ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯಕ್ಕೆ ಬೀಗ ಮುದ್ರೆ!

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಮುದ್ರೆಗಳನ್ನು ಯೋಗದ ಅಂಶ ಎಂದು ಪರಿಗಣಿಸಲಾಗುತ್ತಿದೆ. ಇದು ಕೈಗಳು ಮತ್ತು ಬೆರಳುಗಳ ಸಹಾಯದಿಂದ ಮಾಡುವಂತಹುದು.  ಕೈ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ ಮುದ್ರೆ.

ನಮ್ಮ ದೇಹವು ಪಂಚಭೂತಗಳಿಂದ ರಚನೆಯಾಗಿದೆ. ಕೈನ ಐದು ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ ಹಾಗೂ ಪ್ರತಿ ಬೆರಳೂ ತನ್ನದೇ ಆದ ಶಕ್ತಿ ಮತ್ತು ಚೈತನ್ಯವನ್ನು ಹೊಂದಿದೆ.

ಎಲ್ಲ ಬೆರಳುಗಳೂ ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತವೆ. ಹೆಬ್ಬೆರಳು ಅಗ್ನಿ ತತ್ವ, ತೋರು ಬೆರಳು ವಾಯು, ಮಧ್ಯದ ಬೆರಳು ಆಕಾಶ,  ಉಂಗುರದ ಬೆರಳು ಪೃಥ್ವಿ (ಭೂಮಿ), ಕಿರುಬೆರಳು ವರುಣನನ್ನು (ಜಲತತ್ವ) ಪ್ರತಿನಿಧಿಸುತ್ತವೆ. ಹೀಗೆ ಪಂಚಭೂತಗಳನ್ನು ಪ್ರತಿನಿಧಿಸುವ ಹೆಬ್ಬೆರಳಿನ ತುದಿಯನ್ನು ಆಯಾ ಬೆರಳುಗಳ ತುದಿಗೆ ಸ್ಪರ್ಶಿಸಿದಾಗ ಪಂಚತತ್ವಗಳು ಸಮತೋಲನ ಸ್ಥಿತಿಗೆ ಬರುತ್ತವೆ.


ಮುದ್ರೆಗಳನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ, ಮುಖ್ಯವಾಗಿ ನೃತ್ಯದಲ್ಲಿ, ದೇವರ ಪೂಜೆಯಲ್ಲಿ ಹಾಗೂ ಯೋಗಾಭ್ಯಾಸದ ಸಮಯದಲ್ಲಿ ಉಪಯೋಗಿಸುತ್ತಾರೆ. ವಿಶೇಷವಾಗಿ, ಮನಸ್ಸಿನ ಭಾವನೆಗಳನ್ನು ಪ್ರಕಟಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಅವುಗಳನ್ನು ಬಳಸಲಾಗುತ್ತದೆ. ಸಂಸ್ಕೃತದಲ್ಲಿ ಮುದ್ರೆ ಎಂದರೆ ಭಾವ ಎಂದಾಗುತ್ತದೆ. ಮುದ್ರೆಗಳನ್ನು ಉತ್ತೇಜಕಗಳೆಂದು ಸಹ ತಿಳಿಯಲಾಗಿದೆ.  ಮುದ್ರೆಗಳು ಒಂದು ನಿರ್ದಿಷ್ಟ ಬಿಂದುವಿನ ಮೇಲೆ ಮೃದುವಾದ ಒತ್ತಡವನ್ನು ತಂದು ಪ್ರಾಣಶಕ್ತಿ ಮತ್ತು ಶಾರೀರಿಕ ಶಕ್ತಿಯನ್ನು ನಿಯಂತ್ರಿಸುತ್ತವೆ.

ಇವುಗಳನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು. ಕುಳಿತಿರುವಾಗ, ನಿಂತಾಗ, ಪ್ರಯಾಣಿಸುವಾಗ, ಹಾಗೆಯೇ ಮಲಗಿರುವಾಗ, ಟಿ.ವಿ ವೀಕ್ಷಣೆ ಮಾಡುತ್ತಿರುವಾಗಲೂ ಮುದ್ರೆಗಳನ್ನು ಹಾಕಬಹುದು. ಎರಡೂ ಕೈಗಳಿಂದ ಮುದ್ರೆಯನ್ನು ಮಾಡಿದರೆ ಉತ್ತಮ ಲಾಭ ಪಡೆಯಬಹುದು.

ಅವುಗಳನ್ನು ಯಾವುದೇ ಸ್ಥಿತಿಯಲ್ಲಿ ಬೇಕಾದರೂ ಮಾಡಬಹುದಾದರೂ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ, ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಒಂದೊಂದು ಮುದ್ರೆಯನ್ನು ಕನಿಷ್ಠ 15- 30 ನಿಮಿಷಗಳವರೆಗೆ ಮಾಡಿದರೆ ವಿಶೇಷ ಫಲ ದೊರಕುತ್ತದೆ. ಮುದ್ರೆಗಳನ್ನು ಮಾಡುವಾಗ ಮನಸ್ಸು ನಿರ್ಮಲವಾಗಿ ಇರಬೇಕು. ಕೈಗಳು ಸಡಿಲವಾಗಿರಬೇಕು. ಮುದ್ರೆ ಹಾಕಿದಾಗ ಹಸ್ತವು ಮೇಲ್ಮಖವಾಗಿದ್ದು, ಮುಖದಲ್ಲಿ ಮುಗುಳ್ನಗು ಇರಬೇಕು. 

ಮುದ್ರೆ ಎಂದರೆ ಮೊಹರು (Seal)ಎಂಬರ್ಥವೂ ಇದೆ. ಸಾಧಕರ ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಶ್ಚಲಗೊಳಿಸಲು ಮುದ್ರೆಗಳನ್ನು ಉಪಯೋಗಿಸಲಾಗುತ್ತದೆ. ದೇಹದಲ್ಲಿ ಎಲ್ಲೆಲ್ಲಿ ರಂಧ್ರಗಳು ಇರುತ್ತವೆ ಮತ್ತು ಅವುಗಳನ್ನು ಹೇಗೆ ಸರಿಪಡಿಸುವುದು ಎಂಬುದನ್ನು ಮುದ್ರೆ ತಿಳಿಸಿಕೊಡುತ್ತದೆ. ಪ್ರಾಣಾಯಾಮದ ಅಭ್ಯಾಸಕ್ಕೆ ಹಲವಾರು ಮುದ್ರೆಗಳನ್ನು ಬಳಸುತ್ತಾರೆ. ಅದರಲ್ಲಿ ಮುಖ್ಯವಾಗಿ ಚಿನ್ಮುದ್ರೆ, ನಾಸಿಕಾ ಮುದ್ರೆ, ಚಿನ್ಮಯ ಮುದ್ರೆ, ಆದಿ ಮುದ್ರೆ, ಬ್ರಹ್ಮ ಮುದ್ರೆ, ಷಣ್ಮುಖಿ ಮುದ್ರೆ ಇತ್ಯಾದಿಗಳನ್ನು ಬಳಸಲಾಗುತ್ತದೆ.
ಮುದ್ರೆಗಳ ಪ್ರಭೇದ

1. ಕ್ರಿಯಾ ಮುದ್ರೆಗಳು: ಶುದ್ಧೀಕರಣ ತಂತ್ರದಲ್ಲಿ ಈ ಮುದ್ರೆಗಳನ್ನು ಉಪಯೋಗಿಸಲಾಗುತ್ತದೆ- ಸಿಂಹ ಮುದ್ರೆ, ಭುಜಂಗನಾ ಮುದ್ರೆ, ಅಶ್ವಿನಿ ಮುದ್ರೆ.

2. ಆಸನ ಮುದ್ರೆಗಳು: ಯೋಗಾಸನದೊಂದಿಗೆ ಉಪಯೋಗಿಸುವ ಮುದ್ರೆಗಳು ಇವು- ಯೋಗ ಮುದ್ರಾ, ಮಹಾ ಮುದ್ರಾ.

3. ಪ್ರಾಣಾಯಾಮ ಮುದ್ರೆಗಳು: ಇವು ಪ್ರಾಣಾಯಾಮಕ್ಕೆ ಉಪಯೋಗಿಸುವ ಕ್ರಿಯಾ ಮುದ್ರೆಗಳು. ಇವು ಉಸಿರನ್ನು ಹತೋಟಿಯಲ್ಲಿ ಇಡಲು ಮತ್ತು ಒಳಗಿನ ಶಕ್ತಿಗಳ ಮೇಲೆ ನಿಯಂತ್ರಣ ಹೊಂದಲು ಉಪಯೋಗಿಸುವ ಮುದ್ರೆಗಳಾಗಿವೆ- ಚಿನ್ಮುದ್ರೆ, ಆದಿ ಮುದ್ರೆ, ನಾಸಿಕಾ ಮುದ್ರೆ, ಷಣ್ಮುಖಿ ಮುದ್ರೆ, ಚಿನ್ಮಯ ಮುದ್ರೆ, ಕಾಕೀ ಮುದ್ರೆ (ಕಾಗೆಯ ಕೊಕ್ಕಿನಂತಹ ಮುದ್ರೆ), ಬ್ರಹ್ಮ ಮುದ್ರೆ ಇವುಗಳಲ್ಲಿ ಸೇರಿವೆ.

4. ಶಕ್ತಿಶಾಲಿನಿ ಮುದ್ರೆಗಳು: ದೇಹದಲ್ಲಿ ಹುದುಗಿರುವ ಸುಪ್ತ ಶಕ್ತಿಗಳನ್ನು ಎಚ್ಚರಿಸಲು ಉಪಯೋಗಿಸುವ ಮುದ್ರೆಗಳು- ವಜ್ರೋಲಿ ಮುದ್ರೆ- ಭಾಗ ಒಂದು, ಭಾಗ ಎರಡು.

5. ಕ್ರಿಯಾ ಮುದ್ರೆಗಳು: ಧ್ಯಾನ ಮಾಡುವಾಗ ಉಪಯೋಗಿಸುವ ಮುದ್ರೆಗಳು- ನಮಸ್ಕಾರ ಮುದ್ರೆ, ಅಭಯ ಮುದ್ರೆ, ಭೈರವ ಮುದ್ರೆ, ಶಿವನ ಮುದ್ರೆ, ಭೈರವೀ ಮುದ್ರೆ, ಭೂಮಿ ಸ್ಪರ್ಶ ಮುದ್ರೆ.

6. ಜ್ಞಾನ ಮುದ್ರೆಗಳು: ಇವು ಋಷಿಗಳು, ಜ್ಞಾನಿಗಳು ಆಚರಿಸುವ ಮುದ್ರೆಗಳಾಗಿವೆ.

7. ಹಸ್ತ ಮುದ್ರೆಗಳು: ಸೂರ‌್ಯ ಮುದ್ರೆ, ಗರುಡ ಮುದ್ರೆ, ಶಂಖ ಮುದ್ರೆ, ತ್ರಿಶೂಲ ಮುದ್ರೆ, ಶಿವಲಿಂಗ ಮುದ್ರೆ, ನಾಗ ಮುದ್ರೆ, ಚಕ್ರ ಮುದ್ರೆ, ಮುಷ್ಟಿ ಮುದ್ರೆ.
(ಮುಂದುವರಿಯುವುದು)

ಆರೋಗ್ಯ ರಕ್ಷಣೆಗಾಗಿ ಇರುವ ಮುಖ್ಯವಾದ ಕೆಲವು ಮುದ್ರೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:

ಜ್ಞಾನ ಮುದ್ರೆ
ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ. ಒತ್ತಡ ನೀಡಬೇಕಾದ ಅಗತ್ಯ ಇಲ್ಲ.

ಪ್ರಯೋಜನ: ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಕಾರಿ.

ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ. ಅಧಿಕವಾದ ಸಿಟ್ಟನ್ನು ಶಮನಗೊಳಿಸುವುದರ ಜೊತೆಗೆ ಮನುಷ್ಯ ಸ್ವಭಾವಗಳಾದ ಹಟಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.

ಅಧ್ಯಾತ್ಮ ಶಕ್ತಿಯ ವೃದ್ಧಿಗೆ ಜ್ಞಾನ ಮುದ್ರೆ ಸಹಾಯಕ. ಪಿಟ್ಯುಟರಿ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಎಷ್ಟು ಹೊತ್ತು ಬೇಕಾದರೂ ಮಾಡಬಹುದು.

ವಾಯು ಮುದ್ರೆ
ತೋರು ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡದಲ್ಲಿ ತಾಗಿಸಬೇಕು. ಹೆಬ್ಬೆರಳನ್ನು ತೋರು ಬೆರಳಿನ ಬೆನ್ನಿನ ಮೇಲೆ ಇಡಬೇಕು. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ.

ಪ್ರಯೋಜನ: ಈ ಮುದ್ರೆಯನ್ನು ಮಾಡುವುದರಿಂದ ಕೀಲುಗಳ ಉರಿ, ಪಾರ್ಕಿನ್‌ಸನ್ ರೋಗ, ಸಂಧಿವಾತ, ಸರ್ವಿಕಲ್ ಸ್ಪಾಂಡಿಲೈಟಿಸ್, ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ರಕ್ತ ಪರಿಚಲನೆಯ ತೊಂದರೆಗಳು ನಿಯಂತ್ರಣಕ್ಕೆ ಬರುತ್ತವೆ.

ಹೊಟ್ಟೆ ಉಬ್ಬರಿಸುವಿಕೆ, ಸೊಂಟ ನೋವು, ಬೆನ್ನು ನೋವು, ವಾತ ಮುಂತಾದ ವಾಯು ಪ್ರಕೋಪದ ತೊಂದರೆಗಳು ಉಂಟಾದಾಗ ವಾಯು ಮುದ್ರೆಯನ್ನು ಸುಮಾರು 20- 40 ನಿಮಿಷ ಮಾಡಿದರೆ ಆರಾಮ ಎನಿಸುತ್ತದೆ. ಅನಂತರ ಪ್ರಾಣ ಮುದ್ರೆಯನ್ನು 10- 30 ನಿಮಿಷ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT