ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನು ಹ್ಯಾಟ್ರಿಕ್

Last Updated 5 ಮೇ 2016, 19:30 IST
ಅಕ್ಷರ ಗಾತ್ರ

‘ಲೈಫು ಸೂಪರ್‌ ಚಿತ್ರದಲ್ಲಿ ಇಬ್ಬರು ನಾಯಕಿಯರು, ‘ಪಾನಿಪುರಿ’ಯಲ್ಲಿ ಮೂವರು, ‘ಕರ್ವಾ’ದಲ್ಲೂ ಇಬ್ಬರು ನಾಯಕಿಯರು. ಆದರೆ ಈ ಚಿತ್ರದಲ್ಲಿ ನಾನೇ ನಾಯಕ–ನಾಯಕಿ’– ಇದು ನಟಿ ಅನು ಆತ್ಮವಿಶ್ವಾಸದ ಮಾತು. ಚಿತ್ರರಂಗಕ್ಕೆ ಕಾಲಿಟ್ಟ ಕಡಿಮೆ ಅವಧಿಯಲ್ಲಿಯೇ ನಾಲ್ಕು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಈ ಕೊಡಗಿನ ಕುವರಿ.
ಎಲ್ಲರೊಳ
ಗೊಂದಾಗು ಎನ್ನುವಂಥ ಪಾತ್ರಗಳಲ್ಲಿ ನಟಿಸುತ್ತಿದ್ದ ಅನು, ಈಗ ಪೂರ್ಣ ಪ್ರಮಾಣದ ನಾಯಕಿ. ಅದು ಅನೂಫ್ ಆ್ಯಂಟನಿ ನಿರ್ದೇಶನದ ‘ಕಥಾ ವಿಚಿತ್ರ’ ಚಿತ್ರದ ಮೂಲಕ. ಈ ಹೆಜ್ಜೆಯ ಮೂಲಕ ಚಿತ್ರದಿಂದ ಚಿತ್ರಕ್ಕೆ ತಮ್ಮ ಪಾತ್ರಗಳನ್ನು ಅವರು ಹಿರಿದಾಗಿಸಿಕೊಳ್ಳುತ್ತಿದ್ದಾರೆ.

ಮೂಲತಃ ಕೊಡಗಿನ ವಿರಾಜಪೇಟೆಯ ಅನು, ಚಿತ್ರರಂಗಕ್ಕೆ ಆಕಸ್ಮಿಕವಾಗಿ ಪ್ರವೇಶ ಪಡೆದವರು. ಮಂಗಳೂರು ಮತ್ತು ಕೊಡಗಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸುವಾಗ ಚಿತ್ರರಂಗಕ್ಕೆ ಕಾಲಿಡುವ ಆಸೆಗಳನ್ನು ದೊಡ್ಡದಾಗಿ ಕಟ್ಟಿಕೊಂಡಿರಲಿಲ್ಲ. ಆದರೆ  ಬೆಂಗಳೂರಿಗೆ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದಾಗ ಸಿನಿಮಾಗಳಲ್ಲಿ ನಟಿಸುವಂತೆ ಆಹ್ವಾನ ಬಂದಿತು.

ಆಗ ಸಿನಿಮಾದಲ್ಲಿ ಕನಸುಗಳನ್ನು ಕಟ್ಟಲು ಇಡೀ ಕುಟುಂಬವನ್ನೇ ಬೆಂಗಳೂರಿಗೆ ಕರೆಯಿಸಿಕೊಂಡರು. ‘ಲೈಫು ಸೂಪರ್‌’ ಹೆಸರಿನ ಚಿತ್ರದ ಮೂಲಕ ಅವರ ಅವರ ಚಿತ್ರರಂಗದ ಲೈಫು ಸಹ ಆರಂಭವಾಯಿತು.

‘ಈ ಹಿಂದಿನ ಮೂರು ಚಿತ್ರಗಳಲ್ಲಿ ಎಲ್ಲರೊಳಗೊಬ್ಬಳು ಎನ್ನುವಂತಾಗಿದ್ದೆ. ಆದರೆ ಕಥಾ ವಿಚಿತ್ರದಲ್ಲಿ ನಾನು ಪೂರ್ಣ ಪ್ರಮಾಣದ ನಾಯಕಿ. ನಾನು ನಟಿಸಿರುವ ಮೂರು ಚಿತ್ರಗಳೂ ಬಿಡುಗಡೆಯ ಹಂತದಲ್ಲಿವೆ. ಒಂದೊಂದು ಬೇರೆಯದ್ದೇ ಆದ ಚಿತ್ರಗಳು’ ಎಂದು ಸಿನಿಮಾ ಸಾಂಗತ್ಯವನ್ನು ಅನು ನೆನಪಿಸಿಕೊಳ್ಳುತ್ತಾರೆ.

‘ಕಥಾ ವಿಚಿತ್ರ’ ಮಹಿಳಾ ಪ್ರಧಾನ ಚಿತ್ರ. ಇಲ್ಲಿ ಅವಕಾಶ ಸಿಕ್ಕಿರುವುದು ತಮ್ಮ ವೃತ್ತಿ ಬದುಕಿನ ತಿರುವಿಗೆ ಕಾರಣವಾಗಲಿದೆ ಎನ್ನುವ  ನಂಬಿಕೆ ಅವರದು. ‘ಇದು ವಿಶಿಷ್ಟವಾದ ಹಾರರ್ ಕಥೆ. ಆದರೆ ಮಧ್ಯಂತರದವರೆಗೂ ಇದು ಹಾರರ್ ಚಿತ್ರ ಎಂದು ಗೊತ್ತಾಗುವುದೇ ಇಲ್ಲ’ ಎಂದು ಕಥಾ ವಿಚಿತ್ರದ ವಿಚಿತ್ರಗಳನ್ನು ಬಣ್ಣಿಸುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಹುಡುಕುತ್ತಲೇ ಅನು ಪರಭಾಷೆಯತ್ತಲೂ ನೋಟ ಬೀರಿದ್ದಾರೆ. ಈಗಾಗಲೇ ಪರಭಾಷೆಯ ನಿರ್ದೇಶಕರ ಎದುರು ಆಡಿಶನ್ ಎದುರಿಸಿ ಬಂದಿದ್ದಾರೆ. ಎಲ್ಲೆಡೆಯೂ ತಮಗೆ ಅವಕಾಶಗಳು ಸಿಕ್ಕರೆ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಉತ್ಸಾಹ ಅವರದು.

ನಾಲ್ಕು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಅನು ಅವರಿಗೆ, ಈಗ ಮತ್ತೆರಡು ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಅವಕಾಶ ಸಿಕ್ಕಿದೆ. ‘ಕಥಾ ವಿಚಿತ್ರ’ದ ಅವರಿಗೆ ಹೆಚ್ಚು ನಿರೀಕ್ಷೆಗಳಿವೆ. ‘ಇದು ನನ್ನ ಅಭಿನಯವನ್ನು ಪೂರ್ಣವಾಗಿ ಹೊರತೆಗೆದಿರುವ ಚಿತ್ರ. ಮಹಿಳಾ ಪ್ರಧಾನ ಚಿತ್ರವಾದ್ದರಿಂದ ನನಗೆ ತೆರೆಯಲ್ಲಿ ಹೆಚ್ಚು ಸ್ಥಾನವಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT