ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯ ಮತ್ತು ಮೋಜಿನ ಆಟ ‘ಪೋಕಿಮಾನ್‌’

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ಮನೆಯ ಮುಂದಿನ ಕೈತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ದುಂಬಿಯನ್ನೋ ಏರೊಪ್ಲೇನ್‌ ಹುಳವನ್ನೋ ಹಿಡಿಯಲು ಹೋಗಿದ್ದು ನೆನಪಿದೆಯಾ? ಇನ್ನೇನು ಕೈಗೆ ಸಿಕ್ಕಿಯೇ ಬಿಡ್ತು ಎನ್ನುವಷ್ಟರಲ್ಲಿ ಹೂವಿನಿಂದ ಹೂವಿಗೆ ಹಾರಿ, ಎಲೆಗಳ ಮರೆಯಲ್ಲಿ ಮರೆಯಾಗಿ, ಮನೆಯಂಗಳದಿಂದ ಬಯಲಿಗೆ ಜಿಗಿದು, ಇಡೀ ತೋಟದ ತುಂಬೆಲ್ಲಾ ಓಡಾಡಿಸಿ ಕೊನೆಗೆ ಕೈಗೆ ಸಿಗದೇ ತಪ್ಪಿಸಿಕೊಂಡು ಹೋದ ಚಿಟ್ಟೆಯ ನೆನಪು ಇನ್ನೂ ನಿಮ್ಮ ನೆನಪಿನ ಸ್ಮೃತಿ ಕೋಶದಲ್ಲಿದೆಯಾ?

ಬಾಲ್ಯದ ತುಂಟಾಟದ ಮಧುರ ನೆನಪುಗಳನ್ನು ಮರಳಿ ಪಡೆಯಲು ಬಯಸುತ್ತಿದ್ದೀರಾ? ಹಾಗಾದರೆ ಮೊಬೈಲ್‌ ಕೈಗೆತ್ತಿಕೊಳ್ಳಿ. ‘ಪೋಕಿಮಾನ್‌ ಗೊ’ ಎಂಬ ಗೇಮಿಂಗ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಈ ಆ್ಯಪ್‌ನಲ್ಲಿರುವ ಕಾಲ್ಪನಿಕ ಕ್ಯಾರೆಕ್ಟರ್‌ಗಳನ್ನು  ವಾಸ್ತವ ಜಗತ್ತಿನಲ್ಲಿ ಹುಡುಕಲು ಸಿದ್ಧರಾಗಿ.

‘ಪೋಕಿಮಾನ್‌  ಗೊ’ ಎನ್ನುವುದು ಇತ್ತೀಚೆಗೆ ಭಾರಿ ಸಂಚಲನ ಉಂಟುಮಾಡಿರುವ ಮೊಬೈಲ್‌ ಗೇಮ್‌ ಅಪ್ಲಿಕೇಷನ್‌.  ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರು ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಭಾರತಕ್ಕಿನ್ನೂ ಅಧಿಕೃತವಾಗಿ  ಕಾಲಿಟ್ಟಿಲ್ಲ.  ಮೊಬೈಲ್‌ ಗೇಮ್‌ ಎಂದ ಮಾತ್ರಕ್ಕೆ ಇದು ಕುಳಿತಲ್ಲೇ ಕುಳಿತು ಆಡುವ ಆಟವಲ್ಲ.

ದೈಹಿಕ ಶ್ರಮ ಬೇಡುತ್ತದೆ. ಮೊಬೈಲ್‌ನಲ್ಲಿ ನೀವು ಆಯ್ಕೆ ಮಾಡಿಕೊಂಡ ಕ್ಯಾರೆಕ್ಟರ್ ಅಥವಾ ಜೀವಿಯನ್ನು ಹೊರಾಂಗಣದಲ್ಲಿ ಹುಡುಕಬೇಕು. ಜನಜಂಗುಳಿ ಇರುವ ಪ್ರದೇಶ, ಉದ್ಯಾನ, ಕಾಡು ಹೀಗೆ ಅರಸುತ್ತಾ ಹೋಗಬೇಕು. ಹೀಗೆ ಅರಸುತ್ತಾ ಹೋಗಿ ಪೋಕಿಮಾನ್‌  ಹಿಡಿಯುವುದರಲ್ಲೇ ಈ ಆಟದ ಮಜಾ ಇದೆ.  ಈ ಆಟದ ಹುಚ್ಚು ಹತ್ತಿಸಿಕೊಂಡವರು ಪೋಕಿಮಾನ್‌ ಬೆನ್ನತ್ತಿ, ಉದ್ಯಾನ, ಕಾಡುಮೇಡು ಅಲೆದು ಬಂದಿದ್ದಾರೆ.

ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಆಟದ ಕುರಿತು ಭಾರಿ ಚರ್ಚೆಗಳು  ನಡೆಯುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಪೋಕಿಮಾನ್‌  ಆಡಲು ಗೆಳೆಯರನ್ನು ಉದ್ಯಾನಗಳಿಗೆ ಆಹ್ವಾನಿಸುತ್ತಿರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಮೊಬೈಲ್‌ನಲ್ಲಿ 4ಜಿ ಇರಬೇಕು. ಜಿಪಿಎಸ್‌ ಚಾಲನೆ ಮಾಡಿಟ್ಟುಕೊಳ್ಳಬೇಕು, ಕ್ಯಾಮೆರಾ ತೆರೆದಿಟ್ಟಕೊಂಡು ಹುಡುಕುತ್ತಾ ಹೋಗಬೇಕು.

ಗೂಗಲ್‌ ಮ್ಯಾಪ್‌ನಲ್ಲಿ ನೀವು ಹುಡುಕುತ್ತಿರುವ ಪೋಕಿಮಾನ್‌  ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲಿದೆ ಎನ್ನುವುದರ ಸುಳಿವು ಸಿಗುತ್ತದೆ. ನಿಮ್ಮ ದುಬಾರಿ ಮೊಬೈಲ್‌ ಅನ್ನು ಈ ಆಟಕ್ಕೆ ಬಳಸಿಕೊಳ್ಳಲು ಸಿದ್ಧರಿಲ್ಲ ಎಂದರೆ, ಇದಕ್ಕಾಗಿಯೇ ಪೋಕಿಮಾನ್‌  ಗೊ ಪ್ಲಸ್‌ ಅಥವಾ ಪೋಕ್‌ವಾಚ್‌ ಎಂಬ ಧರಿಸಬಹುದಾದ ಗ್ಯಾಡ್ಜೆಟ್‌ ಕೂಡ ಅಭಿವೃದ್ಧಿಪಡಿಸಲಾಗಿದೆ. ಇದನ್ನು ನಿಂಟೆಂಡೊ ಕಂಪೆನಿ ಅಭಿವೃದ್ಧಿಪಡಿಸಿದೆ.

ಪೋಕಿಮಾನ್‌ ಹತ್ತಿರ ಸುಳಿದರೆ  ತಕ್ಷಣ ಈ ಡಿವೈಸ್‌ ಬ್ಲೂಟೂಥ್‌ ಮೂಲಕ ಬಳಕೆದಾರನಿಗೆ ಅದರ ಸುಳಿವು ನೀಡುತ್ತದೆ. ನೀವು ಹಿಡಿಯುವ ಪೋಕಿಮಾನ್‌ಗಳಿಗೆ ನೀವೇ ಹೆಸರು ಕೊಟ್ಟುಕೊಳ್ಳಬಹುದು. ಕೆಲವುಗಳ ಚರ್ಮದ ಬಣ್ಣಗಳನ್ನು ಬದಲಾಯಿಸಬಹುದು. ಪೋಕ್‌ವಾಚ್‌ ಖರೀದಿಸುವವವರಿಗೆ ಈ ಅಪ್ಲಿಕೇಷನ್‌ ಉಚಿತವಾಗಿ ಲಭಿಸುತ್ತದೆ.

ಅಪ್ಲಿಕೇಷನ್‌ ಆಗಿ ಬದಲಾದ ಹವ್ಯಾಸ
ಪೋಕಿಮಾನ್‌ ಎಂದರೆ ಏನು ಎಂದು ತಿಳಿಯಲು 90ರ ದಶಕದ ಕಡೆಗೆ ತಿರುಗಿ ನೋಡಬೇಕು. 1990ರ ಆಸುಪಾಸಿನಲ್ಲಿ ಪೋಕಿಮಾನ್‌ ಎಂಬ ವಿಡಿಯೊ ಗೇಮ್‌ ಸರಣಿ ಭಾರಿ ಜನಪ್ರಿಯವಾಗಿತ್ತು. ಜಪಾನಿನ ಸತೊಶಿ ತಜಿರಿ (Satoshi Tajiri) ಎಂಬ ವಿಡಿಯೊ ಗೇಮ್‌ ವಿನ್ಯಾಸಕಾರ ಅಭಿವೃದ್ಧಿಪಡಿಸಿದ ಜನಪ್ರಿಯ ಸರಣಿ ಇದು.

ಬಾಲ್ಯದಲ್ಲಿ ಕೀಟಗಳ ಬಗ್ಗೆ ಅಪಾರ ಒಲವಿದ್ದ ತಜಿರಿ, ಬಾಲ್ಯದ ಹವ್ಯಾಸವಾದ ಕೀಟ ಹಿಡಿಯುವ ತುಂಟಾಟವನ್ನು ಕಂಪ್ಯೂಟರ್‌ ಪರದೆಯ ಮೇಲೂ ಸಾಕಾರಗೊಳಿಸಿದ್ದರು.ಸ್ವತಃ ಕೀಟ ಸಂಗ್ರಹಣೆಕಾರನೂ ಆಗಿದ್ದ ತಜಿರಿ ಈ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲು ಸತತ ಆರು ವರ್ಷ ಶ್ರಮ ವಹಿಸಿದ್ದರು. ಆರಂಭದಲ್ಲಿ ಗೇಮ್‌ ಫ್ರೀಕ್‌ ಎಂಬ ಕಂಪೆನಿ ಹುಟ್ಟುಹಾಕುವ ಮೂಲಕ ಪೋಕಿಮಾನ್‌ ರೆಡ್‌ ಮತ್ತು ಪೋಕಿಮಾನ್‌ ಬ್ಲೂ ಎಂಬ ಎರಡು ವಿಡಿಯೊ ಗೇಮ್‌ ಅನಾವರಣಗೊಳಿಸಿದ್ದರು.

1999ರಲ್ಲಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ತಜಿರಿ, ‘ನಗರೀಕರಣದ ಪ್ರಭಾವದಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಳಹುಪ್ಪಡಿಗಳನ್ನು ಕಾಣುವುದೇ ಅಪರೂಪವಾಗಿದೆ. ಮಕ್ಕಳು ಚಿಟ್ಟೆಗಳನ್ನು ಹಿಡಿಯಬೇಕಾದರೆ ಬೇಸಿಗೆ ರಜೆ ಬರುವ ತನಕ ಕಾಯಬೇಕು. ಪಾಪ ಅವರು ಮನೆಯೊಳಗೇ ಆಡಿಕೊಂಡಿರಬೇಕಾದ ಕಾಲ ಇದು.ಇಂದಿನ ಮಕ್ಕಳಿಗೆ ಮತ್ತು ವಯಸ್ಕರಿಗೆ ಬಾಲ್ಯವನ್ನು ಮರಳಿ ಕೊಡಲು ಸಾಧ್ಯವಿರುವಂತಹ  ಗೇಮಿಂಗ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುವುದು ನನ್ನ ಕನಸಾಗಿತ್ತು.

ಈ ಯೋಚನೆಯಲ್ಲೇ ಪೋಕಿಮಾನ್‌ ಕ್ಯಾರೆಕ್ಟರ್‌ ಹುಟ್ಟಿಕೊಂಡಿತು’ ಎನ್ನುತ್ತಾರೆ. ತಜಿರಿ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದರೆ ಅವರ ಸ್ನೇಹಿತ ಮತ್ತು ಚಿತ್ರಕಾರನಾಗಿದ್ದ  ಕೆನ್‌ ಸುಗಿಮೊರಿ, 150ಕ್ಕೂ ಹೆಚ್ಚು ವಿಭಿನ್ನ ಪೋಕಿಮಾನ್‌ ಕ್ಯಾರೆಕ್ಟರ್‌ಗಳನ್ನು ರಚಿಸಿದ್ದರು.

ಈ ಕಾಲ್ಪನಿಕ ಕ್ಯಾರೆಕ್ಟರ್‌ ಗಳನ್ನು ಈ ಅಪ್ಲಿಕೇಷನ್ಸ್‌ಗೆ ಅಳವಡಿಸಲಾಗಿತ್ತು. ಆದರೆ, ಇವರಿಬ್ಬರು ಪೋಕಿಮಾನ್‌ ಅಭಿವೃದ್ಧಿಪಡಿಸಿದ ಕಾಲಘಟ್ಟದಲ್ಲಿ ಕಂಪ್ಯೂಟರ್‌ ಕಾರ್ಯನಿರ್ವಹಣೆ ಈಗಿನಷ್ಟು ವೇಗವಿರಲಿಲ್ಲ. ಚಿತ್ರರಚನೆಯಲ್ಲಿ ಬಳಸಲು ಬಣ್ಣಗಳ ಆಯ್ಕೆಯೂ ಸೀಮಿತವಾಗಿತ್ತು. ಹಾಗಾಗಿ ತಜಿರಿ ಚಮತ್ಕಾರ ಪೂರ್ಣವಾಗಿ ಬೆಳಕಿಗೆ ಬಂದಿರಲಿಲ್ಲ. ಜಪಾನ್‌ ಮತ್ತು ಅಮೆರಿಕದಲ್ಲಿ ಈ ಕಾಲ್ಪನಿಕ ಚಿತ್ರಗಳನ್ನು ಆಧರಿಸಿ, ಕಾರ್ಟೂನ್‌ ಟಿವಿ ಸರಣಿಗಳು ಪ್ರಾರಂಭವಾದ ನಂತರ ಪೋಕಿಮಾನ್‌ ಜನಪ್ರಿಯವಾಯಿತು.

ಇದೀಗ ತಜಿರಿ ಆವಿಷ್ಕಾರದ ಸಂಭ್ರಮಾಚರಣೆ ಭಾಗವಾಗಿ ಜಪಾನ್‌ ಮೂಲದ ನಿಂಟೆಂಡೊ, ಗೇಮ್‌ಫ್ರೀಕ್‌ ಮತ್ತು ನಿಯಾಂಟಿಕ್‌ ಕಂಪೆನಿಗಳು ಜಂಟಿಯಾಗಿ ಪೋಕಿಮಾನ್‌ ಮೊಬೈಲ್‌ ಗೇಮ್‌ ಅಪ್ಲಿಕೇಷನ್‌ ಬಿಡುಗಡೆ ಮಾಡಿವೆ. ಇದರ ಹಿಂದೆಯೂ ಒಂದು ರೋಚಕ ಕಥೆ ಇದೆ.

ಪ್ರತಿ ವರ್ಷ ಗೂಗಲ್ ಕಂಪೆನಿ ಮೊಬೈಲ್‌ ಗೇಮಿಂಗ್‌ ಅಪ್ಲಿಕೇಷನ್ಸ್‌ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮ್ಮೇಳನ ಏರ್ಪಡಿಸುತ್ತದೆ. 2014ರಲ್ಲಿ ‘ಪೋಕಿಮಾನ್‌ ಚಾಲೆಂಜ್‌’ ಎಂಬ ತುಂಟಾಟ ಆಯೋಜಿಸಿತ್ತು.

ನಿಂಟೆಂಡೊ ಕಂಪೆನಿಯ ಮಾಜಿ ಅಧ್ಯಕ್ಷ ಸಟೊರು ಇವಾತ, ಪೋಕಿಮಾನ್‌ ಕಂಪೆನಿಯ ತ್ಸುನೆಕ್ಷು ಇಶಿಹರ ಮತ್ತು  ಗೂಗಲ್‌ ಮ್ಯಾಪನ್‌ನ ಮುಖ್ಯಸ್ಥ ಟಟ್ಸು ನೊಮುರಾ ಈ ಸಭೆಯಲ್ಲಿ ಸುಮ್ಮನೆ ಹರಟೆಗೆ ಕುಳಿತಾಗ, ತಜಿರಿ ಅಭಿವೃದ್ಧಿಪಡಿಸಿದ ಕಾಲ್ಪನಿಕ ಕ್ಯಾರೆಕ್ಟರ್‌ಗಳನ್ನು ಗೂಗಲ್‌ ಮ್ಯಾಪ್‌ನಲ್ಲಿ ಹುಡುಕುವ ಹಾಗಿದ್ದರೆ ಎನ್ನುವ ಯೋಚನೆ ಚರ್ಚೆಗೆ ಬಂತು. ತಮಾಷೆಯಾಗಿ ಪ್ರಾರಂಭಗೊಂಡ ಈ ಚರ್ಚೆಯಿಂದಲೇ ಪೋಕಿಮಾನ್‌ ಮೊಬೈಲ್‌ ಆ್ಯಪ್‌ ಹುಟ್ಟಿಕೊಂಡಿತು. ಈಗ ಪೋಕಿಮಾನ್‌  ಅಪ್ಲಿಕೇಷನ್‌ನಲ್ಲಿ ಗೂಗಲ್‌ ಕಂಪೆನಿಯದೇ ಹೆಚ್ಚಿನ ಹೂಡಿಕೆ ಇದೆ.

ಅಪಾಯ ಮತ್ತು ಮೋಜು
ಪಾಕೆಟ್‌ ಮಾನ್‌ಸ್ಟರ್ಸ್‌ ಎನ್ನುವ ಜಪಾನ್‌ ಶೀರ್ಷಿಕೆಯ ಸಂಕ್ಷಿಪ್ತ ರೂಪವೇ ಪೋಕಿಮಾನ್‌. ಆಗ್ಮೆಂಟೆಡ್‌ ರಿಯಾಲಿಟಿ (augmented reality - AR) ತಂತ್ರಜ್ಞಾನ ಆಧರಿಸಿದ ಇದೊಂದು ಕುಚೇಷ್ಟೆಯ ಆಟ. ಹುಚ್ಚಾಟವೂ ಹೌದು.  ಜಿಪಿಎಸ್‌ ಚಾಲನೆಯಲ್ಲಿಟ್ಟುಕೊಂಡು ಗೂಗಲ್‌ ಮ್ಯಾಪ್‌ ಸಹಾಯದಿಂದ ಪೋಕಿಮಾನ್‌ ಹುಡುಕುತ್ತಾ ಹೋಗುವುದು.

ಎಷ್ಟು ರೋಚಕತೆ ಇದೆಯೋ ಅಷ್ಟೇ ಅಪಾಯವೂ ಇದೆ ಎನ್ನುತ್ತಾರೆ ಸೈಬರ್‌ ತಜ್ಞರು. ಆದರೆ, ಈ ಆಟದಿಂದ ಮಾನಸಿಕ ಆರೋಗ್ಯ  ವೃದ್ಧಿಯಾಗುತ್ತದೆ, ಮನುಷ್ಯ ಹೆಚ್ಚು ಸಂಘಜೀವಿಯಾಗುತ್ತಾನೆ ಎಂಬುದು ಕಂಪೆನಿಯ ಹೇಳಿಕೆ. ಆಟದಲ್ಲಿ ತನ್ಮಯರಾಗಿ ಪೋಕಿಮಾನ್‌ ಹುಡುಕುತ್ತಾ ಹೋಗುವಾಗ ಎಚ್ಚರಿಕೆ  ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ರಸ್ತೆ ದಾಟುವಾಗ, ಸೇತುವೆ ಮೇಲೆ ನಡೆಯುವಾಗ ತುಸು ಹೆಚ್ಚೇ ಎಚ್ಚರಿಕೆ ವಹಿಸಬೇಕು. ಜುಲೈ 6ರಂದು ಈ ಅಪ್ಲಿಕೇಷನ್‌ ಅಮೆರಿಕದಲ್ಲಿ ಬಿಡುಗಡೆಗೊಂಡಿದೆ. ಆ ನಂತರ ಅಂದರೆ ಕಳೆದ  20 ದಿನಗಳಲ್ಲಿ ಪೋಕಿಮಾನ್‌  ಆಡಲು ಹೋಗಿ ಈಗಾಗಲೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಎಡವಿ ಬಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ. 

ಕೆಲವು ಪೋಕಿಮಾನ್‌ಗಳು ಸುಲಭವಾಗಿ ಸಿಗುತ್ತವೆ. ಇನ್ನು ಕೆಲವು ನೀರಿನೊಳಗೆ, ಕಾಡಿನೊಳಗೆ, ಹುಲ್ಲಿನೊಳಗೆ,ಮರಗಳ ಎಲೆಗಳ ಮರೆಯಲ್ಲಿ ಅಡಗಿಕೊಂಡಿರುತ್ತವೆ. ಹುಡುಕಿ ಹಿಡಿಯುವುದು ಕಷ್ಟ. ಮೊಬೈಲ್‌ ನೆಟ್‌ವರ್ಕ್‌ ಸಮಪರ್ಕವಾಗಿಲ್ಲದಿದ್ದರೆ ಪದೇ ಪದೇ ಅಪ್ಲಿಕೇಷನ್‌ ಕ್ರ್ಯಾಶ್‌ ಆಗುವ ಸಾಧ್ಯತೆ ಇರುತ್ತದೆ. ಒಮ್ಮೆ ಅಪ್ಲಿಕೇಷನ್‌ ಸ್ಥಗಿತಗೊಂಡರೆ ಮತ್ತೆ ಮುಂಚಿನಂತೆ ತೆರೆದುಕೊಳ್ಳಲು ಕನಿಷ್ಠ 10 ನಿಮಿಷ ಬೇಕು.

ಈ ಆಟ ಆಡಲು ಹೊರಾಂಗಣದಲ್ಲಿ ತಾಸುಗಟ್ಟಲೆ ನಡೆಯಬೇಕಾದ್ದರಿಂದ ಕೆಲವರಿಗೆ ತುರಿಕೆ, ಚರ್ಮ ಸುಡುವುದು, ನಿರ್ಜಲೀಕರಣ ಸಮಸ್ಯೆ ಉಂಟಾಗಿರುವುದೂ ವರದಿಯಾಗಿದೆ. ಕೆಲವರಿಗೆ ವಿಷ ಜಂತುಗಳು ಕಚ್ಚಿವೆ. ಇನ್ನು ಕೆಲವರು ಆಟವಾಡುತ್ತಾ ನಿರ್ಜನ ಸ್ಥಳಗಳಿಗೆ ಹೋಗಿ  ದರೋಡೆಗೂ ಒಳಗಾಗಿದ್ದಾರೆ.

ಸಾರ್ವಕಾಲಿಕ ದಾಖಲೆ
ಸದ್ಯ ಇದು ಅತಿ ಹೆಚ್ಚು ಮಂದಿ ಬಳಸುತ್ತಿರುವ ಸ್ಮಾರ್ಟ್‌ ಡಿವೈಸ್‌ ಆ್ಯಪ್‌ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಅಮೆರಿಕದಲ್ಲಿ ಭಾರಿ ಜನಪ್ರಿಯವಾಗಿದ್ದ ಕ್ಯಾಂಡಿ ಕ್ರಶ್‌, ಟಿಂಡರ್ ಡೇಟಿಂಗ್ ಆ್ಯಪ್‌ಗಳನ್ನೂ ಪೋಕಿಮಾನ್‌ ಹಿಂದಿಕ್ಕಿದೆ. ಆಂಡ್ರಾಯ್ಡ್‌ನಲ್ಲಿ ಎಆರ್‌ ತಂತ್ರಜ್ಞಾನ ಆಧರಿಸಿದ ಹಲವು ಗೇಮ್‌ಗಳು ಬಂದಿವೆ. ಆದರೆ, ಪೋಕಿಮಾನ್‌  ಜನಪ್ರಿಯತೆ ಮುಂದೆ ಇವು ಯಾವುದೂ ಲೆಕ್ಕಕ್ಕೆ ಇಲ್ಲದಂತಾಗಿದೆ.

ಪೋಕಿಮಾನ್‌ ಬಿಡುಗಡೆಯಾದ ಒಂದು ವಾರದಲ್ಲೇ ಅಮೆರಿಕದಲ್ಲಿ 75ಲಕ್ಷ ಮಂದಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಟ್ವಿಟರ್‌ ಖಾತೆದಾರರ ಸಂಖ್ಯೆಯನ್ನೂ ಹಿಂದಿಕ್ಕಿ ಪೋಕಿಮಾನ್‌  ಆಟಗಾರರ ಸಂಖ್ಯೆ ಬೆಳೆಯುತ್ತಿದೆ ಎನ್ನುತ್ತದೆ ಮತ್ತೊಂದು ವರದಿ.  ಸದ್ಯ 35 ವರ್ಷ ದಾಟಿದವರಲ್ಲಿ ಹೆಚ್ಚಿನವರು 90ರ ದಶಕದ ಪೋಕಿಮಾನ್‌  ಸರಣಿ ಆಡಿರುತ್ತಾರೆ. ಹೀಗಾಗಿ ಈ ಗೇಮ್‌ ಡೌನ್‌ಲೋಡ್‌ ಮಾಡಿಕೊಳ್ಳುವುದರಲ್ಲಿ ಯುವಕರೂ, ವಯಸ್ಕರೂ ಸೇರಿದ್ದಾರೆ.

ಈ ಅಪ್ಲಿಕೇಷನ್‌ಗೆ ಲಾಗಿನ್‌ ಆಗುವಾಗ ಇತರೆ ಆ್ಯಪ್‌ಗಳಿಗಿಂತ ತುಸು ಹೆಚ್ಚೇ ವೈಯಕ್ತಿಕ ಮಾಹಿತಿ ನೀಡಬೇಕಾಗುತ್ತದೆ.  ಗೂಗಲ್‌ ಅಕೌಂಟ್‌ ಮೂಲಕ ಇದಕ್ಕೆ ಲಾಗಿನ್‌ ಆದರೆ, ಈ ಅಪ್ಲಿಕೇಷನ್‌ ನಿಮ್ಮ ಇಡೀ ಗೂಗಲ್‌ ಅಕೌಂಟ್‌ನ ವಿವರ ಪಡೆದುಕೊಳ್ಳುತ್ತದೆ.  ಜಿಪಿಎಸ್‌ ಬಳಸುವುದರಿಂದ ಇಂಟರ್‌ನೆಟ್‌ ದತ್ತಾಂಶ ಮಂಜುಗಡ್ಡೆಯಂತೆ ಕರಗುತ್ತಿರುತ್ತದೆ. ನಿರಂತರವಾಗಿ ಕ್ಯಾಮೆರಾ ಚಾಲನೆಯಲ್ಲಿಡುವುದರಿಂದ ಬ್ಯಾಟರಿ ಬೇಗನೆ ಸೋರಿ ಹೋಗುತ್ತದೆ. ಹೀಗಾಗಿ ಆಟ ಆಡಲು ಹೊರಾಂಗಣಕ್ಕಿಳಿದರೆ ಪವರ್‌ ಬ್ಯಾಂಕ್‌ ಜತೆಯಲ್ಲೇ ಇಟ್ಟುಕೊಂಡಿರಬೇಕು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT