ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನು ಹೊತ್ತಿಸಿದ ‘ಬೆಂಕಿ’

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಲೇಜು ದಿನಗಳಲ್ಲೇ ನಿರೂಪಣೆಯತ್ತ ಒಲವು ಬೆಳೆಸಿಕೊಂಡು, ಸಾಕಷ್ಟು ಹೆಸರು ಮಾಡಿದ ಮಂಗಳೂರಿನ ಬೆಡಗಿ ಅನುಶ್ರೀ ಈಗ ಮನೆಮನೆಗೂ ಪರಿಚಿತ. ಸಾವಿರಾರು ಷೋಗಳನ್ನು ನಿರೂಪಿಸಿರುವ ಅನುಶ್ರೀ ಸದ್ಯ ಸಿನಿಮಾ ಕಡೆಯೂ ಕೈ ಚಾಚಿದ್ದಾರೆ. ‘ಬೆಂಕಿಪಟ್ಣ’ದ ನಾಯಕಿಯಾಗಿದ್ದಾರೆ. ರಂಜಿಸುವ ಕಾಯಕದ ಈ ‘ಮಾತಿನ ಮಲ್ಲಿ’ ತಮ್ಮ ಸಿನಿಮಾ-ಷೋಗಳ ಬಗ್ಗೆ ನಗುನಗುತ್ತಲೇ ‘ಕಾಮನಬಿಲ್ಲು’ ಜತೆ ಮಾತನಾಡಿದ್ದಾರೆ. ನಿಮಗೂ ಒಂದಿಷ್ಟು...

* ಸಿನಿಮಾ, ಷೋ– ಇದರಲ್ಲಿ ನಿಮ್ಮಿಷ್ಟ?
ಉತ್ತರಿಸೋದು ಕಷ್ಟ. ನಾನು ಗುರ್ತಿಸಿಕೊಂಡಿದ್ದೇ ಷೋಗಳ ಮೂಲಕ. ಮಧ್ಯ ರಾತ್ರಿ ಅರ್ಧ ನಿದ್ದೆಯಲ್ಲಿ ಎಬ್ಬಿಸಿ ಕ್ಯಾಮೆರಾ ಎದುರು ನಿಲ್ಲಿಸಿ ‘ಆ್ಯಕ್ಷನ್’ ಅಂದ್ರೂ ನಾನು ಸಹಜವಾಗೇ ನಿರೂಪಣೆ ಶುರು ಮಾಡಿಬಿಡ್ತೀನಿ. ನಿರೂಪಣೆ ಅನ್ನೋದು ಅಷ್ಟು ನನ್ನೊಳಗೆ ಒಂದಾಗಿಬಿಟ್ಟಿದೆ. ಹಾಗೇ ಇತ್ತೀಚೆಗೆ ಸಿನಿಮಾಗಳಲ್ಲಿ ನಟನೆ ಆರಂಭಿಸಿದ ನಂತರ ಸಿನಿಮಾ ಕೂಡ ಖುಷಿ ಕೊಡುತ್ತಿದೆ. ಅಲ್ಲೂ ಒಳ್ಳೆಯ ಅನುಭವಗಳು ದಕ್ಕುತ್ತಿವೆ. ಒಟ್ಟಿನಲ್ಲಿ ಕೆಲಸ ಮಾಡುತ್ತಿರಬೇಕು, ಖುಷಿಯಾಗಿರಬೇಕು.

* ನಿರೂಪಕಿ ಆಗಿರದಿದ್ರೆ?
ಬಹುಶಃ ಆಕಾಶದಲ್ಲಿ ಹಾರಾಡ್ತಾ ಇರ್ತಿದ್ದೆ. ಹೌದು, ‘ಟಿ.ವಿ ಹಾಸ್ಟ್’ ಆಗಿರದಿದ್ದರೆ ‘ಏರ್ ಹಾಸ್ಟೆಸ್’ ಆಗಿರ್ತಿದ್ದೆ. ಯಾಕಂದ್ರೆ ನಂಗೆ ಗಗನಸಖಿ ಆಗಬೇಕೆಂಬುದು ಕನಸು. ಆ ಆಸೆ ಈಗಲೂ ಇದೆ.

* ಕಾರ್ಯಕ್ರಮಗಳಲ್ಲಿನ ನಗು ‘ಷೋ’ಗಾ?
ಇಲ್ಲಪ್ಪಾ. ಅದು ಒರಿಜಿನಲ್ ನಗು. ನಂಗೆ ನಗು–ಅಳು ಎರಡೂ ಜಾಸ್ತಿ. ಬೇಗ ನಗ್ತೀನಿ, ಬೇಗ ಅಳ್ತೀನಿ. ನಗು ನಂಗೆ ವರ. ಅನುಶ್ರೀ ಇವತ್ತು ಇಲ್ಲಿದಾಳೆ ಅಂದ್ರೆ ನಗುವಿನಿಂದ. ನಾನು ಮೊದಲು ಗುರ್ತಿಸಿಕೊಂಡಿದ್ದೇ ನಗುವಿನಿಂದಾಗಿ. ಅದು ‘ಕಾಮಿಡಿ ಕಿಲಾಡಿಗಳು’ನಲ್ಲಿ. ತುಂಬ ಜನ ಹೇಳ್ತಾರೆ; ನೀವು ಮನಸಾರೆ ನಗ್ತೀರಾ, ಅದಕ್ಕೇ ನಿಮ್ಮ ನಗು ಚೆಂದ ಎಂದು. ಒಂದ್ಸಲ ನಗು ಶುರು ಆಗ್ಬಿಟ್ರೆ ಅದು ತಡೆ ರಹಿತ.

* ಮಾತು ಬಿಟ್ರೆ ಅನುಶ್ರೀ ಗತಿ?
ನಂದು ಸಿಕ್ಕಾಪಟ್ಟೆ ಮಾತು. ಚಿಕ್ಕೋಳಿದ್ದಾಗಿಂದ್ಲೂ ವಟವಟಾ ಅಂತಾನೇ ಇರ್ತಿದ್ದೆ. ಅಮ್ಮ ಕೆಲಸ ಮಾಡ್ತಿದ್ರೆ ನಂದು ಮಾತು. ‘ಹುಡುಗ ಆಗಿ ಹುಟ್ಟಬೇಕಿದ್ದೋಳು ತಪ್ಪಿ ಹುಡುಗಿ ಆಗಿದಾಳೆ’ ಎಂದು ನಮ್ಮ ಬೀದಿಯೋರೆಲ್ಲ ಹೇಳೋರು. ಶಾಲೆಯಲ್ಲೂ ‘ಅನುಶ್ರೀ ಗೆಟ್ ಔಟ್’ ಎಂದು ಸಾಕಷ್ಟು ಬಾರಿ ಹೇಳಿಸಿಕೊಂಡಿದ್ದೀನಿ. ಅದಕ್ಕೇ ನನ್ನ ಯಾವತ್ತೂ ಶಾಲೆಯಲ್ಲಿ ‘ಮುಖ್ಯಮಂತ್ರಿ’ ಮಾಡ್ತಿರ್‍್ಲಿಲ್ಲ. ಏನು ಬೇಕಾದ್ರೂ ಬಿಡ್ತೀನಿ. ಮಾತು ಮಾತ್ರ ಬಿಡಕ್ಕಾಗಲ್ಲ. ಮೌನ ವೃತ ಸಾಧ್ಯವೇ ಇಲ್ಲ.

* ನಿಮ್ಮ ಇಷ್ಟ ಕಷ್ಟಗಳು?
ಸಿನಿಮಾ ನೋಡೋದೆಂದ್ರೆ ತುಂಬ ಇಷ್ಟ. ಒಬ್ಳೇ ಆದ್ರೂ ಹೋಗ್ತೀನಿ. ಡಾನ್ಸ್ ಇಷ್ಟ. ಎಲ್ಲಕ್ಕಿಂತ ಹೆಚ್ಚಾಗಿ ತಿಂಡಿಪೋತಿ. ಕಾಲೇಜಲ್ಲಿದ್ದಾಗ ‘ಫೈವ್ ಕೋರ್ಸ್ ಮೀಲ್ ಅನುಶ್ರೀ’ ಎಂದೇ ಪ್ರಸಿದ್ಧ. ರೋಟಿ, ಅನ್ನ–ಸಾಂಬಾರು, ಅನ್ನ–ಮೊಸರು, ನಂತರ ಪಲ್ಯ ಊಟ, ಕೊನೇಲಿ; ಅರುಣಣ್ಣ ಅಂತ ಒಬ್ರಿದ್ರು, ಅವರು ಕಲಸಿ ಕೊಡುವ ಅನ್ನ. ಇಷ್ಟಿಲ್ದೇ ಅನು ಊಟ ಮುಗೀತಿರ್ಲಿಲ್ಲ. ಮಾಂಸಾಹಾರ ಸಖತ್ ಇಷ್ಟ. ಮನೆಗೆ ಹೋಗ್ತೀನಿ ಅಂದ್ರೆ ವಿಮಾನ ನಿಲ್ದಾಣದಿಂದಲೇ ಅಮ್ಮಂಗೆ ಫೋನ್, ಅಮ್ಮಾ ಫಿಷ್ ರೆಡಿನಾ ಅಂತ. ಎಷ್ಟಂದ್ರೂ ಮಂಗಳೂರು ಹುಡುಗಿ ಅಲ್ವಾ...

* ತುಂಬ ಪ್ರೀತ್ಸೋದು, ತುಂಬ ಹೇಟ್ ಮಾಡೋದು?
ತುಂಬ ಪ್ರೀತ್ಸೋದು ಅಮ್ಮನ್ನ. ಸಲ್ಮಾನ್ ಖಾನ್ ಮದುವೆ ಆಗ್ತಾರೆ ಅಂದ್ರೆ ತುಂಬ ಹೇಟ್ ಮಾಡ್ತೀನಿ. ಅವರ ಬಗ್ಗೆ ತುಂಬಾನೇ ಪೊಸೆಸಿವ್ ಆಗಿದೀನಿ. ಅವರು ಯಾರ ಜೊತೆಗಾದ್ರೂ ಡೇಟಿಂಗ್ ಮಾಡ್ತಿದಾರೆ ಅಂದ್ರೆ ಥಟ್ಟಂತ ಅಂತರ್ಜಾಲದಲ್ಲಿ ಆ ಹುಡುಗಿ ಜಾತಕ ಜಾಲಾಡ್ತೀನಿ. ಆಮೇಲೆ ‘ಓ ಇಷ್ಟೇನಾ’ ಅಂತ ಸಮಾಧಾನ ಆಗ್ತೀನಿ.

* ‘ಬೆಂಕಿಪಟ್ಣ’ ನಿಮ್ಮನ್ನ ಕಾಡಿತ್ತಂತೆ?
ಹೌದು. ಕಥೆ ತುಂಬಾನೇ ಇಷ್ಟ ಆಯ್ತು. ನಂಗೆ ಹಳೇ ಸಿನಿಮಾ ಅಂದ್ರೆ ಇಷ್ಟ. ಈ ಚಿತ್ರ ನನ್ನಲ್ಲಿ ಹಳೇ ಚಿತ್ರಗಳ ಭಾವವನ್ನು ಮರುಕಳಿಸುವಂತೆ ಮಾಡಿತು. ನಾನಿಲ್ಲಿ ಪಾ(ವ)ನಿ ಎಂಬ ಬಜಾರಿ ಹುಡುಗಿ. ಯಾವಾಗ್ಲೂ, ಎಲ್ರಿಗೂ ಬೈತೀನಿ-ಹೊಡಿತೀನಿ. ನೀವು ನನ್ನ ಕೈಯಲ್ಲಿ ಕತ್ತಿ, ಕಣ್ಣಲ್ಲಿ ನೀರು ಎರಡನ್ನೂ ನೋಡ್ತೀರಿ. ಭಲೇ ಘಾಟಿ ಆದ್ರೂ ಒಳ್ಳೆ ಮನಸು, ತುಂಟತನ ಆಕೆಗಿದೆ. ನವರಸಗಳನ್ನೂ ತೋರಿಸುವಂಥ ಪಾತ್ರ ಪಾನಿ. ಷೋಗಳಲ್ಲಿ ನಗೋಳು ಇಲ್ಲಿ ಅಳ್ತೀನಿ.

* ‘ಬೆಂಕಿಪಟ್ಣ’ದಲ್ಲಿ ನೀವು ಕಿಡಿ ಹೊತ್ತಿಸ್ತೀರಾ?
ಅದನ್ನ ಹೇಳೋಕೋದ್ರೆ ಇಡೀ ಸಿನಿಮಾ ಕಥೆನೇ ಗೊತ್ತಾಗಿಬಿಡುತ್ತೆ. ಅದಕ್ಕೇ ಬೇಡ. ಆದರೆ ಸಿನಿಮಾ ಅಂತೂ ಕಿಡಿ ಹೊತ್ತಿಸುತ್ತೆ. ಈ ಬೆಂಕಿ ಪಟ್ಣದಲ್ಲಿ ನಾವೆಲ್ಲ ಒಂದೊಂದು ಬೆಂಕಿ ಕಡ್ಡಿ ರೀತಿ. ನಿರ್ದೇಶಕ ಟಿ.ಕೆ.ದಯಾನಂದ್ ಕಡ್ಡಿ
ಗೀರೋರು.

* ‘ಅನುಶ್ರೀ ಪಟ್ಣ’ ಹೆಂಗಿದೆ?
ತುಂಬಾನೇ ಚೆನ್ನಾಗಿದೆ. ‘ಚಿನ್ನದ ಬೇಟೆ’ ಷೋ ಮುಗೀತು. ಅರುಣ್ ಸಾಗರ್ ಜೊತೆ ‘ಭಂಗಿರಂಗ’ (‘ರಿಂಗ್ ಮಾಸ್ಟರ್’ ಶೀರ್ಷಿಕೆ ಬದಲಾಗಿದೆ) ಅಂತ ಒಂದ್ ಸಿನಿಮಾ ಮಾಡಿದೀನಿ. ಕನಿಷ್ಠ ತಿಂಗಳ ಮಟ್ಟಿಗಾದರೂ ಮತ್ತೆ ಯಾವ ಷೋಗಳೂ ಇಲ್ಲ. ‘ಬೆಂಕಿಪಟ್ಣ’ ಡಿಸೆಂಬರ್‌ನಲ್ಲಿ ಬಿಡುಗಡೆ ಆಗುತ್ತೆ. ಅದರ ಪ್ರಚಾರ ಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಳ್ಳುವ ಸಲುವಾಗಿ ಈ ನಿರ್ಧಾರ. ಉಳಿದಂತೆ ಜೀವನ ಚೆನ್ನಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT