ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಸಿದ್ದಾಗುವ ವರವೂ, ಪೆನ್ಸಿಲೆಂಬ ಮೂಲಕವೂ...

ಪ್ರಬಂಧ
Last Updated 16 ಮೇ 2015, 19:30 IST
ಅಕ್ಷರ ಗಾತ್ರ

ಯಾವುದೋ ದೇಶದಲ್ಲಿ ಯಾವನೋ ಒಬ್ಬನಿಗೆ ಹೀಗೊಂದು ಹೊಳೆಯಿತಂತೆ... ಅಂದುಕೊಂಡಿದ್ದನ್ನೆಲ್ಲ ಆಗಿಬರಿಸುವ ವರವಿದ್ದರೆ ಎಷ್ಟು ಚೆನ್ನಂತ- ತಂತಾನೇ ಹೇಳಿಕೊಂಡನಷ್ಟೆ, ಅದೃಷ್ಟದ ದೇವರು- ಕಣ್ಣೆದುರು ತಾಳಿಬಂತು. ಕೋರಿಕೋ ಅಂದಿತು. ಏನನ್ನೂ ಆಗಿಬರಿಸುವ ವರವನ್ನು ಇವನು ಕೇಳಿಯೇಬಿಟ್ಟ.

ಬೇಡಿಕೆಯನ್ನು ಕೇಳಿಸಿಕೊಂಡ ದೇವರು, ತನಗೆ ತಾನೇ ಒಮ್ಮೆ ವಿಚಾರಗೈದು, ‘ಅಂದುಕೊಂಡಿದ್ದನ್ನೆಲ್ಲ ಆಗಿಬರಿಸುವುದಾದರೆ- ಇಕೋ ಇದನ್ನು ಬಳಸಿ ಬರಿ. ಆಗಿಬರುವುದು!’ ಅಂತಂದು ಅವನ ಕೈಯಲ್ಲೊಂದು ಪೆನ್ಸಿಲು ಕೊಟ್ಟಿತು. ಅದನ್ನಿಸಕೊಂಡು- ಇವನು ಕಾಗದದ ಹಾಳೆಯ ಮೇಲೆ ಸುಮ್ಮಗೊಂದು ಹಕ್ಕಿ ಚಿತ್ರಿಸಿದ. ಚಿತ್ರದ ಹಕ್ಕಿ ನಿಜಕ್ಕೂ ಆಗಿಬಂದು, ಒಮ್ಮೆ ಕುಹೂಗುಟ್ಟಿ ಪುರ್ರನೆ ಹಾರಿಹೋಯಿತು! ಅರರೆ ಅನ್ನುತ್ತ ಬೆರಗಾದ.

ಹಾಳೆಯ ಮೇಲೆ ಹಾವು ಚಿತ್ರಿಸಿದ; ಭುಸ್ಸನೆ ಹೆಡೆಬಿಚ್ಚಿ ತಲೆದೂಗಿದ್ದು, ಒಮ್ಮೆ ಇವನತ್ತ ನೋಡಿ, ಕೂಡಲೆ ಬಳಬಳನೆ ಹರಿದು ಬದಿಗಿದ್ದ ಪೊದೆ ಸೇರಿತು. ಇವನು ಮತ್ತೂ ಬೆರಗಾದ. ಹಾಳೆಯ ಮೇಲೆ ಮಡಕೆ ಚಿತ್ರಿಸಿದ. ನಿಜದ ಮಡಕೆ ಮೂಡಿಬಂತು. ನೂರರ ನೋಟು ಬಿಡಿಸಿದರೆ, ದಿಟದ ನೋಟುಂಟಾಯಿತು! ಪೆನ್ಸಿಲಿನ ಮೋಡಿಯನ್ನು ನೋಡಿ, ಪಾರವಿಲ್ಲದ ಆನಂದವನ್ನು ಹೊಂದಿದ ಅವನು- ದೇವರಿಗೆ ಅಡ್ಡಬಿದ್ದ. ಕೃತಾರ್ಥನಾದೆ ಅಂತಂದ.

‘ಮಾನವ, ಒಂದು ವಿಷಯ’- ದೇವರು ತಲೆದೂಗುತ್ತ ಹೇಳಿತು. ‘ನೋಡು, ಈ ಪೆನ್ಸಿಲು ನಿನ್ನೊಬ್ಬನಿಗಷ್ಟೇ ಮೀಸಲು. ಇದನ್ನು ಯಾರಿಗೂ ದಾಟಿಸುವಂತಿಲ್ಲ. ಎಷ್ಟರಮಟ್ಟಿಗೆಂದರೆ ನಿನ್ನ ಮಡದಿ ಮಕ್ಕಳಿಗೂ ಸಲ್ಲದ್ದು. ಜೋಪಾನವಾಗಿ ಕಾಯ್ದುಕೋ. ಅಲ್ಲದೆ, ಇದನ್ನು ಬರೇ ಒಳಿತಿಗಾಗಿಯಷ್ಟೇ ಬಳಸು. ಇಲ್ಲದಲ್ಲಿ ಜಗತ್ತಿಗೇ ಕೆಡುಕಾದೀತು!’ ಎಂದು ಇನ್ನಿಲ್ಲದ ಹಾಗೆ- ‘ಜೋಕೆ’ಯ ಮಾತು ಹೇಳಿ, ದೇವರು ಮಾಯವಾಯಿತು. ಇವನು ತನಗನಿಸಿದ್ದು ಬರೆದುಕೊಂಡು, ಅವನ್ನೆಲ್ಲ ಆಗಿಬರಿಸಿಕೊಂಡು ಬಲುಕಾಲ ಖುಷಿಯಿಂದಿದ್ದ.

ಇದು ಈ ಕಥೆಯ ಶುರುವಿನ ಭಾಗ ಮಾತ್ರ. ಮುಂದಿನದು ಸದ್ಯದ ಮಟ್ಟಿಗೆ ಅಷ್ಟು ಪ್ರಸ್ತುತವಲ್ಲ. ಇನ್ನು, ಈ ಕಥೆಯಲ್ಲಿ ನನ್ನ ಮಟ್ಟಿಗೆ  ಮುಖ್ಯವಾದದ್ದು- ‘ಅಂದುಕೊಂಡಿದ್ದನ್ನೆಲ್ಲ ಆಗಿಬರಿಸುವುದು’ ಎಂಬ ವಿಚಾರ; ಅನಿಸಿದ್ದನ್ನು ‘ಆಗಿಸಿಕೊಳ್ಳು’ವುದೇ- ಜಗತ್ತಿನ ಎಲ್ಲ ಮತ್ತು ಇಡೀ ವಿನ್ಯಾಸಕಾರಿಕೆಯ ಲಕ್ಷಣವೆಂದು ನನಗೆ ಸದಾ ಅನಿಸುವುದಿದೆ.

ಯಾಕೆಂದರೆ ಏನೂ ಅನ್ನಿಸದೆ ವಿನ್ಯಾಸ ಆಗಿಬರದು! ಈ ಕಥೆಯಲ್ಲಿನ ಪೆನ್ಸಿಲು ಒಂದು ‘ಮೂಲಕ’ವಸ್ತು ಮಾತ್ರ. ಅಂದರೆ ಅನಿಸಿದ್ದನ್ನು ಚಿತ್ರಿಸಲಿಕ್ಕೆ ಆಗಿಬರುವ ಉಪಕರಣ ಅಷ್ಟೆ. ಯೋಚಿಸಿ: ಅನಿಸಿದ್ದನ್ನು ಆಗಿಬರಿಸುವ ಈ ವಿಷಯದಲ್ಲಿ ಮೂರು ಅಂಶಗಳಿವೆ. ಮೊದಲು ಅನಿಸುವುದು; ನಂತರ, ಅನಿಸಿದ್ದನ್ನು ಚಿತ್ರಿಸುವುದು; ಮತ್ತು ಕಡೆಯಲ್ಲಿ ಚಿತ್ರಿಸಿದ್ದು ‘ನಿಜಕ್ಕು’ ಆಗುವುದು.

ಅಂದರೆ ಮನಸ್ಸಿನೊಳಗೆ ಮೂಡಿದ ಊಹೆ ಅಸಲಿನಲ್ಲಿ ಮೂಡುವ ಮೊದಲು ಮತ್ತು ನಡುವೆ- ಅದರ ಚಿತ್ರಿಕೆಯಾಗಬೇಕು; ಇದು ಜಗತ್ತಿನ ಎಲ್ಲ ವಿನ್ಯಾಸಗಾರಿಕೆಯಲ್ಲೊಂದು ಪರಮೋಚ್ಚ ದಾವೆಯೇ ಸರಿ. ಸರಳವಾಗಿ- ಊಹಾಕೃತಿ ಮತ್ತು ಸಾಕೃತಿಗಳ ನಡುವಿನ ಕ್ರಿಯೆಯೇ ವಿನ್ಯಾಸ. 

“Design is all about `form’ing a thought” ಎಂಬೊಂದು ಬಲು ಪುರಾತನ ವಿವರಣೆಯಿದೆ. ಅಂದರೆ, ವಿನ್ಯಾಸವೆಂಬುದು ಯೋಚನೆಗೆ ಕೊಟ್ಟ ಆಕಾರವಂತೆಂಬ ಅರ್ಥೈಕೆ. ಈ ನಿಟ್ಟಿನಲ್ಲಿ ನೋಡುವಾಗ, ಅನಿಸಿದ್ದನ್ನು ಚಿತ್ರಿಸುವುದೆಲ್ಲವೂ ವಿನ್ಯಾಸವೆ. ಅದನ್ನು ಶಿಲ್ಪವಾಗಿ ಮೂಡಿಸುವುದು, ಮನೆಯೊಂದಾಗಿ ಕಟ್ಟುವುದು, ಹಾಡೆಂಬಂತೆ ಗುನುಗುವುದು, ಕಥೆಯೆಂಬಂತೆ ಹೇಳುವುದು, ಪದ್ಯವೊಂದಾಗಿ ಬರೆಯುವುದು ಇವೆಲ್ಲವೂ ವಿನ್ಯಾಸವೇನೆ.

ಸಿನಿಮಾದಂತಹ ಸಿನೆಮಾ ಕೂಡ ಒಂದರ್ಥದಲ್ಲಿ ವಿನ್ಯಾಸವೇ ಹೌದು. ಹೀಗಿರುವಾಗ, “Design is all about `form’ing a thought” ಎಂಬುದನ್ನು “It is also about informing a thought” ಎಂದೂ ಅರ್ಥೈಸಿಕೊಳ್ಳಬಹುದು. ಇವೆಲ್ಲವೂ ಗೊತ್ತಿರುವ ವಿಷಯವೇ ಆದ್ದರಿಂದ ಹೆಚ್ಚು ಬೆಳೆಸುವುದು ಬೇಡ. ಈ ವಿಚಾರವನ್ನು ಮೇಲೆ ಹೇಳಿದ ಕಥೆಯ ಪರಿವಿಡಿಯಲ್ಲಿ ನೋಡುವುದಷ್ಟೇ ಇಲ್ಲಿನ ಉದ್ದೇಶ. 


ಸೀತಾಪಹರಣದ ಸುಮಾರಿನಲ್ಲಿ ಪ್ರಸ್ತಾಪವಾಗುವ ಮಾರೀಚನ ಬಗ್ಗೆ ನಮಗೆ ಗೊತ್ತೇ ಇದೆ. ಈ ಕುರಿತು ನಾನು ಈಗಾಗಲೇ ಬಹಳಷ್ಟು ಸರ್ತಿ ಆಡಿದ್ದೇನೆ. ಆದರೂ ಮೊಟುಕಾಗಿ ಹೇಳಿಬಿಡುತ್ತೇನೆ. ಅಂದುಕೊಂಡಿದ್ದನ್ನು ಅಂದುಕೊಂಡ ಕೂಡಲೆ ಆಗಿಬಿಡುವ ಇಚ್ಛಾರೂಪಿ- ಈ ಮಾರೀಚ. ಹಾಗೆ ನೋಡಿದರೆ, ನಮ್ಮ ಪುರಾಣಗಳಲ್ಲಿ ಬರುವ ಸಮಸ್ತ ಮನುಷ್ಯೇತರರೂ- ದೇವತೆಗಳೂ, ರಾಕ್ಷಸರೂ ಇವರೆಲ್ಲರೂ ಅನಿಸಿದ ರೂಪು ತಾಳುವವರು.

ಅಂದರೆ ಕಾಮರೂಪಿಗಳೇ! ಆದರೂ, ಸೀತೆಯೆಂಬಾಕೆ ಇನ್ನಿಲ್ಲದಂತೆ ಮೋಹಕ್ಕೆ ಈಡಾಗುವ ಹಾಗೆ, ಬಂಗಾರದ ಜಿಂಕೆಯಾಗಿ ತಳೆದು ಜಿಗಿದಾಡಿದ ಮಾರೀಚ, ಈ ‘form’ing a thought- ಎಂಬುದರ ದೃಷ್ಟಿಯಿಂದ ಅನನ್ಯನೆನಿಸುತ್ತಾನೆ. ಅಂದುಕೊಂಡಿದ್ದನ್ನೆಲ್ಲ ಆಗಿಬಿಡುವುದೆಂದರೆ ಸುಲಭವೇನು?! ಇರಲಿ. ಯಾವ ಆಕಾರಕ್ಕು ಹೊಯ್ದು ಅಚ್ಚಾಗಿಸಬಲ್ಲ ಕಾಂಕ್ರೀಟು, ಪ್ಲಾಸ್ಟಿಕುಗಳು- ಬಹುಶಃ, ಹೊಸ ಕಾಲದ ಮಾರೀಚರೇ ಎಂದು ನನಗೆ ಆಗಾಗ ಅನಿಸಿದ್ದಿದೆ!

ವರ್ಷಗಳ ಹಿಂದೆ ನನಗೊಬ್ಬ ಕ್ಲಯಂಟಿದ್ದ. ನೆನೆದರೆ ಇವೊತ್ತಿಗೂ ಅಜೀಬನಿಸುತ್ತಾನೆ. ಹೆಗಲು ತಾಕುವಷ್ಟು ಇಳಿದ ಹಿಂಗುರುಳು; ನಾಭಿಯ ಮಟ್ಟಕ್ಕೆ ತೂಗುವ ಹುಲುಸಾದ ಗಡ್ಡ; ಕಿವಿಗಳಲ್ಲಿ ಝಗಮಗ ಕುಂಡಲ ಮತ್ತು ಕೊರಳಲ್ಲೊಂದು ಜಪಮಾಲೆ. ಬಂಗಾಳೀ ಮನುಷ್ಯ. ನೋಡಿದರೆ ಟ್ಯಾಗೋರಂತನಿಸಬೇಕು; ಅಂತಹ ತೇಜಸ್ಸಿರಲಿಲ್ಲ ಅಷ್ಟೆ.

ಸದಾ ಅಳ್ಳಕವಾಗಿ ಟೀಶರ್ಟು ತೊಡುತ್ತಿದ್ದ. ಹೆಗಲು ಬಳಸಿಳಿದ ಇಲ್ಯಾಸ್ಟಿಕಿನ ಬ್ರೇಸಿಯರ್ಸು- ಅವನ ದೊಗಲೆ ಪ್ಯಾಂಟನ್ನು ಸೊಂಟದಲ್ಲಿ ತೂಗಿರಿಸಿರುತ್ತಿತ್ತು. ಅವನು ನನ್ನ ಮೇಜಿನೆದುರು ಕೂರುತ್ತಲೇ, ಕೊರಳಿನ ಜಪಮಾಲೆಯನ್ನು ಕೈಗೆ ತಂದುಕೊಂಡು ಮಣಿಯೆಣಿಸಲಿಕ್ಕೆ ತೊಡಗುತ್ತಿದ್ದ!  ಯಾಕಂತ ಕೇಳಿದರೆ, ‘ಏನಿಲ್ಲ ಇದು ಸುಮ್ಮನೆ ಫ್ಯಾಷನ್ ಸ್ಟೇಟ್ಮೆಂಟಷ್ಟೆ!’ ಬಲು ಸೀರಿಯಸಾಗಿ ಹೇಳಿ, ನನ್ನ ನಗು ತಡೆಯುತ್ತಿದ್ದ. ಇಂತಹ ಇವನು ಅಜೀಬನ್ನಿಸದೆ ಮತ್ತಿನ್ನೇನು?! ಅವನ ನಿಜವಾದ ಹೆಸರು ಹೇಳುವುದು ಬೇಡ. ಈ ಪ್ರಸ್ತಾಪದ ಸಲುವಾಗಿ ನಿಮಿಷ್ ಗಂಗೂಲಿ ಅಂತ ಕರೆಯೋಣ. 

ಈ ನಿಮಿಷ್ ಗಂಗೂಲಿ- ಹೈಟೌನಿನಲ್ಲಿ ‘ಮಾರೀಚ್ ಸೈನ್ಸ್’ ಎಂಬ ಹೆಸರಿನಲ್ಲೊಂದು ಅಡ್ವರ್ಟೈಸಿಂಗ್ ಏಜೆನ್ಸಿ ನಡೆಸುತ್ತಿದ್ದ. ಅವನು ನಮ್ಮ ಮೊದಲ ಭೇಟಿಯಲ್ಲಿ ಕೈಗಿತ್ತ ಬುಸಿನೆಸ್ ಕಾರ್ಡಿನ್ನೂ ನನಗೆ ನೆನಪಿದೆ. ಅಗಲದಲ್ಲಿ ಎರಡೂ ಅಂಚುಗಳನ್ನು ತಾಕುವ ಹಾಗೆ, ಇಂಗ್ಲಿಶಿನ ‘ಎಮ್’ (M) ಅಕ್ಷರವನ್ನು ಕೆಂಪುಬಣ್ಣದಲ್ಲಿ ಸೃಜಿಸಿ, ಉಳಿದ ಮಾಹಿತಿಯಷ್ಟೂ ಅದರೆದುರು ಗೌಣ ಎನಿಸಬೇಕು, ಅಂತಹ ವಿನ್ಯಾಸ ಆ ಕಾರ್ಡಿಗಿತ್ತು.

ಅದರ ಎಡದ ಮೂಲೆಯಲ್ಲಿ ಸಣ್ಣನೆ ಫಾಂಟಿನಲ್ಲಿ- ಮಾರೀಚ್ ಸೈನ್ಸ್ ಅಂತ ಬರೆಯಲಾಗಿತ್ತು. ಎಲ್ಲ ಸರಿ, ಮಾರೀಚ್ ಯಾಕೆ ಅಂತ ಕೇಳಿದರೆ ಸಾಕು, ಇಡೀ ರಾಮಾಯಣವನ್ನೇ ಒಪ್ಪಿಸಿದ್ದ! ‘ಎಂಟೈರ್ ಇಂಡಿಯಾದಲ್ಲಿ ಅಂದುಕೊಂಡಿ ದ್ದನ್ನು ಆಗುಮಾಡಿದ ಮೊದಲಿಗ ಅಂದರೆ ಈ ಮಾರೀಚ ಅಲ್ಲವೆ?!’ ಎಂದು ಸದಾ ದೃಷ್ಟಾಂತಿಸುತ್ತಿದ್ದ.

ಲಂಕೆಯ ರಾವಣ ಕಡಲಾಚೆಯಲ್ಲಿ ವಾಸವಿದ್ದ ಮಾರೀಚನನ್ನು ಸಂಧಿಸಿ, ಪೂರ್ತಾ ಸೀತಾಪಹರಣವನ್ನು ಯೋಜಿಸಿದ್ದನ್ನು ನನ್ನೆದುರೊಮ್ಮೆ ಸವಿಸ್ತಾರ ಕಥಿಸಿದ್ದ. (ಇಲ್ಲಿನ್ನೊಂದು ಹೇಳಲೇಬೇಕು. ಈ ನಿಮಿಷ್ ಗಂಗೂಲಿಗೆ ಕಥೆ ಹೇಳುವ ಖಾಯಿಷಿತ್ತು. ನಾನು ಶುರುವಿನಲ್ಲಿ ಬರೆದ ಪೆನ್ಸಿಲಿನ ಕಥೆಯನ್ನೂ ಅವನೇ  ನನಗೆ ಹೇಳಿದ್ದು!) ಇರಲಿ.

ಈ ನನ್ನ ಕ್ಲಯಂಟಿಗೂ ಅಂದುಕೊಂಡಿದ್ದನ್ನೆಲ್ಲ ಆಗಿಬರಿಸುವ ಸಿಕ್ಕಾಪಟ್ಟೆ ಉಮೇದಿದ್ದಿತು. ಅನಿಸಿದ್ದನ್ನೆಲ್ಲ ಮಾಡದುಳಿಸದ ಛಾತಿಯೂ ಇದ್ದಿತು. ಒಮ್ಮೆ ಹೀಗಾಯಿತು: ಯಾವುದೋ ಟಿಕೆಟ್-ಬುಕಿಂಗಿನ ಸಲುವಾಗಿ ನಾನು ರೇಲ್ವೇ ಸ್ಟೇಶನ್ನಿಗೆ ಹೋಗಿದ್ದೆ. ಕೆಲಸ ಮುಗಿಸಿಕೊಂಡು ಪಾರ್ಕಿಂಗಿನತ್ತ ಹೊರಳುತ್ತಿರುವಾಗ, ‘ಅರೇ ಬಾಬಾ ಧರಮ್ ಕರೋ’ ಎಂಬ ಧ್ವನಿಯುಳ್ಳ ಮೈಯೊಂದು ಕೈಮುಂದೆ ಮಾಡಿ ಎದುರಾಯಿತು.

ಪರಿಚಿತ ದನಿಯಲ್ಲ ಎಂದು ಅನುಮಾನಿಸುತ್ತ ಮುಖ ನೋಡಿದೆನಾದರೆ ಇವನು!  ದಾರಿಬದಿಯಲ್ಲಿ ಭಿಕ್ಷೆ ಬೇಡಿಕೊಂಡು ಕುಳಿತಿದ್ದ!! ಹೌಹಾರಿಹೋದೆ. ಫಕ್ಕನೆ, ಹೌದೋ ಅಲ್ಲವೋ ಅಂತ ಶಂಕೆಯಾಯಿತು. ಮುಖದ ನೇರದಲ್ಲಿ ಇನ್ನೊಮ್ಮೆ ಕಣ್ಣಿಳಿಸಿ ನೋಡಿದೆ. ಅವನೇ! ಈ ಅವತಾರಕ್ಕೆಂದೇ ಅಲ್ಲಲ್ಲಿ ತೇಪೆಯಿಕ್ಕಿದ ನಿಲುವಂಗಿ ತೊಟ್ಟಿದ್ದವನಿಗೆ, ಕೆದರಿದ ಕೂದಲು ಮತ್ತು ಗಡ್ಡಗಳೂ- ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದವು!

ಈಗ ನಾನು ಅವನ ಗುರುತು ಹಿಡಿದಿದ್ದೇ, ಒಂದಿಷ್ಟೂ ಮುಜುಗರವಿಲ್ಲದೆ, ವಾಪಸು ನಕ್ಕ. ಮಾತನಾಡಿಸಿದ. ‘ನಿನ್ನೆ ನನ್ನ ಹೆಂಡತಿ ಜೊತೆ ಜಗಳ ಆಡಿದೆ. ಯಾವುದೋ ವಿಷಯಕ್ಕೆ. ನಿನಗಿಂತ ಭಿಕ್ಷೆ ಬೇಡೋರೇ ಎಷ್ಟೋ ಲೇಸು ಅಂತ ಬೈದಳು. ಆಗಲೇ ನನಗೆ ಈ ಐಡಿಯಾ ಹೊಳೆದಿದ್ದು. ಭಿಕ್ಷುಕ ಆಗೇಬಿಟ್ಟೆ ನೋಡು!’ ಅಂತಂದು, ನನ್ನೊಟ್ಟಿಗೆ ಹತ್ತಾರು ಹೆಜ್ಜೆ ನಡೆದು, ಅಲ್ಲೇ ಉಕ್ಕಿನ ಬೇಲಿಯ ಮರೆಯಲ್ಲಿ- ಒಂದು ಇಂಪೋರ್ಟೆಡ್ ಸಿಗರೇಟು ಹಚ್ಚಿ, ಉರುಬಿಕೊಂಡು ನಕ್ಕ. ‘ಎಷ್ಟಾದರೂ ಮಾರೀಚನ ಭಕ್ತ ನಾನು! ಅನಿಸಿದ್ದನ್ನು ಆಗಿಯೇ ತೀರಬೇಕು!’

ಅನಿಸಿದ್ದನ್ನು ಮಾಡಿಯೇ ಇಲ್ಲಾ, ಆಗಿಸಿಯೇ ತೀರುವುದೆನ್ನುವ ಮಾತು- ನಿಮಿಷ್ ಗಂಗೂಲಿಯ ವಿಷಯದಲ್ಲಿ ತೀರಾ ಲಿಟರಲನಿಸಬಹುದಾದರೂ, ನಾವೆಲ್ಲರೂ ಒಂದರ್ಥದಲ್ಲಿ, ಹೀಗೆ ವಾಚ್ಯವಾದುದನ್ನೇ ಮಾಡುತ್ತೇವಷ್ಟೆ. ಅನಿಸಿದ್ದನ್ನೇ ‘ವಾಚ್ಯ’ವಾಗಿ ಆಡಿಯೂಬಿಡುತ್ತೇವೆ. ಮನುಷ್ಯಜಗತ್ತಿನಲ್ಲಿ ಆಡಲ್ಪಡುವ ಅಷ್ಟೂ ಮಾತುಗಳೂ ಆಡಿದವರ ಆ ಕ್ಷಣದ ಅನಿಸಿಕೆಯೇ ತಾನೆ?

ಯಾರೇ ಒಬ್ಬನ ನಡೆನುಡಿಗಳ ನಡುವೆ ತಾಳಮೇಳವಿಲ್ಲ ಅಂತಿದ್ದಲ್ಲಿ- ಆತನ ಮನಸ್ಸಿನಲ್ಲಿನ ಒಳಮೂಡಿಕೆಗಳು ಹೊರಗಿನ ಆಚಾರ-ವಿಚಾರಗಳೊಟ್ಟಿಗೆ ತಾಳೆಯಾಗುತ್ತಿಲ್ಲ ಎಂಬ ಅರ್ಥವೇ ಅಲ್ಲವೆ? ಇಷ್ಟಿದ್ದೂ, ಮನುಷ್ಯ ನಡಾವಳಿಗಳಿಗೊಂದು ಪ್ಯಾಟರ್ನಿದೆಯೆಂತಲೇ ಅನ್ನಬೇಕು. ಅಂದರೆ  ಅದಕ್ಕೆ ತನ್ನದೇ ಒಂದು ವಿನ್ಯಾಸವಿದೆ.

ಆದರೆ- ಅನಿಸಿಕೆಯೊಂದನ್ನು ಪದ್ಯವಾಗಿ ಹೇಳುವುದು, ಕಥೆಯೊಂದಾಗಿ ನಿರೂಪಿಸುವುದು, ಚಿತ್ರವೆಂಬಂತೆ ಚಿತ್ರಿಸುವುದು, ಶಿಲ್ಪವಾಗಿ ಕೆತ್ತುವುದು, ಸಿನೆಮಾ ಮಾಡುವುದು, ಆರ್ಕಿಟೆಕ್ಚರಾಗಿ ಕಟ್ಟುವುದು– ಇವುಗಳಲ್ಲಿ ಮಾತ್ರ, ವಿನ್ಯಾಸ ಎನ್ನುವುದು ಇನ್ನೊಂದೇ ವಿಶಿಷ್ಟಸ್ತರದಲ್ಲಿ ನೆಟ್ಟುನಿಲ್ಲುತ್ತದೆ. ಗರುಡಗಂಬದ ಹಾಗೆ ತನ್ನಿರವು ಸಾರಿಕೊಳ್ಳುತ್ತದೆ! ಇಂತಹ ವಿನ್ಯಾಸವನ್ನು ಕುರಿತಾಡುವಾಗಲೆಲ್ಲ ನಾವು, ಅದರ ಮೇಲೆ ಕಲಾತ್ಮಕತೆಯೆಂಬೊಂದು ಗುಣವನ್ನು ಆರೋಪಿಸಿ ಆಡುತ್ತೇವೆ.

ಅದನ್ನೊಂದು ಶಿಸ್ತೆಂದು ಬಗೆದು ಸಿದ್ಧಾಂತಗಳನ್ನು ಹೇಳುತ್ತೇವೆ. ಮೀಮಾಂಸೆಗಳನಿಟ್ಟು ಆಡುತ್ತೇವೆ. ವಿಮರ್ಶೆಯನ್ನೂ ಮಾಡುತ್ತೇವೆ. ನಾನು ಇಲ್ಲಿ ಹೇಳುತ್ತಿರುವುದು ಇಂಥದೊಂದು ವಿನ್ಯಾಸದ ಬಗ್ಗೆ. ಸದರಿ ವಿನ್ಯಾಸಗಾರಿಕೆಯಲ್ಲಿ ಅನಿಸಿಕೆ ಮತ್ತು ಆಗುವಿಕೆಗಳ ನಡುವೆ, ನಿಮಿಷ್ ಗಂಗೂಲಿ ಹೇಳಿದ ಶುರುವಿನಲ್ಲಿನ ಕಥೆಯಲ್ಲಿರುವ ಹಾಗೆಯೇ- ಪೆನ್ಸಿಲೋಪಾದಿಯದೊಂದು ‘ಮೂಲಕ’ವಸ್ತುವಿರುತ್ತದೆ. ಅಂದರೆ ಒಂದು ಉಪಕರಣ ಅಥವಾ ಸಲಕರಣೆ.

ಪೆನ್ನು, ಬಣ್ಣ-ಬ್ರಶ್ಷು, ಉಳಿ-ಸುತ್ತಿ-ಚಾಣವಿತ್ಯಾದಿಗಳು, ಕೆಮೆರಾ, ವಾದ್ಯ, ಮೇಳ ಮೊದಲಾದವುಗಳು ಬರೆಯಲ್ಪಡುವ ಕಾಗದ, ಕಟೆಯಲ್ಪಡುವ ಕಲ್ಲು, ಚಂದದ ಎರಕವಾಗಿ ಏರ್ಪಡುವ ಲೋಹ ಇವೆಲ್ಲವೂ ‘ಅನಿಸಿಕೆ’ಯನ್ನು ಆಗಿಸುವೆಡೆಯಲ್ಲಿನ ‘ಮೂಲಕ’ಗಳೇ ತಾನೆ? ಅನಿಸುವುದು ಮನಸ್ಸಿನೊಳಗೆ ಆದ್ದರಿಂದ, ಹಾಗಂತ ಮನಸ್ಸು ನಿರಾಕಾರಿಯೂ ಹೌದಾದ್ದರಿಂದ- ಯಾವ ಅನಿಸಿಕೆಗೂ ರೂಪವಿಲ್ಲ. ತಾಪವಿಲ್ಲ. ಬಣ್ಣ, ವಾಸನೆ, ರುಚಿ, ಮೈಯರಿವು ಇತ್ಯಾದಿಗಳಿಲ್ಲ.

ಮನಸ್ಸನ್ನು ಆಕಾಶಕ್ಕೆ ಹೋಲಿಸು ವುದಾದರೆ- ಅನಿಸಿಕೆಯೂ ಆಕಾಶವೇ! ಆಕಾಶದ ಸ್ಫುರಣವೇ! ಅದರಂತೆ ಇದೂ ನಿರಾಕಾರಿಯೆ! ಆದರೆ, ಈ ಆಕಾಶರೂಪಿ ಅನಿಸಿಕೆಯನ್ನು ‘ಆಗಿಸಿ’ ಅಥವಾ ‘ಮಾಡಿ’ ತೋರಿಸಬೇಕಿದ್ದಲ್ಲಿ, ಅದು ಆಕಾರ ತಳೆಯಲೇಬೇಕು. ಹೀಗೊಂದು ಆಕಾರವುಂಟಾಗಲಿಕ್ಕೆ ಅದು ಭೂಮಿಯ ಮೇಲಿರುವ ದ್ರವ್ಯವನ್ನು ಬಳಸ ಲೇಬೇಕು.

ಎಂತಲೇ, ಆಕಾಶದ ವಿಸ್ತೃತಿಯನ್ನು ಹೊಂದಿದ ಚಿಂತನೆಯೊಂದು ವಿನ್ಯಾಸವಾಗಿ ಏರ್ಪಡುವಾಗ- ಅದು ಭೂಮಿಯಂತಹ ಭೂಮಿಯಲ್ಲಿ ಪಡಿಮೂಡಲೇಬೇಕು! ಯೋಚಿಸಿ: ಮಂಗಳವನ್ನು ಹಾಯುವ ಯೋಚನೆಯು, ಇವೊತ್ತು ಸಾಕಾರ ಗೊಂಡಿದೆಯಾದರೆ, ಮಂಗಳವನ್ನು ನಿಜಕ್ಕು ಹಾಯುತ್ತಿ ರುವುದು ಭೂಮಿಯ ಸರಕೇ ತಾನೆ? ಅಂದರೆ, ಅನಿಸಿಕೆಗೆ ಆಕಾಶದ ಪರಿಮಿತಿ; ಅದರ ಆಗುವಿಕೆಗೆ ಭೂಮಿಯ ಇತಿಮಿತಿ!  

ಮತ್ತೆ ಅದೇ ‘ಮೂಲಕ’ವಸ್ತುವಿಗೆ ಹೊರಳು ವುದಾದರೆ, ಮನುಷ್ಯನ ಕರಕುಶಲತೆಯ ಬಗ್ಗೆ ಒಂದಿಷ್ಟು ಆಡಲೇಬೇಕು. ಕರಕುಶಲತೆಯೆಂದರೆ ಅಂದರೆ ಸ್ಕಿಲ್ಲು. ಅನಿಸಿಕೆಯನ್ನು ಆಗಿಸುವ ಕೈಚಳಕ! ಉದಾಹರಣೆಗೆ- ಪೆನ್ಸಿಲೆಂಬ ‘ಮೂಲಕ’ವನ್ನು ದುಡಿಸಿಕೊಳ್ಳುವುದಾದರೆ, ಅದನ್ನು ಬಳಸುವ ಬಗೆ ನಮಗೆ ಗೊತ್ತಿರಬೇಕಾಗುತ್ತದೆ.

ಹಾಗೇ ಬಣ್ಣವನ್ನು ಬಳಸಲಿಕ್ಕೆ ಬಣ್ಣದ ಬಗೆ ಗೊತ್ತಿರಬೇಕಷ್ಟೆ. ಕಲ್ಲು ಕಟೆಯಲಿಕ್ಕೆ ಕಲ್ಲಿನ ಗುಣಾವಗುಣಗಳ ಬಗ್ಗೆ, ಇತಿಮಿತಿಗಳ ಬಗ್ಗೆ ತಿಳಿದಿರಲೇಬೇಕು! ಐಡಿಯಾವಿದ್ದ ಮಾತ್ರಕ್ಕೆ ಯಾರಿಗೂ ಏನೂ ಆಗಬೇಕೆಂದೇನಿಲ್ಲ. ಹೀಗಾಗಿಯೆ, ಮಾತು ಬಲ್ಲವರೆಲ್ಲ ಪದ್ಯಕಾರರು ಆಗುವುದಿಲ್ಲ. ಗೆರೆ ಬಲ್ಲವರೆಲ್ಲ ಚಿತ್ರಕಾರರಾಗಲಾರರು.

ಕಟ್ಟುವ ವರಸೆಯಿದ್ದವರೆಲ್ಲ ಆರ್ಕಿಟೆಕ್ಟಾಗಲಾಗುವುದಿಲ್ಲ. ಹೀಗೊಂದೊಂದೂ ಆಗಲಿಕ್ಕೆ ಆಯಾ ಕಸುಬುದಾರಿಕೆ  ಗೊತ್ತಿರಬೇಕು. ಆಯಾ ಕೈಚಳಕವಿರಬೇಕು. ಅಷ್ಟೇ ಚಾಕಚಕ್ಯತೆಯೂ ಇರಬೇಕು. ಹಾಗಂತ, ಬರೇ ಕೈಚಳಕ ಇದ್ದಲ್ಲಿ ವಿನ್ಯಾಸ ಆಗುತ್ತದಂತಲೂ ಅಲ್ಲ. ತಕ್ಕುದಾಗಿ ಕನಸುಗಾರಿಕೆಯೂ ಇರಬೇಕು; ಅಷ್ಟೇ ಮನಸುಗಾರಿಕೆಯೂನೂ!

ಆದರೆ ನಾವಿರುವ ವರ್ತಮಾನಗಳಲ್ಲಿನ ವಸ್ತುಸ್ಥಿತಿ ಬೇರೆಯೇ ಇದೆ. ಇವೊತ್ತಿನ ವಿನ್ಯಾಸಗಾರಿಕೆಯಲ್ಲಿ ‘ಮೂಲಕ’ವಸ್ತುವೆಂಬುದರ ಪರಿಕರವೇ ಬೇರೆಯಾಗಿದೆ. ನಮ್ಮ ಮೇಜುಗಳಲ್ಲಿನ ಡೆಸ್ಕ್ಟಾಪು, ಕೀಬೋರ್ಡು, ಮೌಸುಗಳು- ಪೆನ್ನು, ಪೆನ್ಸಿಲು, ಬ್ರಶ್ಷು, ಉಳಿ, ಸುತ್ತಿ, ಚಾಣಗಳನ್ನು ಬಲು ದಿಟ್ಟವಾಗಿ ಬದಲಿಸಿಟ್ಟಿವೆ. ಹಾಗೇ ನಮ್ಮ ಕೈಫೋನುಗಳನ್ನೂ ಒಳಗೊಂಡು ಟ್ಯಾಬ್ಲೆಟುಗಳವರೆಗಿನ ಥರಾವರಿ ಗ್ಯಾಡ್ಜೆಟುಗಳು ಕೂಡ.

ಇನ್ನು, ಫೋಟೋ-ಎಡಿಟಿಂಗ್ ಸಾಫ್ಟ್ವೇರ್ಗಳಂತೂ ವಿನ್ಯಾಸ ಎಂಬುದರ ಚಹರೆ-ಮೊಹರುಗಳನ್ನೂ ಬದಲಿಸಿಬಿಟ್ಟಿವೆ. ಈ ಸಾಫ್ಟ್‌ವೇರುಗಳು ಎಷ್ಟು ಸಸಾರವಾಗಿಬಿಟ್ಟಿವೆಯೆಂದರೆ, ಕಂಪ್ಯೂಟರು ಕಲಿತವರೆಲ್ಲ ಇವನ್ನು ಬಳಸುತ್ತಾರೆ! ಇವನ್ನು ಬಳಸುವವರೆಲ್ಲ- ‘ಸೋಕಾಲ್ಡ್’ ಡಿಸೈನರುಗಳಾಗಿಬಿಟ್ಟಿದ್ದಾರೆ. ದಪ್ಪ ದಪ್ಪನೆ ಅಕ್ಷರಗಳಲ್ಲಿ ದಪ್ಪದಪ್ಪಗೆ ‘ವಿನ್ಯಾಸಕ’ರೆಂದು ಮೊಳಗಿಕೊಳ್ಳುತ್ತಾರೆ!

ಫೋಟೋಶಾಪ್, ಪೇಜ್ಮೇಕರ್, ಕೋರಲ್ಡ್ರಾ ಮುಂತಾದವುಗಳಾದರೂ- ಎಲ್ಲೆಲ್ಲಿಂದ ಯಾರು ಯಾರದೋ ಚಿತ್ರಗಳನ್ನು ಎಳೆತಂದು, ಒಂದೇ ಪುಟದಲ್ಲಿ ಅಳವಡಿಸಿ, ಒಂದೇ ಎಂಬಂತೆ ಒಂದೇ ಪದರದಲ್ಲಿ, ಏಕತ್ರ-ಸರ್ವತ್ರ ಪ್ರಿಂಟಿಸುತ್ತವಾಗಿ- ಇಡೀ ಡಿಸೈನೆಂಬುದರ ಜಿಜ್ಞಾಸೆಯೇ ಅಗ್ಗವೆನಿಸಿಬಿಟ್ಟಿದೆ. ಮಹಾನಗರದಲ್ಲಿರಲಿ- ಊರಿನೆಲ್ಲ ಹೊರದಾರಿಗಳಲ್ಲಿಯೂ, ಅಷ್ಟಷ್ಟೇ ಹಳ್ಳಿಗಾಡುಗಳಲ್ಲಿಯೂ, ಅಲ್ಲಲ್ಲಿ ರಾರಾಜಿಸುವ ಫ್ಲೆಕ್ಸ್-ಪಟಗಳನ್ನು ನೋಡಿದರೆ, ವಿನ್ಯಾಸವೆಂಬುದು ಇಷ್ಟು ಸಲೀಸೆ ಅಂತೆಂಬ ಭ್ರಮೆಯುಂಟಾಗುತ್ತದೆ.

ಯಾರದೋ ಸಾವಿಗೆ ಯಾರದೋ ಶ್ರದ್ಧಾಂಜಲಿಯಿರುವ ಹೋರ್ಡಿಂಗು ಗಳಂತೆಯೇ, ಯಾರದೋ ಹುಟ್ಟುಹಬ್ಬಕ್ಕೆ ಯಾರವೋ ನೂರಾರು ಮೋರೆಗಳ ಶುಭಾಶಯಗಳೂ- ರಾತ್ರೋರಾತ್ರಿ ಬೀದಿಯ ಬದಿಬದುಗಳಲ್ಲಿ ಮೂಡಿಬಿಡುತ್ತವೆ. ಒಂದು ಕಾಲದಲ್ಲಿ ಟೈಪಿಂಗು ಕಲಿತಿದ್ದವರೆಲ್ಲ ಕಂಪ್ಯೂಟರಿನ ಕೀಲಿಕುಟ್ಟುವಷ್ಟು ಬಡ್ತಿ ಸಾಧಿಸಿದ್ದರೆ, ಇವೊತ್ತಿನ ಸಾಧಾರಣ ಡೀಟೀಪೀಕಾರರೆಲ್ಲ ದೊಡ್ಡ ದೊಡ್ಡ ಡಿಸೈನುಗಾರರಾಗಿಬಿಟ್ಟಿದ್ದಾರೆ!

ಹೀಗಿರುವಾಗ ವಿನ್ಯಾಸವೆಂಬುದರ ಪ್ರತಿಷ್ಠೆಯೇನು? ಪ್ರತಿಷ್ಠಿತ ಅರ್ಥವೇನು? ಯೋಚಿಸಿದಷ್ಟೂ ಅರ್ಥವೇ ತಳಕಂಬಳಕವೆನಿಸುತ್ತದೆ! 
ನಾನು ನೆಚ್ಚುವ ಆರ್ಕಿಟೆಕ್ಚರಿನಲ್ಲೂ, ಹಿಂದಿದ್ದ ಹಾಗೆ- ಪೆನ್ನು, ಪೆನ್ಸಿಲ್ಲು, ದೊಡ್ಡ ದೊಡ್ಡ ಡ್ರಾಯಿಂಗುಹಾಳೆಗಳ, ನೀಲಿನಕಾಶೆಗಳ ಗೋಜೇ ಇಲ್ಲ. ಮನಸಾರೆ ತಳೆದಿದ್ದನ್ನು ಕೈಯಾರೆ ಬರೆದು ಮಾಡುವ ನಕ್ಷೆಗಳೇ ಇಲ್ಲ. ಸ್ಕೇಲುರೂಲು ಬಳಸಬೇಕಿಲ್ಲ.

ಇಷ್ಟಾಗಿ, ಹಾಗಂತಲೇನೂ ರೂಲೇ ಇಲ್ಲವೆ?! ಇವೊತ್ತು ಆರ್ಕಿಟೆಕ್ಚರಿನ ಡಿಸೈನೆಲ್ಲದಕ್ಕು ಕಂಪ್ಯೂಟರೇ. ನನ್ನೊಡನೆ ಕೆಲಸಕ್ಕಿರುವ ಮತ್ತು ನಾನು ಕಲಿಸುತ್ತಿರುವ ಡಿಸೈನುಶಾಲೆಗಳಲ್ಲಿ ಓದುತ್ತಿರುವ ಹೊಸ ತಲೆಮಾರಿಗಂತೂ- ಸುಸೂತ್ರವಾಗಿ ಪೆನ್ಸಿಲು ಹಿಡಿದು ಸಹಿತ ಗೊತ್ತಿಲ್ಲ. ಅಥವಾ, ಪೆನ್ಸಿಲ್ಲು ಕಂಪ್ಯೂಟರಿಗೊಂದು ಪರ್ಯಾಯ ಮಾತ್ರವೆಂದು ಯಾರಿಗೂ ಬಗೆದು ಗೊತ್ತಿಲ್ಲ. ಎಲ್ಲರೂ ಮಾತಿಗೆ ಮೊದಲೇ, ಏನೋ ಘನಂದಾರಿ ಡಿಸೈನರೆಂಬ ಪಟ್ಟ ತಾಳಿರುತ್ತಾರೆ!

ಹೀಗಿರುವಾಗ ಡಿಸೈನೆಂದರೆ ಕಂಪ್ಯೂಟರು-ಪ್ರಿಂಟಿತ ಡ್ರಾಇಂಗು ಮಾತ್ರವೇ ಎಂಬೊಂದು ಸಂದಿಗ್ಧ ಹುಟ್ಟುವುದು ಸಹಜವೇನೆ. ಹೀಗ
ನಿಸುವಾಗಲೆಲ್ಲ- ನಾನು ಹಳೆಯ ತಲೆಮಾರಿನವನೇ ಎಂದು ನನಗೆ ನಾನೇ ಶಂಕಿಸುತ್ತೇನೆ. ನಾನಾದರೂ ಪೆನ್ಸಿಲಿನಷ್ಟೇ ಕಂಪ್ಯೂಟರನ್ನೂ ನೆಚ್ಚುತ್ತೇನಾದ್ದರಿಂದ, ಇದಕ್ಕಿಂತ ಅದು ಮಿಗಿಲೆಂದು ವೃಥಾ ಜೀಕುತ್ತೇನೆಯೆ ಅಂತನಿಸುತ್ತದೆ.

ಇದೇನು ತಲೆಮಾರುಗಳ ಅಂತರವೆ? ಹೊಸತು ಹಳತರ ನಡುವಿನ ತಳಮಳವೆ? ಎರಡಕ್ಕೂ ಪೂರ್ತಾ ಸಲ್ಲಲೊಲ್ಲದ ಸ್ಥಿತ್ಯಂತರವೇ? ಗೊತ್ತಾಗುವುದಿಲ್ಲ. ಪೆನ್ನು ಪೆನ್ಸಿಲುಗಳ ಗೋಜಿರದೆ, ಪ್ರತಿಯೊಂದನ್ನೂ ಕಂಪ್ಯೂಟರಿನ ‘ಮೂಲಕ’ವೇ ಎಸಗುವ ಮುಂದಿನ ದೊಂದು ತಲೆಮಾರಾದರೂ- ಕಂಪ್ಯೂಟರನ್ನು ತೀರಾ ಸರ್ವಸ್ವವೆಂದು ಗಣಿಸದೆ, ಅದನ್ನು ಬರೇ ‘ಮೂಲಕ’ ಸಲಕರಣೆಯಾಗಿ ಗಮನಿಸೀತೆ ಎಂದೊಂದು ಸಮಾಧಾನವನ್ನು ತಾಳುತ್ತೇನೆ.

ಬಹುಶಃ ನನ್ನ ಈ ಜಿಜ್ಞಾಸೆಯನ್ನೇ ಸಾಹಿತ್ಯದಲ್ಲಿನ ಹಿರಿತಲೆಗಳು ‘ಫೇಸ್ಬುಕ್’ ಪದ್ಯಗಳ ಬಗ್ಗೆ ಆಡುತ್ತವೇನೋ ಎಂಬ ಎಚ್ಚರವೂ ನನಗಿದೆ. ನಾನೂ ಹತ್ತಾರು ಬಗೆಯಲ್ಲಿ ಫೇಸ್ಬುಕ್ನಲ್ಲಿ ತೊಡಗಿದ್ದೇನಾಗಿ, ಫೇಸ್ಬುಕ್ಕೆಂದರೆ ಬಿಳಿಯ ಹಾಳೆಯೋಪಾದಿಯದೇ ಇನ್ನೊಂದು ‘ಮೂಲಕ’ ಮಾಧ್ಯಮವಂತೆಂಬ ಹಕೀಕತು ನನ್ನಲ್ಲಿ ಚೆನ್ನಾಗಿಯೇ ಇದೆ.

ಇಷ್ಟಕ್ಕು, ಸಾಹಿತ್ಯಿಕ ಪರಂಪರೆಯ ಬಗ್ಗೆ ಯಾವುದೇ ವೇದಿಕೆಯಲ್ಲಿ ಮಾತು ಜರುಗಿದರೂ, ಹತ್ತಾರು ಕಣ್ಣುಗಳು ನನ್ನತ್ತಲೇ ನಿರುಕಿ- ನನ್ನನ್ನು ಇಂತಹ ವಿಚಾರದ ಹುಟ್ಟಾ ಕಟ್ಟಾ ವಿರೋಧಿಯೆಂದು ಬಗೆದು, ವಾರೆನಕ್ಕು ಸತಾಯಿಸುವುದು- ನನ್ನ ಮಟ್ಟಿಗೆ ಪರಂಪರೆಯೇ ಆಗಿಹೋಗಿದೆ!

ಇಷ್ಟಿದ್ದೂ ಖೇದವೆನಿಸುವುದು- ಟೆಕ್ನಾಲಜಿಯನ್ನು ಕಲಿಯಲಿಕ್ಕಿನ್ನೊಂದು ಅಕ್ಷರವೆನ್ನುವ ಹಾಗೆ ಒಳಗೊಂಡಿರುವ ಆಧುನಿಕ ಸಮಾಜವು, ವಿನ್ಯಾಸದಲ್ಲಿನ ಮೂಲ ಕಸುಬುದಾರಿಕೆಯನ್ನೇ ಅವಗಣಿಸುತ್ತಿದೆಯೆಂಬ ವಿಚಾರವೆದುರಾದಾಗ. ಹೊಸತನ್ನಿನ್ನೂ ಕರಗತ ಮಾಡಿಕೊಳ್ಳದೆ- ದೊಡ್ಡ ದೊಡ್ಡ ದಾವೆಗಳನ್ನು ಹೂಡ ತೊಡಗುವಾಗ. 

ಓದುವವರೆಲ್ಲ ಬರಹಗಾರ ಆಗಿಬಿಟ್ಟರೆ? –ಅಂತೆಂಬ ಶಂಕೆಯೇ, ತೋಚುಗೀಚುಗಳೆಲ್ಲ ವಿನ್ಯಾಸ ಆಗಿಬಿಟ್ಟವೆ? –ಅಂತಿನ್ನೊಂದಾಗಿ ನನ್ನನ್ನು ಇನ್ನಿಲ್ಲದೆ ಕಾಡುತ್ತಿದೆ. ಇಷ್ಟಾಗಿ, ಅನಿಸಿದ್ದನ್ನೆಲ್ಲ ಆಗಿಸಿಕೊಂಡಿರುವ ಹೊಸಕಾಲದ ಊರುಗಳು ಮತ್ತು ನಗರಗಳ ಮೂರ್ತೈಕೆ ಹೇಗಿದೆಯೆಂಬುದಕ್ಕೆ- ನಮ್ಮ ಬೆಂಗಳೂರಿಗಿಂತ ಬೇರೆ ಉದಾಹರಣೆ ಬೇಕೆ?

ಕಡೆಯಲ್ಲಿ ಶುರುವಿನಲ್ಲಿ ಹೇಳಿದ, (ಅಂದರೆ ನಿಮಿಷ್ ಗಂಗೂಲಿ ನನಗೆ ಹೇಳಿ ನಾನು ನಿಮಗೆ ತಲುಪಿಸಿದ)- ಪೆನ್ಸಿಲಿನ ಕಥೆಗೆ ಮತ್ತೆ ವಾಪಸಾಗುತ್ತೇನೆ. ‘ಪೆನ್ಸಿಲನ್ನು ಇನ್ನೊಬ್ಬರಿಗೆ ದಾಟಿಸುವಂತಿಲ್ಲ. ಹಾಗೆ ಮಾಡಿದರೆ ಕೆಡುಕಾದೀತು!’ ಎಂದು ದೇವರು ಅವನನ್ನು ಎಚ್ಚರಿ ಸಿತ್ತಲ್ಲವೆ? ಮುಂದೆ ಈ ಅವನಿಗೆ ಹತ್ತಾರು ಮಕ್ಕಳು ಆದವಂತೆ. ಮಕ್ಕಳು ದೊಡ್ಡವರಾದಂತೆ ಅವನು ಮುದಿಯಾದ. ಸಾವು ಸನ್ನಿಹಿತವಾಯಿತು. ಆಗ ಅವನಿಗೆ ಸಾಯುವ ಮೊದಲು ಮಕ್ಕಳಿಗಾಗಿ ಏನು ಬಿಟ್ಟೇನನ್ನುವ ಜಿಜ್ಞಾಸೆಯಾಯಿತಂತೆ. 

ಹೆಂಡತಿಯನ್ನು ಕೇಳಿದ್ದಕ್ಕೆ, ‘ಒಂದು ಕೆಲಸ ಮಾಡಿ. ಆ ಪೆನ್ಸಿಲು ಬಳಸಿ ಅಂಥದೇ ಹತ್ತಾರು ಪೆನ್ಸಿಲುಗಳನ್ನು ಸೃಷ್ಟಿಸಿ, ಒಂದೊಂದನ್ನೂ ಒಬ್ಬೊಬ್ಬರಿಗೆ ಕೊಟ್ಟುಬಿಡಿ’ ಎಂದು ಉಪಾಯ ಸೂಚಿಸಿದಳಂತೆ. ಅವನು ಹಾಗೆಯೇ ಮಾಡಿದ. ಕೂಡಲೆ ಅಂತಹ ಹತ್ತಾರು ಪೆನ್ಸಿಲುಗಳು ಆಗಿಬಂದವು. ಒಂದೊಂದೂ ಅನಿಸಿದ್ದನ್ನೆಲ್ಲ ಮತ್ತೆ ಮತ್ತೆ ಆಗಿಬರಿಸತೊಡಗಿದವು. ಹೀಗೆ ಅನಿಸಿದ್ದಾಗುವ, ಆಗಿಸುವ ಆಗುಹೋಗುಗಳ ನಡುವೆ ಜಗತ್ತೇ ಎಕ್ಕುಟ್ಟಿಹೋಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT