ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನ

ಕತೆ
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಐದೋ ಆರೋ ಕ್ಲಾಸ್ ಇರಬೇಕು ಆಗ. ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಬೆಲ್ ಹೊಡೆದಾಗ ಅಕ್ಕ ತಮ್ಮ ಇಬ್ಬರೂ ಮನೆಗೆ ಓಡಿಬಂದರು. ಅವ್ವ ಯಾರದೋ ಹೊಲಕ್ಕೆ ಕೂಲಿಗೆ ಹೋಗಿದ್ದಳು. ಅಲ್ಲೇ ಚಪ್ಪರದ ಸಂದಿಯಲ್ಲಿ ಸಿಕ್ಕಿಸಿದ್ದ ಬೀಗದ ಕೈ ಹುಡುಕಿ ಬೀಗ ತೆಗೆದು ಒಳಗೆ ಹೋದವರೇ ಮನೆಯೆಲ್ಲಾ ಹುಡುಕಿದರು. ಅಟ್ಟದ ಮೇಲೆ ಸೀರೆಯಲ್ಲಿ ಸುತ್ತಿಟ್ಟಿದ್ದ ತಪ್ಪಲೆ ಕಣ್ಣಿಗೆ ಬಿದ್ದ ಕೂಡಲೇ ‘ಅಕ್ಕಾ’ ಎಂದು ಕಿರುಚಿದ ಸಿದ್ಧನ ಬಾಯಿಮೇಲೆ ಒಂದು ಬಿಟ್ಟಳು ಚೆನ್ನಿ.

ಅವಳು ಕೊಂಚ ಉದ್ದವಿದ್ದುದರಿಂದ ಅಟ್ಟದ ಮೇಲಿದ್ದ ತಪ್ಪಲೆ ತೆಗೆಯುವುದು ಕಷ್ಟವಾಗಲಿಲ್ಲ. ತಪ್ಪಲೆ ಕೆಳಗಿಳಿದ ತಕ್ಷಣ ಅದಕ್ಕೆ ಕಟ್ಟಿದ್ದ ಸೀರೆಯನ್ನು ಹುಷಾರಾಗಿ ಬಿಚ್ಚಿ ಮುಚ್ಚಳ ತೆಗೆದು, ಕೈಹಾಕಿ ಹಿಡಿ ಅನ್ನವನ್ನು ತಮ್ಮನಿಗೆ ಕೊಟ್ಟಳು. ಇನ್ನೊಂದು ಹಿಡಿಯನ್ನು ತಾನು ಗಬಗಬ ತಿನ್ನತೊಡಗಿದಳು. ‘ಅಕ್ಕಾ ಸಾರೈತೇನೋ ನೋಡನ’ ಅಂದ ಸಿದ್ದ. ‘ಏ.. ಸುಮ್ನೆ ತಿನ್ನು ಸೊಸೈಟಿ ಅಕ್ಕಿ ಅನ್ನ ಕಮ್ಮಗೈತೆ; ಸಾರು ಗೀರು ಅಂತ ಹುಡಿಕ್ಕಂಡು ಕೂತ್ಕಂಡ್ರೆ ಅಪ್ಪ ಬಂದ್ಬುಡ್ತದೆ.

ಅವ್ವ ಅಪ್ಪಂಗೆ ಅಂತ ಮಡ್ಗಿರದು ಅನ್ನಾನ’ ಅಂದು ತಿಂದು ಮುಗಿಸಿ ಲಂಗಕ್ಕೆ ಕೈ ಒರೆಸಿಕೊಂಡಳು. ಸಿದ್ಧ ತನ್ನ ಸಣ್ಣ ಬಾಯಿಯ ತುಂಬ ಅನ್ನ ತುಂಬಿಕೊಂಡು ಅಕ್ಕನ್ನೇ ನೋಡುತ್ತಾ ಕೂತ. ಅವಳು ತಪ್ಪಲೆ ಮುಚ್ಚಳ ಅಲ್ಲಾಡಿಯೇ ಇಲ್ಲವೇನೋ ಅನ್ನುವಂತೆ ಮುಚ್ಚಿ ಸೀರೆಯನ್ನು ಅವ್ವನಂತೆಯೇ ಕಟ್ಟುವುದು ಹೇಗೆ ಅಂತ ತಲೆಕೆಡಿಸಿಕೊಂಡಿದ್ದಳು.

ಅಷ್ಟರಲ್ಲಿ ‘ಯಾಕ್ರಲಾ ಸ್ಕೂಲಿಗೋಗಿಲ್ವಾ..?’ ಅಂತ ಪ್ರಶ್ನೆಯೊಂದು ಬಾಗಿಲಿಂದ ಬರುತ್ತಿದ್ದಹಾಗೇ ಸಿದ್ಧನ ಬಾಯಲ್ಲಿದ್ದ ಅನ್ನವೆಲ್ಲಾ ಒಳಗೆ ಹೋಗಲೂ ಆಗದೆ, ಹೊರಗೆ ಬರಲೂ ಆಗದೆ ಸಿಕ್ಕಿಹಾಕಿಕೊಂಡಿತ್ತು. ಅಪ್ಪನಿಗೆ ಪರಿಸ್ಥಿತಿಯಲ್ಲಾ ಅರ್ಥವಾಗಿತ್ತು. ಒಳಗೆ ಬಂದವನೇ ಒಂದೂ ಮಾತಾಡದೆ ತಟ್ಟೆ ತೆಗೆದುಕೊಂಡು ತಪ್ಪಲೆಯಲ್ಲಿದ್ದ ಅನ್ನವನ್ನು ಮೂರು ಭಾಗ ಮಾಡಿ ಲೋಟದಲ್ಲಿದ್ದ  ಕೈಗೊಜ್ಜು ಹಾಕಿ ಕಲೆಸಿ ಇಬ್ಬರಿಗೂ ತಿನ್ನಲು ಕೊಟ್ಟು ತಾನೂ ತಿಂದು ‘ಸ್ಕೂಲಿಗೋಗ್ರಲೇ ಬೆಲ್ಲಾತದೆ; ಬೈದಾರು ಮೇಷ್ಟ್ರು’ ಅಂದವನೇ ಹಿತ್ತಲಿಗೆ ಹೋದ.

ಅಪ್ಪನ ಕಣ್ಣಲ್ಲಿ ಅದೆಂಥದೋ ಸಂಕಟ ಕಂಡಿದ್ದ ಚೆನ್ನಿ ಶಾಲೆಗೆ ಹೋಗುವ ದಾರಿಯಲ್ಲಿ ಸಿದ್ಧನಿಗೆ ಕೇಳಿದಳು: ‘ಅಪ್ಪನೂ ಅಳ್ತದೆ ಗೊತ್ತಾ ನಿಂಗೆ..?’. ಅವ್ವ ಅಳುವುದನ್ನು ಕಂಡಿದ್ದ ಸಿದ್ಧ– ‘ಅಪ್ಪ ಅಳಲ್ಲ ಕಣಕ್ಕೋ... ಅವುನ್ಗೆ ಮೀಸೆ ಐತೆಲ್ಲಾ... ಕಣ್ಗೆ ದೂಳೇನಾದ್ರು ಬಿದ್ದಿತ್ತೇನೋ...’ ಅಂದ. ಎದುರಿಗಿದ್ದ ಬಿರಿಯಾನಿಯ ಭಾಸುಮತಿ ಅಕ್ಕಿ ವಾಸನೆ ಮೂಗಿಗೆ ಬಡಿಯುತ್ತಲೇ ನೆನಪಾದ ಬಾಲ್ಯದ ಘಟನೆಯನ್ನು ಗಂಟಲಲ್ಲೇ ಉಳಿಸಿಕೊಂಡು ಸಂಕಟಪಡುತ್ತಿದ್ದ ಸಿದ್ಧರಾಜುವಿನ ಮುಂಗೈ ಮೇಲೆ ಮೆಲ್ಲಗೆ ತಟ್ಟಿದಳು ಕುಸುಮ.

‘ಯಾಕ್ರೀ ಒಂಥರಾ ಇದೀರಾ? ಬಿರಿಯಾನಿ ನಿಮಗೆ ಇಷ್ಟ ಅಂತ ಇಲ್ಲಿಗೆ ಕರ್ಕೊಂಡು ಬಂದಿದ್ದು, ಬೇಡ ಅಂದ್ರೆ ಬೇರೆ ಕಡೆ ಹೋಗೊಣ’ ಅಂದಳು. ‘ಹಾಗೇನಿಲ್ಲ... ಏನೋ ನೆನಪಾಯ್ತು ಕಣ್ರೀ’ ಅಂದವನೇ ಬಿರಿಯಾನಿಯ ತಟ್ಟೆಯನ್ನು ಮೂಗಿನ ಹತ್ತಿರ ತೆಗೆದುಕೊಂಡು ಒಂದು ಸಲ ಆಘ್ರಾಣಿಸಿ ಗಬಗಬ ತಿನ್ನತೊಡಗಿದ. ಕುಸುಮ ಅವನನ್ನೇ ನೋಡುತ್ತ ರೋಟಿ ದಾಲ್ ತಿನ್ನತೊಡಗಿದಳು.

ಕುಗ್ರಾಮವೊಂದರಲ್ಲಿ ಹುಟ್ಟಿ ಏನೆಲ್ಲಾ ಕಷ್ಟಪಟ್ಟು ಓದಿ ಎಂ.ಎ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಿದ್ಧರಾಜನಿಗೆ ಈ ದೊಡ್ಡ ಜಾತಿಯ ಶ್ರೀಮಂತರ ಹುಡುಗಿ ಕುಸುಮ ಗಂಟುಬಿದ್ದದ್ದು ಸೋಜಿಗವೇ. ಅದನ್ನು ಬರೆಯಹೊರಟರೆ ಇನ್ನೊಂದು ಕತೆಯಾಗಿಬಿಡುತ್ತದೆ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಸಮಾಜಶಾಸ್ತ್ರ ಎಂ.ಎ. ಓದುತ್ತಿರುವ ಸಿದ್ಧರಾಜುವಿನ ಸಹಪಾಠಿ ಈ ಕುಸುಮ. ಒಂದು ವರ್ಷದಲ್ಲಿ ಅವನಿಗೆ ಸಿಕ್ಕ ಏಕೈಕ ಗೆಳತಿ ಇವಳು.

ಹಾಸ್ಟೆಲಿನ ಗೆಳೆಯರಿಂದಲೂ ತನ್ನ ಅಂತರ್ಮುಖಿ ಗುಣದಿಂದ ಅವಜ್ಞೆಗೆ ಒಳಗಾದ ಸಿದ್ಧ ಕುಸುಮಳ ಜೊತೆ ಓಡಾಡತೊಡಗಿದಂದಿನಿಂದ ಎಲ್ಲ ಹುಡುಗರ ಪಾಲಿನ ವಿಲನ್ ಆಗಿಬಿಟ್ಟಿದ್ದ. ಅವನು ಅನ್ನವನ್ನು ತಿನ್ನುವ ಶೈಲಿಯಿಂದಲೇ ಸೆಳೆತಕ್ಕೊಳಗಾಗಿದ್ದ ಕುಸುಮ ವಾರಕ್ಕೊಮ್ಮೆ ಅವನಿಗಿಷ್ಟವಾದ ಬಿರಿಯಾನಿ ಕೊಡಿಸುತ್ತಿದ್ದಳು. ಅವಳಿಗೆ ತನ್ನ ಮೇಲಿರುವುದು ಅನುಕಂಪವೋ ಸೆಳೆತವೋ ಸ್ನೇಹವೋ ಯೋಚಿಸುವ ಗೋಜಿಗೇ ಹೋಗದ ಸಿದ್ಧ ಒಂಥರಾ ಮಂತ್ರ ಹಾಕಿದವನಂತೆ ಅವಳು ಕರೆದಲ್ಲೆಲ್ಲ ಹೋಗಿಬಿಡುತ್ತಿದ್ದ.

‘ಯಾಕ್ರೀ ನಿಮಗೆ ಅನ್ನ ಅಂದ್ರೆ ಅಷ್ಟೊಂದು ಇಷ್ಟ..?’ ಅಂತ ಕೇಳಿದವಳಿಗೆ ‘ಹುಟ್ದಾಗಿಂದ ಮುದ್ದೆ ತಿಂದು ತಿಂದು ಬೇಜಾರಾಗ್ಬುಟ್ಟಿದೆ ಕುಸುಮಾ ಅವ್ರೇ... ಅನ್ನ ಅಂದ್ರೆ ಇಷ್ಟ ಏನೂ ಅಲ್ಲ; ಹಳ್ಳಿಬಿಟ್ಟು ಸಿಟಿಗೆ ಬಂದು ಮುದ್ದೆ ಮುದ್ದೆ ಅಂತ ಜಪ ಮಾಡೋ ಹಿಪೋಕ್ರೈಟ್‌ಗಳ ಮುಂದೆ ಒಂದು ವರ್ಷಕ್ಕಾಗುವಷ್ಟು ಅನ್ನಾನ ಗಬಗಬಾಂತ ತಿಂದುಬಿಡಬೇಕು ಅನ್ಸುತ್ತೆ’ ಅಂದು ಎತ್ತಲೋ ನೋಡುತ್ತಾ ನಿಂತುಬಿಟ್ಟ ಸಿದ್ಧ ಅವಳಿಗೆ ವಿಚಿತ್ರವಾಗಿ ಅರ್ಥವಾಗದವನ ಹಾಗೆ ಕಂಡ. ಅಲ್ಲ ಅವರಿಗ್ಯಾರಿಗೋ ಮುದ್ದೆ ಇಷ್ಟ ಆದ್ರೆ ಇವನ್ಯಾಕೆ ಅನ್ನ ಅಂದ್ರೆ ಸಾಯೋಹಂಗೆ ಆಡ್ಬೇಕು? ಅಂದುಕೊಂಡಿದ್ದಳು ಕುಸುಮಾ.

ಬಿರಿಯಾನಿ ತಿಂದು ಮುಗಿಸಿ ಕುಸುಮಾ ಸ್ಕೂಟಿಯಲ್ಲಿ ಚಿಕ್ಕ ಹುಡುಗನ ಥರಾ ಕೂತ ಸಿದ್ಧ ಒಂದಷ್ಟು ದೂರ ಹೋದಮೇಲೆ ಏನೋ ನೆನಪಾದವನಂತೆ ‘ಒಂದ್ ಸ್ವಲ್ಪ ಗಾಡಿ ನಿಲ್ಲಿಸ್ತೀರಾ?’ ಅಂದ. ನಿಲ್ಲಿಸಿದಳು. ‘ನೀವು ನಡೀರಿ, ನಾನು ಹಾಸ್ಟೆಲ್ಲಿಗೆ ಹೋಗ್ತೀನಿ; ಇಲ್ಲೇ ಬಸ್ ಸಿಗುತ್ತೆ’ ಅಂದು ಅವಳ ಉತ್ತರಕ್ಕೆ ಕಾಯದೇ ನಡೆದೇಬಿಟ್ಟ. ಕುಸುಮಾ ಅವನನ್ನು ತಡೆದು ನಿಲ್ಲಿಸಲೂ ಅನುವು ಕೊಡದೆ ಹೋದವನ ದಾರಿಯನ್ನೇ ದಿಟ್ಟಿಸಿ ಒಂದು ನಿಟ್ಟುಸಿರು ಬಿಟ್ಟು ಸ್ಕೂಟಿಯ ಆಕ್ಸಿಲೇಟರ್ ರೈಸ್ ಮಾಡಿದಳು.

ಸಿದ್ಧರಾಜು ಮೆಜೆಸ್ಟಿಕ್ ತಲುಪಿದಾಗ ಮಧ್ಯಾಹ್ನ ನಾಲ್ಕಾಗಿತ್ತು. ಊರಿನ ಬಸ್ ಹತ್ತಿ ಕೂತವನ ತಲೆಯಲ್ಲಿ ಬೆಳಗ್ಗೆ ಫೋನಲ್ಲಿ ಮಾತಾಡಿದ್ದ ಅಕ್ಕ ಚೆನ್ನಮ್ಮನ ಮಾತುಗಳೇ ಅನುರಣಿಸುತ್ತಿದ್ದವು. ಅಪ್ಪನ ಕುಡಿತ-ಗಸೆ, ತಮ್ಮನ ಬೇಜವಾಬ್ದಾರಿ, ಅವ್ವನ ಅಸಹಾಯಕತೆ ಜೊತೆಗೆ ಅವಳ ಗಂಡ-ಮಕ್ಕಳ ನೂರು ಸಮಸ್ಯೆಗಳನ್ನು ಹೇಳದೆ ಬಿಡಲಿಲ್ಲ.

ಅಪ್ಪನ ಗಸೆ ಹೆಚ್ಚಾಗಿ ಸತ್ತೋಗೋ ಸ್ಥಿತಿಯಲ್ಲಿದ್ದು, ತಾನು ಹೋಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಗಂಡ ಒಪ್ಪದೆ, ತಮ್ಮನೂ ಊರುಬಿಟ್ಟು ವಾರವಾಗಿ... ಇಂಥವೇ ನೂರು ಸಮಸ್ಯೆ... ಮೇಗಳ ಕೇರಿಯ ಭೈರೇಗೌಡಣ್ಣಯ್ಯನ ಕೈಲಿ ಅವ್ವ ಹೇಳಿ ಕಳಿಸಿದ್ದಕ್ಕಿಂತ ಎರಡರಷ್ಟು ಹೇಳಿ ‘ಎಲ್ಲಾ ಬಿಟ್ಟು ಇನ್ನೂ ಓದ್ಕಂಡು ಪೇಟೇಲಿದ್ಯಲ್ವಾ ಏನು ಅನ್ಸಲ್ವಾ ನಿಂಗೆ.. ಅಪ್ಪಾ ಸತ್ಮೇಲೆ ಓತ್ಯಾ ಊರ್ಗೆ?’ ಅಂದು ಫೋನಿಟ್ಟಿದ್ದಳು. ತಾನು ಊರು ತಲುಪುವಷ್ಟರಲ್ಲಿ ಅಪ್ಪ ಸತ್ತೇ ಹೋಗಿರ್ತಾನೇನೋ ಅಂತ ಭಯವಾಯಿತು ಸಿದ್ಧನಿಗೆ. ತಮ್ಮನ ಗೆಳೆಯನೊಬ್ಬನಿಗೆ ಪೋನ್ ಮಾಡಿ ಕೇಳಿದ. ‘ನನಗೂ ಸಿಕ್ಕಿಲ್ಲ ಒಂದ್ ವಾರ ಆಯ್ತು ಕಣಣ್ಣಾ’ ಅಂದ ಅವನು.

ಯೋಚನೆಗಳ ನಡುವೆಯೇ ಕಳೆದುಹೋದವನ ತಲೆಯಲ್ಲಿ ಇವತ್ತೋ ನಾಳೆನೋ ಬೀಳೋಹಾಗಿರುವ ಇಂದಿರಾ ಅವಾಸ್ ಮನೆ, ಅಕ್ಕನ ದುರಹಂಕಾರಿ, ಸೋಂಬೇರಿ ಗಂಡ, ಬೇಜವಾಬ್ದಾರಿ ತಮ್ಮ, ಯೂನಿವರ್ಸಿಟಿಯ ತರಗತಿ ಕೊಠಡಿ, ಹಾಸ್ಟೆಲ್ಲಿನ ಅನ್ನ, ಕುಸುಮಾ, ಅವಳು ಕೊಡಿಸೋ ಘಮ್ಮೆನ್ನುವ ಬಿರಿಯಾನಿ, ತಾನು ಮುಂದಿನವಾರ ಮಂಡಿಸಲಿರುವ ಅಂಬೇಡ್ಕರ್ ಬಗೆಗಿನ ಸೆಮಿನಾರ್ ಪೇಪರ್... ಏನೇನೋ ಬಿಚ್ಚಿಕೊಂಡು ಕಣ್ಣಲ್ಲಿ ನೀರು ತೊಟ್ಟಿಕ್ಕುವುದಕ್ಕೂ ಬಸ್ಸು ಊರಿನ ಬಸ್ ಸ್ಟಾಂಡಿನಲ್ಲಿ ನಿಲ್ಲುವುದಕ್ಕೂ ಸರಿಯಾಯಿತು.

ಆತಂಕವೇ ತಾನಾಗಿ ಮನೆಯ ಬಾಗಿಲಿಗೆ ಬಂದವನ ಮೂಗಿಗೆ ಘಮ್ಮೆನ್ನುವ ಕೋಳಿಸಾರು ವಾಸನೆ ಬಡಿದು ಸಾಲದಲ್ಲಿ ಕೊಡಿಸಿದ್ದ ಟೀವಿಯಲ್ಲಿ ರಂಗೋಲಿ ಧಾರಾವಾಹಿ ಓಡುತ್ತಿತ್ತು. ಮೂಲೆಯಲ್ಲಿ ರಗ್ಗು ಹೊದ್ದುಕೊಂಡು ಕೆಮ್ಮುತ್ತಾ ಟೀವಿ ನೋಡುತ್ತಿದ್ದ ಅಪ್ಪನ ತಟ್ಟೆಗೆ ಅವ್ವ ಕೋಳಿಸಾರು ಹಾಕುತ್ತಿದ್ದಳು. ತಟ್ಟೆಯ ಪಕ್ಕದಲ್ಲಿದ್ದ ಲೋಟದಿಂದ ಬರುತ್ತಿದ್ದ ಸಾರಾಯಿಯ ಕೌಸು ವಾಸನೆ ಕೋಳಿಸಾರಿನ ವಾಸನೆಯೊಂದಿಗೆ ಸೇರಿ ವಿಚಿತ್ರ ವಾಸನಾ ಪ್ರಪಂಚವೊಂದನ್ನು ನಿಧಾನಕ್ಕೆ ಸೃಷ್ಟಿಸುತ್ತಿತ್ತು.

ಒಳಗೆ ಬಂದವನೇ ‘ಎಂಗಿದ್ಯಪ್ಪಾ...? ಮಾತ್ರೆ ತಗಂಡಾ..?’ ಅಂದ. ಅಪ್ಪ ಕೆಮ್ಮು ಜಾಸ್ತಿ ಮಾಡಿಕೊಂಡು ‘ಯಾವ್ ಮಾತ್ರೆನಪಾ... ಯಾರ್ ಕೊಡುಸುದ್ರು..? ಒಂದ್ ವಾರ ಆಗದೆ ಮಾತ್ರೆ ಮುಗ್ದು... ಕೆಮ್ಮು ಬಂದ್ರೆ ಸಾಯಂಗೆ ಆತದೆ. ನನ್ ಬಗ್ಗೆ ಯಾರ್ ತಲೆ ಕೆಡುಸ್ಕಂತರಪ್ಪಾ...’ ಅಂದು ತಟ್ಟೆಯಲ್ಲಿದ್ದ ಕೋಳಿಸಾರನ್ನು ಸೊರ್ ಅಂತ ಎಳೆದುಕೊಂಡ.

ಅಕ್ಕ ಚೆನ್ನಿ ಫೋನಲ್ಲಿ ಹೇಳಿದ ಯಾವ ಸೂತಕದ ಲಕ್ಷಣವೂ ಕಾಣದ ಮನೆಯಲ್ಲಿ ಲಗುಬಗೆಯಿಂದ ಓಡಾಡುತ್ತಿದ್ದ ಅವ್ವ ತಟ್ಟೆತುಂಬಾ ಹೊಗೆ ಆಡೋ ಅನ್ನ ತುಂಬ್ಕಂಡು ಅದರ ಮೇಲೆಲ್ಲಾ ಕೋಳಿಸಾರು ಹಾಕಿ ಮುಂದಿಟ್ಟಾಗ, ‘ಏನವ್ವಾ ಅಕ್ಕಾ ಫೋನ್ ಮಾಡಿ ಏನೇನೋ ಅಂತಿದ್ಲು... ನೀವ್ ನೋಡುದ್ರೆ ಗಂಡ-ಹೆಂಡ್ತಿ ಒರುಸ್ದೊಡ್ಕು ಮಾಡಿರಂಗದೆ’ ಅಂದ.

ಸಾರಿನ ಬಟ್ಟಲಲ್ಲಿ ತೇಲುತ್ತಿದ್ದ ಚರಬಿ ತುಂಡೊಂದನ್ನು ಇವನ ತಟ್ಟೆಗೆ ಹಾಕುತ್ತಾ– ‘ಅಯ್ಯೋ ನಾನೇ ನೆನ್ನೆ ಆ ಮೇಗಳ ಕೇರಿ ಭೈರೇಗೌಡಣ್ಣಯ್ಯನ ಕೈಲಿ ಏಳ್ ಕಳ್ಸಿದ್ದೆ ಕಣಪ್ಪಾ... ನಿನ್ ತಮ್ಮ ಮನೆ ಕಡೆ ತಲೆ ಹಾಕಿ ವಾರ ಆಯ್ತು, ನಿಮ್ಮಪ್ಪ ನೋಡುದ್ರೆ ಒಂದು ಕೆಲಸ ಮಾಡ್ದಂಗೆ ಮೂಲೆಗ್ ಕೆಮ್ಕಂಡು ಕುಂತ್ಕಂತದೆ....’ ಅಂತ ಒಂದೇ ಸಮನೆ ಮಾತಾಡಿದವಳೇ... ‘ಅಗಾ ಇವತ್ತು ಸೊಸೈಟೆಗೆ ಅಕ್ಕಿ ಕೊಟ್ರು. ಒಂದ್ರುಪಾಯಿನೂ ಇಸ್ಕಂಡ್ಲಿಲ್ಲ ಪಾಪ ಆ ಸೊಸೈಟಿ ದಾಸಪ್ಪೋರು.

ನಾನು ಬರೇ ಅಕ್ಕಿ ತಗಂಡು ಏನ್ ಮಾಡದು ಅಂದ್ಕಂಡು ಒಂದ್ ನಾಲ್ಕೈದ್ ಸೇರು ಅಕ್ಕಿ ಮಾತ್ರ ಮಡಿಕ್ಕಂಡು ಗೋದ್ವೆ, ಚಕ್ರೆ ಎಲ್ಲಾ ಆ ಓಟ್ಳು ಮಲ್ಲೇಸಪ್ಪುಂಗೆ ಮಾರಿ ಒಂದು ಕೋಳಿ ತಗಂಬಂದು ಕುಯ್ದೆ. ಎಂಗೋ ಆ ನಮ್ಮಮ್ಮ ಕೆಂಪಮ್ಮುನ್ ದೆಸೆಯಿಂದ ಇನ್ನೊಂದೆಲ್ಡ್ ವಾರ ಅನ್ನದ ಮಕ ನೋಡಬೋದು’ ಅಂದು ಕೆಂಪಮ್ಮುಂಗೆ ಕೈಮುಗಿದುಕೊಂಡು ಕೂತಳು.

ಉಂಡು ಹೊರಗೆ ಆಕಾಶ ನೋಡುತ್ತಾ ಮಲಗಿದ ಸಿದ್ಧರಾಜು ಕುಸುಮಾಗೆ ಮೆಸೇಜ್ ಕಳಿಸಿದ: ‘ಆಕಾಶದ ತುಂಬಾ ಅನ್ನದ ಅಗುಳುಗಳ ಹಾಗೆ ಚೆಲ್ಲಿರುವ ನಕ್ಷತ್ರಗಳನ್ನೆಲ್ಲಾ ಬೊಗಸೆಯಲ್ಲಿ ಬಳಿದುಕೊಡುತ್ತೇನೆ. ಘಮ್ಮೆನ್ನುವ ಬಿರಿಯಾನಿ ಮಾಡಿಕೊಡ್ರಿ...’. ಕುಸುಮಾಳ ಸ್ಮಾರ್ಟ್ ಫೋನಿನಿಂದ ಬಂದ ಸ್ಮೈಲಿ ರೀಪ್ಲೇ ಸಿದ್ಧರಾಜನ ಹಳೆಯ ಮೊಬೈಲಲ್ಲಿ ವಿಚಿತ್ರವಾಗಿ ಕಂಡಿತು. ಅವನಿಗೆ ನಗು ಬಂತು.

ಕರಂಟು ಹೋಯ್ತು. ‘ದೀಪ ತಗಂಬಾರೆ’– ಅವ್ವನನ್ನು ಕೂಗಿದ ಅಪ್ಪನ ಧ್ವನಿ ಅದ್ಯಾಕೋ ಸಿದ್ಧರಾಜುವಿಗೆ ರಾಗವಾಗಿ ಕೇಳಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT