ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಯಾರಣ್ಯದಲ್ಲಿ ರಸ್ತೆ ಕಾಮಗಾರಿ

ಮಾನವ–ವನ್ಯಜೀವಿ ಸಂಘರ್ಷದ ಆತಂಕ
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೊಳ್ಳೇಗಾಲ ತಾಲ್ಲೂಕಿನ ಹೊಂಡರ­ಬಾಳು ಗ್ರಾಮದ ಬಳಿಯ ಸಿದ್ದೇಶ್ವರ ಬೆಟ್ಟಕ್ಕೆ ಸಾಗಲು ಬಿಳಿಗಿರಿ ರಂಗನಾಥ­ಸ್ವಾಮಿ ಅಭಯಾರಣ್ಯ­ದೊಳಗೆ ರಸ್ತೆ ನಿರ್ಮಿಸುತ್ತಿರುವುದರಿಂದ ಮಾನವ ಹಾಗೂ ವನ್ಯಜೀವಿ ಸಂಘರ್ಷ ಉಂಟಾಗ­ಬಹುದು ಎಂದು ವನ್ಯಜೀವಿ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಟ್ಟದ ಮೇಲಿನ ಕಲ್ಲಿನ ಗುಹೆ­ಯಲ್ಲಿರುವ ಸಿದ್ದೇಶ್ವರ ಸ್ವಾಮಿ ದೇಗುಲಕ್ಕೆ ತೆರಳಲು ಈಗಾಗಲೇ ಮೆಟ್ಟಿಲುಗಳ ವ್ಯವಸ್ಥೆ ಇದೆ. ಆದರೆ, ದೇವಸ್ಥಾನ ಸಮಿತಿಯವರು ದೇಗುಲ ನವೀಕರಣ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಸಾಮಾಗ್ರಿ ಸಾಗಿಸಲು ರಸ್ತೆಯ ನಿರ್ಮಾಣ ನಡೆಯುತ್ತಿದೆ. ಅಲ್ಲದೆ, ಬೆಟ್ಟದ ಮೇಲೆ ವಿಶ್ರಾಂತಿ ಭವನ ನಿರ್ಮಿಸುವ ಯೋಜನೆ ರೂಪಿಸಿದ್ದಾರೆ.

ಈ ಯೋಜನೆಗೆ ಸಾರ್ವಜನಿಕರು, ವನ್ಯಜೀವಿ ಪ್ರೇಮಿಗಳು ಹಾಗೂ ಪರಿಸರ ತಜ್ಞರಿಂದ ಆಕ್ಷೇಪ ವ್ಯಕ್ತವಾಗಿದೆ. ದೇಗುಲ ನವೀಕರಣ ಹಾಗೂ ರಸ್ತೆ ನಿರ್ಮಿಸಲು ಮುಂದಾಗಿರುವ ಪ್ರದೇಶವು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿದೆ. ಈ ಪ್ರದೇಶವು ಅಪರೂ­ಪದ ವನ್ಯಜೀವಿಗಳಿಗೆ ಆಶ್ರಯ ನೀಡಿದೆ. 

ಅರಣ್ಯ ಇಲಾಖೆ ಅನುಮತಿ: ದೇಗುಲ ನವೀಕರಣಕ್ಕೆ ಸಾಮಗ್ರಿ ಸಾಗಿಸಲು ಮಾತ್ರ ರಸ್ತೆ ಬಳಸಲಾಗುವುದು ಎಂದು ಸಮಿತಿ ಹೇಳಿದ್ದರಿಂದ ಅರಣ್ಯ ಇಲಾ­ಖೆಯು ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ದೇವಸ್ಥಾನದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲು ಕೂಡ ಒಪ್ಪಿಗೆ ನೀಡಿದೆ. ರಸ್ತೆಯ ನಿರ್ಮಾಣಕ್ಕೆ  ಸ್ಫೋಟಕ ಬಳಸಿ ಗುಡ್ಡದ ಬಂಡೆಗಳನ್ನು ಸಿಡಿಸಲಾಗುತ್ತಿದೆ ಎಂದು ಸ್ಥಳೀಯರು  ಆರೋಪಿಸಿದ್ದಾರೆ.

ರಾಷ್ಟ್ರೀಯ ವನ್ಯ­ಜೀವಿ ಮಂಡಳಿ ನಿಯಮಗಳ ಪ್ರಕಾರ ವನ್ಯಜೀವಿ ಧಾಮದೊಳಗೆ ಅಥವಾ ಒಂದು ಕಿ. ಮೀ.  ವ್ಯಾಪ್ತಿಯಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸುವಂತಿಲ್ಲ ಹಾಗೂ ಸ್ಫೋಟಕ ಬಳಸುವಂತಿಲ್ಲ. ಆದರೂ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು  ಪರಿಸರವಾದಿಗಳು  ಆರೋಪಿಸುತ್ತಾರೆ.

‘ಬಿ.ಆರ್.ಟಿ ಹುಲಿಧಾಮವು ಸುತ್ತ­ಮುತ್ತಲಿನ ವನ್ಯಜೀವಿ­ಗಳ ಏಕೈಕ ಆಶ್ರಯ­ತಾಣ. ಯಾವುದೇ ಕಾರಣಕ್ಕೂ ಇದಕ್ಕೆ ಧಕ್ಕೆ ಉಂಟು ಮಾಡಬಾರದು. ಹುಲಿ ಗಣತಿಯ ಪ್ರಕಾರ ಬಿಆರ್‌ಟಿ  ಧಾಮ­ದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಅಲ್ಲದೇ, ಸಿದ್ದೇಶ್ವರ ಬೆಟ್ಟದಲ್ಲಿ ಕೆಲ ತಿಂಗಳ ಹಿಂದೆ ಆನೆಗಳ ಹಿಂಡೊಂದು ಬೀಡುಬಿಟ್ಟಿತ್ತು.

ಬೆಟ್ಟದ ಕೆಳಗೆ ಇರುವ ದೇವಸ್ಥಾನದ ಕಲ್ಯಾಣಿ­ಯಲ್ಲೇ ನೀರು ಕುಡಿಯಲು ಆನೆಗಳು ಬರುತ್ತಿರುತ್ತವೆ. ಹೀಗಿದ್ದೂ ಬಂಡೆಗಳನ್ನು ಸ್ಫೋಟಿಸಿ ರಸ್ತೆ ನಿರ್ಮಾಣ ಹಾಗೂ ದೇಗುಲ ನವೀಕರಣಕ್ಕೆ ಮುಂದಾದರೆ ವನ್ಯಜೀವಿಗಳ ಆವಾಸಕ್ಕೆ ಭಂಗ ಉಂಟಾಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT