ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಟ ಪ್ರೇಮದ ತಾಜಾ ಅಭಿವ್ಯಕ್ತಿಗಳು

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2016 ತೀರ್ಪುಗಾರರ ಟಿಪ್ಪಣಿ
Last Updated 11 ಫೆಬ್ರುವರಿ 2016, 6:08 IST
ಅಕ್ಷರ ಗಾತ್ರ

ಸ್ಪರ್ಧೆಯ ತೀರ್ಪುಗಾರರಾದ ಸುಮನಾ ಕಿತ್ತೂರು ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕಿ. ‘ಕಳ್ಳರ ಸಂತೆ’, ‘ಸ್ಲಂ ಬಾಲ’, ‘ಎದೆಗಾರಿಕೆ’ ಅವರ ನಿರ್ದೇಶನದ ಚಿತ್ರಗಳು. ‘ಕಿರಗೂರಿನ ಗಯ್ಯಾಳಿಗಳು’ ತೆರೆಗೆ ಸಿದ್ಧಗೊಳ್ಳುತ್ತಿರುವ ಸಿನಿಮಾ. ಸುಮನಾ ಪತ್ರಕರ್ತೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕಥೆಯಲ್ಲಿ ಸೋನ್ಸ್‌ ಅಂತೊಂದು ಪಾತ್ರ ಬರುತ್ತದೆ. ಕಥೆಯಲ್ಲಿ ಪ್ರಕೃತಿ ಬಗ್ಗೆ ಮಾತನಾಡುವ ಪಾತ್ರ ಅದು. ಒಂದು ಸಲ ಅದು ‘ಮರಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಮಾಡಿಕೊಳ್ಳಲಿಕ್ಕೆ ಕಲಿತಿದ್ದರಿಂದಲೇ ಮನುಷ್ಯ ಮನುಷ್ಯನಾಗಿದ್ದಿದ್ದು. ಇಲ್ಲಾಂದ್ರೆ ಮನುಷ್ಯ ಮನುಷ್ಯ ಆಗಿರ್ತಿರಲಿಲ್ಲ’ ಎಂದು ಹೇಳುತ್ತದೆ. ಆ ಪಾತ್ರಕ್ಕೇನಾದ್ರೂ ಪ್ರೀತಿ ಬಗ್ಗೆ ಮಾತನಾಡು ಅಂತ ಹೇಳಿದ್ರೆ ಏನು ಹೇಳುತ್ತಿತ್ತು?

‘ಪ್ರೀತಿ ಮಾಡುವುದನ್ನು ಕಲಿತಿದ್ದರಿಂದಲೇ ಮನುಷ್ಯ ಮನುಷ್ಯನಾಗಿ ಉಳಿದಿರೋದು, ಇಲ್ಲಾಂದ್ರೆ ಬೇರೆ ಏನೋ ಆಗಿಬಿಡ್ತಿದ್ದ’ ಎಂದು ಹೇಳುತ್ತಿತ್ತೇನೋ ಎಂದು ನನಗನಿಸುತ್ತದೆ.

ಅದು ನಿಜ ಕೂಡ. ಯಾಕೆಂದರೆ ಪ್ರೀತಿ ಇಲ್ಲದೆ ಏನೂ ಇಲ್ಲ. ಪ್ರಾಣಿ ಇರಲಿ, ಪಕ್ಷಿ ಇರಲಿ, ಮರ–ಗಿಡ–ಮನುಷ್ಯ ಎಲ್ಲದರಲ್ಲಿಯೂ ಪ್ರೀತಿ ಎಷ್ಟು ಹಾಸು ಹೊಕ್ಕಾಗಿದೆ ಅಂದರೆ, ಜಗತ್ತಿನಲ್ಲಿ ಬೇರೆ ಏನೂ ಸಿಗದೇ ಇರುವ ವ್ಯಕ್ತಿ ಸಿಗಬಹುದು, ಆದರೆ ಪ್ರೀತಿಗೆ ಸಂಬಂಧಿಸಿದಂತೆ ಯಾರೂ ಬಡವರಾಗಿ ಉಳಿದಿಲ್ಲ. ರೂಮಿಯಿಂದ ಹಿಡಿದು ಅಕ್ಕಮಹಾದೇವಿವರೆಗೆ ಎಲ್ಲರೂ ಪ್ರೇಮದ ಬಗ್ಗೆಯೇ ಮಾತನಾಡಿದ್ದಾರೆ. ಅಧ್ಯಾತ್ಮವಿರಲಿ, ದೇವರನ್ನು ತಲುಪುವ  ಹಂಬಲವಿರಲಿ, ಇನ್ನೊಬ್ಬ ಮನುಷ್ಯನನ್ನು ತಾಕುವ ಪ್ರಕ್ರಿಯೆ ಇರಲಿ– ಎಲ್ಲದಕ್ಕೂ ಪ್ರೀತಿ ಒಂದು ಕೊಂಡಿಯಂತೆ ಕೆಲಸ ಮಾಡುತ್ತದೆ.

ಪ್ರೇಮಪತ್ರಗಳ ಸ್ಪರ್ಧೆಯನ್ನು ‘ಪ್ರಜಾವಾಣಿ’ ನಡೆಸುತ್ತಿದೆ ಎನ್ನುವುದು ನನಗೆ ಬಹಳ ಖುಷಿ ಕೊಟ್ಟಿತು. ನಮ್ಮ ಬಹುತೇಕ ಸ್ಪರ್ಧೆಗಳು ಕಥೆ–ಕಾವ್ಯದ ಸುತ್ತ ಗಿರಕಿ ಹೊಡೆಯುವಾಗ, ಬದುಕಿಗೆ ತುಂಬ ಹತ್ತಿರವಾದ ಪ್ರೇಮವನ್ನು ಪತ್ರದ ಮೂಲಕ ಅಭಿವ್ಯಕ್ತಿಸುವ ಸೃಜನಶೀಲತೆಗೆ ವೇದಿಕೆಯನ್ನು ಒದಗಿಸಿರುವುದು ತುಂಬ ಮಹತ್ವದ ಸಂಗತಿಯಂತೆ ನನಗೆ ಕಾಣಿಸುತ್ತದೆ.

ಇಲ್ಲಿನ ಪತ್ರಗಳನ್ನು ಓದುತ್ತಾ ಹೋದಂತೆ ನನಗೆ ನನ್ನ ಶಾಲಾ ದಿನಗಳು ಕಾಡತೊಡಗಿದವು. ನನ್ನ ಕಸಿನ್‌ ಒಬ್ಬ ಮೊದಲ ಬಾರಿಗೆ ನನಗೆ ಪ್ರೇಮಪತ್ರ ಕೊಟ್ಟಿದ್ದ. ಅದನ್ನು ಓದುತ್ತಾ ಓದುತ್ತಾ ಮೈ ಮನಸ್ಸು ಪುಲಕಗೊಂಡ ಆ ಅನುಭವವನ್ನು ಹಿಡಿದಿಡುವುದು ಕಷ್ಟ. ಆಕಾರ–ಬಣ್ಣ ಯಾವುದೂ ಇಲ್ಲದ ಅನುಭವ ಅದು. ಹೇಳಿಕೊಳ್ಳಲು ಸಾಧ್ಯವಿಲ್ಲದ ಮಧುರಾತಿಮಧುರ ಸಂವೇದನೆ ಅದು. ಈ ಪ್ರೇಮಪತ್ರಗಳನ್ನು ಬರೆದಿರುವವರ ಮನಸ್ಥಿತಿಯನ್ನು ನಾವೂ ದಾಟಿಯೇ ಬಂದಿದ್ದೀವಲ್ಲ.

ಸಾಮಾನ್ಯವಾಗಿ ಪ್ರೇಮಪತ್ರ ಅಂದ ತಕ್ಷಣವೇ ಹುಡುಗ ಹುಡುಗಿಗೆ ಬರೆಯುವುದು ಎಂಬುದು ನಮ್ಮ ಮನಸ್ಸಿನಲ್ಲಿ ಕೂತು ಬಿಟ್ಟಿದೆ. ಸಿನಿಮಾಗಳಾಗಿರಬಹುದು, ನಿಜಜೀವನ ಆಗಬಹುದು– ಪ್ರೇಮಪತ್ರಗಳನ್ನು ಹುಡುಗರು ಮಾತ್ರ ಬರೀತಾರೆ ಎಂದು ನಂಬಿಕೊಂಡು ಬಂದಿದ್ದೇವೆ. ನಮ್ಮ ಮಡಿವಂತ ಮನಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಪ್ರೇಮಪತ್ರ ಬರೆಯುವುದಿಲ್ಲ ಎಂಬ ನಂಬಿಕೆಯೂ ಬೆಳೆದಿದೆ.

ವಾಸ್ತವದಲ್ಲಿ ಹೆಣ್ಣುಮಕ್ಕಳ ಪ್ರೇಮಪತ್ರಗಳು ಬಹಳ ಅದ್ಭುತವಾಗಿರುತ್ತವೆ. ಅದಕ್ಕೆ ಉದಾಹರಣೆ ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ‘ಪ್ರೇಮಿಗೊಂದು ಪತ್ರ’. ಇಲ್ಲಿನ ಸಾಕಷ್ಟು ಪತ್ರಗಳಲ್ಲಿ ಪ್ರೇಮನಿವೇದನೆ–ಕನವರಿಕೆಗಳು ಕಾಣುತ್ತವೆ. ಆರಂಭ ಕಾಲದ ನವಿರಾದ ಪ್ರೀತಿ– ಅದಕ್ಕೆ ಸಂಬಂಧಪಟ್ಟಂತೆ ಆಡುವ ಮಾತುಕತೆಗಳೇ ಇವೆ. ಅವುಗಳನ್ನು ಓದುತ್ತಲೂ ತುಂಬಾ ಖುಷಿ ಅನುಭವಿಸಿದ್ದೇನೆ. ಆದರೆ ಬಹಳಷ್ಟು ಪತ್ರಗಳು ಬರೀ ಕನವರಿಕೆಗಳಿಗೇ ಸೀಮಿತವಾಗಿವೆ. ಕನವರಿಕೆಯಿಂದ ಆಚೆಗೆ ಪ್ರೇಮ ಹೇಗೆ ಬೆಳೆಯುತ್ತದೆ ಅನ್ನುವುದು ಮುಖ್ಯ.

ಬರೀ ಮಾತುಕತೆಗೆ, ಹುಡುಗಿಯ ನೋಟಕ್ಕೆ, ಅವಳ ನೀಲಿ ಕಣ್ಣುಗಳು, ಅವಳ ಜಡೆ, ಕೆಂಪು ತುಟಿಗಳು, ಮುತ್ತು, ಅಧರ, ಅಂಬರ ಅಷ್ಟಕ್ಕೇ ಸೀಮಿತವಾಗಿರುತ್ತವೆ. ಹೆಣ್ಣಿನ ಬಾಹ್ಯದ ರೂಪ, ಆಕಾರ, ಸೌಂದರ್ಯ ಎಲ್ಲವನ್ನೂ ಹೊರತುಪಡಿಸಿ ಅವಳ ವ್ಯಕ್ತಿತ್ವದ ಇನ್ನೊಂದು ಆಯಾಮವನ್ನು ಅವಲೋಕಿಸಬೇಕಾದ ಜರೂರು ಇಂದಿನದು. ಅವಳ ಅಂತರಂಗವನ್ನು ಗ್ರಹಿಸುವ ಸಂವೇದನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಅಂದರೆ ಈ ಎಲ್ಲ ಹಳೆ ನುಡಿಗಟ್ಟುಗಳನ್ನು ಮೀರಿ ಪ್ರೇಮವನ್ನು, ಪ್ರೇಮಿಯನ್ನು, ಪ್ರೇಮಪತ್ರಗಳನ್ನು ನೋಡಬೇಕಾಗಿದೆ. ಹೆಣ್ಣು ಕೂಡ ಗಂಡನ್ನು ನೋಡುವ ರೀತಿ ಬೇರೆಯಾಗಬೇಕಾಗಿದೆ.

ಮೊದಲ ಬಹುಮಾನಕ್ಕೆ ಆಯ್ಕೆಯಾದ ‘ಪ್ರೇಮಿಗೊಂದು ಪತ್ರ’ ಒಬ್ಬಳು ಹೆಣ್ಣು ತನ್ನ ಗೆಳೆಯನನ್ನು ನೆನಪಿಸಿಕೊಂಡು ಬರೆದಿರುವ ಪತ್ರ. ಇದೊಂದು ‘ಪ್ರೇಮಾಲಾಪನೆಯ ಕವಿಯೋಲೆ’ ಅಂತಲೇ ಅವರು ಅದನ್ನು ಕರೆದುಕೊಂಡಿದ್ದಾರೆ. ಇದರಲ್ಲಿ ತುಂಬ ಖುಷಿಕೊಡುವುದೇನೆಂದರೆ ‘ನಮ್ಮೊಳು ಕದನವಿಲ್ಲ, ಮುನಿಸಿಲ್ಲ. ಅಂಟುಬಿಡದ ವಾದಗಳಿಲ್ಲ, ನಾ ಕಂಡ ಕನಸಲ್ಲೆಲ್ಲ ಇಟ್ಟ ಹೆಜ್ಜೆ ನಿನ್ನವರೆಗೆ... ಅಲ್ಲಿ ಬೆರೆತ ಜೀವದುಸಿರಿಗೆ ನನ್ನವರೆಗೆ... ಆಹಾ, ಎಷ್ಟು ಶುಭ್ರ ವರ್ಣ ನಿಮ್ಮ ನಿಲಯ... ನಾನಲ್ಲಿ ಬಯಕೆಯ ಬಳ್ಳಿಯಾಗಿರುವೆ. ಜುಮ್ಮೆನಿಸುವ ಆಲೋಚನೆಗಳ ಅದುಮಿಟ್ಟು ಹಸಿಯಾರದ ಅಕ್ಷರಗಳ ಕೂಡಿಸಿ ಕವಿತೆಯ ಬರೆಯಹೊರಟರೆ, ಅಲ್ಲೂ ನಿನ್ನ ಸ್ವರ, ಭಾವಗಳ ಅದಲು ಬದಲು ಮಾಡುವ ಮಾತಿರದ ಮೌನದಲ್ಲಿ ಬರೆದ ಹಾಡಲ್ಲೆಲ್ಲಾ ನೀನೇ ಕಣೋ’. ಹೀಗೆ ತುಂಬ ಹೊಸ ರೀತಿಯ ಸಂವೇದನೆಯ ಅಭಿವ್ಯಕ್ತಿ ಇಲ್ಲಿ ಕಾಣುತ್ತದೆ.

ಪ್ರೇಮನಿವೇದನೆಯ ಸಮಯದಲ್ಲಿರುವ ಹಿಂಜರಿಕೆಯೂ ಸೂಕ್ಷ್ಮವಾಗಿ ಬಂದಿದೆ. ನಮ್ಮನ್ನು ಕಟ್ಟಿಹಾಕಿರುವ ಸುತ್ತಮುತ್ತಲಿನ ಎಷ್ಟೊಂದು ವಿಷಯಗಳೂ ಪ್ರೇಮದ ಮೇಲೆ ಪರಿಣಾಮ ಬೀರುತ್ತದೆ ಎಂಬುದೂ ಇಲ್ಲಿ ಸೂಚ್ಯವಾಗಿ ಬರುತ್ತದೆ. ಕೆಲವೊಂದು ತುಂಬ ಸೂಕ್ಷ್ಮವಾದ– ಹೆಣ್ಣುಮಕ್ಕಳಿಗೆ ಮಾತ್ರ ಅರ್ಥವಾಗುವ– ವಿಚಾರಗಳನ್ನು, ಬಾಯಿಬಿಟ್ಟು ಹೇಳಲಿಕ್ಕಾಗದ ಭಾವವನ್ನು ವ್ಯಕ್ತಪಡಿಸಿರುವ ರೀತಿಯಿಂದಾಗಿ ಇದು ಮಹತ್ವದ ಪತ್ರ ಅನಿಸಿತು. ಪ್ರೇಮನಿವೇದನೆಯ ಸಂದರ್ಭದಲ್ಲಿ ಹೆಣ್ಣಿನ ಸಂವೇದನೆ ಹೇಗಿರುತ್ತದೆ ಎಂದು ಹೇಳುವ, ನನಗೆ ಬಹಳ ಖುಷಿಕೊಟ್ಟ ಪತ್ರ ಇದು.

ಎರಡನೇ ಬಹುಮಾನಕ್ಕೆ ಆಯ್ಕೆಯಾದದ್ದು ‘ಹೃದಯ ಗೆದ್ದ ಹುಡುಗಿಗೆ’. ಸಾಮಾನ್ಯವಾಗಿ ಪ್ರೇಮಪತ್ರಗಳಲ್ಲಿ ಸಿನಿಮ್ಯಾಟಿಕ್‌ ಆದ ಪದಗಳು ಹೇರಳವಾಗಿರುತ್ತವೆ. ಈ ಪತ್ರ ಎಷ್ಟು ಆರ್ದ್ರತೆಯಿಂದ ಕೂಡಿದೆ ಅಂದರೆ ಎಲ್ಲವನ್ನೂ ತನ್ನ ಪದಗಳ ಚೌಕಟ್ಟಿನೊಳಗಡೆ ಬಹಳ ಅಚ್ಚುಕಟ್ಟಾಗಿ ತಂದಿದ್ದಾರೆ. ‘ನನ್ನೊಡಲ ಕಮ್ಮಟದಲ್ಲಿ ಘಮಲಾದ ಒಡಲ ಅಕ್ಷರಗಳನ್ನೆಲ್ಲಾ ಈ ಕಾಗದದ ದೋಣಿಯಲ್ಲಿಟ್ಟು ಕಳಿಸುತ್ತಿದ್ದೇನೆ’ ಅಂತಲೇ ಶುರುವಾಗುತ್ತದೆ. ಆ ಕಲ್ಪನೆಯೇ ಎಷ್ಟು ಚೆನ್ನಾಗಿದೆ. ಆಮೇಲೆ ‘ನಿನ್ನೊಲುಮೆಯ ಕುಲುಮೆಯಲ್ಲಿ ಮಿಂದು ಬೇಯುತ್ತಿರುವೆ’ ಎಂದು ಬರೆಯುತ್ತಾರೆ. ಆಂತರ್ಯದ ಭಾವಕ್ಕೆ ಅದ್ಭುತ ರೂಪ ಕೊಟ್ಟಂತಿದೆ. ಈ ಪತ್ರದಲ್ಲಿನ ಭಾವನೆಗಳು, ಭಾಷೆ, ಪದಗಳು ಎಲ್ಲವೂ ಅಚ್ಚುಕಟ್ಟಾಗಿದೆ.

‘ಹದಗೊಂಡ ಹಸಿಮಣ್ಣಿನಂಥ ನನ್ನ ಹೃದಯವೆಂಬೋ ಹೊಲದಲ್ಲಿ ಪ್ರಣಯದ ಬೀಜಗಳನ್ನು ನೆಟ್ಟು, ನೆತ್ತಿ ಆಕಾಶಕ್ಕೆತ್ತಿ ನಿನ್ನ ನಗೆಯ ಮಳೆಬಿಲ್ಲಿಗೆ ಎದುರು ನೋಡುತ್ತಿರುವೆ’ ಹೀಗೆ ತುಂಬ ರೊಮಾಂಟಿಕ್‌ ಪ್ರೇಮಿ ಅವರು. ಯಾವುದೇ ಹುಡುಗಿಯೂ ಬಯಸುವಂತಹ ಪತ್ರವಿದು. ನಾನೂ ಒಂದು ಹೆಣ್ಣಾಗಿ ನನಗೆ ನನ್ನ ಪ್ರೇಮಿ ಪತ್ರ ಬರೆದರೆ ಹೀಗೆ ಬರೆಯಲಪ್ಪಾ ಎಂದು ಅನಿಸಿತು.

ಈ ರೊಮಾಂಟಿಕ್ ಭಾವದ ನಡುವೆಯೇ ಅವನ ಕನಸು ಬಿದ್ದು ಹೋಗಿರುವ ಸೂಚನೆಯೂ ಅಲ್ಲಿದೆ. ‘ಈ ಕೌದಿ ನಮ್ಮ ಮುರಿದ ಕನಸುಗಳಿಗೆ ಮರುಜೇವಣಿ’ ಎಂದು ಬರೆಯುತ್ತಾರೆ. ಅಂದರೆ ಅವರ ಕನಸು ಭಗ್ನವಾಗಿದೆ. ಆದರೆ ಎಲ್ಲೂ ಅವಳನ್ನು ದೂಷಿಸದೇ ತನ್ನದೇ ಭಾವವನ್ನು ವ್ಯಕ್ತಪಡಿಸುತ್ತಾ ಕೊನೆಯಲ್ಲಿ ‘ನಿನ್ನ ಮೇಲಿನ ಈ ಎಲ್ಲ ವರ್ಣನೆ ರೈಲಿನ ಭೀಕರ ಸದ್ದಿನಂತೆ ಕಿರುಚುತ್ತದೆಂಬ ಭಯವೂ ಇದೆ. ನನಗೆ ಸದ್ದಿಗಿಂತ ಅದರ ಯಾನವೇ ಮುಖ್ಯ. ಅದುವೇ ಪ್ರೇಮಯಾನ. ಈ ಯಾನಕ್ಕೆ ನೀ ಜೊತೆಯಾಗುತ್ತಿ ಎಂಬ ನಿರೀಕ್ಷೆಯಲ್ಲಿ ಎದುರುಗೊಳ್ಳುವೆ’ ಎಂದು ಮುಗಿಸುತ್ತಾರೆ. ಸಂಗಾತಿ ದೂರವಾಗಿರುವ ಸಂದರ್ಭದಲ್ಲಿ ಅವಳನ್ನು ತುಂಬ ನವಿರಾಗಿ ನೆನಪಿಸಿಕೊಳ್ಳುತ್ತಾ, ಅವಳು ಬಂದೇ ಬರುತ್ತಾಳೆ ಎಂಬ ನಿರೀಕ್ಷೆಯಿದೆಯಲ್ಲ, ಅದು ಮನಸ್ಸಿಗೆ ತಾಕುತ್ತದೆ.

ಮೂರನೆ ಸ್ಥಾನಕ್ಕೆ ಆಯ್ಕೆಯಾದ ‘ಪ್ರೀತಿಯೆಂಬ ಸಾಗರಕ್ಕೆ’ ಪತ್ರದಲ್ಲಿ ಒಬ್ಬಳು ಹೆಣ್ಣು ಮಗಳು ಗದ್ಯದಲ್ಲಿ ಸೆರೆಹಿಡಿಯಲಾಗದ ಕೆಲವು ಸಂಗತಿಗಳನ್ನು ಕವನದ ರೂಪುಕೊಟ್ಟುಕೊಂಡು ಅಭಿವ್ಯಕ್ತಿಸಿದ್ದಾರೆ. ಅದು ವಿಶಿಷ್ಟವಾಗಿದೆ.

ಮೊದಲ ಸ್ಥಾನ ಪಡೆದ ಪತ್ರದಲ್ಲಿ ಹುಡುಗಿ ಹುಡುಗನಿಗೆ ಮಾಡುವ ಪ್ರೇಮನಿವೇದನೆ ಇತ್ತು. ಎರಡನೇ ಸ್ಥಾನದ ಪತ್ರದಲ್ಲಿ ಹುಡುಗ ದೂರಾದ ಹುಡುಗಿಯ ನಿರೀಕ್ಷೆಯಲ್ಲಿರುವ ಚಿತ್ರಣ ಇತ್ತು. ಈ ಪತ್ರದಲ್ಲಿ ಪ್ರೀತಿ, ಅದಕ್ಕೆ ಅಡ್ಡಿಯಾಗುವ ಜಾತಿ, ಮತ, ವರ್ಗಗಳು, ಅವುಗಳನ್ನು ಮೀರಿ ನಿಂತು ಆದ ಮದುವೆ, ನಂತರ ಮಗುವಾಗಿದ್ದು– ಹೀಗೆ ಬದುಕಿನ ಪಯಣದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ಬೆಳೆಯುತ್ತಾ ಹೋಗಿದ್ದು ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಇವೆಲ್ಲ ಆಗಿಯೂ ಅವಳು ‘ಇಷ್ಟೆಲ್ಲಾ ಆದರೂ ನೀನು ತುಂಬ ಒಳ್ಳೆಯವನು ಎಂಬುದನ್ನು ನಾನು ಒಪ್ಪುವುದಿಲ್ಲ’ ಎನ್ನುತ್ತಾಳೆ.

ಅವನ ಅವಗುಣಗಳ ಪಟ್ಟಿಯೂ ಅವಳ ಬಳಿಯಿದೆ. ಅದರಿಂದ ಅನುಭವಿಸಿದ ಕಿರಿಕಿರಿಗಳನ್ನೂ ಹೇಳುತ್ತಾಳೆ. ಪ್ರೇಮ, ಪ್ರಣಯ, ಜಾತಿ, ಮದುವೆ, ಮದುವೆ ನಂತರದ ಕಷ್ಟಗಳು, ಆ ಕಷ್ಟಗಳಲ್ಲಿ ಒಬ್ಬರಿಗೊಬ್ಬರು ಆಸರೆಯಾದ ರೀತಿ, ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೂ ಒಟ್ಟಾಗಿ ಬದುಕು ಕಟ್ಟಿಕೊಳ್ಳುವ ರೀತಿ–ಎಲ್ಲವನ್ನೂ ಈ ಚಿಕ್ಕ ಪತ್ರದಲ್ಲಿ ವ್ಯಕ್ತಪಡಿಸಿರುವ ರೀತಿ ತುಂಬ ಇಷ್ಟವಾಯಿತು.

ಇವುಗಳನ್ನು ಹೊರತುಪಡಿಸಿ ಉಳಿದ ಪತ್ರಗಳೂ ತುಂಬ ಚೆನ್ನಾಗಿಯೇ ಇದ್ದವು. ಎಲ್ಲವೂ ಅಪ್ಪಟ ಪ್ರೇಮಪತ್ರಗಳೇ. ತುಂಬ ನವಿರಾದ ಈ ಪತ್ರಗಳು ಖುಷಿ ಜತೆಗೆ ನಮ್ಮ ಯೌವನದ ದಿನಗಳನ್ನು ನೆನಪಿಸುತ್ತವೆ. ಆದ್ದರಿಂದ ಈ ಸ್ಪರ್ಧೆಯಲ್ಲಿ ಬಂದ ಎಲ್ಲ ಪ್ರೇಮಪತ್ರಗಳೂ ಅಭಿನಂದನೆಗೆ ಅರ್ಹ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT