ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪವ್ಯಾಖ್ಯಾನ ಏಕೆ?

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

‘ಸತ್ಯದ  ನೆಲೆಯಲ್ಲಿ ಇತಿಹಾಸವನ್ನು ಗ್ರಹಿಸದ ಮನಸ್ಥಿತಿ’ ಭಾರತೀಯರದು ಎನ್ನುವುದಕ್ಕೆ ಪುರಾವೆಯಾಗಿ ಆಕಾರ್ ಪಟೇಲ್‌ ಅವರು  (ಪ್ರ.ವಾ., ನ.16) ಟಿಪ್ಪು ಸುಲ್ತಾನ್ ಮತ್ತು ಸಾಮ್ರಾಟ್ ಅಶೋಕನನ್ನು ಹೋಲಿಸಿದ್ದಾರೆ.

‘...ನಮಗಿಂದು ನೆನಪಿರುವುದು ಟಿಪ್ಪು ಹಿಂದೂಗಳನ್ನು ಮತಾಂತರಿಸಿದ ಅಥವಾ ಕೊಂದ ಎಂಬುದು ಮಾತ್ರ. ಸಾಮ್ರಾಟ್ ಅಶೋಕ ಕಳಿಂಗ ರಾಜ್ಯವನ್ನು ಗೆದ್ದುಕೊಂಡಾಗ ವಿದೇಶಿಯರನ್ನು ಅಥವಾ ಮುಸ್ಲಿಮರನ್ನು ಕೊಲ್ಲಲಿಲ್ಲ... ಆತ ಕೊಂದಿದ್ದು ಒಡಿಯಾ ಭಾಷೆ ಮಾತನಾಡುವ ಹಿಂದೂಗಳನ್ನು– ಸಹಸ್ರಾರು ಸಂಖ್ಯೆಯಲ್ಲಿ. ಆದರೂ ಅಶೋಕನನ್ನು ಮಹಾನ್ ರಾಜ ಎನ್ನುತ್ತೇವೆ... ಈ ಇಬ್ಬರು ರಾಜರು ಮಾಡಿರುವುದು ಒಂದೇ ಬಗೆಯ ಅಪರಾಧವಾದರೂ ನಾವು ಅಶೋಕನ್ನು ಮಾತ್ರ ಗೌರವಿಸಿ ಟಿಪ್ಪುವನ್ನು ಗೌರವಿಸದೆ ಇರುವುದು ಯಾಕೆ?’  ಎಂದು ಅವರು ಕೇಳಿದ್ದಾರೆ.

ಅವರ ಈ ಬರಹ ಸಂಗತಿಯೊಂದರ ಅಪವ್ಯಾಖ್ಯಾನವಷ್ಟೇ ಅಲ್ಲ; ಜನತೆಯನ್ನು ದಾರಿತಪ್ಪಿಸುವಂಥದು.ಮತಾಂತರಿಸುವುದು ಮತ್ತು ಕೊಲ್ಲುವುದು ಎರಡೂ ಒಂದೇ ಅಲ್ಲ ಎಂಬುದನ್ನು ಅವರು ತಿಳಿಯಬೇಕು. ಟಿಪ್ಪು ಮತಾಂತರಿಸಿದನೋ ಇಲ್ಲವೋ ಎಂಬ ವಿಚಾರ ಆ ಕಡೆ ಇರಲಿ. ಯುದ್ಧದಲ್ಲಿ ಜೀವಹತ್ಯೆ ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಪ್ರಾಥಮಿಕ ಸಂಗತಿ.

ಬ್ರಿಟಿಷರು ಭಾರತಕ್ಕೆ ಬರುವುದಕ್ಕಿಂತ ಮುಂಚೆ ಮತ್ತು ಬಂದ ನಂತರವೂ ನೂರಾರು ರಾಜ್ಯಗಳು, ರಾಜರು ಇದ್ದರು ಮತ್ತು ಅವರೆಲ್ಲ ಬಹುಮಟ್ಟಿಗೆ ಹಿಂದೂಗಳೇ ಆಗಿರುತ್ತಿದ್ದರು. ಅವರು ದಂಡೆತ್ತಿ ಹೋಗುತ್ತಿದ್ದುದು ಇನ್ನೊಬ್ಬ ಹಿಂದೂ ರಾಜನ ಮೇಲೆಯೇ. ಅಥವಾ ಮುಸ್ಲಿಂ ದೊರೆಗಳಾದರೂ ಇನ್ನೊಬ್ಬ ಹಿಂದುವೋ ಇಲ್ಲ ಮುಸ್ಲಿಂ ದೊರೆಯ ಮೇಲೋ ದಂಡೆತ್ತಿ ಹೋಗುತ್ತಿದ್ದರು. ಆಗ ಆದ ಯುದ್ಧಗಳಲ್ಲಿ ಹಿಂದೂಗಳು ಹಿಂದೂಗಳನ್ನು, ಮುಸಲ್ಮಾನರು ಹಿಂದೂಗಳನ್ನು ಕೊಲ್ಲಲೇ ಬೇಕಾಗುತ್ತಿತ್ತು. ಕೆಲವು ವೇಳೆ ಮುಸ್ಲಿಮರು ಮುಸ್ಲಿಮರನ್ನೇ ಕೊಲ್ಲಬೇಕಾಗುತ್ತಿತ್ತು. ಇದೆಲ್ಲ ಯುದ್ಧಗಳಲ್ಲಿ ಸರ್ವೇಸಾಮಾನ್ಯ. ಅದನ್ನು ಯಾರೂ ಜಾತಿ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ; ಹಾಗೆ ನೋಡುತ್ತಲೂ ಇರಲಿಲ್ಲ.

ಆದರೆ ಯುದ್ಧಾನಂತರದಲ್ಲೂ ಅನೇಕ ವೇಳೆ ಶತ್ರುರಾಜರ ಸಹಸ್ರಾರು ಪ್ರಜೆಗಳನ್ನು ಎರಡೂ ಧರ್ಮೀಯರು  ಕೊಂದು ದೋಚಿದ್ದಾರೆ. ಇದೆಲ್ಲ ಇತಿಹಾಸದ ಸತ್ಯ. ಭಾರತೀಯ ಸೇನೆಯಲ್ಲಿ ಇರುವ ಮುಸ್ಲಿಂ ಸೈನಿಕರು ಪಾಕಿಸ್ತಾನದ ಸೇನೆಯಲ್ಲಿರುವ ಮುಸ್ಲಿಂ ಸೈನಿಕನನ್ನು ಕೊಂದರೆ ಅಥವಾ ಹಿಂದೂ ಸೈನಿಕರು ಪಾಕ್ ಸೇನೆಯ ಹಿಂದೂ ಸೈನಿಕರನ್ನು (ಇದ್ದರೆ) ಕೊಂದರೆ ಆಗ ಯಾರಾದರೂ ಜಾತಿಯನ್ನು ಎತ್ತಿ ಹೇಳುತ್ತಾರೆಯೇ?

ನಮ್ಮ ಬೀದಿಯಲ್ಲಿರುವವನೊಬ್ಬ ಅನ್ಯ ಕೋಮಿನವನನ್ನು ಸಾಯಿಸಿದರೆ ಅದನ್ನು ಕೊಲೆ ಎಂದು ಪರಿಗಣಿಸಲಾಗುತ್ತದೆ. ಅದೇ ಯುದ್ಧ ರಂಗದಲ್ಲಿ ಅನ್ಯಕೋಮಿಗೆ ಸೇರಿದ ಶತ್ರು ಸೈನಿಕನನ್ನು ಕೊಂದರೆ ಪರಮವೀರ ಚಕ್ರ ಪ್ರಶಸ್ತಿ ಕೊಡುತ್ತಾರೆ. ಕೃತ್ಯ ಕೊಲ್ಲುವುದೇ ಆದರೂ  ಎರಡೂ ಬೇರೆ ಬೇರೆ. ಅಶೋಕನ ಕಾಲದಲ್ಲಿ ಮುಸ್ಲಿಂ, ಕ್ರೈಸ್ತ  ರಾಜರು ಇರಲಿಲ್ಲ. ಅವನು ಕಳಿಂಗ ರಾಜ್ಯವನ್ನು ಗೆದ್ದುಕೊಳ್ಳಬೇಕೆಂದು ಯುದ್ಧ ಮಾಡಿದ. ಅವನು ಕೊಂದದ್ದು ಒಡಿಯಾ ಭಾಷೆ ಮಾತನಾಡುತ್ತಿದ್ದ ಹಿಂದೂಗಳನ್ನು ಎಂದು ವ್ಯಾಖ್ಯಾನಿಸುವುದು ವಿಪರೀತ ವ್ಯಾಖ್ಯಾನವಲ್ಲವೆ?

ಇನ್ನು, ನಾವು ಇಂದು ಅಶೋಕನನ್ನು ಮಹಾನ್ ರಾಜ ಎಂದು ಗೌರವಿಸುತ್ತಿರುವುದು ಅವನು ಕಳಿಂಗದಲ್ಲಿ ಸಹಸ್ರಾರು ಹಿಂದೂಗಳನ್ನು ಕೊಂದು ವಿಜಯ ಸಾಧಿಸಿದ್ದಕ್ಕೆ ಖಂಡಿತಾ ಅಲ್ಲ. ಯುದ್ಧದ ಅನರ್ಥಗಳನ್ನು, ಅದು ತರುವ ಸಹಸ್ರಾರು ಅಮಾಯಕರ ಸಾವುನೋವುಗಳನ್ನು, ದುಃಖ ದುಮ್ಮಾನಗಳನ್ನು ಮನವರಿಕೆ ಮಾಡಿಕೊಂಡು ‘ಇನ್ನೆಂದೂ ಯುದ್ಧ ಮಾಡೆನು’ ಎಂಬ ಪ್ರತಿಜ್ಞೆ ತಾಳಿ, ಅಹಿಂಸೆ, ಶಾಂತಿ, ಮಾನವ ಕರುಣೆ, ದಯೆಗಳನ್ನು ಸಾರುವ ಬೌದ್ಧ ಧರ್ಮವನ್ನು ಅವಲಂಬಿಸಿದ್ದಷ್ಟೇ ಅಲ್ಲದೆ ಬೌದ್ಧ ಧರ್ಮ ಪ್ರಚಾರ ಮಾಡಲು ತನ್ನ ಮಗಳು ಮತ್ತು ತಮ್ಮನನ್ನು ಸಿಂಹಳಕ್ಕೆ ಕಳಿಸಿದ ಮಹಾನ್ ಶಾಂತಿಪ್ರಿಯರಾಜನಾಗಿ ಪರಿವರ್ತಿತನಾದನೆಂಬ ಕಾರಣಕ್ಕೆ. ಕಳಿಂಗ ಯುದ್ಧವೇ ಅವನ ಕೊನೆಯ ಯುದ್ಧವಾಯಿತು. ಇದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಚೆನ್ನಾಗಿ ಗೊತ್ತಿರುವಾಗ, ಕೇವಲ ಯುದ್ಧದಲ್ಲಿ ಕೊಲ್ಲುವ ಕ್ರಿಯೆಯನ್ನಷ್ಟನ್ನೇ ನೆಪ ಮಾಡಿಕೊಂಡು ಅಶೋಕನಂಥ ನಿಜಕ್ಕೂ ಮಹಾನ್ ರಾಜನನ್ನು  ಟಿಪ್ಪುವಿನೊಂದಿಗೆ ಹೋಲಿಸುವ ಕಲ್ಪನೆಯನ್ನೇ ಊಹಿಸಲಾಗುವುದಿಲ್ಲ. ಕೊಲ್ಲುವ ಕ್ರಿಯೆಯ ಮಟ್ಟಿಗೆ  ಇಬ್ಬರದೂ ಒಂದೇ ಬಗೆಯ ಕೃತ್ಯಗಳೆಂದು ಬೇಕಾದರೆ ಹೇಳಲಿ. ಆದರೆ ಅಶೋಕ ಮಹಾನ್ ಎನಿಸಿದ್ದು ಆ ನಂತರದಲ್ಲಿ ಪಶ್ಚಾತಾಪಪಟ್ಟು ಪರಿವರ್ತಿತನಾದದ್ದರಲ್ಲಿ. ಬುದ್ಧನ  ಅಹಿಂಸಾ ಧರ್ಮದ ಚಕ್ರವನ್ನು ಮತ್ತೊಮ್ಮೆ ಪ್ರವರ್ತಿಸಿದ ಕಾರಣಕ್ಕೆ. ಅಶೋಕ ಚಕ್ರ ನಮ್ಮ ರಾಷ್ಟ್ರಧ್ವಜದಲ್ಲಿ ಸ್ಥಾನ ಪಡೆದದ್ದಕ್ಕೆ ಮತ್ತು ಅಶೋಕ ಸ್ತಂಭದ ಸಿಂಹಗಳು ದೇಶದ ಲಾಂಛನವಾಗಿರುವುದಕ್ಕೆ ಕಾರಣ ಇದೇ.

ಹಾಗಲ್ಲದಿದ್ದರೆ ಅವನ ಆ ಕೊಲೆಯ ಕೃತ್ಯಕ್ಕೆ ಅವನು ಮಹಾನ್ ಆದ ಮತ್ತು ಆ ಕಾರಣಕ್ಕಾಗಿ ನಮ್ಮ ರಾಷ್ಟ್ರಧ್ವಜದಲ್ಲಿ ಮತ್ತು ದೇಶದ ಲಾಂಛನದಲ್ಲಿ ಅವನ ಸಿಂಹಗಳಿಗೆ ಸ್ಥಾನ ನೀಡಲಾಗಿದೆ ಎಂದು ವ್ಯಾಖ್ಯಾನಿಸಿದರೆ ಅದಕ್ಕೆ ಕಾರಣರಾದ ನಮ್ಮ ರಾಷ್ಟ್ರ ನಾಯಕರೆಲ್ಲ ಶುದ್ಧ ಮತಿಗೇಡಿಗಳು ಎನ್ನಬೇಕಾಗುತ್ತದೆ.

ಟಿಪ್ಪುವಿನ ಬಲಾತ್ಕಾರ ಮತಾಂತರದ ವಿಷಯವನ್ನು ಒತ್ತಟ್ಟಿಗಿಟ್ಟು ನೋಡಿದರೂ ಅವನ ಕಾಲದ ಇತರ ದೇಶಿ ರಾಜರಂತೆ ಆತ ಬ್ರಿಟಿಷರಿಗೆ ಶರಣಾಗದೆ, ಮಕ್ಕಳನ್ನು ಒತ್ತೆಯಿಡುವಂಥ ಕರುಳು ಕರಗಿಸುವ ಕೃತ್ಯಕ್ಕೂ ಮುಂದಾಗಿ ವೀರಯೋಧನಂತೆ ಕಾದು ಮಡಿದದ್ದು, ಹೊಸ ರೀತಿಯ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡದ್ದು, ಆಡಳಿತದಲ್ಲಿ ಸುಧಾರಣೆ ತರಬಯಸಿದ್ದು ಇವೆಲ್ಲವನ್ನೂ ಎಂದೂ ಕಡೆಗಣಿಸುವಂತೆಯೇ ಇಲ್ಲ. ಈಗಿನ ಆವೇಶ ಇಳಿದ ಮೇಲಾದರೂ ಅವನನ್ನು ಕುರಿತ ನಿಜವಾದ ಮೌಲ್ಯಮಾಪನ ಸಾಧ್ಯವಾಗಬೇಕು. ಅಥವಾ ಈಗ ಆಕಾರ್ ಪಟೇಲ್ ಅವರು ಅಶೋಕನನ್ನು ಅಪವ್ಯಾಖ್ಯಾನಿಸಿದಂತೆ ಟಿಪ್ಪುವಿನ ವಿಷಯದಲ್ಲೂ ನಿಜವಾದ ಮೌಲ್ಯಮಾಪನಕ್ಕಿಂತ ಅಪವ್ಯಾಖ್ಯಾನವೇ ಸ್ಥಾಯಿಯಾದರೆ ಆಶ್ಚರ್ಯವಿಲ್ಲ. ಇತಿಹಾಸ ಅತ್ಯಂತ ನಿಷ್ಕರುಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT