ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕೂಲಕಾರಿ ಪೇಮೆಂಟ್ ಬ್ಯಾಂಕ್

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಪೇಮೆಂಟ್ ಬ್ಯಾಂಕ್ ಎಂದರೆ ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿ ನಡೆಸುವಂತಹ ಸಂಸ್ಥೆ. ಇದರಿಂದ ಡೆಬಿಟ್‌ ಕಾರ್ಡ್‌ ಅಲ್ಲದೇ ಮೊಬೈಲ್ ಫೋನ್‌ ಮೂಲಕವೂ ಹತ್ತಾರು ಬಗೆಯ ಹಣ ಪಾವತಿ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶವಾಗುತ್ತದೆ. ಮೊಬೈಲ್ ಫೋನ್‌ ಸೇವಾ ಸಂಸ್ಥೆ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ, ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಈ ಕುರಿತು ಜೆ.ಸಿ.ಜಾಧವ ಇಲ್ಲಿ ವಿವರಿಸಿದ್ದಾರೆ.

ನಾವು ದಿನನಿತ್ಯದ ವ್ಯವಹಾರಗಳನ್ನು ಮಾಡುವಾಗ ಪ್ರತಿಯೊಂದು ಹಂತದಲ್ಲಿ ಅಂದರೆ ವಸ್ತುಗಳನ್ನು ಕೊಂಡುಕೊಳ್ಳುವಾಗ ಸಾಕಷ್ಟು ಚಿಲ್ಲರೆ ಸಮಸ್ಯೆಯನ್ನು ಎದುರಿಸುತ್ತೇವೆ. ಕೆಲವೊಂದು ಅಂಗಡಿಗಳಲ್ಲಿ ಅಥವಾ ಬಸ್‌ಗಳಲ್ಲಿ ‘ದಯವಿಟ್ಟು ಸರಿಯಾದ ಚಿಲ್ಲರೆ ಕೊಟ್ಟು ಸಹಕರಿಸಿ’ ಎಂಬ ಸೂಚನೆಯನ್ನೂ  ಕಾಣುತ್ತೇವೆ. ಹೀಗೆ ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ಇರುವ ವ್ಯವಸ್ಥೆಗೆ ಪೇಮೆಂಟ್ ಬ್ಯಾಂಕ್ ಎಂಬ ಹಣಕಾಸು ಕ್ಷೇತ್ರದ ಹೊಸ ಆವಿಷ್ಕಾರವು ಸಹಾಯವಾಗಲಿದೆ.

PPI (Pre PaidಂInstruments)  ಅರ್ಥಾತ್‌ ಪ್ರೀಪೇಯ್ಡ್‌ ಇನ್‌ಸ್ಟ್ರುಮೆಂಟ್‌ ಅಂದರೆ, ಮುಂಚಿತವಾಗಿಯೇ ಹಣ ಪಾವತಿಸಿ ನಂತರ ಸರಕು, ಸೇವೆ ಪಡೆಯಲು ಅವಕಾಶ ಮಾಡಿಕೊಡುವ ವ್ಯವಸ್ಥೆ. ಈ ವ್ಯವಸ್ಥೆಯ ಮೂಲಕ ದೇಶದಲ್ಲಿ ಈಗಾಗಲೇ 20 ಕಂಪೆನಿಗಳು ಪೂರ್ವ ಪಾವತಿ ಸೇವೆಗಳನ್ನು ಒದಗಿಸುತ್ತಿವೆ. ಉದಾ: ಏರ್‌ಟೆಲ್ ಮನಿ, ಕ್ವಿಕ್ ಸಿಲ್ವರ್, ಮೊಬಿಕ್ವಿಕ್, ಪೇಟಿಎಂ, ಐ.ಟಿ.ಝಡ್ ಕ್ಯಾಶ್‌ಕಾರ್ಡ್‌.

ಈ ಪಿಪಿಐ ಸೌಲಭ್ಯವನ್ನು  ಪಡೆಯಲು ಗ್ರಾಹಕರು ಸ್ಮಾರ್ಟ್ ಫೋನ್ ಹೊಂದಿರ ಬೇಕಾಗುತ್ತದೆ.  ಡೆಬಿಟ್‌ ಕಾರ್ಡ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಸಿ ವಿವಿಧ ರೀತಿಯ ಬಿಲ್‌ಗಳನ್ನು ಪಾವತಿ ಮಾಡುವ ಸೌಲಭ್ಯವೂ ಇದೆ. ಇಂತಹ ಸೇವೆ ಪಡೆಯಲು ಸುಶಿಕ್ಷಿತರಾದ ಕೆಲವರಿಗಷ್ಟೇ ಸದ್ಯ ಸಾದ್ಯವಾಗುತ್ತಿದೆ.

ಪಿ.ಪಿ.ಐ ಅನಾನುಕೂಲ
ಪ್ರೀ-ಪೇಯ್ಡ್‌ ಇನ್‌ಸ್ಟ್ರುಮೆಂಟ್‌ ವ್ಯವಸ್ಥೆಯಲ್ಲಿ ಮೊದಲೇ ಜಮಾ ಮಾಡಿದ ಹಣಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ನೀಡಲಾಗುವುದಿಲ್ಲ. ಹಾಗಾಗಿ, ಈ ಪಿಪಿಐ ವ್ಯವಸ್ಥೆ ಸಾಮಾನ್ಯ ಗ್ರಾಹಕರಿಗೆ ಅಷ್ಟೊಂದು ಲಾಭಕರ ಎನಿಸುವುದಿಲ್ಲ. ಒಂದು ಸಾರಿ ಪಿ.ಪಿ.ಐನಲ್ಲಿ ಹಣ ಜಮಾ ಮಾಡಿದರೆ ಅದನ್ನು ಪುನಃ ಬ್ಯಾಂಕ್ ಖಾತೆದಾರರಿಗೆ ಅಥವಾ ಬೇರೆ ಪಿ.ಪಿ.ಐಗೆ ವರ್ಗಾವಣೆ ಮಾಡುವುದು ಸಾಧ್ಯವಿಲ್ಲ. ಏನಿದ್ದರೂ ಜಮಾ ಆಗಿರವ ಹಣವನ್ನು ಖರ್ಚು ಮಾಡಿಯೇ  ಖಾಲಿ ಮಾಡಬೇಕು.

ಪಿ.ಪಿ.ಐಗೆ ಜಮೆ ಮಾಡಿದ ಹಣವು ಬ್ಯಾಂಕ್ ಖಾತೆಗಳಲ್ಲಿ ಇರುವಷ್ಟು ಸುರಕ್ಷಿತವೂ ಅಲ್ಲ. ಏಕೆಂದರೆ ಗ್ರಾಹಕರು ಜಮಾ ಮಾಡಿದ ಹಣವನ್ನು ಬೇರೆ ಬ್ಯಾಂಕ್‌ನ Escrow ಎಂಬ ಖಾತೆಯಲ್ಲಿ ಠೇವಣಿ ರೂಪದಲ್ಲಿ ಸಂಗ್ರಹಿಸಿಸಲಾಗಿರುತ್ತದೆ. ಪ್ರತಿಬಾರಿ ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ ಅಥವಾ ನಿಗದಿತ ಸೇವೆಗಳನ್ನು ಪಡೆದುಕೊಂಡಾಗ ಗ್ರಾಹಕರ ಪರವಾಗಿ ಈ ಎಸ್ಕ್ರೊ ಖಾತೆಯಿಂದ ಸರಕು ಮಾರಾಟ ಮಾಡಿದ ಅಥವಾ ಸೇವೆ ಒದಗಿಸಿದ ಸಂಸ್ಥೆಯ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಈ ವಿಧಾನದಲ್ಲಿ ಅವ್ಯವಹಾರವಾಗುವ ಸಾಧ್ಯತೆ ಇದೆ. ಪ್ರತಿ ವ್ಯವಹಾರದ (ವಸ್ತುಗಳನ್ನು ಖರೀದಿಸಿದಾಗ) ವೇಳೆಯೂ ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ ಶೇ 0.5ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಕಡಿತ ಮಾಡಲಾಗುತ್ತದೆ.

ಪಿಪಿಐ ವ್ಯವಸ್ಥೆಯಲ್ಲಿನ ಲೋಪ, ಅನಾನುಕೂಲಗಳನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್.ಬಿ.ಐ) 2014ರಲ್ಲಿ ನಚಿಕೇತ್ ಮೋರ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಸಮಿತಿಯು ಹಣ ವರ್ಗಾವಣೆ ವೇಳೆಯಲ್ಲಿನ ನಡೆಯಬಹುದಾದ ಅಕ್ರಮ, ಮುಂಚಿತವಾಗಿಯೇ ಪಾವತಿಸಿದ ಹಣಕ್ಕೆ ಬಡ್ಡಿ ನೀಡಲಾಗದೇ ಇರುವುದು ಮೊದಲಾದ ಎಲ್ಲಾ ಅಂಶಗಳನ್ನೂ ಅಧ್ಯಯನ ನಡೆಸಿತು. ಪಿ.ಪಿ.ಐ ವ್ಯವಸ್ಥೆಯಡಿ ವ್ಯವಹಾರ ಮಾಡುವುದಕ್ಕೆ ಪರವಾನಿಗೆ (ಲೈಸನ್ಸ್) ನೀಡುವುದನ್ನು ನಿಲ್ಲಿಸಬೇಕು.

ಪೇಮೆಂಟ್ ಬ್ಯಾಂಕ್‌ಗಳನ್ನು ಪ್ರಾರಂಭಿಸಲು ಅನುಮತಿ (ಲೈಸನ್ಸ್) ನೀಡಬೇಕು ಎಂದು ಸಮಿತಿಯು ಶಿಫಾರಸು ಮಾಡಿತು. ಇದರ ಫಲಶ್ರುತಿ ಎಂಬಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, 2015ರ ಆಗಸ್ಟ್‌ 19ರಂದು ದೇಶದ 11 ಸಂಸ್ಥೆಗಳಿಗೆ ಪೇಮೆಂಟ್ ಬ್ಯಾಂಕ್ ಆರಂಭಿಸಲು 18 ತಿಂಗಳ ಅವಧಿಯವರೆಗೆ ಷರತ್ತುಬದ್ಧ ಅನುಮತಿಯನ್ನು ನೀಡಿದೆ.

ಏನಿದು ಪೇಮೆಂಟ್‌ ಬ್ಯಾಂಕ್?
ಪೇಮೆಂಟ್ ಬ್ಯಾಂಕ್ ಎಂದರೆ ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿ ನಡೆಸುವಂತಹ ಸಂಸ್ಥೆ. ಇದರಿಂದ ಡೆಬಿಟ್‌ ಕಾರ್ಡ್‌ ಅಲ್ಲದೇ ಮೊಬೈಲ್ ಫೋನ್‌ ಮೂಲಕವೂ ಹತ್ತಾರು ಬಗೆಯ ಹಣ ಪಾವತಿ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶವಾಗುತ್ತದೆ.

ಈ ವ್ಯವಸ್ಥೆಯೂ ಒಂದು ಕೋನದಲ್ಲಿ ಪಿ.ಪಿ.ಐ ಮಾದರಿಯಲ್ಲಿಯೇ ಇದೆ. ಆದರೆ ಇಲ್ಲಿ ಸೂಪರ್ ಮಾರ್ಕೆಟ್ ಸರಣಿಗಳು, ಮೊಬೈಲ್ ಫೋನ್‌ ಸೇವಾ ಸಂಸ್ಥೆಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು, ಅಂಚೆ ಕಚೇರಿ, ವ್ಯವಸಾಯ ಹಾಗೂ ಡೈರಿ ಸಂಬಂಧಿತ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗುತ್ತಿದೆ.

ಮೊಬೈಲ್‌ ಫೋನ್‌ನಲ್ಲಿ ನಾವು ಕರೆ ಮಾಡುವುದು, ಮೆಸೇಜ್‌ ರವಾನೆ, ಅಂತರ್ಜಾಲ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮೊದಲೇ ಹಣ ಪಾವತಿಸಿ (ಕರೆನ್ಸಿ ರೀಚಾರ್ಜ್‌) ಬಳಸಿಕೊಳ್ಳುವ ಹಾಗೆಯೇ ಎಲ್ಲಾ ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟುಗಳಿಗೆ ಹಣ ಪಾವತಿಸುವುದಕ್ಕೆ, ಒಂದು ಮೊಬೈಲ್ ಫೋನ್‌ನಿಂದ ಇನ್ನೊಂದು ಮೊಬೈಲ್‌ ಫೋನ್‌ಗೆ ಅಥವಾ ನಮ್ಮ ಬ್ಯಾಂಕ್‌ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಪೇಮೆಂಟ್ ಬ್ಯಾಂಕ್‌ನಲ್ಲಿ ಅವಕಾಶವಾಗಲಿದೆ.

ಭಾರತದಲ್ಲಿ ಅಂದಾಜು 94 ಕೋಟಿ ಮಂದಿ ಮೊಬೈಲ್‌ ಫೋನ್‌‌ಬಳಕೆದಾರರಿದ್ದಾರೆ. ಅಂದರೆ ದೇಶದ ಜನಸಂಖ್ಯೆಯ (125 ಕೋಟಿ) ಶೇ 75 ಜನರು ಮೊಬೈಲ್ ಫೋನ್‌ ಬಳಸುತ್ತಿದ್ದಾರೆ. ಹಾಗೆಯೇ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವವರು 60 ಕೋಟಿ ಮಂದಿ ಇದ್ದಾರೆ. ಅಂದರೆ ದೇಶದ ಜನಸಂಖ್ಯೆಯ ಶೇ 50ರಷ್ಟು ಮಂದಿ ಮಾತ್ರವೇ ಬ್ಯಾಂಕ್‌ ಖಾತೆ ಹೊಂದಿದ್ದಾರೆ.

ಬ್ಯಾಂಕ್ ಖಾತೆ ಹೊಂದದೇ ಇರುವ ಬಹಳಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಹಾಗಾಗಿ ದೇಶದ ಜನರನ್ನು ಕೇಂದ್ರ ಸರ್ಕಾರ ಮತ್ತು ಆರ್‌ಬಿಐನ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ‘ವಿತ್ತೀಯ ಸೇರ್ಪಡೆ’ಗೆ ಒಳಪಡಿಸಲು ಈವರೆಗೆ ಸಾಧ್ಯವಾಗಿಲ್ಲ. ಹಾಗಾಗಿ, ಈ ವಿಶಿಷ್ಟ ಪೇಮೆಂಟ್ ಬ್ಯಾಂಕ್ ಮಾದರಿಯು ಸುಲಭವಾಗಿ ಎಲ್ಲರೂ ವಿತ್ತೀಯ ಸೇರ್ಪಡೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡಲಿದೆ.

ಪೇಮೆಂಟ್ ಬ್ಯಾಂಕ್‌ಗಳನ್ನು ಭಾರತದಲ್ಲಿ ಪ್ರಾರಂಭಿಸಲು ಮೂಲ ಉದ್ದೇಶ ಕೀನ್ಯಾ ದೇಶದ ಎಂ–ಪೇಸಾ ಎಂಬ ಪರಿಕಲ್ಪನೆ. ಎಂ–ಪೇಸಾ ಎಂದರೆ ಏನೆಂದು ತಿಳಿಯೋಣ.
* ಎಂ–ಪೇಸಾ (M-Pesa) ಹೆಸರೇ ಸೂಚಿಸುವಂತೆ ಎಂ ಎಂದರೆ ಮೊಬೈಲ್, ಪೇಸಾ ಎಂದರೆ ಹಣ (ಸ್ವಾಹಿಲಿ ಪದ)Sಎಂದರ್ಥ.

* ವೊಡಾಫೋನ್ ಹಾಗೂ ಕೀನ್ಯಾ ದೇಶದ ಮೊಬೈಲ್ ಫೋನ್‌ ಸೇವಾ ಕಂಪೆನಿ ಸಫಾರಿಕಾಂ ಆ್ಯಂಡ್‌ ಐಬಿಎಂSಸಹಯೋಗದೊಂದಿಗೆ 2006ರಲ್ಲಿ ಕೆನ್ಯಾ ದೇಶದಲ್ಲಿ  ‘ಎಂ–ಪೇಸಾ’ ಸೇವೆ ಆರಂಭಗೊಂಡಿತು.

* ಕೀನ್ಯಾ ದೇಶದಲ್ಲಿ ಪ್ರತಿ ತಿಂಗಳೂ ಎಂ–ಪೇಸಾ ಮೂಲಕವೇ 100 ಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು (ಈಗಿನ ವಿದೇಶಿ ವಿನಿಮಯ ಲೆಕ್ಕದಲ್ಲಿ ₨6600 ಕೋಟಿ) ವಹಿವಾಟು ನಡೆಯುತ್ತಿದೆ.

2014ರ ದಾಖಲೆ ಪ್ರಕಾರ ಕೀನ್ಯಾ ದೇಶದ ಜನಸಂಖ್ಯೆ 4,59,41,977 (4.59 ಕೋಟಿ). ಇದರಲ್ಲಿ ಶೇ 75ರಷ್ಟು ಜನರು ಎಂ–ಪೇಸಾ ಸೌಲಭ್ಯವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನೇ ಉದಾಹರಣೆಯಾಗಿ ಇಟ್ಟುಕೊಂಡು ನೋಡಿದಾಗ ನಮ್ಮ ದೇಶದಲ್ಲಿ ಎಂ–ಪೇಸಾ ಮೂಲಲ ಎಷ್ಟು ದೊಡ್ಡ ಪ್ರಮಾಣದ ವಹಿವಾಟು ನಡೆಯಬಹುದು ಎಂದು ಅಂದಾಜು ಮಾಡಬಹುದು. 

ಕೀನ್ಯಾ ದೇಶದ ಆರ್ಥಿಕತೆಗೆ ಶೇ 25ಕ್ಕೂ ಅಧಿಕ ಜಿ.ಡಿ.ಪಿ (ಒಟ್ಟಾರೆ ಆಂತರಿಕ ಉತ್ಪಾದನೆಯ) ಪಾಲು ಈ ಎಂ–ಪೇಸಾ ಸೇವೆಯ ಬಳಕೆಯಿಂದೇ ಬರುತ್ತಿದೆ. M-Shwari (ಎಂ-ಶ್ವಾರಿ) ಎಂಬ ವ್ಯವಸ್ಥೆಯು ಎಂ–ಪೇಸಾ ಸೇವೆಯಲ್ಲಿ ಬಳಕೆಯಾದ ನಂತರ ಉಳಿದಿರುವ ಗ್ರಾಹಕರ ಹಣಕ್ಕೆ ಶೇ 2ರಿಂದ 5 ದರದಲ್ಲಿ ಬಡ್ಡಿಯನ್ನೂ ಜಮಾ ಮಾಡುತ್ತದೆ.

ಎಂ–ಪೇಸಾ ಹೇಗೆ ಕೆಲಸ ಮಾಡುತ್ತದೆ?
ಯಾವುದೇ ಎಂ–ಪೇಸಾ ಸೌಲಭ್ಯ ಲಭ್ಯವಿರುವೆಡೆ (ಕಿರಾಣಿ ಅಂಗಡಿ, ಷಾಪಿಂಗ್ ಸೆಂಟರ್‌, ಪೆಟ್ರೋಲ್  ಬಂಕ್‌ ಮೊದಲಾದೆಡೆ) ಗ್ರಾಹಕರು ಹಣ ನೀಡಿ ಎಂ–ಪೇಸಾ ಖಾತೆ ಯನ್ನು ರೀಚಾರ್ಚ್‌ ಮಾಡಿಸಿದರೆ ಆಯಿತು. (ಮೊಬೈಲ್‌ ಫೋನ್‌ಗ ಕರೆನ್ಸಿ ರೀಚಾರ್ಜ್ ಮಾಡಿಸಿದಂತೆ)

ಈಗ ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಜಮಾ ಆದ ಹಣದಿಂದ ಸಾಕಷ್ಟು ಸೇವೆಗಳನ್ನು ಪಡೆದುಕೊಳ್ಳಬಹುದು. ಎಲ್ಲಾ ರೀತಿಯ ಬಿಲ್‌ಗಳನ್ನು ಪಾವತಿ ಮಾಡಲು, ಸಿನಿಮಾ ಟಿಕೆಟ್ ಖರೀದಿ, ಹಾಗೂ ಹೋಟೆಲ್‌ ಬಿಲ್‌ ಮತ್ತು ಪೆಟ್ರೋಲ್‌ ಬಂಕ್‌ಗಳಲ್ಲಿ ಹಣ ಪಾವತಿ, ಅಲ್ಲದೇ ನಿಮ್ಮ ಮೊಬೈಲ್‌ ಫೋನ್‌ನಿಂದ ಇನ್ನೊಂದು ಮೊಬೈಲ್‌ಗೆ ಹಾಗೂ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು, ಒಂದು ದೇಶದಿಂದ ಇನ್ನೊಂದು ದೇಶದಲ್ಲಿನ ಬ್ಯಾಂಕ್‌ ಖಾತೆಗೆ  ಹಣ ವರ್ಗಾಯಿಸಲು ಅವಕಾಶವಿದೆ. (ಭಾರತೀಯ ಪ್ರಜೆ ಅಮೆರಿಕದಲ್ಲಿದ್ದರೆ ಇಲ್ಲಿರುವ ಅವರ ಕುಟುಂಬದವರಿಗೆ ಹಣ ಕಳುಹಿಸಲು ಬಲು ಸುಲಭ)

ಮೈಕ್ರೊ ಫೈನಾನ್ಸ್ (ಸಣ್ಣ ಮೊತ್ತದಲ್ಲಿ ಸಾಲ ನೀಡುವ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಸಹ ಎಂ–ಪೇಸಾ ಮೂಲಕ ಮರುಪಾವತಿ ಮಾಡಬಹುದಾಗಿದೆ. ಈ ಸುಲಭದಲ್ಲಿ ಹಣ ಪಾವತಿಸುವ, ಹಣ ವರ್ಗಾಯಿಸುವ ವ್ಯವಸ್ಥೆಯ ಪರಿಕಲ್ಪನೆಯು ಕೀನ್ಯಾ ದೇಶದಲ್ಲಿ ಪೇಮೆಂಟ್ ಬ್ಯಾಂಕ್ ಮುಖಾಂತರ ಯಶಸ್ವಿಯಾಗಿದೆ. ಹಾಗಾಗಿ, ನಮ್ಮ ದೇಶದಲ್ಲಿಯೂ ಅಭೂತ ಪೂರ್ವ ಯಶಸ್ಸು ಕಾಣಲಿದೆ ಎಂಬ ನಿರೀಕ್ಷೆ ಇದೆ. ಆ ಮೂಲಕ ದೇಶದ ಆರ್ಥಿಕತೆಗೆ ಸಹಕಾರಿಯೂ ಆಗಿರುತ್ತದೆ ಎಂದೇ ನಿರೀಕ್ಷೆ  ಇಟ್ಟುಕೊಳ್ಳಲಾಗಿದೆ.

ಗ್ರಾಹಕರ ಹಿತಾಸಕ್ತಿಯ ಜತೆಜತೆಗೇ ಕೆಲವು ಸಂದೇಹಗಳೂ ಮೂಡಬಹುದು. ಅವು ನಿವಾರಣೆಯಾದರೆ, ಈ ಪೇಮೆಂಟ್‌ ಬ್ಯಾಂಕಿಂಗ್‌ ಸೌಲಭ್ಯವು ಬಹುಪಾಲು ಯಶಸ್ವಿಯಾದಂತೆ. ಮೊಬೈಲ್ ಫೋನ್‌ ಕಳೆದು ಹೋದರೆ ಪೇಮೆಂಟ್‌ ಬ್ಯಾಂಕ್‌ ಖಾತೆಯಲ್ಲಿನ ಹಣದ ದುರ್ಬಳಕೆ ಆಗುವುದಿಲ್ಲವೇ? ಎಂಬ ಪ್ರಶ್ನೆ ಇದೆ.

ಪೇಮೆಂಟ್‌ ಬ್ಯಾಂಕ್‌ ಸೌಲಭ್ಯವನ್ನು ಎಸ್.ಎಂ.ಎಸ್ ರವಾನೆ ಮೂಲಕವೂ ಪಡೆದುಕೊಳ್ಳುವುದು ಸಾಧ್ಯವಾದರೆ, ಸಂದೇಶ ರವಾನೆ ಮತ್ತು ಸ್ವೀಕಾರ ಸೌಲಭ್ಯಕ್ಕೆ ಪ್ರಾದೇಶಿಕ ಭಾಷೆಯನ್ನೂ ಅಳವಡಿಸಿಕೊಂಡರೆ ಒಳ್ಳೆಯದು. ದಿನದ ಆರಂಭ ಮತ್ತು ಅಂತ್ಯದಲ್ಲಿ ಗ್ರಾಹಕರ ಖಾತೆಯಲ್ಲಿರುವ ಹಣ ಎಷ್ಟು? ದಿನದ ವಹಿವಾಟು ನಡೆಸಿದ ನಂತರ ಖಾತೆಯಲ್ಲಿ ಉಳಿದಿರುವ ಹಣ ಎಷ್ಟು ಎಂಬ ಮಾಹಿತಿ ನೀಡುವಂತಾದರೆ ಗ್ರಾಹಕರು ತಮ್ಮ ಖಾತೆ ಬಗ್ಗೆ ಜಾಗೃತರಾಗಿರುತ್ತಾರೆ. ಹಣ ವರ್ಗಾವಣೆ ಹಂತದಲ್ಇ ಭದ್ರತೆಯ ವಿಷಯದಲ್ಲಿ ಹೆಚ್ಚು ಆದ್ಯತೆ ನೀಡಬೇಕಿದೆ. ಗ್ರಾಹಕರು ಸುಲಭವಾಗಿ ಅರ್ಥ ಮಾಡಿಕೊಳ್ಳಲು, ಸರಳವಾಗಿ ವ್ಯವಹರಿಸಲು ಅವಕಾಶವಾಗಬೇಕಿದೆ.

ಪ್ರಯೋಜನ
* ನೋಟುಗಳ ಬಳಕೆ ಗಣನೀಯವಾಗಿ ತಗ್ಗುತ್ತದೆ. ಇದರಿಂದ  ಆರ್‌ಬಿಐಗೆ ಪದೇ ಪದೇ ಹೊಸದಾಗಿ ನೋಟು ಮುದ್ರಿಸುವ ಶ್ರಮ ಕಡಿಮೆ ಆಗುತ್ತದೆ. ಕಾಗದ, ಮುದ್ರಣ ವೆಚ್ಚವೂ ತಗ್ಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಕಲಿ ನೋಟುಗಳ ಹಾವಳಿ ತಡೆಯಬಹುದಾಗಿದೆ.

* ಜನರು ಸದಾಕಾಲ ತಮ್ಮೊಂದಿಗೆ ನಗದು ಇಟ್ಟುಕೊಂಡು ಓಡಾಡಬೇಕಾದ ಅಗತ್ಯವಿಲ್ಲ.

* ಎ.ಟಿ.ಎಂಗಳಿಗೆ ಹೋಗಿ ಸರದಿಯಲ್ಲಿ ನಿಂತು ಹಣ ತೆಗೆಯುವ ತಾಪತ್ರಯ ಇರುವುದಿಲ್ಲ. ಎ.ಟಿ.ಎಂ ತಾಂತ್ರಿಕ ತೊಂದರೆ ಇದೆ ಎಂದು ಶಪಿಸುವಂತಿಲ್ಲ.

* ಮೊಬೈಲ್‌ ಫೋನ್ ಸಂಪರ್ಕ ಹಾಗೂ ಎಲ್ಲಾ ರೀತಿಯ ವಹಿವಾಟುಗಳಿಗೆ ಸಾಧನವಾಗಿ ಬಳಕೆ ಆಗುವುದರಿಂದ ಪರ್ಸ್‌ನಲ್ಲಿ ಹಣ ಇಡುವ ಅವಶ್ಯಕತೆ ಇಲ್ಲ.

ಪೇಮೆಂಟ್ ಬ್ಯಾಂಕ್‌ ಚಟುವಟಿಕೆಗಳೇನು?
* ಗ್ರಾಹಕರೊಬ್ಬರಿಂದ  ಗರಿಷ್ಠ ₨1 ಲಕ್ಷದವರೆಗೆ ಬೇಡಿಕೆ ಆಧರಿಸಿದ ಠೇವಣಿ ಸ್ವೀಕರಿಸಬಹುದು. ಅದು ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆ ಆಗಿರಬಹುದು.

* ಆರ್.ಬಿ.ಐ ನಿಗದಿಪಡಿಸಿದಂತೆ ಈ ಠೇವಣಿಗಳಿಗೆ ಬಡ್ಡಿಯನ್ನು ನೀಡಲಾಗುತ್ತದೆ.

* ಡೆಬಿಟ್ ಕಾರ್ಡ್‌ಗಳನ್ನು ಮಾತ್ರವೇ ವಿತರಿಸುವುದು. ಕ್ರೆಡಿಟ್  ಕಾರ್ಡ ನೀಡಲು ಅವಕಾಶವಿಲ್ಲ.

* ಸಾಲ ಸೌಲಭ್ಯ ನೀಡಲು ಅವಕಾಶವಿಲ್ಲ. ಆದ್ದರಿಂದ ವಾಣಿಜ್ಯ ಬ್ಯಾಂಕ್‌ಗಳಿಗೆ ಈಗ ಹೊರೆಯಾಗಿರುವ ವಸೂಲಾಗದ ಸಾಲ ಪ್ರಮಾಣದ (ಎನ್‌ಪಿಎ) ರೀತಿಯ ಸಮಸ್ಯೆ ಈ ಪೇಮೆಂಟ್‌ ಬ್ಯಾಂಕ್‌ಗಳಿಗೆ ಇರುವುದಿಲ್ಲ.

* ಗ್ರಾಹಕರು ಠೇವಣಿಯಾಗಿ ಇರಿಸಿದ ಹಣವನ್ನು ಸಾಲ ನೀಡಲು ಬಳಸುವುದಿಲ್ಲವಾದ್ದರಿಂದ, ಸಂಗ್ರಹವಾದ ಹಣವನ್ನು ಸರಕಾರದ ಸಾಲಪತ್ರಗಳು, ಬಾಂಡ್‌ಗಳಲ್ಲಿ ಹಾಗೂ ಟ್ರೆಜರಿ ಬಿಲ್‌ಗಳಲ್ಲಿ ಮಾತ್ರ ಹೂಡಿಕೆ ಮಾಡಲಾಗುತ್ತದೆ. ಇದರಿಂದ ಖಾತೆದಾರರ ಹಣವೂ ಸುಭದ್ರವಾಗಿರುತ್ತದೆ.

* ಯಾವುದೇ ಸೇವೆ ಒದಗಿಸಿದ್ದಕ್ಕೆ ತಗಲುವ ವೆಚ್ಚವನ್ನು ಕಮಿಷನ್ ರೂಪದಲ್ಲಿ ಪಡೆಯುವುದರಿಂದ ಇದುವೇ ಆದಾಯದ ಮೂಲವಾಗಿರುತ್ತದೆ.

* ವಾಣಿಜ್ಯ ಬ್ಯಾಂಕ್‌ಗಳ ಹಾಗೆಯೇ ಪೇಮೆಂಟ್‌ ಬ್ಯಾಂಕ್‌ಗಳೂ ಸಹ ನಗದು ಮೀಸಲು ಅನುಪಾತವನ್ನು (ಕ್ಯಾಷ್ ರಿಸರ್ವ್‌ ರೇಷಿಯೊ- ಸಿ.ಆರ್.ಆರ್) ಹೊಂದಿರುತ್ತವೆ.

* ಹೂಡಿಕೆದಾರರಿಗೆ ಠೇವಣಿಗಳಿಗೆ, ಹಣಕ್ಕೆ ಕಂಟಕ ತರದಂತಹ ಹಣಕಾಸು, ಅರೆ ಹಣಕಾಸು ಉತ್ಪನ್ನಗಳನ್ನು ಅಥವಾ ಯೋಜನೆಗಳನ್ನು ಮಾರಾಟ ಮಾಡಲು ಪೇಮೆಂಟ್ ಬ್ಯಾಂಕ್‌ಗಳಿಗೆ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT