ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯದ ಆಸರೆ!

Last Updated 21 ಜೂನ್ 2016, 19:30 IST
ಅಕ್ಷರ ಗಾತ್ರ

ಕೆಲವರಿಗೆ ಇರುವ ಆರೋಗ್ಯಕ್ಕಿಂತಲೂ ಇಲ್ಲದ ಅನಾರೋಗ್ಯದ ಬಗ್ಗೆಯೇ ಚಿಂತೆ. ಅಂಥವರು ನಿತ್ಯದ ಜೀವನವನ್ನು ದುರಂತಕ್ಕೆ ನೂಕುತ್ತಿರುತ್ತಾರೆ; ಇತರರ ಸಂತಸಕ್ಕೂ ಮಾರಕವಾಗಿರುತ್ತಾರೆ. ಅನಾರೋಗ್ಯವೇ ನಮ್ಮ ಆಸರೆ ಆಗದಿರಲಿ.

ನಾವೆಲ್ಲರೂ ಆರೋಗ್ಯಪೂರ್ಣ ಜೀವನವನ್ನು ಇಷ್ಟಪಡುತ್ತೇವೆ. ಅದಕ್ಕಾಗಿಯೇ ಬಹಳಷ್ಟು ಶ್ರಮಪಡುತ್ತೇವೆ. ಬದುಕಿನ ಎಲ್ಲ ಭಾಗ್ಯಗಳನ್ನು ಅನುಭವಿಸಲಿಕ್ಕೆ ಆರೋಗ್ಯಭಾಗ್ಯ ಬೇಕು ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಆರೋಗ್ಯವಂತರ ಶರೀರದ ಠೇಂಕಾರ ಮತ್ತು ಅವರ ಮನಸ್ಸಿನ ಉತ್ಸಾಹವನ್ನು ನೋಡುವುದೇ ಚಂದ. ಅವರ ಜೀವನೋತ್ಸಾದ ಕಾಂತಿಯೇ ಚಂದ. ಆರೋಗ್ಯವೇ ಸರಿಯಾಗಿ ಇಲ್ಲದಿದ್ದರೆ, ಏನೀದ್ದರೇನು ಪ್ರಯೋಜನ? ಆರೋಗ್ಯವಿಲ್ಲದರ ಬದುಕಿನಲ್ಲಿ ಸಂತೋಷ ಇರುವುದಿಲ್ಲ. ಸಂತೋಷವಿಲ್ಲದ ಬದುಕನ್ನು ಯಾರೂ ಬಯಸುವುದಿಲ್ಲ.

ಈ ಆಲೋಚನೆಗೆ ತೀರಾ ಭಿನ್ನವಾದ ಬಹಳ ವಿಚಿತ್ರವಾದ ಇನ್ನೊಂದು ವಿಷಯವಿದೆ. ಅದನ್ನು ಕೇಳಿದರೆ, ‘ಹೀಗೂ ಉಂಟೇ!?’ ಎಂದು ನೀವು ಹುಬ್ಬೇರಿಸಬಹುದು. ಆರೋಗ್ಯವನ್ನು ಪ್ರೀತಿಸುವವರಿರುವಂತೆಯೇ, ಅನಾರೋಗ್ಯವನ್ನೂ ಪ್ರೀತಿಸುವವರಿರುತ್ತಾರೆ! ತಮ್ಮ ಮನಸ್ಸು ಹಾಗೂ ಶರೀರದಲ್ಲಿ ಅನಾರೋಗ್ಯವನ್ನು ಸಲಹುತ್ತ ಇರುತ್ತಾರೆ. ಇವರು ಅನಾರೋಗ್ಯದ ಆಸರೆಯನ್ನು ಪಡೆದುಕೊಂಡಿರುತ್ತಾರೆ! ಅನಾರೋಗ್ಯವನ್ನು ಆಕರ್ಷಿಸುತ್ತ ಇರುತ್ತಾರೆ. ಹೀಗೆ ಹೇಳಿದರೆ ತಕ್ಷಣಕ್ಕೆ ನೀವು ನಂಬಲಾರಿರಿ. ಇಂತಹ ವ್ಯಕ್ತಿಗಳ ಲಕ್ಷಣವನ್ನು ಹೇಳಿದರೆ, ನೀವು ನಿಮ್ಮ ಪರಿಚಯದವರಲ್ಲಿ ಅಥವಾ ನಿಮ್ಮ ನೆರೆಹೊರೆಯಲ್ಲಿ ಇರಬಹುದಾದ ಇಂತಹವರನ್ನು ಗುರುತಿಸಬಹುದು.

ಅಕಸ್ಮಾತ್ ನಿಮ್ಮಲ್ಲಿಯೇ ಇಂತಹ ಗುಣಲಕ್ಷಣಗಳು ಕಂಡುಬಂದರೆ ಪ್ರಾಮಾಣಿಕವಾಗಿ ಗಮನಿಸಿಕೊಳ್ಳಬಹುದು. ಅನಾರೋಗ್ಯಪ್ರಿಯರನ್ನು ನೀವು ಯಾವಾಗ ಮಾತನಾಡಿಸಿದರೂ ಅವರು ತಮ್ಮ ಅನಾರೋಗ್ಯದ ಬಗ್ಗೆಯೇ ಮಾತನಾಡುತ್ತಾರೆ. ತಮ್ಮ ಅನಾರೋಗ್ಯಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತಾರೆ. ನಿಮ್ಮಿಂದ ಒಂದಿಷ್ಟು ಸಾಂತ್ವನದ ಮಾತುಗಳನ್ನು ಅಪೇಕ್ಷಿಸುತ್ತಾರೆ. ಅವರಲ್ಲಿ ಬಹುತೇಕರಿಗೆ ತಾವು ಬುದ್ಧಿಪೂರ್ವಕವಾಗಿ ನೋವಿನ ಆಸರೆಯನ್ನು ಪಡೆದುಕೊಂಡಿರುವ ಬಗ್ಗೆ ಖಂಡಿತವಾಗಿಯೂ ತಿಳಿದಿರುವುದಿಲ್ಲ. ಆದರೆ ನೋವು ಮಾತ್ರ ಅವರ ವ್ಯಕ್ತಿತ್ವದ ಅಂಗವಾಗಿರುತ್ತದೆ. ‘ಚೆನ್ನಾಗಿದ್ದೀರಾ?’ ಅಂತ ನೀವು ಕೇಳಿದರೆ ಸಾಕು, ಅವರು, ‘ಏನೂ ಇದ್ದೀನಪ್ಪಾ.

ಏನು ಚೆನ್ನವೋ ಏನೋ, ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೇ ಈ ತಲೆನೋವು ಹಿಡಿದುಕೊಂಡಿರುತ್ತದೆ! ಇಡೀ ದಿನ ನರಕಯಾತನೆ’ ಅಂತ ಹೇಳುತ್ತಾರೆ. ಇನ್ನು ಕೆಲವರು, ‘ಹೊಟ್ಟೆಯಲ್ಲಿ ಒಂಥರಾ ಕಿರಿಕಿರಿಯಾಗುತ್ತಿದೆ, ಮಾರಾಯಾ! ಹಸಿವಾಗುತ್ತದೆ. ಆದರೆ, ತಿನ್ನಲಿಕ್ಕೆ ಮನಸ್ಸಾಗುವುದಿಲ್ಲ’  ಅಂತ ಎರಡು ಸುತ್ತು ತಮ್ಮ ಹೊಟ್ಟೆಯನ್ನು ನೀವಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮ ಅನಾರೋಗ್ಯದ ಬಗ್ಗೆ ಹೇಳುತ್ತಾ, ನಿಮ್ಮ ಆರೋಗ್ಯದ ಬಗ್ಗೆ ತಮ್ಮದೇ ರೀತಿಯಲ್ಲಿ ಕೊಂಕು ಮಾತನಾಡುತ್ತಾರೆ. ನೀವು ಅವರಿಗೆ ಲೋಕಾರೂಢಿಯ ಮಾತುಗಳನ್ನಾಡಿಯೋ, ನಿಮ್ಮನ್ನು ಹಿಂದೊಮ್ಮೆ ಕಾಡಿದ್ದ ಹೊಟ್ಟೆಯ ತೊಂದರೆಯ ಬಗ್ಗೆ ನಾಲ್ಕು ಮಾತುಗಳನ್ನಾಡಿಯೋ, ಅವರಿಗೆ ಧೈರ್ಯ ಹೇಳುತ್ತೀರಿ.

ಇನ್ನಷ್ಟು ಕಾಳಜಿಯಿಂದ ಅವರಿಗೆ ‘ನೀವು, ಆಸ್ಪತೆಗ್ರೆ ಹೋಗಿದ್ದೀರಾ? ಒಳ್ಳೆಯ ವೈದ್ಯರಿಗೆ ತೋರಿಸಿದ್ದೀರಾ?’ ಅಂತ ಕೇಳಿದರೋ, ಅವರ ನೋವಿನ ಇತಿಹಾಸ ಹಾಗೂ ಅವರ ದುರದೃಷ್ಟದ ಪುರಾಣವನ್ನು ಶುರು ಮಾಡುತ್ತಾರೆ. ‘ಎಷ್ಟೊಂದು ಆಸ್ಪತ್ರೆಗಳಿಗೆ ಅಲೆದದ್ದಾಯಿತು. ಎಷ್ಟೊಂದು ಡಾಕ್ಟರ್‌ಗಳಿಗೆ ತೋರಿಸಿದ್ದಾಯಿತು. ಯಾವ ಡಾಕ್ಟರಿಂದಲೂ ಕಡಿಮೆ ಮಾಡಕಾಗಿಲ್ಲರೀ!’ ಎಂದು ಹೇಳುತ್ತಾರೆ. ಅವರು ಒಂದಿಷ್ಟು ಹೆಮ್ಮೆಯಿಂದಲೇ ಮಾತನಾಡುವಂತೆ ಅನ್ನಿಸುತ್ತದೆ. ‘ವರ್ಷಗಳಿಂದ ಎಷ್ಟೆಲ್ಲ ಔಷಧಿ ಮಾತ್ರೆ ತಿಂದಿದ್ದಾಯಿತು ಕಡಿಮೆನೇ ಆಗುತ್ತಿಲ್ಲ ಕರ್ಮದ್ದು’ ಅಂತ ವಿಷಾದದಿಂದಲೂ ಹೇಳುತ್ತಾರೆ. ಎಷ್ಟೂಂತ ಡಾಕ್ಟರಿಗೆ ತೋರಿಸೋದು, ಎಷ್ಟೂಂತ ಗುಳಿಗೆ ತಿನ್ನೋದು? ಪೇನ್–ಕಿಲ್ಲರ್ ತಿಂದಾಗ ಸ್ವಲ್ಪ ಆರಾಮಂತನ್ನಿಸುತ್ತದೆ.

ಅದರ ಪ್ರಭಾವ ಮುಗಿಯುತ್ತಿದ್ದಂತೆಯೇ ಮತ್ತೆ ನೋವು ಶುರುವಾಗುತ್ತದೆ. ಹೀಗೇ ದಿನಕಳೆಯಬೇಕೂಂತ ಹಣೆಯಲ್ಲಿಯೇ ಬರೆದಿದೇಂತ ಕಾಣುತ್ತದೆ! ಅಂತ ಮತ್ತೂ ನರಳುತ್ತಾರೆ. ಅವರ ನೋವಿನ ಕತೆಗೆ ಬಹಳ ವರ್ಷಗಳ ಇತಿಹಾಸವೂ ಇರುತ್ತದೆ. ಅವರು ಅನುಭವಿಸುತ್ತಿರುವ ತಲೆನೋವು, ಕಾಲುನೋವು, ಅಂಗಾಲಿನ ಉರಿ, ಆಗಾಗ ಕೈಕಾಲು ನಡುಗುವುದು ಅಥವಾ ಬೇರೆ ಯಾವುದೋ ನೋವು ಅವರ ಮುಖದಲ್ಲಿಯೇ ನಿಮಗೆ ಕಾಣುತ್ತದೆ.  ಅವರು ಯಾವಾಗಲೂ ತಮ್ಮ ಮುಖದಲ್ಲಿ ಯಾತನೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ತಮ್ಮ ಯಾತನೆಯಿಂದ ತಮಗಷ್ಟೇ ಅಲ್ಲ ತಮ್ಮ ಮನೆಯವರಿಗೂ ನೆಮ್ಮದಿಯಿಲ್ಲ ಅಂತಲೂ ಅವರು ಹೇಳುತ್ತಾರೆ.

ಮನುಷ್ಯರಾಗಿ ಹುಟ್ಟಿದ ನಂತರ ಯಾವಾಗಲೂ ಆರೋಗ್ಯವಾಗಿ, ಯಾವಾಗಲೂ ಸಂತೋಷದಿಂದ ಇರೋಕಾಗುತ್ಯೆ? ಅಂತಲೂ ಕೆಲವರು ಪ್ರಶ್ನಿಸುತ್ತಾರೆ. ಕಳೆದ ಜನ್ಮದ್ದೋ, ಈ ಜನ್ಮದ್ದೋ ಕರ್ಮವನ್ನು ಅನುಭವಿಸುತ್ತ ಬದುಕಬೇಕು, ಅಂತೆಲ್ಲ ಅರೆವೇದಾಂತವನ್ನೂ ಮಾತನಾಡುತ್ತಾರೆ. ಆದರೆ ಅನಾರೊಗ್ಯದ ಆಸರೆಯಿಂದ ಹೊರಗೆ ಬರುವುದಕ್ಕಾಗಿ ಅವರು ಪ್ರಾಮಾಣಿಕ ಪ್ರಯತ್ನವನ್ನೇನೂ ಮಾಡುವುದಿಲ್ಲ. ತಮ್ಮ ತಲೆನೋವನ್ನೇ ಅವರು ತಮ್ಮ ಐಡೆಂಟಿಟಿಯನ್ನಾಗಿ ಮಾಡಿಕೊಂಡಿರುತ್ತಾರೆ. ತಮ್ಮ ಕಾಲುನೋವು ಕಡಿಮೆಯಾಗಿಬಿಟ್ಟರೆ ತನ್ನನ್ನು ಯರೂ ಗಮನಿಸುವುದಿಲ್ಲ ಅಂತ ಅಂದುಕೊಂಡಿರುತ್ತಾರೆ.

ದಿನಕೆಳೆದಂತೆ ಅವರ ನೋವು ಬಂಗಾರದ ಬೆಲೆಯಂತೆ ಏರುತ್ತಲೇ ಇರುತ್ತದೆ! ‘ನಿಮಗಂತೂ ನನ್ನ ತಲೆನೋವಿನ ಬಗ್ಗೆ ಕಾಳಜಿಯೇ ಇಲ್ಲ! ನೀವಾಯಿತು, ನಿಮ್ಮ ಕೆಲಸವಾಯಿತು.’ ಅಂತ ಹೇಳುವ ಹೆಂಡತಿಯನ್ನೋ, ‘ನನ್ನ ಅನಾರೋಗ್ಯದ ಬಗ್ಗೆ, ನನ್ನ ಟೆನ್ಶನ್ ಬಗ್ಗೆ ನಿನಗೆ ಒಂದಿಷ್ಟೂ ಕಾಳಜಿಯೇ ಇಲ್ಲ. ಯಾವಾಗ ನೋಡಿದರೂ ಶಾಪಿಂಗ್, ಮೀಟಿಂಗು, ದೇವಸ್ಥಾನ ಅಂತಿರ್ತೀಯಾ!..’ ಎನ್ನುವ ಮಧ್ಯವಯಸ್ಕ ಗಂಡನನ್ನೋ ನೋಡಿರುತ್ತೀರಿ. ಇವರ ಮಾತುಗಳಲ್ಲಿಯೇ ಇವರ ಸಮಸ್ಯೆಯ ಪರಿಚಯ ಹಾಗೂ ಅದರ ಪರಿಹಾರೋಪಾಯ ಇರುತ್ತದೆ. ಅದನ್ನು ಸಂಬಂಧಪಟ್ಟವರು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ಸ್ಪಂದಿಸಬೇಕಾಗುತ್ತದೆ.

ಇನ್ನು ಕೆಲವರಿಗೆ ಅಮಾವಾಸ್ಯೆ-ಹುಣ್ಣಿಮೆ ಸಮಯದಲ್ಲಿ ಇಂತಹ ಭಾವಾತಿರೇಕಗಳು ಉದ್ರೇಕ ಗೊಳ್ಳುತ್ತವೆ. ಖಿನ್ನತೆಗೆ ಒಳಗಾಗುತ್ತಾರೆ. ಅಸಹನೆಯಿಂದ ಸಿಡಿಮಿಡಿಗೊಳ್ಳುತ್ತಾರೆ. ಮನೆ ಯವರು ತನ್ನ ಬಗ್ಗೆ ಒಂದಿಷ್ಟೂ ಕಾಳಜಿಯನ್ನು, ಆಸ್ತೆಯನ್ನು ತೋರಿಸುವುದಿಲ್ಲ ಎಂದು ಅಂದುಕೊಳ್ಳುತ್ತಾರೆ. ತನ್ನ ಮಾತಿಗೆ ಇಲ್ಲಿರುವವರು ಕಿಂಚಿತ್ತೂ ಬೆಲೆ ಕೊಡುವುದಿಲ್ಲ ಎಂದು ಕೊರಗುತ್ತಾರೆ. ಅವರಿಗೆ ಚಿಕ್ಕ ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ.  ತಮ್ಮ ಮಕ್ಕಳನ್ನು, ಸಂಗಾತಿಯನ್ನು, ಪಾಲಕರನ್ನು, ನೆರೆಯವರನ್ನು ಬೈಯತ್ತಿರುತ್ತಾರೆ. ಸಾರಿಗೆ ಉಪ್ಪು ಕಡಿಮೆಯಾಯಿತೆಂದೋ, ಕಾಫಿಗೆ ಪೌಡರು ಜಾಸ್ತಿಯಾಯಿತೆಂದೋ, ಸಂತೆಯಿಂದ ತಂದ ತರಕಾರಿ ಒಣಗಿದೆಯೆಂದೋ, ಮೊಬೈಲಿನಲ್ಲಿ ನಗುನಗುತ್ತ ಉಲಿಯುವವರು ತನ್ನತ್ರ ಮಾತ್ರ ಸಿಡುಕುತ್ತಾರೆಂದೋ...

ಹೀಗೇ ನೂರಾರು ನವನವೀನ ಕಾರಣಗಳನ್ನು ಹುಡುಕಿ, ಹೆಕ್ಕಿ ಹರಿತವಾದ ಮಾತಿನಿಂದ ತನ್ನ ಮನೆಯವರನ್ನು ಝಾಡಿಸುತ್ತಿರುತ್ತಾರೆ. ತನ್ನ ನೋವು ಕಡಿಮೆಯಾಗದೇ ಇರಲಿಕ್ಕೆ ಇನ್ನೊಬ್ಬ ವ್ಯಕ್ತಿಯನ್ನಾಗಲೀ, ಬದಲಾದ ಹವಾಮಾನವನ್ನಾಗಲೀ, ಕಾರಣವನ್ನಾಗಿಯೂ ಮಾಡಿಕೊಂಡಿರುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ಅವರ ನೋವಿಗೆ ಅವರಿಗೆ ತೀರಾ ಆಪ್ತವಾಗಿ ಸಂಬಂಧಪಟ್ಟ ವ್ಯಕ್ತಿಯೇ ಆಗಿರುತ್ತಾರೆ. ಅದೇ ನೋವಿನಲ್ಲಿ ಕೆಲವು ವರ್ಷಗಳು ಕಳೆಯುತ್ತವೆ. ಅಷ್ಟರಲ್ಲಿ ಅವರ ಮುಖಭಾವವೇ ಬದಲಾಗಿಹೋಗಿರುತ್ತದೆ. ಆಕರ್ಷಕವಾಗಿದ್ದ ಅವರ ಮುಖ ಅನಾಕರ್ಷಕವಾಗಿಬಿಟ್ಟಿರುತ್ತದೆ.

ಕಣ್ಣುಗಳಲ್ಲಿ ಗಾಬರಿ ಕಾಣಿಸುತ್ತದೆ. ಅಂತರಂಗದಲ್ಲಿ ಅವರಿಗೆ ದಿಗಿಲು, ಆತಂಕ ತುಂಬಿರುತ್ತದೆ. ಅಂತಹ ವ್ಯಕ್ತಿಗಳು ಬದುಕಿನ ಭವ್ಯತೆಯನ್ನು, ಬದುಕಿನ ಮಹತ್ವವನ್ನು ಮರೆತಿರುತ್ತಾರೆ. ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಾರೆ. ಜೀವನೋತ್ಸಾಹವನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ಬರಡಾಗುತ್ತಿರುವ ಸೋರೆಕಾಯಿಯಂತೆ ಆಗುತ್ತಾರೆ. ಬದುಕಿನಲ್ಲಿ ಅರ್ಥವೇ ಇಲ್ಲ ಅಂತಲೂ ಸಾಯುವುದೇ ಒಳ್ಳೆಯದು ಅಂತಲೂ ಹೇಳಲಿಕ್ಕೆ ಶುರುಮಾಡುತ್ತಾರೆ. ಇಂತಹ ಲಕ್ಷಣಗಳನ್ನು ನಿಮ್ಮವರಲ್ಲಿ ಗುರುತಿಸಿಕೊಂಡರೆ,  ಆದಷ್ಟು ಬೇಗನೇ ಸೂಕ್ತ ಮನೋಚಿಕಿತ್ಸಕರನ್ನು/ಸಂಮೋಹಿನಿ ತಜ್ಙರನ್ನು ಸಂಪರ್ಕಿಸಬೇಕು.

ಅವರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ಅಂಥವರಿಗೆ ಪ್ರೀತಿಯ ಆವಶ್ಯಕತೆ ಇರುತ್ತದೆ. ಅಂದರೆ, ಚಿಕಿತ್ಸೆಯ ಜೊತೆಗೆ ನೀವು ಪ್ರೀತಿಯನ್ನೂ, ಕಾಳಜಿಯನ್ನೂ ತೋರಿಸಿದರೆ ನಿಮ್ಮ ಪ್ರೀತಿ ಅಥವಾ ಕಾಳಜಿ ನಟನೆಯಾಗಿರಬಾರದು. ನಿಮ್ಮ ಪ್ರೀತಿಯ ಆಸರೆ ಸಿಗದಿರುವ ಕಾರಣದಿಂದಲೇ ಇಂತಹವರು ಅನಾರೋಗ್ಯದ ಆಸರೆಯನ್ನು ಪಡೆದುಕೊಂಡಿರುತ್ತಾರೆ. ಅಥವಾ ತನಗೆ ಸಂಬಂಧಪಟ್ಟವರಿಂದ ಸರಿಯಾದ ಕಾಳಜಿ ಹಾಗೂ ಪ್ರಾಮಾಣಿಕವಾದ ಪ್ರೀತಿ ಸಿಗುತ್ತಿಲ್ಲ ಎಂದು ಅವರು ನಂಬಿಕೊಂಡಿರುತ್ತಾರೆ.

ಇಂತಹ ಸಮಸ್ಯೆಯನ್ನು ಎಷ್ಟು ಬೇಗ ಗುರುತಿಸಿ, ಸೂಕ್ತ ಆರೈಕೆ ಮಾಡಲಿಕ್ಕೆ ಸಾಧ್ಯವೋ, ಅಷ್ಟು ಬೇಗ ಅವರು ಸುಧಾರಿಸುತ್ತಾರೆ. ಅವರ ಜೊತೆಗೆ ಇರುವವರಿಗೂ ಸಂತೋಷಪಡಲಿಕ್ಕೆ ಸಾಧ್ಯವಾಗುತ್ತದೆ. ನಿಮ್ಮನ್ನು ನೀವು ಸಮಾಧಾನದಿಂದ ಇರಿಸಿಕೊಳ್ಳುವುದರಿಂದ ಹಾಗೂ ಯಾವುದೇ ಸನ್ನಿವೇಶ ಅಥವಾ ಸಂದರ್ಭಗಳಲ್ಲಿಯೂ ಸಹ ನಿಮ್ಮನ್ನು ನೀವು ಸಮಚಿತ್ತದಿಂದ ಇರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಅಥವಾ ನಿತ್ಯವೂ ಧ್ಯಾನವನ್ನು ಮಾಡುವುದರಿಂದ ಇಂತಹ ಸಮಸ್ಯೆಗಳಿಂದ ಬಚಾವಾಗಲಿಕ್ಕೆ ಸಾಧ್ಯ. ಆರೋಗ್ಯದ ಆಸರೆಯನ್ನು ಪಡೆದುಕೊಳ್ಳಲಿಕ್ಕೆ ಸಾಧ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT