ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಠಾನಗೊಳ್ಳದ ಆದೇಶ; ಅಸಮಾಧಾನ

ನಗರ ಸಂಚಾರ
Last Updated 30 ಮೇ 2016, 6:25 IST
ಅಕ್ಷರ ಗಾತ್ರ

ವಿಜಯಪುರ: ಜನಸ್ನೇಹಿ ಆಡಳಿತ ನೀಡಲು ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಮುನ್ನುಡಿ ಬರೆದಿದೆ. ಒಂದು ವಾರದ ಅವಧಿಯಲ್ಲಿ ಮೂರು ಪ್ರಕಟಣೆ ಹೊರಡಿಸಿದ್ದು, ಎರಡು ಪ್ರಕಟಣೆ ಸಾಮಾನ್ಯ ಜನತೆಗೆ ಸಂಬಂಧಿಸಿದ್ದಾದರೆ, ಮತ್ತೊಂದು ಪಾಲಿಕೆಗೆ ಆದಾಯ ಕ್ರೋಢೀಕರಿಸುವುದಕ್ಕೆ ಸಂಬಂಧಿಸಿದ್ದಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ವಿವಿಧ ಸಮಸ್ಯೆ, ಸೇವೆಗಳ ತ್ವರಿತ ಸ್ಪಂದನೆಗಾಗಿ ವಿಭಾಗವಾರು ಅಧಿಕಾರಿಗಳನ್ನು ನಿಯೋಜನೆ ಮಾಡಿ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿದೆ.

ಸಾರ್ವಜನಿಕರು ಸೇವೆ ಅಥವಾ ಸಮಸ್ಯೆಗಳ ನಿವಾರಣೆಗಾಗಿ ಈ ವಿಭಾಗವಾರು ಶಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸಂಬಂಧಿಸಿದ ಅಧಿಕಾರಿಗಳ ಹೆಸರು, ಸಂಪರ್ಕ ಸಂಖ್ಯೆ ಒದಗಿಸಿದ್ದು, ಸಮಸ್ಯೆ ಅನುಭವಿಸುತ್ತಿರುವ ಜನತೆ, ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂಬುದು ಮೊದಲ ಪ್ರಕಟಣೆಯ ಒಕ್ಕಣೆ.

ಮತ್ತೊಂದು ಪ್ರಕಟಣೆ ನಗರದಲ್ಲಿ ಸಾರ್ವಜನಿಕರ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದ್ದು. ಬೀದಿ ಬದಿಯ ವ್ಯಾಪಾರಿಗಳು ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಲು ಸ್ಥಳಗಳನ್ನು ಗುರುತಿಸಿ ಮಹಾನಗರ ಪಾಲಿಕೆ ನಗರದ ವಿವಿಧ ಸ್ಥಳಗಳನ್ನು ಮಾರಾಟ ವಲಯ, ಮಾರಾಟ ನಿಷೇಧಿತ ವಲಯ, ಸಂಚಾರ ವಲಯ, ಸಂಚಾರ ನಿಷೇಧಿತ ವಲಯ ಎಂದು ಗುರುತಿಸಿ ಆದೇಶ ಹೊರಡಿಸಿದೆ.

ಈ ಎರಡೂ ಆದೇಶಗಳು ನಗರದ ಸಾಮಾನ್ಯ ಜನತೆಗೆ ಸಂಬಂಧಿಸಿದವುಗಳಾದರೆ ಉಳಿದ ಮತ್ತೊಂದು ಪ್ರಕಟಣೆ ವರಮಾನಕ್ಕೆ ಸಂಬಂಧಿಸಿದ್ದು.
ಈ ಹಿಂದೆಯೂ ಜಡ್ಡುಗಟ್ಟಿದ ಆಡಳಿತ ಚುರುಕುಗೊಳಿಸಲು ಆಗಿನ ಆಯುಕ್ತರು,

ಮೇಯರ್‌, ಹಿಂದಿನ ನಗರಸಭೆಯ ಅಧ್ಯಕ್ಷ–ಪೌರಾಯುಕ್ತರು ಹಲ ವಿನೂತನ ಯೋಜನೆ ಅನುಷ್ಠಾನಕ್ಕಾಗಿ ಹೊರಡಿಸಿದ ಪ್ರಕಟಣೆಗಳು ಪಾಲಿಕೆಯ ಕಡತ ಸೇರಿವೆ ಹೊರತು, ಯಾವೊಂದು ಅನುಷ್ಠಾನಕ್ಕೆ ಬರಲಿಲ್ಲ ಎಂಬುದು ವಿಜಯಪುರ ನಾಗರಿಕರ ದೂರು.

ಅಧಿಕಾರಿಗಳು ಪ್ರಕಟಣೆ ಹೊರಡಿಸಿ ಕೈತೊಳೆದುಕೊಂಡು ಸುಮ್ಮನಾಗುತ್ತಾರೆ. ಜನಪ್ರತಿನಿಧಿಗಳಿಗೂ ಇದು ಜಾರಿಯಾಗುವುದು ಬೇಕಿಲ್ಲ. ಇಲ್ಲಿನ ವ್ಯವಸ್ಥೆಗೆ ಹೊಂದಿಕೊಂಡಿರುವ ಜನರೂ ಸಹಜ ಪ್ರಕ್ರಿಯೆ ಎಂಬಂತೆ ತಮ್ಮಷ್ಟಕ್ಕೆ ತಾವು ಎಲ್ಲವನ್ನೂ ಉಲ್ಲಂಘಿಸುವುದು ಹಿಂದಿನಿಂದ ಇಂದಿನವರೆಗೂ ಪಾಲನೆಯಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ.

ವಾರದ ಹಿಂದಷ್ಟೇ ಪಾಲಿಕೆ ಆಯುಕ್ತರು ಹೊರಡಿಸಿದ ಪ್ರಕಟಣೆಗೆ ಕಿಂಚಿತ್‌ ಕಿಮ್ಮತ್ತು ಇಲ್ಲದಂತಾಗಿದೆ. ನಗರದ ವಾರ್ಡ್‌ ನಂಬರ್‌ ಆರರಲ್ಲಿ ಮಧ್ಯಾಹ್ನದವರೆಗೂ ಬೆಳಗುತ್ತಿದ್ದ ವಿದ್ಯುತ್‌ ದೀಪ ಸ್ಥಗಿತಗೊಳಿಸಬೇಕು ಎಂದು ಆಯುಕ್ತರು ನೀಡಿದ್ದ ಅಧಿಕಾರಿ ಮೊಬೈಲ್‌ಗೆ ಕರೆ ಮಾಡಿ ತಿಳಿಸಿದರೂ ಸ್ಪಂದನೆ ಅಷ್ಟಕ್ಕಷ್ಟೇ.

ಇಂದಿಗೂ ಸಮಸ್ಯೆ ಜೀವಂತವಾಗಿ ಕಾಡುತ್ತಿದೆ. ಇದು ದೇಶಕ್ಕೆ ನಷ್ಟ. ಪಾಲಿಕೆಗೂ ವೃಥಾ ಖರ್ಚು. ತನ್ನ ಒಳಿತಿನ ಕೆಲಸ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಯತ್ನಿಸಲ್ಲ.

ಇನ್ನೂ ಜಿಲ್ಲಾ ಜೆಡಿಎಸ್‌ ಕಚೇರಿ ಬಳಿ ಮೃತಪಟ್ಟಿದ್ದ ಹಂದಿ ಎತ್ತಿ ಹಾಕುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಲಾಯಿತು. ಒಂದಿನಿತೂ ಸ್ಪಂದನೆ ಸಿಗಲಿಲ್ಲ. ಮತ್ಯಾಕೆ ಇಂತಹ ಜನರ ಕನ್ಣೋರೆಸುವ ತಂತ್ರಗಾರಿಕೆಯನ್ನು ಅಧಿಕಾರಿಗಳು ಅನುಸರಿಸುತ್ತಾರೆ ಎಂದು ಹಿರೇಮಠ ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾರಾಟ ವಲಯ, ಮಾರಾಟ ನಿಷೇಧಿತ ವಲಯ, ಸಂಚಾರ ವಲಯ, ಸಂಚಾರ ನಿಷೇಧಿತ ವಲಯಕ್ಕೆ ಸಂಬಂಧಿಸಿದ ಪ್ರಕಟಣೆಯೂ ಇದಕ್ಕೆ ಹೊರತಲ್ಲ. ನಗರದಲ್ಲಿ ಮೊದಲು ರಸ್ತೆಗಳು ನಿರ್ಮಾಣಗೊಳ್ಳಲಿ. ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿ.

ನಂತರ ಸಂಚಾರ ವಲಯ, ಸಂಚಾರ ನಿಷೇಧಿತ ವಲಯ ಘೋಷಿಸಲಿ. ಏಳು ವರ್ಷಗಳ ಹಿಂದೆ ನಗರದ ಕೆ.ಸಿ.ಮಾರುಕಟ್ಟೆ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಒಳಪಡಿಸಲಾಗಿತ್ತು. ಇದೀಗ ಸಂಚಾರವನ್ನೇ ನಿಷೇಧಿಸಿ ಹೊರಡಿಸಿರುವ ಆದೇಶ ಅವೈಜ್ಞಾನಿಕ. ನಗರದ ರಸ್ತೆ ಅಭಿವೃದ್ಧಿಗೊಳಿಸಿ.

ವೈಜ್ಞಾನಿಕ ಸಮೀಕ್ಷೆ ನಡೆಸಿದ ಬಳಿಕ ಈ ಆದೇಶ ಜಾರಿಗೊಳಿಸಿದರೆ ಒಳ್ಳೆಯದು. ಜನತೆಗೂ ಉಪಕಾರಿ. ಅದನ್ನು ಬಿಟ್ಟು ಕೆಲವರ ಹಿತರಕ್ಷಣೆಗಾಗಿ ತರಾತುರಿಯಲ್ಲಿ ಈ ತರಹದ ಆದೇಶ ಹೊರಡಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದು ಚಂದ್ರಕಾಂತ ಹಿರೇಮಠ ಪಾಲಿಕೆ ಆಡಳಿತದ ವಿರುದ್ಧ ಹರಿಹಾಯ್ದರು.

*
ವಿಜಯಪುರ ನಗರದ ಜನತೆಗೆ ಉತ್ತಮ ಆಡಳಿತ ನೀಡಲು ಪಾಲಿಕೆ ಕಂಕಣಬದ್ಧವಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು
ಡಾ.ಔದ್ರಾಮ
ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT