ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೀಯ ನಡೆ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ದೇವಸ್ಥಾನ ಪ್ರವೇಶಿಸಲು ದಲಿತರಿಗೆ ಅವಕಾಶ ನೀಡುವ ಮೂಲಕ ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಕಾಡೇನಹಳ್ಳಿ ರಾಜ್ಯದ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿದೆ. ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಅನಿಷ್ಟ ಪದ್ಧತಿ ಅಲ್ಲಲ್ಲಿ ಮುಂದುವರಿದಿರುವ ಈ ಹೊತ್ತಿನಲ್ಲಿ ಅವರಿಗೆ ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ.

ಗ್ರಾಮದ ಪ್ರಗತಿಪರರ ಪ್ರಯತ್ನ ಮತ್ತು ಜಿಲ್ಲಾ ಆಡಳಿತದ ಒತ್ತಾಸೆಯಿಂದ ಇದು ಸಾಧ್ಯವಾಗಿದೆ. ಈ ಬೆಳವಣಿಗೆ ಕಾಡೇನಹಳ್ಳಿ ಜನರ ಬದಲಾದ ಮನಸ್ಥಿತಿಯ ದ್ಯೋತಕ. ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಹತ್ವದ ಹೆಜ್ಜೆ. ದಲಿತರ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವ ರಾಜ್ಯದ ನೂರಾರು ಗ್ರಾಮಗಳಿಗೆ ಕಾಡೇನಹಳ್ಳಿ ವಿದ್ಯಮಾನ  ಅನುಕರಣೀಯ. ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ. ಆದರೆ ಅದು ಗ್ರಾಮೀಣ ಪ್ರದೇಶದಲ್ಲಿ ಒಂದಲ್ಲ ಒಂದು ರೀತಿ ಮುಂದುವರಿದುಕೊಂಡು ಬಂದಿದೆ.

ಕಾನೂನು ಬಳಸಿ ಅದನ್ನು ನಿಯಂತ್ರಿಸುವುದು ಕಷ್ಟ. ಜನರ ಮನ ಪರಿವರ್ತನೆಯಿಂದ ಸಾಧ್ಯ­ವಾಗ­ಬಹುದು ಎನ್ನುವುದಕ್ಕೆ ಕಾಡೇನಹಳ್ಳಿಯ ಬೆಳವಣಿಗೆ ಉತ್ತಮ ಉದಾ­ಹರಣೆ. ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಿಕೊಡುವ, ಮೇಲ್ಜಾತಿಯ ಜನರನ್ನು ದಲಿತರ ಮನೆಗಳಿಗೆ ಕರೆದೊಯ್ಯುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನಗಳು ಕೋಲಾರ ಜಿಲ್ಲೆಯಲ್ಲಿ ಆರಂಭವಾಗಿವೆ. ಇಂತಹ ಪ್ರಯತ್ನಗಳು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಣೆ ಆಗಬೇಕಿದೆ.

ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 1300ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಅವುಗಳ ಪೈಕಿ ಸುಮಾರು 1000 ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. ಈ ಬೆಳವಣಿಗೆ ಸರ್ಕಾರಕ್ಕೆ ಮತ್ತು ಸಮಾಜಕ್ಕೆ ಗೌರವ ತರುವ ವಿಷಯ ಅಲ್ಲ. ಅನೇಕ ಗ್ರಾಮಗಳಲ್ಲಿ ದಲಿತರ ದೇವಸ್ಥಾನ ಪ್ರವೇಶಕ್ಕೆ ಅರ್ಚಕರು ಅಡ್ಡಿಯಾಗಿದ್ದಾರೆ. ಇನ್ನು ಕೆಲವೆಡೆ ಮೇಲ್ಜಾತಿಯ ಜನರ ವಿರೋಧವಿದೆ.

ಇಂತಹ ವಿರೋಧಗಳನ್ನು ಎದುರಿಸುವ ಧೈರ್ಯ ಆರ್ಥಿಕವಾಗಿ ದುರ್ಬಲರಾದ ದಲಿತರಿಗೆ ಇಲ್ಲ. ಸಬಲ ದಲಿತರೂ ಅಂತಹ ಪ್ರಯತ್ನಕ್ಕೆ ಮುಂದಾಗುವುದು ವಿರಳ. ಅನೇಕ ವರ್ಷಗಳ ಹಿಂದೆ ದೇಶದ ಪ್ರಮುಖ ದೇವಸ್ಥಾನವೊಂದಕ್ಕೆ ಹಿರಿಯ ದಲಿತ ಮುಖಂಡ ಜಗಜೀವನರಾಂ ಅವರು ಭೇಟಿ ನೀಡಿ ಹೋದನಂತರ ಇಡೀ ದೇವಸ್ಥಾನವನ್ನು  ನೀರಿನಿಂದ ತೊಳೆದು ಶುದ್ಧೀಕರಿಸಲಾಗಿತ್ತು. 2009ರಲ್ಲಿ ಒಡಿಶಾದ ದಲಿತ ಸಚಿವೆ ಪ್ರಮೀಳಾ ಮಲ್ಲಿಕ್‌ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ನಂತರವೂ ಅದೇ ಪ್ರವೃತ್ತಿ ಮರುಕಳಿಸಿತ್ತು.

ದೇವಸ್ಥಾನ ಪ್ರವೇಶಿಸುವ ದಲಿತ ನಾಯಕರನ್ನು ಹೀಗೆ ಅವಮಾನಿಸುವ ಕೆಟ್ಟ  ಪ್ರವೃತ್ತಿ ಇಂದಿಗೂ ಮುಂದುವರಿದಿದೆ. ದಲಿತರು ದೇವಸ್ಥಾನ ಪ್ರವೇಶಿಸಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಸಂವಿ­ಧಾನದ ಪ್ರಕಾರ ದೇಶದ ಪ್ರತಿಯೊಬ್ಬರೂ ಸಮಾನರು. ಎಲ್ಲರಿಗೂ ದೇವಸ್ಥಾನ ಪ್ರವೇಶಿಸುವ ಹಕ್ಕಿದೆ. ಅದನ್ನು ಪಟ್ಟಭದ್ರರಿಗೆ ಮನದಟ್ಟು ಮಾಡಿಕೊಡಬೇಕಷ್ಟೆ.

ಪ್ರಗತಿಪರ ಸಂಘಟನೆಗಳು ಮತ್ತು  ಸರ್ಕಾರ ಒಂದಾಗಿ ಈ ಕೆಲಸ ಮಾಡಿದರೆ ಬದಲಾವಣೆ ಸಾಧ್ಯ. ಸರ್ಕಾರ ತನ್ನ ಅಧೀನದಲ್ಲಿರುವ ದೇವಸ್ಥಾನಗಳ ಪ್ರವೇಶದ ವಿಷಯದಲ್ಲಿ ತಾರತಮ್ಯಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕು. ದಲಿತರಿಗೆ ಪ್ರವೇಶ ನಿರಾಕರಿಸುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT