ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪೆಮಿಡಿ ತಳಿ ಸಂರಕ್ಷಣೆ ಯೋಜನೆ

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಶಿರಸಿ (ಉ.ಕ. ಜಿಲ್ಲೆ): ಮಲೆನಾಡಿನ ಮಿಡಿ ಮಾವು(ಅಪ್ಪೆಮಿಡಿ) ಪಟ್ಟಣಗಳ ಜನರ ಮನ ಗೆದ್ದಿದೆ. ಅಪ್ಪೆಮಿಡಿ ಉಪ್ಪಿನಕಾಯಿಗೆ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಿಲ್ಲದ ಬೇಡಿಕೆ.

ಬೇಡಿಕೆಯ ಭರದಲ್ಲಿ ಅಪ್ಪೆಮಿಡಿಯ ಅವೈಜ್ಞಾನಿಕ ಸಂಗ್ರಹಣೆಯಿಂದ ಅಪರೂಪದ ತಳಿಗಳು ನಶಿಸುವ ಹಂತ ತಲುಪಿವೆ. ಈ ಹಿನ್ನೆಲೆಯಲ್ಲಿ `ಅಪ್ಪೆಮಿಡಿ ತಳಿ ಸಂರಕ್ಷಣೆ ವಿಶೇಷ ಯೋಜನೆ' ಅನುಷ್ಠಾನಗೊಂಡು ಯಶಸ್ಸಿನ ಹಾದಿಯಲ್ಲಿದೆ.

`ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರೋಗ್ರಾಮ್'ನ (ಯುಎನ್‌ಇಪಿ) ಸ್ಥಾನಿಕ ಹಣ್ಣು ತಳಿ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಯಡಿ ಲಖನೌ, ನಾಗಪುರ, ಬೆಂಗಳೂರು ಹಾಗೂ ಶಿರಸಿಯಲ್ಲಿ ಅಪ್ಪೆಮಿಡಿ, ಸಿಟ್ರಸ್ ಹಾಗೂ ಗಾರ್ಸಿನಿಯಾ ತಳಿ ಸಂರಕ್ಷಣೆ ಯೋಜನೆ ಅನುಷ್ಠಾನಗೊಂಡಿದೆ.

ಇಲ್ಲಿನ ಅರಣ್ಯ ಕಾಲೇಜ್ ಈ ಯೋಜನೆ ಅನುಷ್ಠಾನದ ರೂವಾರಿಯಾಗಿದ್ದು, ಕೃಷಿಕರ ಸಹಭಾಗಿತ್ವದಲ್ಲಿ ಹೆಜ್ಜೆ ಇಟ್ಟಿದೆ. ಸಿರಿಅಪ್ಪೆ, ಮಾವಿನಕಟ್ಟೆ ಅಪ್ಪೆ, ಪುರಪ್ಪೆ, ನಂದಗಾರು ಅಪ್ಪೆ, ಹಳದೋಟ ಅಪ್ಪೆ, ಮಾಳಂಜಿ ಅಪ್ಪೆ, ತುಡಗುಣಿ ಅಪ್ಪೆ ಸೇರಿದಂತೆ 45 ಸ್ಥಳೀಯ ಜಾತಿ ಮಿಡಿ ಮಾವಿನ ಮರಗಳನ್ನು ಗುರುತಿಸಿ ಇವುಗಳ ಕಸಿ ಗಿಡಗಳನ್ನು ಬೆಳೆಸಿ ವಿತರಿಸುವ ಕೆಲಸ ನಡೆಯುತ್ತಿದೆ. 12 ಹಳ್ಳಿಗಳಲ್ಲಿ 50ಕ್ಕೂ ಹೆಚ್ಚು ರೈತರು ಕಸಿ ಕಟ್ಟುವ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಎರಡು ವರ್ಷಗಳ ಅವಧಿಯಲ್ಲಿ ಕಸಿ ಮಾಡಿದ 10 ಸಾವಿರ ಮಿಡಿ ಮಾವಿನ ಸಸಿಗಳನ್ನು ರೈತರಿಗೆ ಅರಣ್ಯ ಕಾಲೇಜ್ ವಿತರಿಸಿದೆ. ಮಳೆಗಾಲದ ಅವಧಿಯಲ್ಲಿ ಇನ್ನಷ್ಟು ಸಸಿಗಳ ವಿತರಣೆ ಕಾರ್ಯವೂ ನಡೆದಿದೆ.

ಕಾಲೇಜಿನಲ್ಲಿ ತಾಂತ್ರಿಕ ಮಾಹಿತಿ ಪಡೆದು ಕಸಿ ಕಟ್ಟುವ ಕಲೆ ಕಲಿತುಕೊಂಡ ರೈತರು, ತಮ್ಮ ಹಿತ್ತಲಿನಲ್ಲಿ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಿದ ಸಂಖ್ಯೆ 20 ಸಾವಿರ ದಾಟಿದೆ.

ಅಡಿಕೆಗೆ ಸಮಾನ ಆದಾಯ
`ಅಪ್ಪೆಮಿಡಿ ತಳಿ ಸಂರಕ್ಷಣೆ ಜತೆಗೆ ರೈತರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದ ಹವಾಮಾನಕ್ಕೆ ಅಪ್ಪೆಮಿಡಿ ಸಸಿಗಳು ಸಹಜವಾಗಿ ಬೆಳವಣಿಗೆ ಹೊಂದುತ್ತವೆ. 200ರಷ್ಟು ಮಿಡಿ ಮಾವಿನ ಮರಗಳನ್ನು ರೈತರು ಬೆಳೆಸಿದರೆ ಅಡಿಕೆಗೆ ಸಮಾನ ಆದಾಯ ಗಳಿಸಬಹುದು. ಕೃಷಿ ಕಾರ್ಮಿಕರ ಕೊರತೆಗೆ ಇದು ಪರ್ಯಾಯ ಆಗಬಹುದು' ಎನ್ನುತ್ತಾರೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಆರ್.ವಾಸುದೇವ.

`ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಮಲೆನಾಡಿನ ಅಪ್ಪೆಮಿಡಿ ತಳಿ ಸಂರಕ್ಷಣೆ ಮಾಡಲಾಗಿದೆ. ತುಮಕೂರಿನ ತುರುವೆಕೆರೆಯಲ್ಲಿ ಇಲ್ಲಿನ ಅಪ್ಪೆಮಿಡಿ ಗಿಡಗಳು ಬದುಕಿವೆ. ಅಪ್ಪೆಮಿಡಿ ತಳಿ ಸಂರಕ್ಷಿಸುವ ಕಾರ್ಯ ವ್ಯಾಪಕವಾಗಿ ಆಗಬೇಕಾಗಿದೆ. ಮಿಡಿ ಮಾವಿನ ಜತೆಗೆ ಗಾರ್ಸಿನಿಯಾ ಕುಟುಂಬದ ಬಿಳಿ ಹಾಗೂ ಕೆಂಪು ಮುರುಗಲು, ಉಪ್ಪಾಗೆ, ಅರಿಶಿಣ ಅಂಡಿ ತಳಿಗಳನ್ನು ಸಂರಕ್ಷಿಸಲಾಗಿದೆ' ಎಂದು ವಿವರಿಸಿದರು.

`ಯೋಜನೆ ಭಾಗವಾಗಿ ಎರಡು ಸ್ವಸಹಾಯ ಗುಂಪುಗಳ ಮಹಿಳೆಯರು ಮಿಡಿಮಾವಿನ ಉಪ ಉತ್ಪನ್ನವಾದ ಉಪ್ಪಿನಕಾಯಿ ಉದ್ಯಮ ಪ್ರಾರಂಭಿಸಿದ್ದು, 1 ಕೆ.ಜಿ.ಗೆ ರೂ.300ರಂತೆ ನಾಲ್ಕು ಕ್ವಿಂಟಲ್ ಮಾರಾಟ ಮಾಡಿದ್ದಾರೆ. ಈ ಉಪ್ಪಿನಕಾಯಿಗೆ ಬೆಂಗಳೂರು ಮುಖ್ಯ ಮಾರುಕಟ್ಟೆ. ಈಗಾಗಲೇ ಒಂದು ಟನ್ ಉಪ್ಪಿನಕಾಯಿಗೆ ಬೇಡಿಕೆ ಇದೆ' ಎನ್ನುತ್ತಾರೆ ವಾಸುದೇವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT