ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಹುತದಿಂದ ಬದುಕಿ ಬಂದದ್ದೇ ದೊಡ್ಡದು

ನೇಪಾಳ: ಭೂಕಂಪದ ಕರಾಳ ಘಟನೆಯನ್ನು ವಿವರಿಸಿದ ಬೆಂಗಳೂರಿನ ನಿವಾಸಿ ಸಿಂಧೂ
Last Updated 27 ಏಪ್ರಿಲ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಏಕಾಏಕಿ ನಮ್ಮ ವಾಹನ ಅಲುಗಾಡಲು ಶುರು ಮಾಡಿತು. ಇತರ ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸಿ ನಿಂತು ಬಿಟ್ಟವು. ರಸ್ತೆಯಲ್ಲೆಲ್ಲ ಬಿರುಕು ಮೂಡಿತು. ಮನೆಯಲ್ಲಿ ಹಾಗೂ ವಾಹನಗಳಲ್ಲಿ ಇದ್ದವರು ಕಿರುಚುತ್ತಾ ಬಯಲು ಪ್ರದೇಶದ ಕಡೆಗೆ ಓಡಲು ಶುರು ಮಾಡಿದರು.’

ನೇಪಾಳದಲ್ಲಿ ಶನಿವಾರ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಭೂಕಂಪದ ಕರಾಳ ಘಟನೆಯಿಂದ ಬದುಕಿ ಬಂದಿರುವ ಬೆಂಗಳೂರಿನ ಸಿಂಧೂ ಅಖಿಲ್‌ ದೇವ್‌ ಅವರು ತಾವು ಕಂಡ ಭೀಕರ ಕ್ಷಣಗಳನ್ನು ಸೋಮವಾರ ‘ಪ್ರಜಾವಾಣಿ’ಗೆ ವಿವರಿಸಿದ್ದು ಹೀಗೆ. ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಭಾನುವಾರ (ಏ. 26)  ನೇಪಾಳದಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಕರೆತರಲಾಯಿತು.

ಮಹಿಳೆಯರು ಮತ್ತು ಮಕ್ಕಳನ್ನು ಮೊದಲು ಕರೆತರಲಾಗುತ್ತಿದೆ.  ಭಾನುವಾರ ಸಂಜೆ  8ಗಂಟೆಗೆ ಸಿಂಧೂ  ಅವರು ನವದೆಹಲಿಗೆ ಬಂದಿದ್ದಾರೆ. ಅವರ ಜೊತೆಗೆ ಅವರ ತಾಯಿ, ಚಿಕ್ಕಮ್ಮ ಹಾಗೂ ಇಬ್ಬರೂ ಮಕ್ಕಳೂ ಬಂದಿದ್ದಾರೆ. ಆದರೆ, ಅವರ ಪತಿ ಅಖಿಲ್‌ ದೇವ್‌ ಇನ್ನೂ ನೇಪಾಳದಲ್ಲೇ ಸಿಲುಕಿರುವುದರಿಂದ ಅವರ ನಿರೀಕ್ಷೆಯಲ್ಲಿ  ಕರ್ನಾಟಕ ಭವನದಲ್ಲಿ ಕಾದು ಕುಳಿತಿದ್ದಾರೆ.

43 ಜನರ ತಂಡದೊಂದಿಗೆ ಸಿಂಧೂ ಕುಟುಂಬದವರು ನೇಪಾಳಕ್ಕೆ ತೆರಳಿದ್ದರು. ಇವರ ಪತಿ ಅಖಿಲ್‌ ದೇವ್‌ ಸೇರಿದಂತೆ 7 ಜನರನ್ನು ಹೊರತುಪಡಿಸಿದರೆ ಉಳಿದವರು ಈಗಾಗಲೇ ವಾಪಸ್‌ ಬಂದಿದ್ದಾರೆ. ಸಿಂಧೂ ಮೂಲತಃ ಬೆಂಗಳೂರಿನ ಜಯನಗರದ ಐದನೇ ಬ್ಲಾಕ್‌ ನಿವಾಸಿ. ಆರು ಜನರ ಅವರ ಕುಟುಂಬ ಏಪ್ರಿಲ್‌ 24ರಂದು ನೇಪಾಳದಲ್ಲಿನ ಪ್ರಮುಖ ಯಾತ್ರಾ ಸ್ಥಳಗಳ ಭೇಟಿಗೆಂದು ತೆರಳಿತ್ತು.

‘ಮುಕ್ತಿನಾಥ ಸೇರಿದಂತೆ ಇತರ ಪ್ರದೇಶಗಳನ್ನು ನೋಡಿ ಬರಲು ನೇಪಾಳಕ್ಕೆ ತೆರಳಿದ್ದೆವು. ಆದರೆ, ಯಾಕೊ ವಿಧಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ, ಇಷ್ಟೊಂದು ದೊಡ್ಡ ಅನಾಹುತದಿಂದ ನಾವು ಬದುಕಿ ಬಂದದ್ದೆ ದೊಡ್ಡದು. ಎಲ್ಲರೂ ವಾಪಸ್‌ ಬಂದಿದ್ದೇವೆ. ನನ್ನ ಪತಿಯನ್ನು ಯಾವಾಗ ಕರೆತರುತ್ತಾರೊ ಗೊತ್ತಿಲ್ಲ’ ಎಂದು ನೋವಿನಿಂದ ಹೇಳಿದರು.

‘ಶನಿವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರ ಆಸುಪಾಸಿನ ಸಮಯ ಇರಬಹುದು. ಕಠ್ಮಂಡುವಿನಿಂದ ನಾಗರಕೋಟೆಗೆ ಹೋಗುತ್ತಿದ್ದೆವು. ಸುಮಾರು 20 ಜನರಿದ್ದ ನಮ್ಮ ಟೆಂಪೋ ಟ್ರಾವೆಲರ್‌ ಏಕಾಏಕಿ ಅಲುಗಾಡಲು ಶುರು ಮಾಡಿತು. ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿ ನಿಂತು ಬಿಟ್ಟವು. ಕ್ಷಣಾರ್ಧದಲ್ಲಿ ರಸ್ತೆಯಲ್ಲಿ ಬಿರುಕು ಮೂಡಿತು. ಅಕ್ಕಪಕ್ಕದವರು ಓಡುತ್ತ ಕಿರುಚಾಡಲು ಶುರು ಮಾಡಿದರು.

ನಾವು ಕೂಡ ತಕ್ಷಣವೇ ವಾಹನದಿಂದ ಇಳಿದು ಓಡಿ ಹೋದೆವು’ ಎಂದು ನಡೆದ ಘಟನೆಯನ್ನು ವಿವರಿಸಿದರು. ‘ಕೆಲ ನಿಮಿಷಗಳ ಬಳಿಕ ಗೊತ್ತಾಯಿತು ಇದು ಭೂಕಂಪ ಎಂದು. ಸುಮಾರು ಎರಡೂ ಗಂಟೆ ರಸ್ತೆ ಬದಿಯಲ್ಲೆ ಕಳೆದು ಕಠ್ಮಂಡುವಿಗೆ ಪ್ರಯಾಣ ಬೆಳೆಸಿದೆವು. ಬಹುತೇಕ ಎಲ್ಲ ಕಟ್ಟಡಗಳು ಉರುಳಿ ಬಿದ್ದಿದ್ದವು.

ಆದರೆ, ಅದೇನೋ ಗೊತ್ತಿಲ್ಲ ನಾವು ಉಳಿದುಕೊಂಡಿದ್ದ ‘ವೈಶಾಲಿ’ ಹೋಟೆಲ್‌ನ ಕಟ್ಟಡದಲ್ಲಿ ಬಿರುಕು ಮೂಡಿದ್ದು ಬಿಟ್ಟರೆ ಏನೂ ಆಗಿರಲಿಲ್ಲ. ಆದರೂ ಆ ರಾತ್ರಿ ಹೊರಗಡೆಯೇ ಮಲಗಿ ಭಯದಲ್ಲೇ ಕಾಲ ಕಳೆದೆವು’ ಎಂದು ಘಟನೆ ಮೆಲುಕು ಹಾಕಿದರು. ‘ನಮ್ಮ ದೇಶಕ್ಕೆ ವಾಪಸ್‌ ಬರಲು ಬೆಳಿಗ್ಗೆ ಕುಟುಂಬದವರೆಲ್ಲರೂ ವಿಮಾನ ನಿಲ್ದಾಣಕ್ಕೆ ಹೋಗಿದ್ದೆವು. ಆದರೆ, ಅಲ್ಲಿ ಸಾವಿರಾರು ಜನ ಜಮಾಯಿಸಿದ್ದರು. 10 ಗಂಟೆಗಳ ಕಾಲ ನಿಲ್ದಾಣದ ಹೊರಗಡೆ ಕಾಯಬೇಕಾಯಿತು.

ಅಷ್ಟಾದರೂ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ, ಭಾನುವಾರ ಭಾರತೀಯ ವಾಯು ಪಡೆಯವರು ಮಹಿಳೆಯರು ಮತ್ತು ಮಕ್ಕಳನ್ನು ಮೊದಲ ಹಂತದಲ್ಲಿ ಕರೆದೊಯ್ಯಲು ವ್ಯವಸ್ಥೆ ಮಾಡಿದರು. ಇದರಿಂದಾಗಿ ರಾತ್ರಿ 8ಗಂಟೆಗೆ ನವದೆಹಲಿಗೆ ಬರುವಂತಾಯಿತು’ ಎಂದು  ತಾವು ಪಟ್ಟ ಪಡಿಪಾಟಲನ್ನು ವಿವರಿಸಿದರು.

‘ಭಾರತೀಯರನ್ನು ಕರೆತರಲು  ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾವು ಉಳಿದುಕೊಂಡಿರುವ ಕರ್ನಾಟಕ ಭವನದಲ್ಲಿ ಊಟ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಉತ್ತಮವಾಗಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರು ಇಲ್ಲಿಗೆ ಬಂದು ವಿಚಾರಿಸಿ ಹೋದರು’ ಎಂದೂ ಹೇಳಿದರು.
*
‘ಮರಳಿ ಬರುವ ನಂಬಿಕೆ ಇರಲಿಲ್ಲ’
‘ನೇಪಾಳದಿಂದ ನಾವು ಬದುಕಿ ಬರುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲ. ಭೂಮಿ ನಡುಗಿ ಜೀವ ಕೈಗೆ ಬಂದಂತೆ ಆಯಿತು. ದೇವರ ದಯೆ ಬದುಕಿ ಊರು ಸೇರಿಕೊಂಡೆವು’. ಇದು ನೇಪಾಳದಲ್ಲಿ ಏ.25ರ ಬೆಳಿಗ್ಗೆ ಭೂಕಂಪನವನ್ನು ಪ್ರತ್ಯಕ್ಷ ಕಂಡ ಬೆಂಗಳೂರಿನ ಕತ್ತರಿಗುಪ್ಪೆ ನಿವಾಸಿ ರಾಮಪ್ರಸಾದ್ ಬೆಳ್ಳೂರು ಕುಮಾರ್ ಅವರ ಮಾತು. 

ಯುನೈಟೆಡ್ ಹೆಲ್ತ್‌ಕೇರ್‌ನಲ್ಲಿ ಉದ್ಯೋಗಿಯಾಗಿರುವ ಪ್ರಸಾದ್ ತಮ್ಮ ತಂದೆ ಕುಮಾರ್ ತಂದೆ- ತಾಯಿ, ಪತ್ನಿ- ಮಗ ಸೇರಿದ ಏಳು ಜನರೊಂದಿಗೆ ಏ.21ರಿಂದ 26ರವರೆಗೆ ನೇಪಾಳ ಪ್ರವಾಸ ಕೈಗೊಂಡಿದ್ದರು. ಇವರ ತಂಡದಲ್ಲಿ 50 ಮಂದಿ ಇದ್ದರು. ಎಲ್ಲರೂ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ.

ಈ ಭೂಕಂಪದ ಭಯಾನಕ ಚಿತ್ರಣವನ್ನು ಪ್ರಸಾದ್ ವಿವರಿಸಿದ್ದು ಹೀಗೆ: ‘25ರಂದು ಬೆಳಿಗ್ಗೆ 10 ಗಂಟೆಗೆ ಪಶುಪತಿನಾಥನ ದರ್ಶನಕ್ಕೆ ಹೋಗಿ, 10.30ರ ಹೊತ್ತಿಗೆ ಹೊರಗೆ ಬಂದೆವು. ಬಳಿಕ ಶಾಪಿಂಗ್ ಮಾಡುತ್ತಿದ್ದಾಗ ಭೂಮಿ ಅಲ್ಲಾಡಿತು. ನಿಂತಲ್ಲೇ ಜಾರಿದೆವು. ಕೆಲವರು ರಸ್ತೆ ಮೇಲೆಯೇ ಬಿದ್ದರು. ಮಾರಾಟದ ವಸ್ತುಗಳು ನೆಲಕ್ಕೆ ಬಿದ್ದವು.

‘ಭೂಕಂಪನ ಭೂಕಂಪನ ಎಂದು ಜೋರಾಗಿ ಕೂಗಿಕೊಂಡು ಜನರು ರಸ್ತೆಗೆ ಬಂದರು. ಅಗರವಾಲ್ ಭಂಡಾರ್ ಎದುರಿನಲ್ಲಿದ್ದ ಹಳೆಯ ಕಟ್ಟಡ ಕುಸಿದು, ಅದರ ಕೆಳಗೆ ವ್ಯಾಪಾರ ಮಾಡುತ್ತಿದ್ದವರ ಮೇಲೆ ಬಿತ್ತು. ಪಶುಪತಿನಾಥ ದೇವಾಲಯದ ಬಳಿಯೇ ಸಶ್ಮಾನ ಇದೆ. ಅದರ ಮುಂಭಾಗದ ಖಾಲಿ ಮೈದಾನದಲ್ಲಿ ಎಲ್ಲರೂ ಸೇರುತ್ತಿದ್ದರು. ಆಗಾಗ್ಗೆ ಅದರುತ್ತಿದ್ದ ಭೂಮಿ ನಮ್ಮ ಆತಂಕವನ್ನು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು.

‘ಬಿರುಕು ಬಿಟ್ಟ ರಸ್ತೆ, ಅಳು-, ಆಕ್ರಂದನ, ಬಿದ್ದ ಕಟ್ಟಡಗಳ ಅವಶೇಷದಡಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲು ಹೆಣಗಾಡುತ್ತಿದ್ದ ದೃಶ್ಯ ನಾವು ತಂಗಿದ್ದ ಹೋಟೆಲ್‌ಗೆ ಬರುವ ರಸ್ತೆಯ ಉದ್ದಕ್ಕೂ ಕಂಡು ಬಂತು. ಈ ಹೋಟೆಲ್‌ ಹಿಂಬದಿಯಲ್ಲಿದ್ದ ಕಟ್ಟಡ ಬಿದ್ದು ಆರೇಳು ಜನರು ಸಾವನ್ನಪ್ಪಿದ್ದರು. ಅವಸರದಲ್ಲಿ ಲಗೇಜು ಸಿದ್ಧ ಪಡಿಸಿಕೊಂಡು ವಿಮಾನ ನಿಲ್ದಾಣದ ಕಡೆಗೆ ಹೊರಟೇವು.

ಭಾರತದ ದೂತವಾಸದಲ್ಲಿ ನಮ್ಮ ಟ್ರಾವೆಲ್‌ ಏಜೆಂಟ್‌ಗೆ ಯಾರೋ ಪರಿಚಯವಿದ್ದರು. ಅವರು ವಿಮಾನ ಸಿಗುತ್ತದೆ ಎಂಬ ಭರವಸೆ ನೀಡಿದ್ದರು. ಭಾರತದಿಂದ ಪರಿಹಾರ ಕಾರ್ಯದ ಸಾಮಗ್ರಿ, ಔಷಧಿ ಹೊತ್ತ ತಂದ ಸೇನೆಯ ಸರಕು ಸಾಗಣೆಯ ನಾಲ್ಕು ವಿಮಾನದಲ್ಲಿ (ಸಿ17 ಗ್ಲೋಬ್ ಮಾಸ್ಟರ್) ಆದ್ಯತೆ ಮೇಲೆ ವೃದ್ಧರು, ಮಕ್ಕಳು- ಮಹಿಳೆಯರನ್ನು ಮೊದಲು ಕಳುಹಿಸಿದರು. ಸುಮಾರು 200ರಿಂದ 250 ಮಂದಿ ಒಂದೊಂದು ವಿಮಾನಕ್ಕೆ ಹತ್ತಿದರು.

‘ನನ್ನ ತಂದೆ-, ತಾಯಿ, ಹೆಂಡತಿ ಮತ್ತು ಮಗ ಎರಡನೇ ವಿಮಾನದಲ್ಲಿ ರಾತ್ರಿ 11.30ಕ್ಕೆ ಕಠ್ಮಂಡು ಬಿಟ್ಟು, 2ಗಂಟೆಗೆ ದೆಹಲಿ ಸೇರಿದರು. ನಾನು ನಾಲ್ಕನೇ ವಿಮಾನದಲ್ಲಿ ಹೊರಟೆ, ಈ ವಿಮಾನ ನಸುಕಿನ 2ಗಂಟೆಗೆ ಹೊರಟು, 26ರ ಬೆಳಿಗ್ಗೆ 5ಕ್ಕೆ ದೆಹಲಿ ತಲುಪಿತು. ಅಲ್ಲಿಂದ ಬೆಂಗಳೂರಿಗೆ ರಾತ್ರಿ 10ಗಂಟೆಗೆ ಬಂದೆವು. ಹೋದ ಜೀವ ವಾಪಸು ಬಂದಂತೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT