ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತನಾಗ್‌ ಸೂತ್ರಧಾರ ಆದಾಗ...

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

‘ಚಿತ್ರದಲ್ಲಿ ಪಾತ್ರ ಮಾಡಿದ್ದೇನೆ. ಇಲ್ಲಿ ಮಾತ್ರ ಸೂತ್ರಧಾರ’– ಹೀಗೆ ಹೇಳಿ ನಕ್ಕರು ಅನಂತನಾಗ್‌. ಸಂದರ್ಭ: ‘ದಿ ಪ್ಲಾನ್’ ಚಿತ್ರದ ಪೋಸ್ಟರ್ ಬಿಡುಗಡೆ. ಹಿರಿಯ ನಟ ಈ ಮಾತು ಹೇಳಲು ಕಾರಣವೂ ಇತ್ತು. ‘ಪ್ಲಾನ್‌’ ಸಿನಿಮಾ ಸಮಾರಂಭಕ್ಕೆ ಕೂಲಿಂಗ್ ಗ್ಲಾಸ್ ತೊಟ್ಟು ಹರೆಯದ ಯುವಕನ ಉತ್ಸಾಹದಲ್ಲಿ ಬಂದಿದ್ದ ಅವರು, ವೇದಿಕೆಯಲ್ಲಿ ನಿರ್ಮಾಪಕರೂ ಸೇರಿದಂತೆ ಚಿತ್ರತಂಡದ ಬಹುತೇಕರು ಗೈರುಹಾಜರಾದುದನ್ನು ನೋಡಿ ಬೇಸರಗೊಂಡಂತಿತ್ತು.

ನಿರ್ದೇಶಕ ಕೀರ್ತಿ ವೇದಿಕೆಗೆ ಬಂದು ಮಾತು ಆರಂಭಿಸಿದರು. ಅವರಲ್ಲಿ ಸಂಕೋಚದಂತೆ ಭಯವೂ ಇತ್ತು. ಇದನ್ನು ಗಮನಿಸಿದ ಅನಂತನಾಗ್‌ ತಮ್ಮ ಸ್ಥಾನದಿಂದ ವೇದಿಕೆಗೆ ಬಂದು ನಿರ್ದೇಶಕರಿಂದ ಮೈಕು ತೆಗೆದುಕೊಂಡು ಚಿತ್ರದ ವಿವರ ನೀಡಿದರು, ಕೀರ್ತಿಯ ಸಂಕೋಚದ ಸ್ವಭಾವ ಮತ್ತು ಚಿತ್ರಕಥೆ ತಮಗೆ ಇಷ್ಟವಾಗಿದ್ದನ್ನು ವಿವರಿಸಿದ ಅವರು ನಿರ್ದೇಶಕರ ಬೆನ್ನುತಟ್ಟಿದರು. ಪುನಃ ನಿರ್ದೇಶಕರ ಕೈಗೆ ಮೈಕಿತ್ತು ವೇದಿಕೆಯ ಮುಂಭಾಗದ ತಮ್ಮ ಆಸನದಲ್ಲಿ ಕುಳಿತರು. ಕೊಂಚ ಹೊತ್ತು ಕಳೆಯುತ್ತಲೇ ಪುನಃ ವೇದಿಕೆಗೆ ಬಂದು ನಿರ್ದೇಶಕರಿಗೆ ಧೈರ್ಯ ತುಂಬಿ ನಿರ್ಗಮಿಸಿದರು.

ವೇದಿಕೆಗೆ ಮುಖ್ಯ ಅತಿಥಿಯಾಗಿ ಬಾಲಿವುಡ್ ನಿರ್ದೇಶಕ ಶ್ರೀರಾಮ್ ಬಂದಾಗ ಅನಂತನಾಗ್‌ ಸ್ವತಃ ಸ್ವಾಗತಿಸಿದರು, ಮತ್ತೆ ಮೈಕು ಕೈಗೆತ್ತಿಕೊಂಡರು. ಆಗ ಅವರು ಹೇಳಿದ್ದು– ‘ನಾನು ಇಲ್ಲಿ ಸೂತ್ರಧಾರ’ ಎಂದು. ಅಂದಹಾಗೆ, ನಿರ್ಮಾಪಕರಾದ ಅಶೋಕ್ ಶೆಟ್ಟಿ ಮತ್ತು ಸುನೀಲ್ ಶೆಟ್ಟಿ ಅವರ ನಂಟಿನ ಹಿನ್ನೆಲೆಯಲ್ಲಿ ಬಾಲಿವುಡ್‌ನ ಶ್ರೀರಾಮ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

‘ದಿ ಪ್ಲಾನ್‌’ ಜೈಲ್ ಬ್ರೇಕ್‌ನ ಕಥೆ. ಎಂಜಿನಿಯರಿಂಗ್ ಓದಿರುವ ಕೀರ್ತಿ ಅವರ ಮೊದಲ ಪ್ರಯತ್ನ ಇದು. ‘ಮೂರು ವರ್ಷಗಳಿಂದ ಕಥೆ ಮಾಡಿಕೊಂಡಿದ್ದೆ. 15–20 ಜಿಲ್ಲಾ ಕಾರಾಗೃಹಗಳಿಗೆ ಭೇಟಿ ನೀಡಿದೆ. ಅಂತಿಮವಾಗಿ ಮಡಿಕೇರಿ ಕಾರಾಗೃಹ ಇಷ್ಟವಾಯಿತು. ಅನುಮತಿ ಸಿಕ್ಕಿದ್ದು ತಡವಾಗಿದ್ದರಿಂದ ಚಿತ್ರೀಕರಣ ಲೇಟಾಯಿತು. ಮಡಿಕೇರಿ, ಗೋವಾ, ಬೆಂಗಳೂರುಗಳಲ್ಲಿ ಚಿತ್ರೀಕರಣ ಮಾಡಲಾಗುವುದು. ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ತರಲಾಗುವುದು’ ಎಂದು ಕೀರ್ತಿ ಹೇಳಿದರು. ‘6–5=2’ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಅವರಿಗೆ ಆರಂಭದಲ್ಲಿ ಸಿನಿಮಾ ವ್ಯಾಕರಣ ಕಲಿಸಿದ್ದು ಛಾಯಾಗ್ರಾಹಕ ವಿಜಯನಾಥ್ ರಾವ್ ಅವರಂತೆ.

ಕೌಸ್ತಭ್, ಜಯಕುಮಾರ್ ಸೇರಿದಂತೆ ಆರು ಮಂದಿ ಯುವತಂಡ ಅನಂತ್‌ ನಾಗ್ ಅವರ ಜತೆ ನಟಿಸಲಿದೆ. ‘ಪ್ಲಾನ್’ ಆರಂಭಕ್ಕೂ ಮುನ್ನ ಚಿತ್ರತಂಡ ಅಭಿನಯದ ಕಮ್ಮಟವನ್ನೂ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT