ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಿಗಳಿಗೆ ನೆರವಾಯ್ತು ನಟನ ಸಾವು

Last Updated 16 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಡಾ. ರಾಜ್‌ಕುಮಾರ್ ಅಸಂಖ್ಯ ವಿಶೇಷಣಗಳಿಗೆ ಭಾಜನರಾದ ಅಪರೂಪದ ವ್ಯಕ್ತಿ. ಅವರ ವ್ಯಕ್ತಿತ್ವ ಮಾತಿಗೆ ನಿಲುಕದ್ದು. ಇಂತಹ ಮಹಾನ್ ವ್ಯಕ್ತಿ ನಿಧನರಾದದ್ದು 2006ರ ಏಪ್ರಿಲ್‌ 12ರಂದು. ನಿಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ಬೆಂಗಳೂರು ತನ್ನ ಗತಿ ಮತ್ತು ಲಯವನ್ನು ಕಳೆದುಕೊಳ್ಳತೊಡಗಿತು. ನಗರದ ಕೆಲವು ಬಡಾವಣೆಗಳಲ್ಲಿ ಸಾಯಂಕಾಲದಿಂದಲೇ ಪ್ರಕ್ಷುಬ್ಧ ಸ್ಥಿತಿ ಕಂಡುಬಂತು. ಎಲ್ಲೆಲ್ಲೂ ಬಿಗುವಿನ ವಾತಾವರಣ. ಮೇರು ನಟನ ಬಗ್ಗೆ ಜನರಿಗಿದ್ದ ಅಭಿಮಾನ ಕೆಲವು ಕಡೆ ವಿಕೃತ ಸ್ವರೂಪ ತಾಳಿದ್ದು ದುರದೃಷ್ಟಕರ. ಪರಿಸ್ಥಿತಿ ಈ ಮಟ್ಟಿಗೆ ಬಿಗಡಾಯಿಸಬಹುದು ಎಂದು ಪೊಲೀಸರಿಗೆ ಮೊದಲೇ ಅರಿವಿದ್ದಂತೆ ಕಾಣಲಿಲ್ಲ. ಆದ್ದರಿಂದ ಪರಿಸ್ಥಿತಿ ನಿಭಾಯಿಸುವಲ್ಲಿ ಕೊರತೆ ಎದ್ದು ಕಾಣುತ್ತಿತ್ತು.

ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾಗಲೇ ಇದರ ಲಾಭವನ್ನು ಪಡೆದುಕೊಂಡವರು ಕೆಲವು ಕ್ರಿಮಿನಲ್‌ಗಳು. ದಿಕ್ಕು ತಪ್ಪಿದಂತಾಗಿದ್ದ ಪೊಲೀಸ್‌ ಪಡೆ ತಮ್ಮೆಲ್ಲ ಸಂಪನ್ಮೂಲಗಳೊಂದಿಗೆ ಸಿದ್ಧಗೊಳ್ಳುವಷ್ಟರಲ್ಲಿ ಎಷ್ಟೋ ಅನಾಹುತಗಳು ಆಗಿ ಹೋಗಿದ್ದವು.

ಬೆಂಗಳೂರಿನ ಶ್ರೀರಾಂಪುರ ಬಡಾವಣೆಯಲ್ಲಿ ಗಸ್ತು ತಿರುಗುತ್ತಿದ್ದ ಸ್ಥಳೀಯ ಪೊಲೀಸರಿಗೆ ಒಂದು ಸುದ್ದಿ ಬಂತು. ಬಂಡಿರೆಡ್ಡಿ ವೃತ್ತದ ಸಮೀಪ ಒಬ್ಬ ಆಸಾಮಿಯನ್ನು ಯಾರೋ ದುರಾತ್ಮರು ಥಳಿಸಿದ್ದು, ಆತ ಚರಂಡಿಯೊಳಗೆ ಬಿದ್ದಿದ್ದಾನೆ ಎಂಬುದೇ ಆ ಸುದ್ದಿ.

ಪೊಲೀಸರು ತಮ್ಮ ದಿಕ್ಕನ್ನು ಘಟನೆ ನಡೆದ ಸ್ಥಳದ ಕಡೆಗೆ ತಿರುಗಿಸಿದರು. ಇನ್ಸ್‌ಪೆಕ್ಟರ್‌ ದೇವಣ್ಣ ನೇತೃತ್ವದ ಪೊಲೀಸ್‌ ತಂಡ ಅಲ್ಲಿಗೆ ಧಾವಿಸಿದಾಗ ಒಬ್ಬ ಗಾಯಾಳು ಚರಂಡಿಯಲ್ಲಿ ಒದ್ದಾಡುತ್ತಿದ್ದುದನ್ನು ಕಂಡರು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲು ಜೀಪಿನೊಳಗೆ ಕೂರಿಸುತ್ತಿದ್ದಾಗಲೇ ಇನ್ನೊಂದು ಸುದ್ದಿ ಬಂತು. ಶ್ರೀರಾಂಪುರದ ಇನ್ನೊಂದು ಭಾಗದಲ್ಲಿ ದುಷ್ಕರ್ಮಿಗಳು ಮನೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿದ್ದಾರೆ ಎಂದು. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಒಯ್ಯುವಂತೆ ಜೊತೆಗಿದ್ದ ಸಿಬ್ಬಂದಿಯ ಪೈಕಿ ಮುಖ್ಯ ಪೇದೆಗೆ ಇನ್ಸ್‌ಪೆಕ್ಟರ್‌ ಸೂಚನೆ ಕೊಟ್ಟು ಆಟೊ ಒಂದರಲ್ಲಿ ಕೂರಿಸಿ ಅಲ್ಲಿಂದ, ಸುದ್ದಿ ಬಂದ ಇನ್ನೊಂದು ಘಟನಾ ಸ್ಥಳಕ್ಕೆ ಅವಸರವಸರವಾಗಿ ಹೊರಟರು.

ಮುಖ್ಯ ಪೇದೆ ಗಾಯಾಳುವನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ತರುವ ಹೊತ್ತಿಗೆ ರಾತ್ರಿ 9.30 ಗಂಟೆಯಾಗಿತ್ತು. ಆಗ ಕರ್ತವ್ಯದಲ್ಲಿದ್ದ ಡಾ. ಪ್ರಿಯಾ ಕುಮಾರ್ ಗಾಯಾಳುವನ್ನು ಪರೀಕ್ಷೆಗೆ ಒಳಪಡಿಸುವಾಗ ಮುಖ್ಯ ಪೇದೆಯ ವಾಕಿಟಾಕಿ ಅಬ್ಬರಿಸುತ್ತಿತ್ತು. ಅವರು ಅದಕ್ಕೆ ಉತ್ತರಿಸುತ್ತಾ ಇದ್ದುದ್ದು ಅಲ್ಲಿದ್ದ ಗಾಯಾಳುಗಳಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ, ಹೊರಗೆ ಹೋಗಿ ಮಾತನಾಡುವಂತೆ ವೈದ್ಯರು ಸೂಚಿಸಿದರು. ಅದರಂತೆ ಮುಖ್ಯ ಪೇದೆ ಹೊರನಡೆದ.

ಗಾಯಾಳು ಇನ್ನೂ ಮಾತಾಡುವ ಸ್ಥಿತಿಯಲ್ಲಿ ಇದ್ದುದನ್ನು ಗಮನಿಸಿದ ವೈದ್ಯರು ಆತನನ್ನು ಪ್ರಶ್ನಿಸಿ ಕೆಲವು ಮಾಹಿತಿಯನ್ನು ತಮ್ಮ ನಿತ್ಯದ ‘ಕ್ಯಾಶುವಾಲಿಟಿ ಮೆಡಿಕಲ್ ರೆಜಿಸ್ಟರ್‌’ನಲ್ಲಿ ದಾಖಲಿಸಿದರು. ಆತನ ಹೆಸರು ಅಂಬಾರಾವ್‌ ಎಂದು ತಿಳಿಯಿತು. ಕೆಲವು ಪ್ರಶ್ನೆಗಳ ನಂತರ ವೈದ್ಯರು ಅವನನ್ನು ಇನ್ನಷ್ಟು ಪ್ರಶ್ನಿಸಲು ಮುಂದಾದಾಗ ಗಾಯಾಳು ದೈಹಿಕವಾಗಿ ಕ್ಷೀಣಿಸುತ್ತಿದ್ದುದನ್ನು ಕಂಡು ತಕ್ಷಣ ಚಿಕಿತ್ಸೆಯ ಕಡೆ ಗಮನ ಹರಿಸಲು ಪ್ರಾರಂಭಿಸಿದರು. ಅಷ್ಟರಲ್ಲಿ ಮುಖ್ಯ ಪೇದೆ ಒಳಗೆ ಬಂದರು. ಆ ರಾತ್ರಿಯ ಪ್ರಕ್ಷುಬ್ಧ ಸ್ಥಿತಿಯಲ್ಲಿ ಸಿಕ್ಕಿ ಗಾಯಾಳುಗಳಾದವರ ಸಂಖ್ಯೆ ಹೆಚ್ಚಾಗುತ್ತಿತ್ತು. ಈಗಾಗಲೇ 15–20 ಗಾಯಾಳುಗಳನ್ನು ಗಮನಿಸಿಕೊಳ್ಳಬೇಕಿರುವುದರಿಂದ ತಾವು ಕರೆತಂದ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಒಯ್ಯುವಂತೆ ಮುಖ್ಯ ಪೇದೆಗೆ ಸೂಚಿಸಿದರು. ಈ ಸೂಚನೆಯಂತೆ ಅವರು ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಲ್ಲಿ ತಲುಪಿದಾಗ ಗಾಯಾಳು ಆಗಲೇ ಪ್ರಾಣಬಿಟ್ಟಿದ್ದರು. ಮುಖ್ಯ ಪೇದೆಯು ಕೂಡಲೇ ಪೊಲೀಸ್‌ ಠಾಣೆಗೆ ಬಂದು ವಿಚಾರವನ್ನು ದೇವಣ್ಣನವರಿಗೆ ತಿಳಿಸಿದರು.

(ಇಲ್ಲಿ ಇನ್‌ಸ್ಪೆಕ್ಟರ್ ದೇವಣ್ಣ ಅವರ ಬಗ್ಗೆ ಒಂದೆರಡು ಮಾತು ಹೇಳಬೇಕು. ದೇವಣ್ಣ ಇಲ್ಲಿಗೆ ವರ್ಗವಾಗಿ ಎರಡು ವರ್ಷ ಆಗಿತ್ತು. ಶ್ರೀರಾಂಪುರ ಬಡಾವಣೆಯಲ್ಲಿ ಆ ಕಾಲದಲ್ಲಿ ಪೋಕರಿಗಳ, ಕೇಡಿಗಳ, ಘಾತುಕರ, ಹಿಂಸಾಪ್ರೇಮಿಗಳ ಅಟ್ಟಹಾಸ ಮೇರೆ ಮೀರಿತ್ತು. ಶ್ರೀರಾಂಪುರ ಎಂದರೆ ಕ್ರಿಮಿನಲ್‌ಗಳ ಅಡ್ಡ ಎಂದೇ ಪ್ರಖ್ಯಾತವಾಗಿತ್ತು. ಈ ಸಂದರ್ಭದಲ್ಲಿ ಅಂಥ ಪರಿಸ್ಥಿತಿಯನ್ನು ನಿಯಂತ್ರಿಸಲು ಸರಿಯಾದ ವ್ಯಕ್ತಿ ದೇವಣ್ಣ ಎಂದು ಸರ್ಕಾರ ಭಾವಿಸಿದ್ದಿರಬೇಕು. ಇದನ್ನೆಲ್ಲ ತಹಬಂದಿಗೆ ತಂದು ಸಾರ್ವಜನಿಕರ ಬದುಕು ನಿರ್ಭಯವಾಗಿರಬೇಕೆಂಬ ಉದ್ದೇಶದಿಂದ ಅವರನ್ನು ಅಲ್ಲಿಗೆ ವರ್ಗಾಯಿಸಿರಬೇಕು).
ಇಂತಿಪ್ಪ ಇನ್‌ಸ್ಪೆಕ್ಟರ್ ದೇವಣ್ಣನವರ ಕಣ್ಣು ನಗ್ನಮುನಿ, ಸೋಬಣ್ಣ, ವೀರೇಶ ಮತ್ತು ಗವಿಯಪ್ಪ ಎನ್ನುವ ಸ್ವಯಂಘೋಷಿತ ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಇತ್ತು. ಇವರೆಲ್ಲ ಖುದ್ದಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿದ್ದರೂ, ಕ್ರಿಮಿನಲ್‌ಗಳನ್ನು ಮಟ್ಟಹಾಕುವ ದೇವಣ್ಣ ಅವರ ಪ್ರಯತ್ನಗಳನ್ನೆಲ್ಲ ಮಾನವ ಹಕ್ಕುಗಳ ನೆಪದಲ್ಲಿ ಮಣ್ಣುಗೂಡಿಸುತ್ತಿದ್ದರು. ಕ್ರಿಮಿನಲ್‌ಗಳನ್ನು ಠಾಣೆಗೆ ಕರೆತಂದಾಗಲೆಲ್ಲ ಕಿರಿಕಿರಿ ಉಂಟುಮಾಡಿ ಪರಿಣಾಮಕಾರಿ ತನಿಖೆಗೆ ಅಡಚಣೆ ಉಂಟು ಮಾಡುತ್ತಿದ್ದರು. ಇದರಿಂದ ಬೇಸತ್ತಿದ್ದ ದೇವಣ್ಣ ಇವರಿಗೆಲ್ಲಾ ಒಂದು ಗತಿ ಕಾಣಿಸಬೇಕೆಂದು ಕಾಯುತ್ತಿದ್ದರು, ಸಿಂಹ ಬೇಟೆಗಾಗಿ ಹೊಂಚು ಹಾಕಿದಂತೆ.

ಅಂಬಾರಾವ್ ಸತ್ತ ವಿಚಾರವನ್ನು ಹೇಳಿದ ಮುಖ್ಯ ಪೇದೆಯ ಮಾತುಗಳನ್ನು ಕೇಳುತ್ತಿದ್ದಂತೆ ಇನ್‌ಸ್ಪೆಕ್ಟರ್ ದೇವಣ್ಣ ಅವರ ತಲೆಯಲ್ಲಿ ಮಿಂಚೊಂದು ಸಂಚರಿಸಿತು. ಆಗಾಗ್ಗೆ ಪೊಲೀಸ್‌ ಠಾಣೆಗೆ ಬಂದು ಉಪದ್ರವ ಕೊಡುತ್ತಿದ್ದವರನ್ನೇ ಈ ಸಾವಿನೊಂದಿಗೆ ಜೋಡಿಸುವ ತರ್ಕವನ್ನು ಅವರ ಮನಸ್ಸು ಹೆಣೆಯುತ್ತಿತ್ತು. ಆದರೆ ಇಂಥ ಘೋರ ಅಪರಾಧದಲ್ಲಿ ಅವರನ್ನು ಸಿಕ್ಕಿಸಲು ಅವರಿಗೆ ಮನಸ್ಸಾಗಲಿಲ್ಲ. ಆದರೆ ಅಂಬಾರಾವ್‌ ಅಣ್ಣ ವಿಠಲರಾವ್‌ ಅವರು, ಈ ನಾಲ್ವರನ್ನೇ ಆರೋಪಿಗಳಾಗಿಸುವಂತೆ ದೂರು ಕೊಟ್ಟಾಗ ಇನ್ಸ್‌ಪೆಕ್ಟರ್‌ ದೇವಣ್ಣ ಅವರಿಗೆ ಪರಿಸ್ಥಿತಿ ಸಂಚು ಏನು ಎಂಬುದು ಅರ್ಥವಾಯಿತು. ವಿಠಲರಾವ್‌ ಹೇಳಿದ ಹಾಗೆ ನಾಲ್ವರನ್ನೂ ಆರೋಪಿಯನ್ನಾಗಿಸಿದರು.

ವಿಪರ್ಯಾಸ ಎಂದರೆ ಇದೇ ಇರಬೇಕು. ಡಾ. ರಾಜ್‌ ತೀರಿಕೊಂಡ ಕೆಲ ದಿನಗಳ ಬಳಿಕ ಅಂದರೆ ಏಪ್ರಿಲ್‌ 17ರಂದು ಅವರ ಸಮಾಧಿಯ ಬಳಿ ಶ್ರದ್ಧಾಂಜಲಿ ಪ್ರಾರ್ಥನೆಗಳು ನಡೆಯುತ್ತಿದ್ದಾಗ ಈ ನಾಲ್ಕು ಜನ ಅದರಲ್ಲಿ ಭಾಗವಹಿಸಿದ್ದರು. ಅಲ್ಲಿಗೆ ಬಂದ ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿದರು. ತನಿಖೆ ಮುಂದುವರೆದು ಆರೋಪಿಗಳ ವಿರುದ್ಧ ಅಂತಿಮ ವರದಿ ತಯಾರಾಗಿ ಕೋರ್ಟ್ ತಲುಪಿತು.

ಆರೋಪಿಗಳ ವಿರುದ್ಧದ ಮೊಕದ್ದಮೆ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆಯ ಹಂತವನ್ನು ತಲುಪುವುದರಲ್ಲಿತ್ತು. ಪ್ರತಿ ವಿಚಾರಣೆಯ ದಿನ ಆರೋಪಿಗಳನ್ನು ಜೈಲು ಸಿಬ್ಬಂದಿ ತಪ್ಪದೇ ಹಾಜರುಪಡಿಸುತ್ತಿದ್ದರು.

ಆ ದಿನವೂ ಆರೋಪಿಗಳ ವಿಚಾರಣೆ ಇತ್ತು. ಆದರೆ ಹೈಕೋರ್ಟ್‌ನ ನೂತನ ನ್ಯಾಯಮೂರ್ತಿಯೊಬ್ಬರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕಾಗಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶರೆಲ್ಲ ಹೋಗಿದ್ದರಿಂದ ವಿಚಾರಣೆಗಾಗಿ ಬಂದಿದ್ದ ಆರೋಪಿಗಳು ಕಾಯುತ್ತಿದ್ದರು.

ಕೋರ್ಟ್ ಸಭಾಂಗಣದ ಮುಂದೆ ಆರೋಪಿಗಳಿಗೆ ಪರಿಚಿತರಾದ ಕೆಲವರು ಸಿಕ್ಕರು. ಅವರು ಇನ್ನೊಂದು ಮೊಕದ್ದಮೆಯಲ್ಲಿ ಸಾಕ್ಷಿದಾರರಾಗಿ ಅಲ್ಲಿಗೆ ಬಂದಿದ್ದರು. ಅವರು ಅಚಾನಕ್ಕಾಗಿ ಆರೋಪಿಗಳೊಂದಿಗೆ ಮಾತಿಗೆ ತೊಡಗಿದರು. ಸಾಕ್ಷಿದಾರರಿಗೆ ಸಂಬಂಧಿಸಿದ ಘಟನೆಯೂ ಏಪ್ರಿಲ್‌ 12ರ ರಾತ್ರಿ ಬಂಡಿರೆಡ್ಡಿ ಸರ್ಕಲ್ ಬಳಿಯೇ ಜರುಗಿತ್ತು.

ಸಾಕ್ಷಿದಾರರ ಪೈಕಿ ಒಬ್ಬ ಮಹಿಳೆಯನ್ನು ಆಕೆಯ ಗಂಡ ಥಳಿಸಿ ಮಕ್ಕಳೊಂದಿಗೆ ಹೊರ ಹಾಕಿದ್ದ. ಈ ಅನ್ಯಾಯವನ್ನು ಪ್ರಶ್ನಿಸುವುದಕ್ಕಾಗಿ ಆಕೆಯ ಸಂಬಂಧಿಕರೆಲ್ಲರೂ ಬಂಡಿರೆಡ್ಡಿ ಸರ್ಕಲ್ ಬಳಿ ಇರುವ ಅವರ ಮನೆಯ ಮುಂದೆ ಜಮಾಯಿಸಿದ್ದರು. ಆಕೆಯ ಗಂಡ ತನ್ನ ಬೆಂಬಲಿಗರೊಂದಿಗೆ ಬಂದವರ ಮೇಲೆ ಹಲ್ಲೆ ಮಾಡಿದಾಗ ಅವರಲ್ಲೊಬ್ಬ ಹೋಗಿ ಶ್ರೀರಾಂಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈಗ ಅವರು ಬಂದಿದ್ದು ಆ ಪ್ರಕರಣಕ್ಕೆ ಸಂಬಂಧಿಸಿಯೇ.

ಹೀಗೆ, ಅಂಬಾರಾವ್ ಕೊಲೆ ಆರೋಪಿಗಳೊಡನೆ ಮಾತಾಡುತ್ತಾ ಆ ಸಾಕ್ಷಿದಾರರು ಕೆಲವು ವಿಚಾರಗಳನ್ನು ಹೇಳಿದರು. ಇವರೆಲ್ಲ ನಿಂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಬೈಸಿಕಲ್ ಮೇಲಿದ್ದ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದು ಮಚ್ಚಿನಿಂದ ಕೊಚ್ಚಿದ್ದನ್ನು, ಗಾಯಾಳು ಚರಂಡಿಯಲ್ಲಿ ಬಿದ್ದಿದ್ದನ್ನು ಗಮನಿಸಿಕೊಂಡಿದ್ದ ವಿಷಯವನ್ನು ಆರೋಪಿಗಳಿಗೆ ವಿವರಿಸಿದರು. ಇದನ್ನು ನೋಡಿದವರು ಪೊಲೀಸರಿಗೆ ತಿಳಿಸುವ ತಿಳಿ ವಾತಾವರಣ ಇರಲಿಲ್ಲ. ಮಹಿಳೆಯ ಗಂಡನ ಕಡೆಯವರಿಂದ ಹಲ್ಲೆ ನಡೆದು ಅದನ್ನು ಬಗೆಹರಿಸಿಕೊಳ್ಳುವುದು ಒಂದು ಕಡೆ, ಡಾ. ರಾಜ್‌ಕುಮಾರ್ ಅವರ ನಿಧನದಿಂದ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣ ಇನ್ನೊಂದು ಕಡೆ- ಇವೆಲ್ಲ ಕಾರಣಗಳಿಂದ ಬೈಸಿಕಲ್ ವ್ಯಕ್ತಿ ಮಚ್ಚಿನಿಂದ ಕೊಚ್ಚಿದ ವಿಚಾರ ಯಾವುದನ್ನೂ ಪೊಲೀಸರಿಗೆ ತಿಳಿಸಲು ಸಾಧ್ಯವಾಗಿರಲಿಲ್ಲ. ಆ ರಾತ್ರಿ ಪೊಲೀಸ್‌ ಠಾಣೆ ಸುತ್ತಮುತ್ತ ಪರಿಸ್ಥಿತಿ ಅಷ್ಟು ಭಯಾನಕವಾಗಿತ್ತು. ಕೆಲವರಿಗೆ ಈ ವಿಷಯವನ್ನು ಪೊಲೀಸರಿಗೆ ಹೇಳಬೇಕೆಂದಿದ್ದರೂ ಉಳಿದವರು ಇಲ್ಲದ ಉಸಾಬರಿ ಯಾಕೆ ಎಂದು ಗದರಿಸಿ ಸುಮ್ಮನಾಗಿಸಿದ್ದರು.

ಇದನ್ನೆಲ್ಲ ಕೇಳಿಸಿಕೊಂಡ ಆರೋಪಿಗಳಿಗೆ ಸಖೇದಾಶ್ಚರ್ಯವಾಗಿತ್ತು. ಬಹುಶಃ ಅವರಿಗೆ ಈ ಕೊಲೆ ಆರೋಪದಿಂದ ಪಾರಾಗುವ ಒಂದು ಆಶಾಕಿರಣ ಮೂಡಿರಬೇಕು.

ಇದಾದ ಕೆಲ ದಿನಗಳ ನಂತರ ಆರೋಪಿಗಳು ನನಗೆ ಜೈಲಿಗೆ ಬಂದು ಹೋಗುವಂತೆ ಹೇಳಿಕಳುಹಿಸಿದರು. ಅವರ ಯಾಚನೆಯಲ್ಲಿ ಏನೋ ವಿಶೇಷತೆ ಇದೆ ಎಂದು ನನಗನ್ನಿಸಿದ್ದರಿಂದ ಜೈಲಿಗೆ ಹೋಗಿ ಅವರನ್ನು ಸಂಪರ್ಕಿಸಿದೆ. ಕೋರ್ಟ್ ಆವರಣದಲ್ಲಿ ತಮಗೆ ಅಕಸ್ಮಾತ್ತಾಗಿ ಸಿಕ್ಕಿದ ಸಾಕ್ಷಿದಾರರು, ಅವರು ಹೇಳಿದ ವಿಚಾರಗಳು ಎಲ್ಲವನ್ನೂ ನನಗೆ ವಿವರಿಸಿದರು. ‘ಈ ಕೊಲೆ ಆರೋಪದಿಂದ ನಮ್ಮನ್ನು ಖುಲಾಸೆಗೊಳಿಸಲು ಈ ಮಾಹಿತಿ ನೆರವಾಗಬಹುದೇ’ ಎಂದು ಮತ್ತೆ ಮತ್ತೆ ಪ್ರಶ್ನೆ ಹಾಕಿದರು. ನನಗೆ ಅವರು ಕೊಟ್ಟ ಮಾಹಿತಿಯಿಂದ ಖುಲಾಸೆಗೊಳಿಸುವುದನ್ನು ಸಾಧ್ಯವಾಗಿಸಬಹುದು ಎಂಬ ಭರವಸೆ ಮೂಡಿತಾದರೂ ತೋರ್ಪಡಿಸದೆ, ‘ಪ್ರಯತ್ನಿಸಬಹುದು’ ಎಂದಷ್ಟೇ ಹೇಳಿ ಬಂದೆ.

ಅಂಬಾರಾವ್ ಕೊಲೆ ಪ್ರಕರಣದ ವಿಚಾರಣೆ ಆರಂಭವಾಗಿ ಮುಂದುವರಿಯುತ್ತಿತ್ತು. ವಿಚಾರಣೆಯ ಪ್ರಾರಂಭದಲ್ಲಿ ಇನ್‌ಸ್ಪೆಕ್ಟರ್ ದೇವಣ್ಣ ಹುಟ್ಟುಹಾಕಿದ್ದ ಸಾಕ್ಷಿಗಳೆಲ್ಲ ಪ್ರಾಸಿಕ್ಯೂಷನ್ ವಿರುದ್ಧ ತಿರುಗಿ ಬಿದ್ದು ನೆಲಕಚ್ಚಿದವು. ಅಷ್ಟರಲ್ಲಿ ಆರೋಪಿಗಳಿಂದ ಪಡೆದ ಮಾಹಿತಿಯನ್ನು ಆಧರಿಸಿ ಅಂದು ರಾತ್ರಿ ಅಂಬಾರಾವ್ ಅವರನ್ನು ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಿದ್ದನ್ನು ತಿಳಿದುಕೊಂಡು ನನ್ನ ಸಹ ವಕೀಲರೊಬ್ಬರನ್ನು ಅಲ್ಲಿಗೆ ಕಳಿಸಿದೆ.

ಅಂದು ರಾತ್ರಿ ಅಂಬಾರಾವ್ ಅವರನ್ನು ಪರೀಕ್ಷಿಸಿದ್ದ ಡಾಕ್ಟರ್ ಪ್ರಿಯಾ ಕುಮಾರ್ ಅವರು ಕ್ಯಾಶುವಾಲಿಟಿ ರೆಜಿಸ್ಟರ್‌ನಲ್ಲಿ ಮಾಡಿದ್ದ ದಾಖಲೆಗಳ ಒಂದು ಪ್ರತಿಯನ್ನು ತಂದರು. ಸಾಯುವ ಸಂದರ್ಭದಲ್ಲಿ ಅಂಬಾರಾವ್ ಅವರಿಗೆ ಡಾ. ಪ್ರಿಯಾ ಕುಮಾರ್ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆಗ ಅಂಬಾರಾವ್‌ ತಮ್ಮ ಹೆಸರು ಹೇಳಿ, ಬಾಬು ಎಂಬಾತ ಮಚ್ಚಿನಿಂದ ತಿವಿದ ವಿಷಯ ತಿಳಿಸಿದ್ದರು. ಇದನ್ನು ವೈದ್ಯರು ದಾಖಲಿಸಿಕೊಂಡು ಅಂಬಾರಾವ್‌ ಅವರ ಎಡಹೆಬ್ಬೆರಳು ರುಜುವನ್ನು ಪಡೆದುಕೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದ ಶ್ರೀರಾಂಪುರ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಯಾಲಕಯ್ಯನ ಸಹಿಯನ್ನೂ ಪಡೆದಿದ್ದರು.

ಅಂದು ಕೋರ್ಟ್ ಆವರಣದಲ್ಲಿ ಸಿಕ್ಕಿದ ಸಾಕ್ಷಿದಾರರ ಮೊಕದ್ದಮೆಯ ಸಂಖ್ಯೆಯನ್ನು ಪಡೆದುಕೊಂಡೆ. ಅದರ ದಾಖಲೆಗಳನ್ನು ತರಿಸಿ ಪರಿಶೀಲಿಸಿದಾಗ ನನಗಾದ ಆಶ್ಚರ್ಯವನ್ನು ವಿವರಿಸಲು ಪದಗಳಿಗಾಗಿ ತಡಕಾಡುತ್ತಿದ್ದೇನೆ. ‘ಬೈಸಿಕಲ್ಲಿನ ಮೇಲೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಅಟ್ಟಿಸಿಕೊಂಡು ಹೋಗಿ ಮಚ್ಚಿನಿಂದ ಕೊಚ್ಚಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ’ ಎಂದು ಅಲ್ಲಿ ಬರೆದದ್ದನ್ನು ಹೊಡೆದುಹಾಕಲಾಗಿತ್ತು. ಸಾಮಾನ್ಯವಾಗಿ ಫಿರ್ಯಾದು ಅಥವಾ ದೂರುಗಳಲ್ಲಿ ಇಂಥ ತಿದ್ದುಪಡಿಗಳನ್ನು ಇರಗೊಡುವುದಿಲ್ಲ. ಯಾವುದೇ ತಿದ್ದುಪಡಿ ಇಲ್ಲದ ಸ್ಪಷ್ಟ ದಾಖಲೆ ಇದಾಗಿರಬೇಕಿತ್ತು. ಆದರೆ ಆ ರಾತ್ರಿಯ ಗಡಿಬಿಡಿ, ಆತಂಕ, ಪ್ರಕ್ಷುಬ್ಧತೆ, ಪೊಲೀಸರಿಗೆ ದೂರುಗಳನ್ನು ದಾಖಲಿಸಿಕೊಳ್ಳುವ ಒತ್ತಡಗಳ ಪರಿಣಾಮ ಬಹುಶಃ ದೂರಿನ ‘ತಿದ್ದುಪಡಿ’ ಪ್ರತಿ ತಯಾರಿಸಲು ಅವಕಾಶ ಇಲ್ಲದೇ ಹೋಗಿರಬೇಕು. ಈ ಫಿರ್ಯಾದಿನ ಪ್ರತಿ ಪಡೆದುಕೊಂಡೆ.

ವಿಚಾರಣೆಯ ಸಂದರ್ಭದಲ್ಲಿ ಈ ಎರಡು ಅಮೂಲ್ಯ ದಾಖಲೆಗಳನ್ನು ವೈದ್ಯರು ಮತ್ತು ತನಿಖಾಧಿಕಾರಿಯವರ ಪಾಟಿ ಸವಾಲುಗಳ ಸಂದರ್ಭದಲ್ಲಿ ಸಮರ್ಥವಾಗಿ ಬಳಸಿಕೊಂಡೆ. ನನ್ನ ಭಾವನೆಗೆ ವಿರುದ್ಧವಾಗಿ ಯೋಚಿಸಲು ಕೋರ್ಟಿಗೆ ಏನೂ ಉಳಿದಿರಲಿಲ್ಲ. ಉಳಿದ ಪ್ರಕ್ರಿಯೆ ಕೇವಲ ಔಪಚಾರಿಕವಾಗಿತ್ತು. ಅದೆಲ್ಲ ಮುಗಿದು ಆದೇಶ ಆರೋಪಿಗಳ ಪರವಾಗಿ ಹೊರಬಿತ್ತು.

ಸೆಷನ್ಸ್ ಕೋರ್ಟ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಕಿನಿಕೇರಿಯವರು ಕೊಟ್ಟ ಆದೇಶದ ಅನ್ವಯ ಆರೋಪಿಗಳು ದೋಷಮುಕ್ತರಾಗಿ ಕೊಲೆ ಆರೋಪದಿಂದ ಖುಲಾಸೆಗೊಂಡರು. ಕೊಲೆ ಮಾಡಿದವರು ನುಸುಳಿಕೊಂಡರು!
ಲೇಖಕ ಹೈಕೋರ್ಟ್‌ ವಕೀಲ
(ಆರೋಪಿಗಳ ಮತ್ತು ಪೊಲೀಸ್‌ ಅಧಿಕಾರಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ)

ಮುಂದಿನ ವಾರ: ಚಲನವಲನ ತಂದಿಟ್ಟ ಎಡವಟ್ಟು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT