ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನ ಬೆಳಗಾವಿಯಲ್ಲಿ

ಗೊಂದಲಕ್ಕೆ ತೆರೆ ಎಳೆದ ಸರ್ಕಾರ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ಖಚಿತ. ಈ ವಿಷಯದಲ್ಲಿ ಗೊಂದಲ ಬೇಡ ಎಂದು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಶನಿವಾರ ಇಲ್ಲಿ ತಿಳಿಸಿದರು. ನವೆಂಬರ್‌ ಕೊನೆ ವಾರ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಅಧಿವೇಶನ ನಡೆಸಲಾಗುವುದು ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.

‘ಈ ಸಲದ ಚಳಿಗಾಲದ ಅಧಿವೇಶನವನ್ನು ಕನಿಷ್ಠ 17 ದಿನ ನಡೆಸಬೇಕು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಪತ್ರದ ಮೂಲಕ ತಿಳಿಸಿದ್ದಾರೆ. ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು’ ಎಂದು  ಹೇಳಿದರು.
‘ವಾರ್ಷಿಕ 61 ದಿನ ಅಧಿವೇಶನ ನಡೆಸಬೇಕು ಎನ್ನುವ ನಿಯಮ ಇದೆ. ಈ ಕಾರಣದಿಂದ ಈ ವರ್ಷ  ಇನ್ನೂ 17 ದಿನ ಅಧಿವೇಶನ ನಡೆಸಬೇಕು ಎಂಬುದು ಸಭಾಧ್ಯಕ್ಷರ ಅಭಿಪ್ರಾಯ’ ಎಂದರು.

ಕಡತ ವಿಲೇವಾರಿ: ಸಚಿವಾಲಯ ಮಟ್ಟದಲ್ಲಿ ಕಡತ ವಿಲೇವಾರಿ ಮೂಲಕ ಗಮನ ಸೆಳೆದಿದ್ದ ಸರ್ಕಾರ ಈಗ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಕಡತ ವಿಲೇವಾರಿಗೆ ಮುಂದಾಗಿದೆ. ‘ನವೆಂಬರ್‌ 1ರಿಂದ 30ರವರೆಗೆ ಕಡತ ವಿಲೇವಾ­ರಿಯ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಸಿದ್ಧತೆ ನಡೆ­ದಿದೆ. ಈ ಸಂಬಂಧ ಸದ್ಯದಲ್ಲೇ ಸುತ್ತೋಲೆ ಹೊರ­ಡಿಸಲಾಗುವುದು’ ಎಂದು ಜಯಚಂದ್ರ  ತಿಳಿಸಿದರು.

‘ಸಚಿವಾಲಯ ಮಟ್ಟದಲ್ಲಿ 58 ಸಾವಿರ ಕಡತ ವಿಲೇವಾರಿ ಮಾಡಲಾಗಿದೆ. ಇದು ನಿರಂತರ ಪ್ರಕ್ರಿಯೆ. ಅದೇ ರೀತಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ, ಅದರ ನಂತರ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿಯೂ ಕಡತಗಳ ವಿಲೇವಾರಿಗೆ ಗಮನ ನೀಡಲಾಗುವುದು’ ಎಂದು ಹೇಳಿದರು.

ಜನರಿಗೆ ಅನುಕೂಲ ಆಗುವ ಕಡತಗಳ ವಿಲೇವಾರಿ ಆಗುತ್ತಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರಿಸಿದ ಅವರು ‘ಎಲ್ಲ ರೀತಿಯ ಕಡತಗಳನ್ನೂ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಅವರು ಸಮಜಾಯಿಷಿ ನೀಡಿದರು.

‘ಆಡಳಿತದಲ್ಲಿ ಸುಧಾರಣೆ ತರುವುದಕ್ಕೆ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಒಂದೇ ರೀತಿಯ ಯೋಜನೆಗಳು ಹಲವು ಇಲಾಖೆಗಳಲ್ಲಿ ಹಂಚಿಹೋಗಿವೆ. ಉದಾಹರಣೆಗೆ ಮನೆ ನಿರ್ಮಿಸುವ ಯೋಜನೆ. ಇಂತಹ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಅನುಷ್ಠಾನಗೊಳಿಸುವ ಸಂಬಂಧ ಚಿಂತನೆ ನಡೆದಿದೆ. ಒಟ್ಟಿನಲ್ಲಿ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಇನ್ನೊಂದು ತಿಂಗಳಲ್ಲಿ ವರದಿ ನೀಡಲಾಗುವುದು’ ಎಂದು ಹೇಳಿದರು.

ವಿಶೇಷ ಕೋರ್ಟ್– ಸಿಜೆ ಜತೆ ಚರ್ಚೆ: ‘ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುವಾಗುವಂತೆ ಶೀಘ್ರದಲ್ಲೇ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗು­ವುದು. ಈ ಸಂಬಂಧ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು’ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
‘ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಇತರ ನಗರ ಪ್ರದೇಶಗಳಲ್ಲಿನ ಒತ್ತುವರಿ ತೆರವಿಗೆ ಆದ್ಯತೆ ನೀಡಲಾಗುವುದು. ಈ ಸಂಬಂಧ ಅಗತ್ಯ ಬಿದ್ದರೆ ಕಾನೂನಿಗೂ ತಿದ್ದುಪಡಿ ತರಲಾಗುವುದು’ ಎಂದು ಹೇಳಿದರು.

‘ರಾಜಕೀಯ ಪ್ರೇರಿತ’
‘2006ರಲ್ಲಿ ಶಿವಮೊಗ್ಗ ಮತ್ತು 2007ರಲ್ಲಿ ಹಾಸನದಲ್ಲಿ ಆರಂಭಿಸಿದ ಪಶುವೈದ್ಯಕೀಯ ಕಾಲೇಜು­ಗಳಿಗೆ ಮೂಲಸೌಲಭ್ಯ ಇಲ್ಲದ ಕಾರಣ 2012ರವರೆಗೂ ಅಖಿಲ ಭಾರತ ಪಶುವೈದ್ಯಕೀಯ ಮಂಡಳಿ ಮಾನ್ಯತೆ ಕೊಟ್ಟಿರಲಿಲ್ಲ. ಮಾನ್ಯತೆ ಸಿಗದಿ­ದ್ದರೂ ವಿದ್ಯಾರ್ಥಿಗಳಿಗೆ ಆಗಿನ ಸರ್ಕಾರ ಪ್ರವೇಶ ಕೊಟ್ಟತು. ಹಾಗಾಗಿ ಗೊಂದಲ ಸೃಷ್ಟಿಯಾ­ಗಿದ್ದು, ಅದನ್ನು ರಾಜಕೀಯಕ್ಕೆ ಬಳಸಿಕೊಂಡು ವಿದ್ಯಾರ್ಥಿ­ಗಳನ್ನು ಪ್ರತಿಭಟನೆಗೆ ಪ್ರಚೋದಿಸುತ್ತಿ­ರು­-ವುದು ಸರಿ­ಯಲ್ಲ’ ಎಂದು ಪರೋಕ್ಷವಾಗಿ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರನ್ನು ಜಯಚಂದ್ರ ಟೀಕಿಸಿದರು.

‘2013ರಲ್ಲಿ ನಾನು ಪಶುಸಂಗೋಪನಾ ಸಚಿವ­ನಾದ ನಂತರ ದೆಹಲಿಯಲ್ಲಿ ಪಶುವೈದ್ಯಕೀಯ ಮಂಡಳಿಯ ಪದಾಧಿಕಾರಿಗಳನ್ನು ಭೇಟಿ ಮಾಡಿ ಮನವೊಲಿಸಿದ ನಂತರ  ಕಾಲೇಜುಗಳಿಗೆ ಮಾನ್ಯತೆ ಸಿಕ್ಕಿತು. ಇದು 2014–15ನೇ ಸಾಲಿಗೂ  ಮುಂದು­ವರಿದಿದೆ. ಹಿಂದೆ ಮೂಲಸೌಲಭ್ಯ ಒದಗಿಸದೆ ಕಾಲೇಜು ಆರಂಭಿಸಿದ್ದರಿಂದ ಇಷ್ಟೆಲ್ಲ ತೊಂದರೆ ಆಗಿದ್ದು, ಅದನ್ನು ಸರಿಪಡಿಸುವ ಕೆಲಸ ಈಗ ನಡೆದಿದೆ. ಪದವಿ ಮುಗಿಸಿದ ವೈದ್ಯರನ್ನು ಸರ್ಕಾರ ನೇಮಕ ಮಾಡಿಕೊಂಡಿದೆ. ಇನ್ನೂ ಸುಮಾರು 250 ವೈದ್ಯರನ್ನು ತಕ್ಷಣವೇ ನೇಮಕ ಮಾಡಿಕೊಳ್ಳಲಾಗುವುದು. ಈ ನಡುವೆ ಇವರ ಪದವಿಗೂ ಮಾನ್ಯತೆ ನೀಡುವಂತೆ ಮಂಡಳಿ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ವಿವರಿಸಿದರು.

‘ಪುತ್ತೂರು ಮತ್ತು ಗದಗದಲ್ಲಿ ಪಶು ವೈದ್ಯ­ಕೀಯ ಕಾಲೇಜು ಆರಂಭಿಸಲಾಗುವುದು. ಗದಗದ ಕಾಲೇಜಿಗೆ ರೂ70 ಕೋಟಿ ಖರ್ಚು ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಾಲೇಜು ಆರಂಭಿಸುವ ಚಿಂತನೆ ಇದೆ’ ಎಂದು ಹೇಳಿದರು.
‘ಪುತ್ತೂರಿನ ಕಾಲೇಜಿಗೆ 600 ಎಕರೆ ಜಾಗ ಸಿಕ್ಕಿದ್ದು, ಕಟ್ಟಡ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT