ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯವಾದದ್ದನ್ನು ಬಿಟ್ಟುಬಿಡಿ

ಸ್ವಸ್ಥ ಬದುಕು
Last Updated 14 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಜೀವನದ ಬಗ್ಗೆ ಅತ್ಯಂತ ಆಶ್ಚರ್ಯಕರ  ಅಂಶಗಳನ್ನು ನಾನು ಕಲಿತಿದ್ದೇನೆ. ಅದನ್ನು ನಿಮ್ಮ ಜತೆ ಹಂಚಿಕೊಳ್ಳಲು ಬಯಸುತ್ತೇನೆ. ನಾನು ಯಾರು ಎಂಬುದನ್ನು ತೊರೆದಾಗ ಇದು ಘಟಿಸುತ್ತದೆ.

ಹಿರಿಯರೊಬ್ಬರಿಂದ ನಾನು ಈ ವಿಚಾರ ತಿಳಿದಿದ್ದೇನೆ. ಅವರು ಹೇಳಿದ್ದು ಹೀಗಿದೆ.
‘ನಾನು 82 ವರ್ಷದವನಿದ್ದೇನೆ ಎಂದು ಕೊಂಡಾಗ ಆ ವಯಸ್ಸಿನ ತೊಂದರೆ, ಕಾಯಿಲೆ ಗಳೆಲ್ಲ ನನ್ನನ್ನು ಮುತ್ತುತ್ತಿದ್ದವು. ನಾನಾಗ ದುರ್ಬಲನಾಗುತ್ತಿದೆ. ನಡೆಯಲು ಆಗುತ್ತಿರಲಿಲ್ಲ. ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ. ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ’

‘ಸತತ ದಣಿವಿನಿಂದಾಗಿ ನಾನು ದಣಿದೆ. ನನ್ನ ಆಲೋಚನೆಗಳೇ  ನನಗೆ ದಣಿವು ತರುತ್ತಿದ್ದವು. ನಾನು ಮೌನದಲ್ಲಿ ಜಾರಿದೆ. ಅದು ಸಲಭವಾಗಿ ರಲಿಲ್ಲ. ಮೊದಲಿಗೆ ಅದು ಶಿಕ್ಷೆಯಂತೆ ಅನಿಸಿತು. ಮೌನ ಎಂಬುದು ಪಾರಾಗುವ ಮಾರ್ಗವಲ್ಲ. ಅದು ನನಗೆ ಶಕ್ತಿ ನೀಡಿದ್ದರಿಂದ ಅದೊಂದು ಉದಾರ ಮಾರ್ಗ ಎಂಬ ಅರಿವುಂಟಾಯಿತು’

‘ಮೌನವನ್ನು ಸಹಿಸುವುದನ್ನು ನಾನು ಕಲಿತೆ. ಯೋಚನೆ ಮಾಡದೇ ಇರುವುದು ಅದ್ಭುತ ಅನುಭವ ನೀಡಿತು. ಯೋಚನೆ ಮಾಡದೇ ಇದ್ದಾಗ ನೀವು ಪೂರ್ಣ ವ್ಯಕ್ತಿಯಾಗಿರುತ್ತೀರಿ. ಏಕೆಂದರೆ ಯಾವುದೇ ವಿಚಾರಗಳು ನಿಮ್ಮನ್ನು ಹರಿದು ಛಿದ್ರಗೊಳಿಸುವುದಿಲ್ಲ. ಮೌನದೊಳಗೆ ಮತ್ತಷ್ಟು ಆಳಕ್ಕಿಳಿದೆ. ಇದರಿಂದಾಗಿ ನನ್ನೊಳಗೇ ಮತ್ತಷ್ಟು ಆಳಕ್ಕೆ ಇಳಿದಂತಾಯಿತು’
‘ದೈವಿಕ ಶಕ್ತಿಯ ಹಾರೈಕೆ ಇರುವ  ಅಪರೂಪದ ಪ್ರದೇಶದಲ್ಲಿ ನಾನಿದ್ದೇನೆ ಎಂಬ ಅರಿವು ನನಗಾಯಿತು. ಅದು ಪ್ರಶಾಂತ ದೇವಸ್ಥಾನದಲ್ಲಿ ಇದ್ದುದಕ್ಕಿಂತ ಹೆಚ್ಚಿನದಾಗಿತ್ತು. 

ಅದೊಂದು ಮಾಂತ್ರಿಕ ಸ್ಥಳ. ಅದೊಂದು ಅತ್ಯಂತ ಸ್ವಚ್ಛ ಸ್ಥಳವಾಗಿತ್ತು. ಕಾಲವೆಂಬುದು ಅಲ್ಲಿ ಬಾಧಿಸುತ್ತಲೇ ಇರಲಿಲ್ಲ. ಜಗತ್ತಿನ ಎಲ್ಲ ಸಮಯವೂ ನನ್ನ ಬಳಿಯೇ ಇದೆ ಎಂಬಂತೆ ಭಾಸವಾಗುತ್ತಿತ್ತು. ನನ್ನ ದಿಗಂತ ವಿಸ್ತರಿಸುತ್ತಲೇ ಇತ್ತು. ನಾನು ಸಹ ಅನಂತ ಅವಕಾಶದಲ್ಲಿ  ವ್ಯಾಪಿಸುತ್ತಲೇ ಇದ್ದೆ’ ಕಾಲ ಎಂಬುದು ಇಲ್ಲದಾಗ ಅಲ್ಲಿ ವಯಸ್ಸು ಸಹ ಇರುವುದಿಲ್ಲ ಎಂದು ಆ ಹಿರಿಯರು ಹೇಳಿದರು.

‘82 ವರ್ಷದ ವ್ಯಕ್ತಿಯೊಬ್ಬನಿದ್ದಾನೆ ಎಂಬುದು ನನಗೆ ಗೊತ್ತು. ಆದರೆ, ವಯಸ್ಸು ಈಗ ನನ್ನನ್ನು ಬಾಧಿಸುವುದಿಲ್ಲ. ಈ ವಿಸ್ತೃತವಾದ ಒಳ ಅವಕಾಶ ದಲ್ಲಿ ನನ್ನಮ್ಮ ಪ್ರೀತಿಸುತ್ತಿದ್ದ ಮೂರು ವರ್ಷದ  ಮಗುವಿದೆ. ಗಾಳಿಯಂತೆ ಓಡುತ್ತಿದ್ದ 16 ವರ್ಷದ ಹುಡುಗನಿದ್ದಾನೆ. ಚಿನ್ನದ ಪದಕ ಗೆದ್ದ 22 ವರ್ಷದ ಯುವಕನಿದ್ದಾನೆ. 30 ವರ್ಷದ ಪತಿ ಹಾಗೂ ಅಪ್ಪನಿದ್ದಾನೆ. ನಾನು ಕೇವಲ 82 ವರ್ಷದ ವೃದ್ಧನಲ್ಲ. ಅದಕ್ಕಿಂತ ಹೆಚ್ಚಿನವನು. ನನ್ನಲ್ಲಿ ಎಷ್ಟೆಲ್ಲ ಸಂಗತಿಗಳಿವೆ. ನಾನು ಯುವಕನೂ ಹೌದು, ಹಿರಿಯನು ಹೌದು. ನನಗೆ 82 ವರ್ಷವಾಗಿದೆ ಎಂಬ ಭಾವವನ್ನು ತೊರೆದಾಗ ಇದರ ಅರಿವಾಗುತ್ತದೆ’

ಪ್ರಿಯ ಓದುಗನೇ ಮೌನ ವಹಿಸು. ಆಗ ಅನಗತ್ಯ ಸಂಗತಿಗಳನ್ನು, ಅಸತ್ಯಗಳನ್ನು ತೊರೆಯಲು ಸಾಧ್ಯ ವಾಗುತ್ತದೆ. ಆಗ ನೀವು ಸತ್ಯದ ಜತೆ ಬೆಳೆಯುತ್ತೀರಿ. ಸಾಮಾನ್ಯವಾಗಿ ಅನಗತ್ಯ ನಂಬಿಕೆಗಳು ಸತ್ಯದ ಮೇಲೆ ಮುಸುಕು ಹಾಕುತ್ತವೆ.

ಉದಾ: ನೀವು ಯಶಸ್ಸು ಮತ್ತು ವೈಫಲ್ಯದ ಮೇಲೆ ನಂಬಿಕೆ ಇಟ್ಟಾಗ ಸ್ಪರ್ಧೆ ಮತ್ತು ಅಸೂಯೆ ಹುಟ್ಟುತ್ತದೆ.  ಆ ನಂಬಿಕೆಗಳು ಹಾಗೂ ಅದರಿಂದ ಹುಟ್ಟುವ ಭಾವನೆಗಳನ್ನು ತೊರೆದಾಗ ಪ್ರತಿ ಯೊಬ್ಬರೂ ಎಲ್ಲರಷ್ಟೇ ಅರ್ಹರು ಎಂಬ ಸತ್ಯ ಹೊಳೆಯುತ್ತದೆ. ಅದಕ್ಕಾಗಿ ನಾನು ಹೇಳುತ್ತೇನೆ. ಅನಗತ್ಯವಾದದ್ದನ್ನು ತೊರೆದು ನೀವು ಬೆಳೆಯಿರಿ.

ಪ್ರಾಚೀನ ಕಥೆಯೊಂದು ಹೀಗಿದೆ. ಆತ್ಮವೊಂದು ಧ್ಯಾನ ಮತ್ತು ಮೌನದಲ್ಲಿ ಮುಳು ಗಲು ಕಣಿವೆಗೆ ತೆರಳಿತು. ಅದೊಂದು ಸುಂದರ ಸರೋವರವಾಗಿ ಬದಲಾಯಿತು. ಯಾವುದೇ ನಂಬಿಕೆ, ಅಸತ್ಯ, ಬಯಕೆಗಳು ಆ ಸರೋವರವನ್ನು ಕದಡಲಿಲ್ಲ. ಅದೊಂದು ಪರಿಪೂರ್ಣ ಕನ್ನಡಿಯಾಗಿ ಬದಲಾಯಿತು. ಸರೋವರದಲ್ಲಿ ಇಣುಕಿದವರು ಕಣಿವೆಯ ಪ್ರತಿಬಿಂಬವನ್ನು ಅದರಲ್ಲಿ ನೋಡ ಬಹುದಿತ್ತು. ನಿಮ್ಮೆಲ್ಲ ಆಲೋಚನೆಗಳನ್ನು ಬಿಟ್ಟು ಬಿಡಿ. ದೈವಿಕ ಮೌನ ಹಾಗೂ ನಿಶ್ಶಬ್ದವನ್ನು  ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ. ದೂರುವುದು, ಆರೋಪಿಸುವುದು, ಹೋಲಿಸುವುದು ಎಲ್ಲವನ್ನೂ ಬಿಟ್ಟುಬಿಡಿ. ನಿಮ್ಮೆಲ್ಲ ಸಂಬಂಧಗಳು, ವ್ಯವಹಾರ ಗಳು ಸರೋವರದ ನಿಶ್ಚಲ ನೀರಿನಂತೆ ಇರಲಿ.

ನೀವು ನಿಮ್ಮ ಮನದ ಕಣಿವೆಯಿಂದ ಹೊರಜಗತ್ತಿಗೆ ಕಾಲಿಟ್ಟಾಗ ಪ್ರತಿ ಹೆಜ್ಜೆಯಲ್ಲಿಯೂ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಕು.

ನಾನು ಒಪ್ಪಿಕೊಳ್ಳುತ್ತೇನೆ, ಒಪ್ಪಿಕೊಳ್ಳುವುದಿಲ್ಲ ಎಂಬ ಪರಿಕಲ್ಪನೆ ಕೈಬಿಟ್ಟು ಆಲಿಸಲು ಸಾಧ್ಯವೆ? ಭಯ ಅಥವಾ ಬಯಕೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನಾನು ಸಹಜವಾಗಿ ಉಸಿರಾಡುತ್ತೇನೆಯೆ? ನಾನು ನನ್ನ ಬಗ್ಗೆ ಸ್ಪಷ್ಟತೆ ಹೊಂದಿದ್ದೇನೆಯೆ? ದಬ್ಬಾಳಿಕೆ ಮಾಡದೇ ಮೃದುವಾಗಿ ಮಾತನಾಡಬಲ್ಲೆನೆ?  ಮುಕ್ತ ಮನಸ್ಸು ಹೊಂದಿದ್ದೇನೆಯೆ?

ನಮಗೆ ಯಾವಾಗಲೂ ಸೌಜನ್ಯದಿಂದ ಇರುವುದನ್ನು ಕಲಿಸಲಾಗುತ್ತದೆ. ಆದರೆ, ಮೌನವಾಗಿ ಇರುವುದನ್ನು ಯಾರೂ ಕಲಿಸುವುದಿಲ್ಲ. ಪವಿತ್ರ ಸ್ಥಳಗಳಿಗೆ ಭೇಟಿ ನೀಡುವಾಗ ಚಪ್ಪಲಿಯನ್ನು ಬಿಟ್ಟಂತೆ ಮೌನದ ಮನೆ ಹೊಕ್ಕಲು ಮಾತನ್ನು ತ್ಯಜಿಸಬೇಕಾಗುತ್ತದೆ.

ಮೃತರಿಗೆ ಗೌರವ ಸಲ್ಲಿಸಲು ನಾವು ಮೌನ ಆಚರಿಸುತ್ತೇವೆ. ಹಾಗೆಯೇ ಬದುಕಿರುವವರಿಗೆ ಗೌರವ ಸಲ್ಲಿಸಲು ಸಹ ಈಗ ಮೌನ ವಹಿಸಬೇಕು.

ನೀವು ಯಾರು ಎಂಬುದನ್ನು ಮರೆತಾಗ, ನಿಮ್ಮಲ್ಲಿ ಸ್ಪಷ್ಟತೆ ಮೂಡಿದಾಗ ಸಾವು ಕೂಡ ನಿಮ್ಮನ್ನು ಬೆದರಿಸಲಾರದು. ಏಕೆಂದರೆ ನೀವು ಅಮರರು ಹಾಗೂ ಆದಿ, ಅಂತ್ಯವಿಲ್ಲದಷ್ಟು ದೊಡ್ಡವರು ಎಂಬ ಅರಿವು ನಿಮಗಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT