. ಎನ್‌ಎಸ್‌ಯುಐ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ನೇತೃತ್ವದ ಯುಪಿಎ ಸರ್ಕಾರದ ಕಾರ್ಯವೈಖರಿಯನ್ನು ಬಲವಾಗಿ ಸಮರ್ಥಿಸಿಕೊಂಡರು. ರಾಹುಲ್‌ ಗಾಂಧಿ ಅವರನ್ನೂ ಹೊಗಳಿದ ಸಿಂಗ್‌, ‘ಅವರು ಸಂಸತ್ತಿನ ಒಳಗೆ ಹಾಗೂ ಹೊರಗೆ ಸಕ್ರಿಯರಾಗಿದ್ದಾರೆ’ ಎಂದರು.

ಭೂಸ್ವಾಧೀನ ಕಾಯ್ದೆ ವಿರೋಧಿಸಿ ಸಕಾಲದಲ್ಲಿ ಪ್ರತಿಭಟನೆ ಮಾಡಿದ್ದಕ್ಕಾಗಿ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಕೂಡ ಅವರು ಶ್ಲಾಘಿಸಿದರು.‘ಯುಪಿಎ ನೀತಿಗಳು ಸಾಮಾಜಿಕ ಬದಲಾವಣೆ ಹಾಗೂ ಹಿಂದೆಂದೂ ಕಾಣದ ಆರ್ಥಿಕ ಅಭಿವೃದ್ಧಿಗೆ ಕಾರಣವಾದವು. ಎನ್‌ಡಿಎ ಸರ್ಕಾರ ನಮ್ಮ ಯೋಜನೆಗಳ ನಕಲು ಮಾಡುತ್ತಿದೆ.   ಕೆಲವೊಂದು ಯೋಜನೆಗಳಿಗೆ ಆಗ ಬಿಜೆಪಿ ತಕರಾರು ಎತ್ತಿತ್ತು. ಆದರೆ ಈಗ ಅವು ತನ್ನದೇ ಯೋಜನೆಗಳು ಎನ್ನುವಂತೆ ಬಿಂಬಿಸಿರುವುದು ವಿಪರ್ಯಾಸ’  ಎಂದು ಮನಮೋಹನ್‌್ ಸಿಂಗ್‌್ ಲೇವಡಿ ಮಾಡಿದರು.

ಸಿಂಗ್‌ ವಿರುದ್ಧ ಷಾ ವಾಗ್ದಾಳಿ
ಸೂರತ್‌ (ಪಿಟಿಐ):
2 ಜಿ ಹಗರಣ ಕುರಿತಂತೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ‘ಪ್ರಧಾನಿಯಾದವರು ವೈಯಕ್ತಿಕವಾಗಿ ಪ್ರಾಮಾಣಿಕರಾಗಿದ್ದರೆ ಸಾಲದು. ಇಡೀ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಕೂಡ ಅವರ ಹೊಣೆಗಾರಿಕೆಯಾಗಿರುತ್ತದೆ ಎಂದಿದ್ದಾರೆ.

‘ಮನಮೋಹನ್‌ ಸಿಂಗ್‌ ಅವರ ನಾಯಕತ್ವದಲ್ಲಿ ₨ 12 ಲಕ್ಷ ಕೋಟಿ ಮೊತ್ತದ ಹಗರಣ ನಡೆದಿದೆ. ಕಾಂಗ್ರೆಸ್‌ ಪಕ್ಷ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT