ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ರಂಗಪ್ರವೇಶ!

Last Updated 2 ಅಕ್ಟೋಬರ್ 2015, 7:00 IST
ಅಕ್ಷರ ಗಾತ್ರ

ನಿರ್ಮಾಪಕ, ವಿತರಕ, ಫೈನಾನ್ಶಿಯರ್ ಆಗಿ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಬಸಂತಕುಮಾರ ಪಾಟೀಲ ಅವರಿಗೆ ಖುಷಿ ಕೊಟ್ಟ ಕ್ಷಣಗಳು ಯಾವುವು? ‘ಗಿರೀಶ ಕಾಸರವಳ್ಳಿ, ಪಿ. ಶೇಷಾದ್ರಿ ಹಾಗೂ ರಾಮದಾಸ ನಾಯ್ಡು ನಿರ್ದೇಶನದ ಸಿನಿಮಾಗಳಿಗೆ ನಿರ್ಮಾಪಕನಾದಾಗ’ ಎಂಬ ಉತ್ತರ ಅವರದು.

ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಸದಾ ಆದ್ಯತೆ ಕೊಡುವ ಅವರು, ಈಗ ಮತ್ತೊಂದು ಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಬಾರಿ ಗಿರೀಶ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ನಿರ್ದೇಶನದಲ್ಲಿ ಆ ಚಿತ್ರ ಮೂಡಿಬರಲಿದೆ. ‘ನಾನು ಸಿನಿಮಾ ರಂಗಕ್ಕೆ ಬಂದು ದಶಕಗಳೇ ಆಗಿ ಹೋದವು. ಕಾಸರವಳ್ಳಿ, ಶೇಷಾದ್ರಿ ಹಾಗೂ ನಾಯ್ಡು ಅವರ ಜತೆ ಕೆಲಸ ಮಾಡಿದ ಅನುಭವ ವಿಶಿಷ್ಟ’ ಎನ್ನುವ ಬಸಂತಕುಮಾರ, ತಮ್ಮ ಪ್ರೊಡಕ್ಷನ್‌ಗೆ ಒಂದು ಸಿನಿಮಾ ಮಾಡಿಕೊಡುವಂತೆ ಮೊದಲಿನಿಂದಲೂ ಅನನ್ಯ ಕಾಸರವಳ್ಳಿ ಅವರನ್ನು ಕೇಳಿಕೊಳ್ಳುತ್ತಲೇ ಇದ್ದರಂತೆ. ಆ ದಿನ ಈಗ ಬಂದಿದೆ ಎಂಬ ಖುಷಿ ಅವರದು. ‘ಅನನ್ಯ ಅವರಿಗೆ ನಮ್ಮ ಬ್ಯಾನರ್‌ ವತಿಯಿಂದ ಸ್ವಾಗತ’ ಎಂದು ಬಸಂತಕುಮಾರ ಹೇಳಿದರು.

ಈ ಚಿತ್ರಕ್ಕಾಗಿ ಅನನ್ಯ ಆಯ್ದುಕೊಂಡಿರುವುದು ಕಿರುಗಥೆಯೊಂದನ್ನು. ಗೋಪಾಲಕೃಷ್ಣ ಪೈ ಅವರ ಕಥೆ ‘ಹರಿಕಥಾ ಪ್ರಸಂಗ’ ಆಧರಿಸಿ, ಚಿತ್ರಕಥೆ ಹೆಣೆದಿದ್ದಾರೆ. ಯಕ್ಷಗಾನದ ಸ್ತ್ರೀ ಪಾತ್ರಧಾರಿ ಸುತ್ತುವ ಕಥೆಯಿದಂತೆ. ಚಿತ್ರಕಥೆಯನ್ನು ಅನಾವರಣ ಮಾಡಿದ ಸುಧಾಮೂರ್ತಿ, ‘ಬಸಂತಕುಮಾರ ಪಾಟೀಲ ಹಾಗೂ ಗಿರೀಶ ಕಾಸರವಳ್ಳಿಯವರು ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಇದ್ದಂತೆ’ ಎಂದು ಬಣ್ಣಿಸಿದರು. ಚಿತ್ರ ತೆರೆಕಂಡ ದಿನದಂದೇ ತಾವು ಚಿತ್ರಮಂದಿರಕ್ಕೆ ತೆರಳಿ ಟಿಕೆಟ್ ಪಡೆದು ಸಿನಿಮಾ ನೋಡುವುದಾಗಿ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ಮಾಜಿ ಅಧ್ಯಕ್ಷ ಎಚ್‌.ಡಿ. ಗಂಗರಾಜು, ನ್ಯಾಯಮೂರ್ತಿ ಶಿವರಾಜ್ ಪಾಟೀಲ, ಕಲಾವಿದರಾದ ಪ್ರಮೀಳಾ ಜೋಷಾಯ್, ಶಿವಧ್ವಜ, ನಿರ್ದೇಶಕರಾದ ಅಭಯ ಸಿಂಹ, ಲಿಂಗದೇವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿರ್ದೇಶಕರಾದ ಪಿ.ಶೇಷಾದ್ರಿ ಹಾಗೂ ಗಿರೀಶ ಕಾಸರವಳ್ಳಿ ಅವರಿಗೆ ನಿರ್ಮಾಪಕ ಬಸಂತಕುಮಾರ ಪಾಟೀಲ ಅವರು ತಲಾ ಹತ್ತು ಲಕ್ಷ ರೂಪಾಯಿಗಳ ಚೆಕ್ ನೀಡಿ ಗೌರವಿಸಿದರು. ಅಂದು ಬಸಂತಕುಮಾರ ಪಾಟೀಲ ಅವರ ಜನ್ಮದಿನ ಕೂಡ ಆಗಿದ್ದರಿಂದ, ಆಹ್ವಾನಿತರು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅವರು ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT