ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ನೀರಿನ ಸಂಪರ್ಕ ಪತ್ತೆಗೆ ಜಿಐಎಸ್‌

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿನ ಅನಧಿಕೃತ ಕುಡಿಯುವ ನೀರಿನ ಸಂಪರ್ಕಗಳ ಪತ್ತೆ ಹಚ್ಚಲು ಜಲ­ಮಂಡಳಿಯು  ಬಿಬಿಎಂಪಿಯ ಭೌಗೋಳಿಕ ಮಾಹಿತಿ ವ್ಯವಸ್ಥೆಯ   (ಜಿಐಎಸ್‌) ಮೊರೆ ಹೋಗಿದೆ.

ಜಿಐಎಸ್‌ ಮೂಲಕ ಬಿಬಿಎಂಪಿ ವ್ಯಾಪ್ತಿಯ 16 ಲಕ್ಷ ಆಸ್ತಿಗಳಿಗೆ ಈಗಾಗಲೇ ಪಿಐಡಿ ಸಂಖ್ಯೆ ನೀಡ­ಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆದಿರುವ (ಆರ್‌.ಆರ್‌.ಸಂಖ್ಯೆ) ಕುಟುಂಬಗಳು 8.22 ಲಕ್ಷ ಮಾತ್ರ. ಕೆಲವು ಕಡೆ­ಗಳಲ್ಲಿ ಹಲವು ಕುಟುಂಬಗಳು ಒಂದೇ ಆರ್‌.ಆರ್‌.­ಸಂಖ್ಯೆ  ಪಡೆದಿರುವ ಉದಾಹರಣೆಗಳು ಇವೆ. ಇನ್ನೊಂದೆಡೆ ಸಾವಿರಾರು ಕುಟುಂಬಗಳು ಕೊಳವೆ­ಬಾವಿ ನೀರು, ಟ್ಯಾಂಕರ್‌ ನೀರನ್ನು ಆಶ್ರಯಿಸಿವೆ.

ಲಕ್ಷಕ್ಕೂ ಅಧಿಕ ಕುಟುಂಬಗಳು ಅನಧಿಕೃತ ನೀರಿನ ಸಂಪರ್ಕ ಪಡೆದಿವೆ. ಇದರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಮಂಡಳಿ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಇದಕ್ಕೆ ಸ್ಪಂದಿಸಿ­ದವರು ಬೆರಳೆಣಿಕೆಯ ಮಂದಿ ಮಾತ್ರ. ಹೀಗಾಗಿ ಅನಧಿಕೃತ ಸಂಪರ್ಕಗಳ ಪತ್ತೆಗೆ ಮಂಡಳಿ ಈ ಕ್ರಮ ಕೈಗೊಂಡಿದೆ.

‘ಜಿಐಎಸ್‌ ಸಂಖ್ಯೆಯ ಮ್ಯಾಪ್‌ ಹಾಗೂ ಆರ್‌.ಆರ್‌.­ಸಂಖ್ಯೆಗಳ ಜೋಡಣೆ ಮಾಡಿ ಪ್ರದರ್ಶಿಸ­ಲಾಗುವುದು. ಆಸ್ತಿಗೆ ಆರ್‌.ಆರ್‌.ಸಂಖ್ಯೆ ಇದ್ದರೆ ಹಸಿರು ದೀಪ ಬೆಳಗುತ್ತದೆ. ಇಲ್ಲದಿದ್ದರೆ ಕೆಂಪು ದೀಪ ಬೆಳಗುತ್ತದೆ. ಅಂತಹ ಕುಟುಂಬಗಳ ಮನೆಗೆ ಅಧಿ­ಕಾರಿ­ಗಳು ತೆರಳಿ ದಂಡ ವಸೂಲಿ ಮಾಡಿ  ಅಧಿಕೃತ ಸಂಪರ್ಕ ನೀಡಲಿದ್ದಾರೆ’ ಎಂದು ಜಲಮಂಡಳಿಯ ಅಧ್ಯಕ್ಷ ಅಂಜುಮ್‌ ಪರ್ವೇಜ್‌ ತಿಳಿಸಿದರು.

‘ಪ್ರಾಯೋಗಿಕವಾಗಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆ ಆರಂಭವಾಗಿದೆ. ನಗರ­ದಾದ್ಯಂತ ಇದನ್ನು ವಿಸ್ತರಿಸಲಾಗುವುದು. ಇದಕ್ಕಾಗಿ ಟೆಂಡರ್‌ ಕರೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ನಗರಕ್ಕೆ ಪ್ರತಿನಿತ್ಯ 1,350 ದಶಲಕ್ಷ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ ಶೇ 52ರಷ್ಟು ನೀರಿನಿಂದ ಮಾತ್ರ ಮಂಡಳಿಗೆ ಆದಾಯ ಬರುತ್ತಿದೆ. ಶೇ 48ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ಇದರಲ್ಲಿ ಎಲ್ಲ ನೀರು ಸೋರಿಕೆ ಆಗುತ್ತಿಲ್ಲ. ನೀರಿನ ಸೋರಿಕೆ ಪ್ರಮಾಣ ಶೇ 25ರಷ್ಟು ಇದೆ. ಉಳಿದ ನೀರನ್ನು ಕಳವು ಮಾಡಿ ಜನರು ಬಳಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಮಂಡಳಿಯ ಆದಾಯ ಹೆಚ್ಚಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ಆದಾಯ ಕೊಡದ ನೀರು: ಅಂತರರಾಷ್ಟ್ರೀಯ ಮಾನ­ದಂಡದ ಪ್ರಕಾರ ನೀರು ಪೂರೈಕೆ ವೇಳೆಗೆ ಶೇ 16ರಷ್ಟು ನೀರು ಪೋಲಾಗಬಹುದು. ಆದರೆ, ನಗರ­ದಲ್ಲಿ ಶೇ 48ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ಇಷ್ಟೊಂದು ಅಗಾಧ ಪ್ರಮಾಣದ ನೀರು ರಸ್ತೆ­ಯಲ್ಲಿ, ಮಾರ್ಗ ಮಧ್ಯದಲ್ಲಿ ಹರಿದು ಹೋಗು­­ತ್ತಿಲ್ಲ. ಅನ­ಧಿಕೃತ ಸಂಪರ್ಕ ಪಡೆದು ಕಾವೇರಿ ನೀರನ್ನು ಬಳಸುತ್ತಿರುವವರ ಸಂಖ್ಯೆಯೇ ಗಣನೀ­ಯ­ವಾಗಿದೆ ಎಂಬು­ದನ್ನು ಮಂಡಳಿಯ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಶೇ 1ರಷ್ಟು ನೀರು ಜಲಮಂಡಳಿಯ ಕಚೇರಿಗಳಿಗೆ ಹಾಗೂ ಟ್ಯಾಂಕರ್‌ಗಳಿಗೆ ಬಳಕೆಯಾಗುತ್ತಿದೆ. ನಗರ­ದಲ್ಲಿ 15,000ಕ್ಕೂ ಅಧಿಕ ಸಾರ್ವಜನಿಕ ನಲ್ಲಿಗ­ಳಿವೆ. ಇದಕ್ಕೆ ಶೇ 15ರಷ್ಟು ಕಾವೇರಿ ನೀರು ಪೂರೈಕೆ­ಯಾಗುತ್ತಿದೆ. ಇದರಿಂದ ಮಂಡಳಿಗೆ ಆದಾಯ ಬರುತ್ತಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ 375 ಕೊಳೆಗೇರಿಗಳಿವೆ. ಇಲ್ಲಿನ ಬಹುತೇಕ ನಿವಾಸಿಗಳು ನೀರಿನ ಮೀಟರ್‌ ಅಳವಡಿಸಿಕೊಂಡಿಲ್ಲ. ಇಲ್ಲಿ ನೀರಿನ ಕಳವು  ಅವ್ಯಾಹತ­ವಾಗಿ ಸಾಗಿದೆ. ಕೊಳೆಗೇರಿಗಳಲ್ಲೇ ಶೇ 10ರಷ್ಟು ನೀರು ಸೋರಿಕೆಯಾಗುತ್ತಿದೆ.

ನಗರದಲ್ಲಿ ಗೃಹಬಳಕೆ ಹಾಗೂ ಗೃಹೇತರ ಬಳಕೆ ಸೇರಿದಂತೆ ಒಟ್ಟು 8.22 ಲಕ್ಷ ಕುಡಿಯುವ ನೀರಿನ ಸಂಪರ್ಕಗಳಿವೆ. ಮೀಟರ್‌ಗಳ ದೋಷ, ಹಳೆಯ ಪೈಪ್‌ಗಳಲ್ಲಿ ಸೋರಿಕೆ ಉಂಟಾಗುತ್ತಿರುವುದರಿಂದ ಶೇ 10ರಷ್ಟು ಕಾವೇರಿ ನೀರು ಭೂಮಿಯಲ್ಲಿ ಇಂಗಿ ಹೋಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಮೂರು ವಿಭಾಗಗಳಲ್ಲಿ ಯೋಜನೆ ಜಾರಿಯಲ್ಲಿದೆ. ಆದರೂ, ನಿರೀಕ್ಷಿತ ಪ್ರಗತಿ ಸಿಕ್ಕಿಲ್ಲ. ಈಗ ಈ ಯೋಜನೆ ಮೂಲಕ ಹೆಚ್ಚಿನ ಯಶಸ್ಸು ಸಿಗುವ ನಿರೀಕ್ಷೆ ಇದೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT