ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೇಕ್ಷಿತ ‘ಮೆನು’ ಬಡಿಸುವ ಮನ!

ರಸಾಸ್ವಾದ
Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಮಲ್ಲೇಶ್ವರ, ಮಜೆಸ್ಟಿಕ್‌ಗೆ ಹೊಂದಿಕೊಂಡಂತಿರುವ ರಾಜಾಜಿನಗರ ಸದಾ ಜನರಿಂದ ಗಿಜಿಗುಡುತ್ತದೆ. ಅದೇ ಸ್ಥಳದಲ್ಲಿರುವ ಫೇರ್‌ಫೀಲ್ಡ್ ಮ್ಯಾರಿಯೆಟ್‌ ಹೋಟೆಲ್‌ ಒಳಹೊಕ್ಕರೆ ಪರಿಸ್ಥಿತಿ ಭಿನ್ನ. ಆಕರ್ಷಕ ಒಳಾಂಗಣ ವಿನ್ಯಾಸದಿಂದ ಗಮನ ಸೆಳೆಯುವ ಈ ಹೋಟೆಲ್‌ನಲ್ಲಿ ಎರಡು ರೆಸ್ಟೋರೆಂಟ್‌ಗಳಿವೆ. ಒಂದು ಕಾವ. ಮತ್ತೊಂದು ವೈಟ್‌ ಸ್ಮೋಕ್‌ ಬಾರ್ಬೆಕ್ಯು.

ಶುಕ್ರವಾರ ಮತ್ತು ಶನಿವಾರ ಮಾತ್ರ ತೆರೆದಿರುವ ವೈಟ್‌ ಸ್ಮೋಕ್‌ ಬಾರ್ಬೆಕ್ಯು ಏಳನೇ ಮಹಡಿಯಲ್ಲಿದ್ದು, ತನ್ನ ಗ್ರಾಹಕರಿಗೆ ಮೆಡಿಟರೇನಿಯನ್‌ ಭಕ್ಷ್ಯಗಳನ್ನು ಉಣಬಡಿಸುತ್ತದೆ. ರೆಸ್ಟೋರೆಂಟ್‌ಗೆ ಹೊಂದಿಕೊಂಡಂತೆ ಇಲ್ಲೊಂದು ಈಜುಕೊಳವೂ ಇದೆ. ರಾತ್ರಿವೇಳೆ ಇಲ್ಲಿ ನಿಂತು ನೋಡಿದರೆ ಬೆಂಗಳೂರು ಸುಂದರವಾಗಿ ಕಾಣುತ್ತದೆ. ಏಕಾಂತಕ್ಕೆ ಭಂಗ ಬರದಂತೆ ಕ್ಯಾಂಡಲ್‌ಲೈಟ್‌ ಡಿನ್ನರ್‌ ಮಾಡಬಯಸುವವರಿಗೆ ಇದು ಹೇಳಿ ಮಾಡಿಸಿದ ಸ್ಥಳ.

ಏಳನೇ ಮಹಡಿ ತಲುಪಿದರೆ ಕ್ಷಣಕಾಲ ಗೊಂದಲ ಮೂಡುತ್ತದೆ. ಯಾಕೆಂದರೆ, ಅಲ್ಲಿ ಕಾಣಿಸುವ ಎರಡು ಬಾಗಿಲಿನಲ್ಲಿ ರೆಸ್ಟೋರೆಂಟ್‌ನ ಬಾಗಿಲು ಯಾವುದು ಎಂದು ತಕ್ಷಣಕ್ಕೆ ತಿಳಿಯುವುದಿಲ್ಲ. ಸಣ್ಣದಾಗಿ ಕೇಳುತ್ತಿದ್ದ ಸಂಗೀತದ ಜಾಡು ಹಿಡಿದು ಅಂದಾಜಿನ ಮೇಲೆ ಒಂದು ಬಾಗಿಲು ತೆಗೆದಿದ್ದಾಯಿತು. ಅದೃಷ್ಟಕ್ಕೆ ಅದೇ ರೆಸ್ಟೋರೆಂಟ್‌ ಆಗಿತ್ತು. ಒಳಕ್ಕೆ ಕಾಲಿಟ್ಟ ತಕ್ಷಣ ಈಜುಕೊಳ ಮತ್ತು ಅದರ ಪಕ್ಕದಲ್ಲಿದ್ದ ಟೇಬಲ್‌ ಮೇಲೆ ಕುಳಿತು ಊಟ ಸವಿಯುತ್ತಿದ್ದ ವಿದೇಶಿ ಜೋಡಿ ಕಣ್ಣಿಗೆ ಬಿತ್ತು.

ಈಜುಕೊಳ ದಾಟಿಕೊಂಡು ಅಡುಗೆ ಮನೆಯತ್ತ ಹೆಜ್ಜೆಹಾಕುತ್ತಿದ್ದಾಗ ಗೋಡೆಗೆ  ನೇತುಹಾಕಿದ್ದ ಮೂರು ಹಲಗೆಗಳು ಕಂಡವು. ಪ್ರೊಟೀನ್ಸ್, ರಬ್ಸ್‌ ಮತ್ತು ಸಾಸಸ್‌ ಎಂಬ ತಲೆಬರಹವಿದ್ದ ಆ ಹಲಗೆಯ ಮೇಲೆ ವೆಜ್‌ ಮತ್ತು ನಾನ್‌ವೆಜ್‌ ಬಾರ್ಬೆಕ್ಯು, ಆ ತಿನಿಸುಗಳಿಗೆ ಅತ್ಯುತ್ತಮ ಕಾಂಬಿನೇಷನ್‌ ಎನಿಸುವ ಗಾರ್ಲಿಕ್‌, ಮಶ್ರೂಮ್‌, ರೆಡ್‌ ಪೆಪ್ಪರ್‌ ಮತ್ತಿತರ ಸಾಸ್‌ಗಳ ಪಟ್ಟಿಯಿತ್ತು.

ಈಗ ಇಲ್ಲಿ ಸಿಗುವ ತಿನಿಸುಗಳು ಮತ್ತು ಅವುಗಳ ರುಚಿಯ ಬಗ್ಗೆ ತಿಳಿದುಕೊಳ್ಳೋಣ. ಗ್ರಾಹಕರು ಟೇಬಲ್‌ ಮೇಲೆ ಕುಳಿತ ಎರಡು–ಮೂರು ನಿಮಿಷದಲ್ಲಿ ಸರ್ವರ್‌ ನಾಚೋಸ್‌ ತಂದಿಟ್ಟ. ಬೇರೆಡೆ ಸಿಗುವ ನಾಚೋಸ್‌ಗಿಂತ ಇಲ್ಲಿನ ರುಚಿ ಸ್ವಲ್ಪ ಚೆನ್ನಾಗಿದೆ. ಸುಮ್ಮನೆ ಹರಟುತ್ತಾ ಟೊಮೊಟೊ ಚಟ್ನಿ ಜೊತೆ  ನಾಚೋಸ್‌ ತಿನ್ನುತ್ತಿದ್ದರೆ ಅವು ಖಾಲಿಯಾಗಿದ್ದೇ ತಿಳಿಯುವುದಿಲ್ಲ. 

ಇಲ್ಲಿನ ಬ್ರೊಕೋಲಿ ಸೂಪ್ ಟೇಸ್ಟ್‌ ಸೂಪರ್‌ ಆಗಿದೆ. ಭಾರತೀಯ ಸ್ವಾದದ, ಅಷ್ಟೇನೂ ತಿಳಿಯಾಗಿಲ್ಲದ ಈ ಸೂಪ್‌ನಲ್ಲಿ ಅಣಬೆ, ಕೋಸುಗಡ್ಡೆ, ಕ್ಯಾರೆಟ್‌ ಹಾಗೂ ಇತರೆ ತರಕಾರಿಗಳು ಭರ್ಜರಿಯಾಗಿರುತ್ತವೆ. ರುಚಿಯೂ ಚೆನ್ನಾಗಿದೆ. ಸರ್ವರ್‌ ತಂದುಕೊಟ್ಟ ಪಾಂಫ್ರೆಟ್‌ ಫ್ರೈ ಅನನ್ಯ ಎನ್ನಲು ಹಲವು ಕಾರಣಗಳಿವೆ. ಈ ಮೀನನ್ನು ಟಾಯ್‌ ಸೈಕಲ್‌ನ ಮೇಲೆ ಇರಿಸಿ ಸರ್ವ್‌ ಮಾಡಲಾಗುತ್ತದೆ. ಬಡಿಸುವ ರೀತಿಯಲ್ಲಿ ಭಿನ್ನತೆ ಬಯಸುವ ಗ್ರಾಹಕರಿಗೆ ಇಂತಹ ಪ್ರಯತ್ನಗಳು ತುಂಬ ಖುಷಿಪಡಿಸುತ್ತವೆ.

ಆದರೆ, ಇಲ್ಲಿ ಬಡಿಸುವ ರೀತಿಯಲ್ಲಿನ ಭಿನ್ನತೆಯಿಂದಷ್ಟೇ ಅಲ್ಲದೇ, ಅದರ ರುಚಿಯಿಂದಲೂ ಇಷ್ಟವಾಯಿತು. ಟಾಯ್‌ ಸೈಕಲ್‌ನ ಮೇಲಿದ್ದ ಕಪ್ಪು ಸುಡುಕಲ್ಲಿನ ಮೇಲೆ ಹದವಾಗಿ ಫ್ರೈ ಆಗಿದ್ದ ಮೀನಿನ ರುಚಿ ಸೊಗಸಾಗಿತ್ತು. ಒಂದು ಇಡೀ ಮೀನು ಸವಿದಾಗ ಅರ್ಧಹೊಟ್ಟೆ ತುಂಬಿತು. ಮುಖ್ಯ ಮೆನುವಿನಲ್ಲಿ ಬಡಿಸಿದ ತಿನಿಸುಗಳು ಉಳಿದರ್ಧ ಹೊಟ್ಟೆಯನ್ನು ತುಂಬಿಸಿದವು.

‘ಆರ್ಗ್ಯಾನಿಕ್‌ ಪ್ಯೂಷನ್‌ ಕ್ವಿಸಿನ್‌’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಪ್ರಾರಂಭಗೊಂಡಿರುವ ‘ವೈಟ್‌ ಸ್ಮೋಕ್‌ ಬಾರ್ಬೆಕ್ಯು’ ರೆಸ್ಟೋರೆಂಟ್‌ನಲ್ಲಿ ಸಲಾಡ್‌ನಿಂದ ಹಿಡಿದು ಮಾಂಸಾಹಾರಿ  ಮೆಡಿಟರೇನಿಯನ್‌ ಖಾದ್ಯಗಳ ಆಯ್ಕೆ ಲಭ್ಯವಿದೆ. ಗ್ರಾಹಕರು ಇಲ್ಲಿ ತಮಗೆ ಇಷ್ಟವಾಗುವ ತಿನಿಸು ಮಾಡಿ ಬಡಿಸುವ ‘ಅಪೇಕ್ಷಿತ ಮೆನು’ ಆಯ್ಕೆಯೂ ಇದೆ.

ಖಾದ್ಯಗಳ ತಯಾರಿಕೆಗೆ ಸಾವಯವ ಪದಾರ್ಥಗಳನ್ನೇ ಬಳಸಲಾಗುತ್ತದೆ. ಸ್ಥಳೀಯ ಪದಾರ್ಥಗಳಿಂದ ವಿಶ್ವದರ್ಜೆಯ ಗುಣಮಟ್ಟದಲ್ಲಿ ಮೆಡಿಟರೇನಿಯನ್‌ ಖಾದ್ಯ ನೀಡುವುದು ಮತ್ತೊಂದು ವಿಶೇಷತೆ. ಮುಖ್ಯ ಬಾಣಸಿಗ ಹಾಗೂ ಗ್ರಿಲ್‌ ಮಾಸ್ಟರ್‌ ಅಜಿತ್‌ ದುಬೆ ಅವರ ರುಚಿಕಟ್ಟಾದ ಅಡುಗೆಗಳು, ಏಳನೇ ಮಹಡಿ ಮತ್ತು ಈಜುಕೊಳ ಇವೆಲ್ಲವೂ ಗ್ರಾಹಕರ ಊಟದ ಅನುಭವಕ್ಕೆ ವಿಶೇಷ ಕಳೆ ನೀಡುತ್ತವೆ.



ವೈಟ್ ಸ್ಮೋಕ್‌ ಬಾರ್ಬೆಕ್ಯು
ಶೈಲಿ: ಮೆಡಿಟರೇನಿಯನ್‌
ಬಾಣಸಿಗ: ಅಜಿತ್‌ ದುಬೆ
ಇಬ್ಬರಿಗೆ ತಗಲುವ ವೆಚ್ಚ: ₨1200
ಸಿಗ್ನೇಚರ್‌ ತಿನಿಸುಗಳು: ಗ್ರಿಲ್‌ ಪಿಜ್ಜಾ, ಶೀಷ್‌ ತೌಕ್‌, ಕಡಕ್‌ ತರೂಷ್‌‌
ಸ್ಥಳ: ಫೇರ್‌ಫೀಲ್ಡ್‌ ಬೈ ಮ್ಯಾರಿಯೆಟ್‌, 59ನೇ ಸಿ ಕ್ರಾಸ್‌, 4ನೇ ಎಂ ಬ್ಲಾಕ್‌, ರಾಜಾಜಿನಗರ.
ಟೇಬಲ್ ಕಾಯ್ದಿರಿಸಲು: 080– 4947 0020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT