ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಕ್ಷರಸ್ಥ ಮಹಿಳೆಯರೇ ಬಂಡಾಯಕ್ಕೆ ಪ್ರೇರಣೆ

ಅಧ್ಯಕ್ಷರ ಭಾಷಣದ ಪ್ರಮುಖ ಅಂಶಗಳು
Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

*ಕರ್ನಾಟಕಕ್ಕೆ ಸೇರಬೇಕಾಗಿದ್ದ ಅನೇಕ ಹಳ್ಳಿಗಳು ಮಹಾರಾಷ್ಟ್ರ ಹಾಗೂ ಕೇರಳ (ಕಾಸರಗೋಡು)ಕ್ಕೆ ಸೇರಿ­ಹೋಗಿವೆ. ಅಲ್ಲಿ ಈಗಲೂ ಕನ್ನಡದ ಮಕ್ಕಳು ಬೇರೆ ಭಾಷೆಗಳಲ್ಲಿ ಪಠ್ಯ ಓದುತ್ತಿದ್ದಾರೆ. ಅಲ್ಲಿನ ಮಕ್ಕಳಿಗೆ ಕನ್ನಡದಲ್ಲೇ ಪಠ್ಯವನ್ನು ಮುದ್ರಿಸಿ ಕೊಡುವ ಕೆಲಸ ಮಾಡಬೇಕು.

*ಗೋವಾದಲ್ಲಿ ಈಚೆಗೆ ಕನ್ನಡಿಗರು ಸಂಕಷ್ಟಕ್ಕೆ ಒಳಗಾಗಿದ್ದರು. ರಾಜ್ಯದ ಸಚಿವರೊಬ್ಬರನ್ನು ಕಳುಹಿಸಿ ಅಲ್ಲಿಯ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಅಲ್ಲಿಯ ಕನ್ನಡಿಗರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕು.

*ಕನ್ನಡದ ಜಾನಪದ ಸಂಪತ್ತು ಅಗಾಧವಾದುದು. ಅನಕ್ಷರಸ್ಥ ಮಹಿಳೆ­ಯರು ನಮ್ಮ ಗ್ರಾಮೀಣ ಬದುಕನ್ನು, ಬಡತನವನ್ನು ಅತ್ಯಂತ ಪರಿಣಾಮಕಾರಿ­ಯಾಗಿ ಚಿತ್ರಿಸಿ­ದ್ದಾರೆ. ಈ ಅನಕ್ಷರಸ್ಥ ತಾಯಂದಿರೇ ನನ್ನ ಬಂಡಾಯಕ್ಕೆ ಪ್ರೇರಣೆ.

*ಸಂವಿಧಾನದ ತಿದ್ದುಪಡಿ ಪ್ರಕ್ರಿಯೆ ವಿಳಂಬವಾಗುತ್ತದೆ. ಆದ್ದರಿಂದ 2010­­ರಲ್ಲಿರುವ ಶೈಕ್ಷಣಿಕ ಹಕ್ಕು ಕಾಯ್ದೆಯ ಅಂಶಗಳನ್ನು ಆಧರಿಸಿ ಭಾಷಾ ನೀತಿಯೊಂದನ್ನು ರೂಪಿಸ­ಬೇಕು. ಕಾಯ್ದೆಯ ಪ್ರಕರಣ 29(2) ಎಫ್‌ ಅನ್ವಯ ‘ಮಾತೃಭಾಷೆ’ ಎಂಬು­ದನ್ನು  ರಾಜ್ಯಭಾಷೆ’ ಎಂದು ಬದಲಿಸಬೇಕು.

*ವಿವಿಧ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಕೊಟ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕು.
*ಸರ್ಕಾರ ಪುಸ್ತಕ ನೀತಿಯೊಂದನ್ನು ರೂಪಿಸಿ ಒಳ್ಳೆಯ ಪುಸ್ತಕ ಪ್ರಕಟಿಸುವವರಿಗೆ ಸಬ್ಸಿಡಿ ದರದಲ್ಲಿ ಮುದ್ರಣ ಕಾಗದ ಒದಗಿಸಬೇಕು.

ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡೋಣ
ಕಾಲುನೋವಿನಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ ಕುಳಿತುಕೊಂಡೇ ಅಧ್ಯಕ್ಷೀಯ ಭಾಷಣ ಮಾಡಿದರು. ಕಾವ್ಯದಲ್ಲಿ ಬಂಡಾಯದ ಧ್ವನಿ ಮೊಳಗಿಸುವ ಸಿದ್ದಲಿಂಗಯ್ಯ ಅತ್ಯಂತ ಶಾಂತವಾಗಿ 24ಪುಟಗಳ ತಮ್ಮ ಮುದ್ರಿತ ಭಾಷಣ ಓದಿದರು. ನಡು­ನಡುವೆ ಕೆಲವು ವಿಚಾರಗಳನ್ನು ಬಿಟ್ಟು, ಮುಖ್ಯಾಂಶಗಳನ್ನು ಮಾತ್ರ ಹೇಳುತ್ತ ಹೋದರು.

ಅಸ್ಪೃಶ್ಯತೆಯ ವಿಚಾರ ಪ್ರಸ್ತಾಪ­ವಾದಾಗ, ‘ಮಾನವ ಮಂಗಳ ಗ್ರಹದ ಮೇಲೆ ಕಾಲಿಡುವ ಸಂದರ್ಭದಲ್ಲೂ ನಮ್ಮ ಅನೇಕ ಹಳ್ಳಿಗಳಲ್ಲಿ ದಲಿತರಿಗೆ ಸಾರ್ವಜನಿಕ ಸ್ಥಳದಲ್ಲಿ ಪ್ರವೇಶವಿಲ್ಲ­ದಂತಾಗಿದೆ. ಅಸ್ಪೃಶ್ಯತೆ ಅಳಿಯಬೇಕು ಎಂಬ ಗಾಂಧಿ, ಅಂಬೇಡ್ಕರ್‌ ಅವರ ಕನಸು ನನಸಾಗಬೇಕು. ಊರಿನ ಶಾನುಭೋಗ, ಪಟೇಲ, ಗೌಡ, ತೋಟಿ, ನೀರುಗಂಟಿ, ತಳವಾರರ ಮಕ್ಕಳು ಒಂದೇ ಪಂಕ್ತಿಯಲ್ಲಿ ಕುಳಿತು ದಲಿತ ತಾಯಿ­ಯೊಬ್ಬಳು ತಯಾರಿಸಿದ ಬಿಸಿಯೂಟ­ವನ್ನು ಸಂತೋಷದಿಂದ ಸವಿಯುವ ಸನ್ನಿವೇಶ ಕರ್ನಾಟಕದ ಎಲ್ಲ ಶಾಲೆಗಳಲ್ಲಿ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ’ ಎಂದರು.

ಭಾಷಣದ ಆರಂಭದಲ್ಲಿ ಸಿದ್ದಲಿಂಗಯ್ಯ ಅಂಬೇಡ್ಕರ್‌, ಗಾಂಧಿ ಜತೆಗೆ ಗುರುಗಳಾದ ಕುವೆಂಪು ಹಾಗೂ ಜಿ.ಎಸ್‌. ಶಿವರುದ್ರಪ್ಪ ಅವರನ್ನೂ ಸ್ಮರಿಸಿಕೊಂಡರು.

2015 ಕನ್ನಡ ವರ್ಷವಾಗಲಿ
ಕನ್ನಡ ಸಾಹಿತ್ಯ ಪರಿಷತ್ತು ಶತಮಾ­ನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ 2015ನ್ನು ‘ಕನ್ನಡ ವರ್ಷ’ವನ್ನಾಗಿ ಆಚರಿಸಲು ತೀರ್ಮಾನ ಕೈಗೊಳ್ಳಬೇಕು. ವರ್ಷದುದ್ದಕ್ಕೂ ವಾರದಲ್ಲಿ ಒಂದು ದಿನ ಎಲ್ಲ ಕಚೇರಿ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಕನ್ನಡವೇ ಬಳಕೆಯಾಗಬೇಕು. ಆ ದಿನವನ್ನು ‘ಕನ್ನಡ ದಿನ’ ಎಂದು ಘೋಷಿಸಬೇಕು.

ಅಂದು ಕನ್ನಡವನ್ನು ಕುರಿತ ವಿಚಾರ ಸಂಕಿರಣ, ಚರ್ಚೆಗಳೇ ನಡೆಯಬೇಕು. ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿ­ಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ‘ಕನ್ನಡ ಮಾತಾಡಿ’ ಎಂಬ ಚಳವಳಿಯನ್ನು ಈಗಿಂದೀಗಲೇ ಆರಂಭಿಸಬೇಕು. ರಾಜ್ಯದ ಕ್ರೈಸ್ತ ಚರ್ಚುಗಳಲ್ಲೂ ಕನ್ನಡ ಆರಾಧನೆ ಮತ್ತು ಬಳಕೆಯ ಭಾಷೆಯಾಗಬೇಕು ಎಂದರು.

‘ಐ ಆ್ಯಮ್‌ ದ ಓನ್ಲಿ ಹಸ್ಬೆಂಡ್‌’
ತಮ್ಮ ಭಾಷಣ ಮಧ್ಯದಲ್ಲಿ ಅಧಿಕಾರಿಗಳ ಇಂಗ್ಲಿಷ್‌ ವ್ಯಾಮೋಹದ ವಿಚಾರ ಬಂದಾಗ ಸಿದ್ದಲಿಂಗಯ್ಯ ಎರಡು ಸಣ್ಣ ಹಾಸ್ಯ ಪ್ರಸಂಗಗಳನ್ನು ನೆನಪಿಸಿದರು.

‘ಅಧಿಕಾರಿಯೊಬ್ಬ ತನ್ನ ಆಂಗ್ಲಭಾಷಾ ಪ್ರೌಢಿಮೆ ತಿಳಿಸಲು ತನ್ನ ಅಧೀನ ನೌಕರನಿಗೆ  ‘ಹೌ ಆರ್‌ ಯು?’ ಎಂದು ಕೇಳಿದರು. ನಾನೂ ಇಂಗ್ಲಿಷ್‌ ಮಾತ­ನಾಡಿ-­ದರೆ ಮೇಲಧಿಕಾರಿ ಖುಷಿಯಾಗಬಹುದು ಎಂಬ ಕಾರಣಕ್ಕೆ ಅಧೀನ ಅಧಿಕಾರಿಯೂ ‘ಐ ಆ್ಯಮ್‌ ಫೈನ್‌ ಸರ್‌’ ಎಂದ. ಈತನಿಗೆ ನನಗಿಂತ ಚೆನ್ನಾಗಿ ಇಂಗ್ಲಿಷ್‌ ಬರುತ್ತದೆ ಎಂದರಿತ ಮೇಲಧಿಕಾರಿ ಮುಂದೆ ಆತನನ್ನು ಸಣ್ಣಪುಟ್ಟ ಕಾರಣಕ್ಕೂ ಸಸ್ಪೆಂಡ್‌ ಮಾಡಿ ಕಿರುಕುಳ ನೀಡುವಂತಾಯಿತು’ ಎಂದರು.

ಇಂಗ್ಲಿಷ್‌ ಬಾರದಿದ್ದರೂ ಆ ಭಾಷೆ­ಯಲ್ಲಿ ಮಾತನಾಡುವ ಚಟ ಬೆಳೆಸಿದರೆ ಹೇಗೆ ಹಾಸ್ಯಾಸ್ಪದವಾಗುತ್ತದೆ ಎಂಬುದಕ್ಕೆ ಉದಾಹರಣೆ ಕೊಟ್ಟು, ‘ನನ್ನ ತಂದೆ ತಾಯಿಗೆ ನಾನೊಬ್ಬನೇ ಮಗನಾಗಿರುವುದರಿಂದ ಅವರನ್ನು ನೋಡಿಕೊಳ್ಳಲು ಒಂದು ದಿನ ರಜೆ ಬೇಕು’ ಎಂದು ರಜೆಯ ಅರ್ಜಿ ಬರೆದು ಅಭ್ಯಾಸವಾಗಿದ್ದ ಅಧಿಕಾರಿಯೊಬ್ಬ, ತನ್ನ ಪತ್ನಿಗೆ ಹುಷಾರು ತಪ್ಪಿದಾಗ ‘ಐ ಆ್ಯಮ್‌ ದ ಓನ್ಲಿ ವನ್‌ ಹಸ್ಬೆಂಡ್‌ ಟು ಮೈ ವೈಫ್‌’ ಎಂದು ಬರೆದಿದ್ದ’ ಎಂದರು.

ಯಾವುದಾದರೂ ಕಡತವನ್ನು ಮುಚ್ಚಿ­ದಾಗ ಆ ಕಡತವನ್ನು ‘ಡೆಡ್‌ ವುಡ್‌’ ಎಂದು ಕರೆಯುವುದು ಸರ್ಕಾರದ ಭಾಷೆ. ಹೀಗೆ ಸಚಿವ­ರೊಬ್ಬರು ಹಿಂದೆ ‘ಡೆಡ್‌ ವುಡ್‌’ ಫೈಲ್‌ ಬಗ್ಗೆ ಪ್ರಶ್ನಿಸಿದಾಗ ಅಲ್ಲಿದ್ದ ಅಧಿಕಾರಿ­ಯೊಬ್ಬರು, ‘ಅದು ನಮಗೆ ಬರಲ್ಲ ಸರ್‌, ಅರಣ್ಯ ಇಲಾಖೆಗೆ ಸೇರಿದ್ದು’ ಎಂದಿದ್ದ ಪ್ರಸಂಗವನ್ನು ಸಿದ್ದಲಿಂಗಯ್ಯ ಸ್ಮರಿಸಿಕೊಂಡು ನಗೆ ಉಕ್ಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT