ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯಕೆಂದೆಂದು ಬಾಗದೆಚ್ಚರವೊಂದು.. ವಿ.ಆರ್‌.ಕೃಷ್ಣ ಅಯ್ಯರ್‌

ವ್ಯಕ್ತಿ ಸ್ಮರಣೆ
Last Updated 6 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸ್ಥಾಪಿತ ನ್ಯಾಯ ತತ್ವಗಳಿಗೆ ಬದ್ಧತೆಯನ್ನು ತೋರಿಸುತ್ತಲೇ ಅಸಲಿ ಚಿಂತನೆಯಿರುವ ತೀರ್ಪುಗಳನ್ನು ನೀಡುವುದರ ಮೂಲಕ, ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಅಲೆ ಎಬ್ಬಿಸಿದ ನ್ಯಾಯಮೂರ್ತಿಗಳು ವಿರಳ. ವಿ.ಆರ್‌.ಕೃಷ್ಣ ಅಯ್ಯರ್‌  ಅಂಥ ವಿರಳ ನ್ಯಾಯಮೂರ್ತಿಗಳಲ್ಲಿ ಒಬ್ಬರು.

ನ್ಯಾಯದಾನ ಕ್ಷೇತ್ರದಲ್ಲಿ ದಿಟ್ಟಹೆಜ್ಜೆಗಳ ಗುರುತು ಉಳಿಸಿದ ಅವರು ಆ ಮಟ್ಟಿಗೆ ಒಬ್ಬ ಹೀರೊ. ಗಂಭೀರ, ವಸ್ತುನಿಷ್ಠ ಆದರೆ ಓದಿದರೆ ನೀರಸವೆನಿಸುವಂಥ ತೀರ್ಪುಗಳನ್ನು ಬರೆಯುವುದು ಕೃಷ್ಣ ಅಯ್ಯರ್‌ ಅವರ ಜಾಯಮಾನವಾಗಿರಲಿಲ್ಲ. ಅವರ ತೀರ್ಪುಗಳು ಅನೇಕ ಉಲ್ಲೇಖಗಳಿಂದ, ಸಾಹಿತ್ಯಕ ಒಳನೋಟಗಳಿಂದ, ನಾಣ್ನುಡಿಗಳ ಸೂಕ್ತ ಬಳಕೆಯಿಂದ, ಎಲ್ಲಕ್ಕಿಂತ ಹೆಚ್ಚಾಗಿ ವಿವೇಕದಿಂದ ಕೂಡಿರುತ್ತಿದ್ದವು. ಅವು ಇಂದಿಗೂ ಕುತೂಹಲದಿಂದ ಓದಿಸಿಕೊಳ್ಳುತ್ತವೆ. ಪರಿಹಾರ ಸೂಚಿಸುವ ರೀತಿ ಹಾಗೂ ಸ್ವಂತಿಕೆ ಇವು ಅವರ ಎಲ್ಲಾ ತೀರ್ಪುಗಳ ಅಂಗವೇ ಆಗಿವೆ. ಸುನಿಲ್‌ ಬಾತ್ರಾ ಪ್ರಕರಣದ ಸಂದರ್ಭದಲ್ಲಿ ಅವರು ‘ಸಂವಿಧಾನದಿಂದ ಸುಸಜ್ಜಿತವಾಗಿರುವ ನ್ಯಾಯಾಲಯವು ಭಾರತೀಯರ ನಿರಂತರ ಸಂಗಾತಿ’ ಎಂದಿದ್ದರು.

ಅವರು ಕಾನೂನಿನ ವಿವರಗಳನ್ನು ಕುರಿತು ಅಪಾರ ಅರಿವಿದ್ದ ನ್ಯಾಯಮೂರ್ತಿ. ಅವರು ಕೊಟ್ಟಿರುವ ಪ್ರತಿ  ತೀರ್ಪು ಸಹ ಏನಾದರೂ ಹೊಸತನ ಮತ್ತು ಭಿನ್ನತೆ ಹೊಂದಿದೆ. ಮಾನವ ಹಕ್ಕುಗಳ ದೊಡ್ಡ ಪ್ರತಿಪಾದಕರಾದ ಅವರು ಬದುಕುವ ಹಕ್ಕನ್ನು ಹೇಳುವ ಸಂವಿಧಾನದ 21ನೇ ಕಲಮಿಗೆ ಹೊಸ ವ್ಯಾಖ್ಯಾನವನ್ನೇ ನೀಡಿದರು.

ಅವರು ಬಹಳ ಉತ್ತಮ ಮಟ್ಟದ ಇಂಗ್ಲಿಷ್‌ ಬಳಸುತ್ತಿದ್ದರು. ಈ ಕಾರಣಕ್ಕೆ ಕೃಷ್ಣ ಅಯ್ಯರ್‌ ಅವರು ನೀಡಿರುವ ತೀರ್ಪುಗಳನ್ನು ಓದುವಾಗ ಪಕ್ಕದಲ್ಲಿ ಶಬ್ದಕೋಶವನ್ನು ಇಟ್ಟುಕೊಂಡಿರಬೇಕಾಗುತ್ತದೆ. ಅವರು ಕೊಟ್ಟಿರುವ ಹಲವು ತೀರ್ಪುಗಳನ್ನು ಓದುವಾಗ ಒಳ್ಳೆಯದೊಂದು ಇಂಗ್ಲಿಷ್‌ ಕಾವ್ಯ ಓದಿದ ಅನುಭವವಾಗುತ್ತದೆ. ಕೃಷ್ಣ ಅಯ್ಯರ್‌ ತುಳಿತಕ್ಕೆ ಒಳಗಾದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಕಾನೂನಿನ ಚೌಕಟ್ಟನ್ನು ಬಳಸಿಕೊಳ್ಳುತ್ತಲೇ ಹಲವು ಸಲ ಯಾರೂ ತುಳಿದಿರದ ಹೊಸ ಹಾದಿಗಳನ್ನು ಕ್ರಮಿಸಿದ್ದಾರೆ.

ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದ ಅವರಿಗೆ ಇಂದಿನ ದಿನಮಾನದಲ್ಲಿ ‘ಜೈಲಲ್ಲ ಬೇಲು’ ಎಂಬ ತತ್ವ ಮುಖ್ಯವೆಂಬ ವಿಶ್ವಾಸವಿತ್ತು. ವಕೀಲ, ಶಾಸಕ, ಸಚಿವ, ಕಾನೂನು ಆಯೋಗದ ಸದಸ್ಯ ಹಾಗೂ ನ್ಯಾಯಮೂರ್ತಿಗಳಾಗಿ ಅವರು ಗಳಿಸಿದ್ದ ಅನುಭವದಿಂದ ಮನುಷ್ಯರನ್ನು ಅರ್ಥಮಾಡಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿತ್ತು. ಇದರಿಂದಲೇ ಅವರ ತೀರ್ಪುಗಳು ಸಾಹಿತ್ಯಕ ವಿಷಯ ಸಮೃದ್ಧಿಯಲ್ಲಿ ಮಾತ್ರವಲ್ಲ, ಮಾನವೀಯತೆಯ ಜೀವಂತ ಸ್ಪರ್ಶದ ಕಾರಣದಿಂದಲೂ ವಿಶೇಷವೆನಿಸಿವೆ.

ದೀನದಲಿತರ ಬಗ್ಗೆ, ನೊಂದವರ ಬಗ್ಗೆ ಕೃಷ್ಣ ಅಯ್ಯರ್‌ ಅವರಿಗೆ ವಿಶೇಷ ಮರುಕವಿತ್ತು. ಸಾಕಷ್ಟು ತೀರ್ಪುಗಳಲ್ಲಿ ಅವರು ಈ ನಗಣ್ಯ ಭಾರತೀಯರನ್ನು ಮುಕ್ತವಾಗಿ ಪ್ರಶಂಸೆ ಮಾಡಿದ್ದಾರೆ. ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುವಾಗ ಶ್ರೀಸಾಮಾನ್ಯರನ್ನು ದೈಹಿಕವಾಗಿ ಬಲಿಷ್ಠರಾದವರಿಂದ ರಕ್ಷಿಸಬೇಕು ಎಂದು ಅವರು ಮೊಹಿಂದೆರ್‌ ಸಿಂಗ್‌ ಗಿಲ್‌ ಪ್ರಕರಣದಲ್ಲಿ ಹೇಳಿದ್ದರು.

ದಟ್ಟದಾರಿದ್ರ್ಯವು ನ್ಯಾಯಯುತ ಹಾಗೂ ಸಮಾನ ನ್ಯಾಯದಾನಕ್ಕೆ ಎಂದೂ ಒಂದು ಅಡ್ಡಿಯಾಗಬಾರದು ಎಂದು ಅವರು ನಂಬಿದ್ದರು. ಕಾನೂನಿನ ನೆರವು ಎಂಬುದು ಮೂಲಭೂತ ಹಕ್ಕುಗಳ ಒಂದು ಅಂಗ. ಕೋರ್ಟ್‌ಗಳು ಇಂಥ ವಿಷಯಗಳನ್ನು ಎಷ್ಟೋ ಸಲ ಸುಧಾರಣೆಯ ದೃಷ್ಟಿಯಿಂದ ನೋಡಬೇಕು, ಶಿಕ್ಷೆಗಳು ಚಿಕಿತ್ಸಕವಾಗಿರಬೇಕು. ಶಿಕ್ಷೆಗೆ ಒಳಗಾದವರನ್ನು ತಿದ್ದುವಂತಿರಬೇಕು ಎಂಬುದು ಅವರ ಆಶಯವಾಗಿತ್ತು.

ತಾತ್ವಿಕವಾಗಿ ಕಮ್ಯುನಿಸ್ಟರಾಗಿದ್ದ ಕೃಷ್ಣ ಅಯ್ಯರ್‌ ಅವರು ಅನೇಕ ಸಲ ನ್ಯಾಯಾಧೀಶರಿಗೆ ಕಿವಿ ಮಾತು ಹೇಳುತ್ತಿದ್ದರು. ಅವರು ಕೊಡುತ್ತಿದ್ದ ಒಂದು ಸಲಹೆ ಎಂದರೆ, ಈ ಹುದ್ದೆಯಲ್ಲಿದ್ದವವರಿಗೆ ಹಳೆಯ ಪರಿಕಲ್ಪನೆಗಳ ಮೇಲೆ ಹೊಸ ಬೆಳಕು ಚೆಲ್ಲಬೇಕೆಂಬ ಸದಾಶಯ ಇರಬೇಕು ಎಂದು. ‘ಹಳ್ಳಿಯ ಬದುಕನ್ನು ಮಧ್ಯಯುಗದ ಜಮೀನ್ದಾರಿ ವ್ಯವಸ್ಥೆಯಿಂದ ಸಮೃದ್ಧವಾದ ಆಧುನಿಕತೆಗೆ ಪರಿವರ್ತಿಸಬೇಕು’ ಎನ್ನುವುದು ವಿ.ಎಸ್‌. ಕೃಷ್ಣ ಅಯ್ಯರ್‌ ಅವರ ದೃಢ ನಿಲುವು.

ಶಿಕ್ಷಣ ಹಾಗೂ ಆರ್ಥಿಕ ಅನುಕೂಲತೆಯಿಂದ ಅವಕಾಶ ವಂಚಿತರಾದವರು ವಿಭಿನ್ನ ಜನರು. ಒಂದರ್ಥದಲ್ಲಿ ಅವರು ಹೀರೊಗಳು. ಅವರನ್ನು ಗೌರವಿಸಬೇಕೇ ಹೊರತು ಏನೂ ಓದಿಲ್ಲದವರು ಎಂದು ಕೀಳಾಗಿ ನೋಡಬಾರದು ಎನ್ನುತ್ತಿದ್ದರು.

ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಶೂನ್ಯದಲ್ಲಿ ಹುಡುಕಲು ಸಾಧ್ಯವಿಲ್ಲ. ಅದು ಒಂದು ಜೀವಂತ ಸಾಮಾಜಿಕ ಯುಗದಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆಯಾಗಿರುತ್ತದೆ. ಸಾಮೂಹಿಕ ಸನ್ನಿಗೆ ಒಳಗಾದವರು ಒಡ್ಡುವ ಬೆದರಿಕೆಗಳು, ನ್ಯಾಯಾಲಯವನ್ನು ಅದಕ್ಕಿರುವ ಸಾಂವಿಧಾನಿಕ ನಿಷ್ಠೆಯಿಂದ ದೂರಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಅವರು ಈ ಮಾತು ಹೇಳಿದ್ದು ರೈಲ್ವೆಯ ‘ಶೋಷಿತ ಕರ್ಮಚಾರಿ ಸಂಘ’ದ ಪ್ರಕರಣದ ಚರ್ಚೆಯ ಸಂದರ್ಭದಲ್ಲಿ.

ಗೌರವದಿಂದ ಸ್ವತಂತ್ರವಾಗಿ ಬದುಕುವುದು ಮಾನವರೆಲ್ಲರ ಹಕ್ಕು. ಸ್ವಾತಂತ್ರ್ಯವೇ ಇಲ್ಲದೇ ಹೋದರೆ ಉಳಿದೆಲ್ಲಾ ಹಕ್ಕುಗಳೂ ಮೊಟಕುಗೊಳ್ಳುತ್ತವೆ ಎಂಬುದು ಅವರ ಸ್ಪಷ್ಟ ಅಭಿಮತ.

‘ಮುರಿದಿರುವ ಹೃದಯಗಳು ಜೈಲಿನ ಗೋಡೆಗಳನ್ನು ಒಡೆಯಲಾರವು. ಜೈಲುಗಳನ್ನು ಕಾನೂನಿನ ಕಲ್ಲುಗಳಿಂದ ಕಟ್ಟಿರುವುದರಿಂದ ಬಿಡುಗಡೆಯ ಕೀಲಿಕೈ ಸಹ ಕಾನೂನಿನ ಅಧೀನದಲ್ಲೇ ಇದೆ... ಸ್ವತಃ ನ್ಯಾಯಾಧೀಶರೇ ಕಾನೂನಿನ ಬಂಧಿಗಳು. ‘ಬಾಗಿಲು ತೆಗಿ ಸೇಸಮ್‌’ ಎಂದು ಹೇಳಿ ಕೈದಿಗಳನ್ನು ಸ್ವತಂತ್ರಗೊಳಿಸಲು ಕಾನೂನಿನ ಪ್ರಕಾರ ನ್ಯಾಯಾಧೀಶರೂ ಸ್ವತಂತ್ರರಲ್ಲ’ – ಇದು ಅವರ ಮಾತಿನ ಒಂದು ವರಸೆ.

2007ರಲ್ಲಿ ನ್ಯಾಯಾಂಗ ಉತ್ತರದಾಯಿತ್ವದ ಸಮಾವೇಶ ನಡೆದಾಗ ಅದರಲ್ಲಿ ಭಾಗವಹಿಸಿದ ಕೃಷ್ಣ ಅಯ್ಯರ್‌ ಅವರು ‘ನ್ಯಾಯಾಲಯವೆಂದರೆ ಸರ್ವಾಧಿಕಾರಿ ಯಲ್ಲ. ಆದರೆ ಶ್ರೀಮಂತರು ಮತ್ತು ಬಲಿಷ್ಠರು ದುರ್ಬಲ ವರ್ಗವನ್ನು  ಗುಲಾಮಗಿರಿಯಲ್ಲಿ ಇಡದಂತೆ ತನಗಿರುವ ಅಧಿಕಾರವನ್ನು ಬಳಸಲು ಅದು ಬದ್ಧವಾಗಿದೆ’ ಎಂದಿದ್ದರು. ಈ ಮಾತುಗಳು ಕೃಷ್ಣ ಅಯ್ಯರ್‌ ಅವರ ವ್ಯಕ್ತಿತ್ವದ ಸರಿಯಾದ ಪರಿಚಯ ಮಾಡುತ್ತವೆ. ವಿ.ಆರ್. ಕೃಷ್ಣ ಅಯ್ಯರ್‌ ನಮ್ಮ ಯುಗದ ಒಂದು ಅಪರೂಪದ ವ್ಯಕ್ತಿತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT