ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರೀಕ್ಷಿತ ಆಘಾತ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಫಿಲಿಪ್‌ ಹ್ಯೂಸ್‌ ತಲೆಗೆ ಚೆಂಡು ತಾಗಿ ಸಾವನ್ನಪ್ಪಿರುವ ಘಟನೆ ಕ್ರಿಕೆಟ್‌ ಜಗತ್ತನ್ನೇ ತಲ್ಲಣಗೊಳಿಸಿದೆ. ಸಿಡ್ನಿ­ಯಲ್ಲಿ ಶೆಫೀಲ್ಡ್‌ ಶೀಲ್ಡ್‌ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಪಂದ್ಯದ ವೇಳೆ ಈ ದುರ್ಘಟನೆ ನಡೆದಿದೆ. ಫಿಲಿಪ್‌ಗೆ 25 ವರ್ಷ ವಯಸ್ಸಾಗಿತ್ತಷ್ಟೆ. 26 ಟೆಸ್ಟ್‌ ಮತ್ತು 25 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಆಡಿ­ದ್ದರು. ಅವರು ವೃತ್ತಿಪರ ಕ್ರಿಕೆಟ್‌ನಲ್ಲಿ ಬಹಳ ಭರವಸೆ ಮೂಡಿಸಿ­ದ್ದರು. ಅವರ ಸಾವು ಕ್ರಿಕೆಟ್‌ ರಂಗದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದೆ.

ಕ್ರಿಕೆಟ್‌ ಸುಂದರ ಆಟ ನಿಜ. ಜತೆಗೆ ಅಪಾಯಕಾರಿಯೂ ಹೌದು. ಮೈದಾನದಲ್ಲಿ ಆಟಗಾರರು ಮೈಯೆಲ್ಲಾ ಕಣ್ಣಾಗಿರಬೇಕು. ಒಂದಿನಿತು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಫಿಲಿಪ್‌ ಪ್ರಕರಣ ಕ್ರಿಕೆಟ್‌ ರಂಗದಲ್ಲಿ ಹೊಸತೇನೂ ಅಲ್ಲ. ಕಳೆದ ವರ್ಷ ದಕ್ಷಿಣ ಆಫ್ರಿಕಾದ ಡರೆನ್‌ ರ್‍ಯಾಂಡಲ್‌ ಮತ್ತು ಪಾಕಿ­ಸ್ತಾನದ ಜುಲ್ಫಿಕರ್‌ ಭಟ್ಟಿ ಆಡುತ್ತಿದ್ದಾಗಲೇ ಇದೇ ರೀತಿ ಚೆಂಡು ತಾಗಿ ಸಾವ­ನ್ನ­ಪ್ಪಿದ್ದರು. ಆಟ­ಗಾರರೇ ಸತ್ತಿದ್ದಾರೆಂದೇನಿಲ್ಲ. ಐದು ವರ್ಷಗಳ ಹಿಂದೆ ಇಂಗ್ಲೆಂಡ್‌­ನಲ್ಲಿ ಅಲ್ಕೆನ್‌ ಜೆಂಕಿನ್ಸ್‌ ಎಂಬುವವರು ಪಂದ್ಯವೊಂದರಲ್ಲಿ ಅಂಪೈ­ರಿಂಗ್‌ ನಡೆಸುತ್ತಿದ್ದರು. ಆಗ ಫೀಲ್ಡಿಂಗ್‌ ನಡೆಸುತ್ತಿದ್ದವರೊಬ್ಬರು ಎಸೆದ ಚೆಂಡು ಜೆಂಕಿನ್ಸ್‌ ತಲೆಗೆ ಬಡಿದು ಸಾವನ್ನಪ್ಪಿದ್ದರು. ಭಾರತದಲ್ಲಿ ರಮಣ್‌ ಲಂಬಾ ಸಾವಿನ ಪ್ರಕರಣ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಒಂದೂವರೆ ದಶಕದ ಹಿಂದೆ ಢಾಕಾದಲ್ಲಿ ಕ್ಲಬ್‌ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ಶಾರ್ಟ್‌ಲೆಗ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಅವರ ತಲೆಗೆ ಚೆಂಡು ಬಡಿದು ಕೊನೆಯುಸಿರು ಎಳೆದಿದ್ದರು. ಗಾಯಗಳಾಗಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಹಲವರ ಉದಾಹರಣೆಗಳೂ ನಮ್ಮ ಎದುರಲ್ಲಿವೆ. ಇಂತಹ ಘಟನೆಗಳನ್ನೆಲ್ಲಾ ನೋಡಿದಾಗ ಮೈದಾನದಲ್ಲಿರು­ವಾಗ ಪ್ರತಿಯೊಬ್ಬರೂ ಜಾಗರೂಕತೆಯಿಂದಿರ­ಬೇಕಾದ ಅಗತ್ಯ ಬಹಳಷ್ಟಿದೆ ಎಂಬ ಅರಿವಾಗುತ್ತದೆ. ಅದೆಷ್ಟೇ ಅನುಭವಿಯಾಗಿ­ದ್ದರೂ ಮೈದಾನದಲ್ಲಿ ಮೈ-­ಮರೆಯುವಂತಿಲ್ಲ. ಆಟಗಾರರು ಚೆಂಡಿನ ಗತಿಯ ಬಗ್ಗೆ ಸದಾ ಒಂದು ಕಣ್ಣಿ­ಟ್ಟಿರಲೇಬೇಕು.

ಕ್ರಿಕೆಟ್‌ ಆಡಳಿತಗಾರರು ಕೂಡಾ ಆಟಗಾರರ ಸುರಕ್ಷತೆ ಕುರಿತು ಚಿಂತಿ­ಸ­ಬೇಕಿದೆ. ಆಟದಲ್ಲಿ ಹೊಸ ತಂತ್ರಗಳ ಬಗ್ಗೆ ಕೋಚ್‌ಗಳು ಅರಿವು ಪಡೆ­­ಯು­ವಷ್ಟೇ, ಆಟಗಾರರ ಸುರಕ್ಷತೆಯ ಬಗ್ಗೆಯೂ ಪರಿಜ್ಞಾನ ಬೆಳೆಸಿಕೊಳ್ಳ­ಬೇಕು. ಸುರಕ್ಷತೆ ಬಗ್ಗೆ ಆಟಗಾರರ ಜತೆಗೆ ಕೋಚ್‌ಗಳು ನಿರಂತರವಾಗಿ ಸಮಾ­ಲೋ­ಚನೆ ನಡೆಸುತ್ತಿರಬೇಕಾದ ಅಗತ್ಯವೂ ಇದೆ. ಫಿಲಿಪ್‌ ಆಡುವಾಗ ಹಗುರ­ವಾದ  ಹೆಲ್ಮೆಟ್‌ ಧರಿಸಿದ್ದರಿಂದ ದುರ್ಘಟನೆ ನಡೆಯಿತು ಎನ್ನಲಾ­ಗಿದೆ. ಇಂತಹ ವಿಷಯ­ಗಳಲ್ಲಿ ಆಟಗಾರರು ಮತ್ತು ಯಾವುದೇ ತಂಡದ ಆಡಳಿತ­ಗಾರರು ರಾಜಿ ಮಾಡಿಕೊಳ್ಳಲೇಬಾರದು. ಬ್ಯಾಟ್ಸ್‌ಮನ್‌ ಮತ್ತು ವಿಕೆಟ್‌ ಕೀಪರ್‌ಗಳು ಅತ್ಯುನ್ನತ ಮಟ್ಟದ ಹೆಲ್ಮೆಟ್‌ಗಳನ್ನೇ ಧರಿಸಬೇಕು. ಉತ್ತಮ ಗುಣಮಟ್ಟದ ಗ್ಲೌಸ್‌, ಲೆಗ್‌ಪ್ಯಾಡ್‌ ಮುಂತಾದವುಗಳನ್ನು ಆಟ­ಗಾ­ರರು ಬಳಸಬೇಕು. ಇವೆಲ್ಲ ಇದ್ದರೂ ಆಟ ಎಂದ ಮೇಲೆ ಅಪಾಯ ಇದ್ದೇ ಇರುತ್ತದೆ. ಈ ಕುರಿತು ಆಟಗಾರರೇ ಸ್ವಂತ ವಿವೇಚನೆಯನ್ನು ಬಳಸಬೇಕು. ಇಂತಹ ಪ್ರಸಂಗಗಳಲ್ಲಿ ಆಟಗಾರನ ಸಮಯಪ್ರಜ್ಞೆಯೇ ಆತನನ್ನು ಅಪಾಯದಿಂದ ರಕ್ಷಿಸುತ್ತದೆ ಎನ್ನ­ಬಹುದು. ಇದು ಕ್ರಿಕೆಟ್‌ ಅಷ್ಟೇ ಅಲ್ಲ, ಹಾಕಿ, ಫುಟ್‌ಬಾಲ್‌ ಮುಂತಾದ ಹತ್ತು ಹಲವು  ಕ್ರೀಡೆಗಳ ಆಟಗಾರರಿಗೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT