ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಗರಡಿಯ ಹೊರಗೆ ಅರಳಿದ ಸಾಯಿಕೃಷ್ಣ

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸಿನಿಮಾದ ಪ್ರಚಾರ ಕಲೆಗೆ ಸಾಯಿಕೃಷ್ಣ ಅವರೇ ಬೇಕು ಎನ್ನುವಮಟ್ಟಿಗೆ ಬೇಡಿಕೆ ಗಳಿಸಿರುವ ತರುಣ, ‘ಕ’ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ.

‘‘ಚಿತ್ರರಂಗದಲ್ಲಿ ನಾನು ನೆಲೆಯೂರುವುದು ಅಪ್ಪನಿಗೆ ಸುತಾರಾಂ ಇಷ್ಟವಿರಲಿಲ್ಲ. ಮಗ ಓದಿ ದೊಡ್ಡ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದರು. ನಾನೂ ಮೊದಮೊದಲು ಹಾಗೇ ಅಂದುಕೊಂಡೆ. ಆದರೆ, ಚಿತ್ರರಂಗದ ಸೆಳೆತದಿಂದ ತಪ್ಪಿಸಿಕೊಳ್ಳಲು ಕೊನೆಗೂ ಆಗಲಿಲ್ಲ...’’

ಕನ್ನಡದ ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ಅವರ ಪುತ್ರ ಸಾಯಿಕೃಷ್ಣ ತಮ್ಮ ಚಿತ್ರರಂಗದ ಪ್ರವೇಶ ಕುರಿತು ಹೇಳಿದ್ದು ಹೀಗೆ. ಅಂದಹಾಗೆ, ‘ಕ’ ಸಾಯಿಕೃಷ್ಣ ಅವರ ನಿರ್ದೇಶನದ ಮೊದಲ ಸಿನಿಮಾ. ‘ಕ’ ಚಿತ್ರೀಕರಣ ಪೂರ್ಣಗೊಂಡಿದ್ದು ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಸಿನಿಮಾರಂಗದ ಹಿನ್ನೆಲೆ ಇದ್ದರೂ, ಸ್ವಂತ ಬಲದ ಮೇಲೆ ಸಿನಿಮಾ ರಂಗದಲ್ಲಿ ನೆಲೆ ಕಂಡ ಯುವಕ ಸಾಯಿಕೃಷ್ಣ. ‘ಚಿತ್ರರಂಗ ನನಗೆ ಕೊನೆಯಾಗಲಿ. ನೀನು ಚೆನ್ನಾಗಿ ಓದಿ ಉತ್ತಮ ಉದ್ಯೋಗ ಸಂಪಾದಿಸು’ ಎನ್ನುವ ತಂದೆಯ ಆಸೆಗೆ ಪೂರಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕೃಷ್ಣ ಅವರಿಗೆ ಇನ್‌ಫೋಸಿಸ್‌ ಸೇರಿದಂತೆ ಹಲವು ಐಟಿ–ಬಿಟಿ ಕಂಪೆನೆಗಳಲ್ಲಿ ಉದ್ಯೋಗದ ಬಾಗಿಲು ತೆರೆದಿತ್ತು. ಅಮೆರಿಕದಲ್ಲೂ ಅವಕಾಶ ಕೈಬೀಸಿ ಕರೆದಿತ್ತು. ಆದರೆ, ಅದೆಲ್ಲವನ್ನೂ ಒಳ ಮನಸ್ಸು ತಿರಸ್ಕರಿಸಿತ್ತು.

ಸಾಯಿಕೃಷ್ಣ ತಮ್ಮ ಸಿನಿಮಾ ಹಿನ್ನೆಲೆಯನ್ನು ಹೇಳಿಕೊಳ್ಳುವುದು ಹೀಗೆ:
‘‘ನಾನು ಜನಿಸಿದ್ದು ಚೆನ್ನೈನಲ್ಲಿ. ತಂದೆ ಮೂಲತಃ ಆಂಧ್ರ ಪ್ರದೇಶದವರಾದರೂ ಚಿತ್ರರಂಗ ಚೆನ್ನೈನಲ್ಲೇ ಕೇಂದ್ರೀಕೃತವಾದ ಕಾರಣ ಅಲ್ಲೇ ನೆಲೆಸಿದ್ದರು. 1978ರಲ್ಲಿ ನಾನು ಜನಿಸಿದಾಗ ಅಪ್ಪ ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿದ್ದರು. ನನಗೆ 10 ವರ್ಷ ಇದ್ದಾಗ ‘ಮುತ್ತಿನಂಥ ಮನುಷ್ಯ’ ಚಿತ್ರ ನಿರ್ದೇಶಿಸಿದ್ದರು. ಆಗೆಲ್ಲ ಚಿತ್ರದ ಬಗ್ಗೆ ಮಾತನಾಡುವುನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆ. 6ನೇ ತರಗತಿಯಲ್ಲಿ ಇದ್ದಾಗ  ಶಂಕರ್‌ನಾಗ್‌ ನಟನೆಯ ‘ನರಸಿಂಹ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಮನೆಗೆ ­ಹಿಂದಿರುಗಿದಾಗ ಒಬ್ಬೊಬ್ಬರ ಪಾತ್ರವನ್ನು ಅಭಿನಯಿಸಿ ತೋರಿಸಿದ್ದೆ. ನನ್ನ ಆಸಕ್ತಿ ಕಂಡು ಅಪ್ಪ ಹೆದರಿದ್ದರು. ಅದೇ ಕೊನೆ, ಮತ್ತೆ ಅಪ್ಪ ನನ್ನನ್ನು ಎಂದೂ ಚಿತ್ರೀಕರಣದ ಸ್ಥಳಕ್ಕೆ ಕರೆದುಕೊಂಡು ಹೋಗಲಿಲ್ಲ. ಏಕೆಂದರೆ ಅವರಿಗೆ ನಾನು ಚಿತ್ರರಂಗ ಆಯ್ದುಕೊಳ್ಳುವುದು ಇಷ್ಟವಿರಲಿಲ್ಲ’. 

ಹೆಸರಿನ ಮೊದಲ ಅಕ್ಷರ ‘ಕ’

ಪ್ರೇಮಿಗಳ ದಿನದಂದು (ವ್ಯಾಲೆಂಟೈನ್ಸ್‌ ಡೇ) ನಡೆಯುವ 10–12 ವಿಭಿನ್ನ ಅನುಭವಗಳನ್ನು ಒಂದೇ ಕಥೆಯ ಅಡಿಯಲ್ಲಿ ಸಂಯೋಜಿಸಿ, ನಿರ್ಮಿಸಿರುವ ಚಿತ್ರ ‘ಕ’. ಈ ಶೀರ್ಷಿಕೆ ಒಂದು ಹೆಸರಿನ ಮೊದಲ ಅಕ್ಷರ. ಆ ಹೆಸರು ಏನು ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅನಾವರಣಗೊಳಲಿದೆ ಎನ್ನುತ್ತಾರೆ ಸಾಯಿಕೃಷ್ಣ.

ಎಲ್ಲರೂ ಹೊಸಬರೇ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಆರು ನಾಯಕರು, ಏಳು ನಾಯಕಿಯರು ಇದ್ದಾರೆ. ಆರ್.ಎಸ್. ಗಣೇಶ್‌ ನಾರಾಯಣ್‌ ಅವರ ಸಂಗೀತದಲ್ಲಿ ಮೂಡಿಬಂದಿರುವ ‘ಕೋಕನಕ ಮಕಾಕ’ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.

ಯಾವುದೇ ಕಲ್ಮಶ ಇಲ್ಲದೇ ಪ್ರೀತಿಸುವವರಿಗೆ ಈ ಚಿತ್ರ ತುಂಬಾನೆ ಇಷ್ಟವಾಗಲಿದೆ ಎಂಬ ನಿರೀಕ್ಷೆ ಸಾಯಿಕೃಷ್ಣ ಅವರದು.

ಅಪ್ಪನ ಅಣತಿಯಂತೆ ತಿರುಪತಿಯ ಮೋಹನ್‌ಬಾಬು ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿದೆ. ಆದರೆ, ಚಿತ್ರರಂಗದ ಸೆಳೆತದ ಮುಂದೆ ಅದು ಗೌಣವಾಗಿತ್ತು. ಹುಡುಕಿಕೊಂಡು ಬಂದ ಉದ್ಯೋಗ ಕೈಚೆಲ್ಲಿದ ಧೋರಣೆ ಅಪ್ಪನಿಗೆ ಆಶ್ಚರ್ಯ ತರಿಸಿತ್ತು. ಹುಬ್ಬು ಮೇಲೇರಿಸಿದರು.. ‘ಡಿಪ್ಲೊಮಾ ಇನ್‌ ಮಲ್ಟಿ ಮೀಡಿಯಾ’ ಸೇರುತ್ತೇನೆ ಎಂದೆ. ‘ನಿನ್ನಿಷ್ಟ’ ಅಂದರು.

ಡಿಪ್ಲೊಮಾ ತರಬೇತಿಯ ನಂತರ ಖಾಸಗಿ ಜಾಹೀರಾತು ಕಂಪೆನಿಯಲ್ಲಿ ಒಂದೂವರೆ ವರ್ಷ ಕೆಲಸ. ಅಲ್ಲಿಂದ ನೇರವಾಗಿ ಚಿತ್ರರಂಗಕ್ಕೆ ಜಿಗಿತ. ರಾಮು ಅವರ ನಿರ್ಮಾಣ ಸಂಸ್ಥೆಯಲ್ಲಿ ಪ್ರಚಾರ ಕಲೆ ವಿನ್ಯಾಸಕಾರನಾಗಿ ಕೆಲಸ ಆರಂಭ. ಶಿವರಾಜ್‌ಕುಮಾರ್‌ ಅಭಿನಯದ ‘ತವರಿನ ಸಿರಿ’ ಮೊದಲ ಚಿತ್ರ. ನಂತರ ಪುನೀತ್‌ ಅವರ ‘ಅಜಯ್‌’, ಮುರಳಿ ಅವರ ‘ಪ್ರೀತಿಗಾಗಿ’, ರವಿಚಂದ್ರನ್‌ ಅವರ ‘ಒಡಹುಟ್ಟಿದವಳು’, ದರ್ಶನ್‌ ನಟನೆಯ ‘ದತ್ತ’. ‘ಮುಂಗಾರು ಮಳೆ’, ‘ಗಾಳಿಪಟ’ ಚಿತ್ರಗಳಿಂದ ಲಕ್‌ ಬದಲಾಯಿತು. ಯಾವುದೇ ಚಿತ್ರ ಬಿಡುಗಡೆಯಾದರೂ ಆ ಚಿತ್ರದ ಪ್ರಚಾರ ಕಲೆಗೆ ಸಾಯಿಕೃಷ್ಣ ಬೇಕು ಎನ್ನುವ ಮಟ್ಟಕ್ಕೆ ಬೇಡಿಕೆ ಕುದುರಿತು’’. ಇದುವರೆಗೂ 300ಕ್ಕೂ ಹೆಚ್ಚು ಚಿತ್ರಗಳಿಗೆ ವಿನ್ಯಾಸ ಮಾಡಿದ ಸಾಧನೆ ಸಾಯಿಕೃಷ್ಣ ಅವರದು.

ನಿರ್ದೇಶನದ ದಾಹ
ಪ್ರಚಾರ ಕಲೆ ವಿನ್ಯಾಸಕಾರನಾಗಿ ಸಾಯಿಕೃಷ್ಣ ತೊಡಗಿಸಿಕೊಂಡಿದ್ದರೂ, ನಟನೆ ಮತ್ತು ನಿರ್ದೇಶನದ ಬಗ್ಗೆ ಅವರಿಗಿದ್ದ ಮೋಹ ಮಾತ್ರ ಕಡಿಮೆಯಾಗಿರಲಿಲ್ಲ. ‘ಜನ್ಮ ’ ಚಿತ್ರದಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ಸಾಯಿ ನಂತರ ‘ವಿಕ್ರಂ’, ‘ಡೆಡ್ಲಿ–2’ ಚಿತ್ರಗಳಲ್ಲೂ ನಟಿಸಿದ್ದಾರೆ. 
‘ನಿರ್ದೇಶನದ ಹುಚ್ಚು ಹೆಚ್ಚಾಯಿತು. ಅದಕ್ಕಾಗಿ ಬೇರೆ ಬ್ಯಾನರ್‌ ಚಿತ್ರಗಳಲ್ಲಿ ದುಡಿದೆ. ಅಪ್ಪನ ಬಳಿ ದುಡಿದರೆ ಅವರ ಬಳಿ ಇರುವ ಸಹಾಯಕ ನಿರ್ದೇಶಕರು ನನ್ನ ತಪ್ಪು ಮನ್ನಿಸಿ ಬಿಡುತ್ತಾರೆ. ಬೈದು ಕಲಿಸುವುದಿಲ್ಲ ಎನ್ನುವ ಕಾರಣಕ್ಕೆ ಬೇರೆ ಬ್ಯಾನರ್‌ ಆಯ್ದುಕೊಂಡೆ’ ಎನ್ನುತ್ತಾರೆ ಸಾಯಿಕೃಷ್ಣ.

ಅಶ್ವಿನಿ ಸಂಸ್ಥೆಯ ಚಿತ್ರವೊಂದನ್ನು ನಿರ್ದೇಶಿಸಲು ಸಿದ್ಧತೆ ನಡೆಸಿದ್ದರು. ಅದು ಮುಂದೆ ಹೋದ ಕಾರಣ ತಮ್ಮದೇ ಬ್ಯಾನರ್‌ ಅಡಿ ಹೊಸಬರನ್ನೇ ಹಾಕಿಕೊಂಡು ‘ಕ’ ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT