ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ್‌: ಚಿಗುರು ಮುದ್ದಿಸುವ ಬೇರು

Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

‘ದಿ ಪ್ಲಾನ್’ ಚಿತ್ರದ ಟ್ರೇಲರ್‌ನಲ್ಲಿ ಅನಂತ್‌ ನಾಗ್, ‘35 ವರುಷಗಳ ನಂತರ ಮಿಂಚಿನ ಓಟ’ ಎಂದು ನೆನಪು ಮಾಡಿಕೊಂಡಿದ್ದಾರೆ. ‘ಪ್ಲಾನ್’ ಒಂದು ಜೈಲ್‌ ಬ್ರೇಕ್‌ ಕಥೆ. ಈ ಹಿನ್ನೆಲೆಯಲ್ಲಿ ‘ದಿ ಪ್ಲಾನ್’ ಮತ್ತು ‘ಮಿಂಚಿನ ಓಟ’ಕ್ಕೆ ಸಂಬಂಧವಿದೆಯೇ ಎಂದು ಪ್ರಶ್ನಿಸಿದರೆ, ‘ಯುವ ಪ್ರಯೋಗಶೀಲರ ಬೆನ್ನುತಟ್ಟೋಣ’ ಎಂದಷ್ಟೇ ಅವರು ಉತ್ತರಿಸಿದರು.

‘ದಿ ಪ್ಲಾನ್ ಜೈಲ್ ಬ್ರೇಕ್‌ ವಸ್ತುವಿನ ಕಥೆ. ಸಸ್ಪೆನ್ಸ್–ಆಕ್ಷನ್ ಸಿನಿಮಾ. ಭ್ರಷ್ಟಾಚಾರ, ವಿದ್ಯಾರ್ಥಿಗಳ ವಿಷಯ ಇತ್ಯಾದಿ ಸಮಕಾಲೀನ ವಿಚಾರಗಳೂ ಇವೆ. ಅದನ್ನು ಹೇಳುವುದಕ್ಕೆ ಆಗುವುದಿಲ್ಲ. ನಿರ್ದೇಶಕ ಕೀರ್ತಿ, ಶಂಕರ್ ನಾಗ್ ಅಭಿಮಾನಿ. ಮಿಂಚಿನ ಓಟದ ನಂತರ ಜೈಲ್‌ ಬ್ರೇಕ್ ಇರುವ ನನ್ನ ಸಿನಿಮಾ ಇದು. ‘ದಿ ಪ್ಲಾನ್’ ಮತ್ತು ‘ಮಿಂಚಿನ ಓಟ’ಕ್ಕೆ ಸಂಬಂಧವಿಲ್ಲ. ಉತ್ತಮ ಚಿತ್ರಕಥೆಯ ಕಾರಣ ಹೆಚ್ಚು ಆಸ್ಥೆ ವಹಿಸಿದ್ದೇನೆ’ ಎನ್ನುವರು ಅನಂತ್ ನಾಗ್. 

ಹೊಸ ಚಿಗುರಿಗೆ ನೀರು
67ರ ಪ್ರಾಯದ ಅನಂತ್ ನಾಗ್ ಹೆಚ್ಚು ಕ್ರಿಯಾಶೀಲರು. ಆ ಕ್ರಿಯಾಶೀಲತೆ ಅವರ ಇಂದಿನ ಸಿನಿಮಾಗಳಲ್ಲಿ ಕಾಣುತ್ತದೆ. ‘ಹೊಸ ತರುಣರು ಭಿನ್ನ ಕಥೆಗಳನ್ನು ತೆಗೆದುಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹೊಸ ಗಾಳಿ ಸಿನಿಮಾರಂಗಕ್ಕೆ ಬರಬೇಕು ಎಂದು ಹೇಳುತ್ತಾರೆ. ಅದು ಬರಲು ಸಾಧ್ಯವಾಗುತ್ತಿದ್ದು, ನಾನು ಇವರ ಜತೆ ನಿಲ್ಲುತ್ತೇನೆ.

ಕಳೆದ ಒಂದು ವರುಷದಲ್ಲಿ ಭಿನ್ನವಾದ ಹತ್ತು ಪಾತ್ರಗಳನ್ನು ಮಾಡಿದ್ದೇನೆ. ಸುನೀಲ್ ಕುಮಾರ್ ದೇಸಾಯಿ ಅವರ ‘ತಂದಾನ ತಂದಾನ’, ‘ಐರಾವತ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಪರಪಂಚ’, ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರಗಳಲ್ಲಿ ನನ್ನದು ಭಿನ್ನ ಪಾತ್ರಗಳು. ವಯಸ್ಸಾದ ಮೇಲೆ ಚಾಲೆಂಜಿಂಗ್ ಪಾತ್ರಗಳು ಬರುತ್ತಿವೆ! ಸುನೀಲ್ ಕುಮಾರ್ ಹೊರತುಪಡಿಸಿ ಬಹುತೇಕ ಮಂದಿ ಹೊಸಬರು. ಬೇರೆ ಬೇರೆ ಕ್ಷೇತ್ರಗಳಲ್ಲಿನ ಅನುಭಗಳನ್ನು ಜತೆಯಲ್ಲಿಟ್ಟುಕೊಂಡವರು. ಅವರಿಗೆ ಐಡಿಯಾಲಜಿಗಳು ಇವೆ. ನಾನು ಹೊಸ ಹುಡುಗರನ್ನು ಬೆಂಬಲಿಸುವೆ’ ಎಂದು ಅನಂತ ಯುವಮುಖಿಯಾದರು.

ದೇಹದಂಡನೆ
ಗಡ್ಡ ವಿಜಿ ನಿರ್ದೇಶನದ ‘ಪ್ಲಸ್’ ಚಿತ್ರದಲ್ಲಿ ವಿವಿಧ ಲುಕ್‌ ಮತ್ತು ದಂಡ (ಪುಷ್‌ಅಪ್‌) ಹೊಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಗ್ಗೆ ಅವರು ಹೇಳಿದ್ದು ಹೀಗೆ: ‘ನಾನು ನಟನಾಗಿರುವುದರಿಂದ ವಾಕ್ ಹೋಗಲು ಸಾಧ್ಯವಿಲ್ಲ. ಮನೆಯಲ್ಲಿ ವ್ಯಾಯಾಮ ಮಾಡುವೆ. ವಾಕ್‌ಗಿಂತ ಇದು ಸುಲಭ. ಅರ್ಧ ಗಂಟೆ ಯೋಗ ಮಾಡುತ್ತೇನೆ. ನಿತ್ಯವೂ ಪುಷ್‌ಅಪ್ಸ್‌ ಹೊಡೆಯುವುದರಿಂದ ಸಿನಿಮಾದಲ್ಲೂ ಅದು ಸುಲಭವಾಯಿತು. ನಟರು ಫಿಟ್ ಆಗಿರಬೇಕು ಎನ್ನುವುದು ನನ್ನ ಅಭಿಪ್ರಾಯ.

ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಫಿಟ್ ಆಗಿರಬೇಕು. ಸಾಮಾನ್ಯವಾಗಿ ಎಷ್ಟೆಲ್ಲಾ ಮೇಕಪ್–ಗೆಟಪ್ಪು ಮಾಡಿದರೂ ಇದು ಬೇಕಾಗಿದೆಯೇ? ಎನ್ನುವ ಭಾವನೆ ಬರುವುದು ಸಹಜ. ‘ಪ್ಲಸ್‌’ ಚಿತ್ರದವರು ಅವರಿಗೆ ಬೇಕಾದ ಲುಕ್‌ನಂತೆಯೇ ಆಲೋಚನೆ ಮಾಡಿಕೊಂಡು ಬಂದಿದ್ದರು. ನಾನು ಹೇಳಿದ್ದನ್ನು ಅವರು ಮಾಡುವುದಕ್ಕಿಂತ ಅವರು ಹೇಳಿದ್ದನ್ನು ಮಾಡೋಣ ಎನಿಸಿತು’.

ಸಂದೇಶ, ಮನರಂಜನೆಯ ಹೆದ್ದಾರಿ
‘ಇತ್ತೀಚೆಗೆ ತೆರೆಗೆ ಬಂದ ಆಟಗಾರ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೇನೆ. ಅದು ವ್ಯವಸ್ಥೆಯನ್ನು ಬದಲಾಯಿಸುವಂಥ ಪಾತ್ರ.  ಕಳೆದ 50 ವರುಷಗಳಿಂದಲೂ ಶಿಕ್ಷಣ, ರಾಜಕಾರಣ, ರೈತರು, ಮಧ್ಯಮ ವರ್ಗದ ಜನರ ಜೀವನದ ಇತ್ಯಾದಿ ಬದಲಾವಣೆ ಬಗ್ಗೆ ಮಾತನಾಡಿದರೂ ಅದು ಸಾಧ್ಯವಾಗುತ್ತಿಲ್ಲ. ಆಟಗಾರ ಚಿತ್ರದಲ್ಲಿ ಜನರ ಬಗ್ಗೆ ವ್ಯವಸ್ಥೆ ಆಸಕ್ತಿ ತೋರಿಸಲಿಲ್ಲ ಎಂದರೆ ಜನರೇ ಕಾನೂನು ಕೈಗೆತ್ತಿಕೊಳ್ಳುವ ವಾತಾವರಣ ಬಂದೀತು ಎನ್ನುವುದನ್ನು ನನ್ನ ಪಾತ್ರ ಹೇಳುತ್ತದೆ. ಇದನ್ನು ವ್ಯವಸ್ಥೆಗೆ ಒಂದು ಎಚ್ಚರ ಎನ್ನುವಂತೆಯೂ ನೋಡಬಹುದು. ‘

ಪ್ರೇಮಪಲ್ಲಕ್ಕಿ’ ಚಿತ್ರದಲ್ಲಿ ಪಟ್ಟಣಕ್ಕೆ ಹೋಗುವ ಹಳ್ಳಿಯ ಯುವಕರನ್ನು ತಡೆಯುವ ಪಾತ್ರ ನನ್ನದು. ಆದರೆ ಸ್ವಂತ ಮಗನೇ ಅಪ್ಪನ ಮಾತು ಕೇಳುವುದಿಲ್ಲ. ಕಾರ್ಪೊರೇಟ್ ಕಂಪೆನಿಗಳು 50 ಸಾವಿರ ಕೋಟಿ, ಲಕ್ಷ ಕೋಟಿಗಳ ಬಗ್ಗೆ ಮಾತನಾಡುತ್ತವೆ. ಆದರೆ ಎರಡು ಲಕ್ಷ ರೂಪಾಯಿ ಸಾಲಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಸಂದೇಶ ಮತ್ತು ರಂಜನೆ ಎರಡೂ ಇರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸುವರು.‘ಅವಸ್ಥೆ’ ಚಿತ್ರದ ನಂತರ ರಾಜಕಾರಣಿಯೊಬ್ಬರ ಬದುಕು ಕನ್ನಡದಲ್ಲಿ ಸಿನಿಮಾ ರೂಪು ಪಡೆಯಲಿಲ್ಲ. ‘ಅವಸ್ಥೆ’ಯಲ್ಲಿ ಮುಖ್ಯಪಾತ್ರವಹಿಸಿದ್ದ ಅನಂತ್ ನಾಗ್‌, ಈ ರೀತಿ ಚಿತ್ರಗಳು ಬರಲಿ ಎಂದು ಬಯಸುತ್ತಾರೆ.

ಪೋಷಕಪಾತ್ರಗಳ ಸ್ಟಾರ್‌ಗಿರಿ
ಅನಂತ್‌ನಾಗ್ ಇಂದು ಪೋಷಕ ಪಾತ್ರಗಳ ಸ್ಟಾರ್ ಎನಿಸಿಕೊಂಡವರು. ವಿಶಿಷ್ಟ ಪೋಷಕ ಪಾತ್ರಗಳಲ್ಲಿ ರಂಜನೆಯ ಜತೆಗೆ ಸಂದೇಶವನ್ನೂ ಅವರ ಪಾತ್ರಗಳು ಮಿಳಿತಗೊಳಿಸಿಕೊಂಡಿವೆ. ಇದನ್ನು ಸ್ವತಃ ಅವರೇ ಒಪ್ಪುವರು. ‘ನಾನು 25 ವರುಷಗಳ ಕಾಲ ನಾಯಕ ನಟನಾಗಿದ್ದೆ. ಈಗ ಸಿಗುವ ವೈವಿಧ್ಯ ಅಲ್ಲಿಲ್ಲ. ಪೋಷಕ ನಟನಾಗಿ ಯಾವುದೇ ಪಾತ್ರ ಮಾಡಬಲ್ಲೆ ಎನ್ನುವುದನ್ನು ಇಲ್ಲಿ ತೋರಿಸಿದೆ. ಪೋಷಕ ನಟನಾಗಿಯೇ ಭಿನ್ನ ಪಾತ್ರಗಳು ಸಿಕ್ಕುತ್ತವೆ. ಬಾಲಿವುಡ್‌ಗೆ ಕರೆಯುತ್ತಾರೆ.

ನನಗೆ ಮನೆಯಲ್ಲಿರುವುದು ಇಷ್ಟ. 70ರಿಂದ 80ರ ಅವಧಿಯಲ್ಲಿ ಅಲ್ಲಿ ಕೆಲಸ ಮಾಡಿದ್ದೇನೆ. ನಾನು ಮುಂಬೈ ನೋಡಿದಾಗ ಒಂದು ರೀತಿ ಇತ್ತು. ಈಗ ಜನ ಜಾತ್ರೆ ಎನ್ನುವಂತಿದೆ. ಆ ಕಾರಣಕ್ಕೆ ಬಾಲಿವುಡ್ ಬೇಡ ಎಂದು ಸುಮ್ಮನಾದೆ’ ಎನ್ನುವರು. ಅನಂತ್‌ನಾಗ್ ಅವರಿಗೆ ಬರವಣಿಗೆಯ ಶಕ್ತಿಯೂ ಇದೆ. ನೀವು ಏಕೆ ಬರೆವಣಿಗೆ ಬಿಟ್ಟಿರಿ ಎಂದರೆ ‘ಬರವಣಿಗೆಯಲ್ಲಿ ದುಡ್ಡಿಲ್ಲ’ ಎಂದು ಮುಗುಳ್ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT