ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಾವ ವೈರಾಗ್ಯ ಮೀರೋಣ

ಬೆಳದಿಂಗಳು
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಮುಂದೇನೂ ಸಾಧ್ಯವಿಲ್ಲ, ಇನ್ನು ಏನು ಮಾಡಿದರೂ ಅಷ್ಟೇ’ ಎಂದುಕೊಳ್ಳುವ ಪರಿಸ್ಥಿತಿ ನಮಗೆಲ್ಲರಿಗೂ ಎದುರಾಗಿರುತ್ತದೆ. ಈ ಸ್ಥಿತಿಯಲ್ಲಿ ಎದುರಿಸುವ ಬಗೆ ಮಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಯತ್ನಗಳನ್ನು ನಿಲ್ಲಿಸಿ ಹೊಸತನ್ನೇನೋ ಹುಡುಕುತ್ತಾ ಹೊರಟುಬಿಡುತ್ತಾರೆ. ಇನ್ನು ಕೆಲವರು ಸೋತ ನೋವಿನಲ್ಲಿಯೇ ಉಳಿದುಬಿಡುತ್ತಾರೆ. ಇನ್ನು ಕೆಲವರು ಬದುಕನ್ನೇ ಕೊನೆಗೊಳಿಸಿಕೊಳ್ಳುವುದೂ ಉಂಟು.

ಈ ಮೂರೂ ಬಗೆಯ ಪ್ರತಿಕ್ರಿಯೆಗಳೂ ತೀರಾ ಸಾಮಾನ್ಯ. ಇದಕ್ಕೆ ಹೆಚ್ಚಿನ ಪ್ರತಿಭೆ ಅಥವಾ ಶಕ್ತಿ ಏನೂ ಬೇಕಾಗಿಲ್ಲ. ಮುಂದೇನೂ ಸಾಧ್ಯವಿಲ್ಲ ಎಂಬ ಸ್ಥಿತಿ ಉದ್ಭವಿಸಿದಾಗ ಮೇಲಿನ ಮೂರರಲ್ಲಿ ಒಂದನ್ನಷ್ಟೇ ಆರಿಸಿಕೊಳ್ಳುವ ಸಾಧ್ಯತೆಗಳಷ್ಟೇ ಆ ಕ್ಷಣಕ್ಕೆ ಕಾಣಿಸುತ್ತಿರುತ್ತವೆ. ಇದರ ಹೊರತಾದ ಆಯ್ಕೆಗಳು ನಮ್ಮೆದುರು ಕಾಣಿಸುವುದಕ್ಕೆ ಮೂರನೇ ಕಣ್ಣಿರಬೇಕಾಗುತ್ತದೆ. ಅಂದರೆ ನಮ್ಮ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ನಮಗಿರಬೇಕಾಗುತ್ತದೆ. ಈ ಶಕ್ತಿ ಎಲ್ಲರಲ್ಲಿಯೂ ಇರುತ್ತದೆ. ಆದರೆ ನಿರ್ದಿಷ್ಟ ಸಂದರ್ಭಗಳಲ್ಲಿ ಅದರ ಇರುವಿಕೆ ನಮಗೆ ಗೋಚರಿಸು ತ್ತಿರುವುದಿಲ್ಲ.

ಆಂಜನೇಯನಿಗೆ ಸಮುದ್ರೋಲ್ಲಂಘನದ ಶಕ್ತಿ ಇತ್ತು ಎಂಬುದು ಅವನಿಗೇ ಗೊತ್ತಿರಲಿಲ್ಲ. ಜಾಂಬವಂತ ಅದನ್ನು ಹೇಳಿದ ನಂತರ ಅವನಿಗದು ಸ್ಪಷ್ಟವಾಯಿತು. ಹಾಗಿದ್ದರೆ ನಮ್ಮ ಶಕ್ತಿಯ ಬಗ್ಗೆ ನಮಗೆ ಯಾರಾದರೂ ಹೇಳಬೇಕಲ್ಲವೇ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು?

ಇದಕ್ಕಿರುವ ಉತ್ತರ ಸರಳ. ನಿರ್ದಿಷ್ಟ ಪ್ರಯತ್ನವೊಂದರಲ್ಲಿ ನಾವು ತೊಡಗಿಕೊಳ್ಳುವುದರ ಅರ್ಥವೇ ಇಂಥದ್ದೊಂದು ಶಕ್ತಿಯ ಅರಿವು. ಸೋಲು ಎದುರಾಗುತ್ತದೆ ಎಂದಾಗ ಈ ಅರಿವನ್ನು ಕಳೆದುಕೊಳ್ಳಕೂಡದು. ಇನ್ನೂ ಸರಳವಾಗಿ ಹೇಳುವುದಾದರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಕೂಡದು. ಸೋಲು ಯಾವತ್ತೂ ಅಂತ್ಯವಲ್ಲ. ಅದು ಹೊಸತೊಂದರ ಆರಂಭ. ವಿಜ್ಞಾನಿ ತನ್ನ ಸಿದ್ಧಾಂತಗಳನ್ನು ಸ್ಪಷ್ಟಗೊಳಿಸುವುದು ಸತತ ವಿಫಲ ಪ್ರಯೋಗಗಳ ಮೂಲಕ. ಯಾವ ಯಾವ ಮಾರ್ಗದಲ್ಲಿ ನಿರ್ದಿಷ್ಟ ಗುರಿ ತಲುಪು ವುದು ಅಸಾಧ್ಯ ಎಂಬುದನ್ನು ತಿಳಿಸುವುದೇ ಸೋಲುಗಳು.

ಹತಾಶೆಯನ್ನು ಬದಿಗಿಟ್ಟು ವ್ಯರ್ಥ ಪ್ರಯತ್ನದಲ್ಲಿ ತೊಡಗಿ ಕೊಳ್ಳುವುದಕ್ಕೆ ಅರ್ಥವೇನು ಎಂದೂ ಪ್ರಶ್ನಿಸಬಹುದು. ಒಂದು ಮಾರ್ಗದಲ್ಲಿ ಒಮ್ಮೆ ಸೋತರೆ ಅದನ್ನೇ ಮತ್ತೆ ಅನುಸರಿಸಬೇಕು ಎಂದಿಲ್ಲ. ಹಾಗೆಯೇ ಸೋಲಿನ ಅನುಭವ ಆ ಮಾರ್ಗವನ್ನು ನಮಗೆ ಪರಿಚಯಿಸಿಕೊಟ್ಟಿರುವುದರಿಂದ ನಮ್ಮ ಸೋಲಿನ ಕಾರಣ ವನ್ನು ನಾವೇ ಅರಿಯುವ ಅವಕಾಶವಿದೆ. ಇದನ್ನು ಬಳಸಿಕೊಂಡರೆ ವ್ಯರ್ಥ ಪ್ರಯತ್ನದಿಂದ ದೂರವಿರುವುದು ಸಾಧ್ಯ. ಈ ದೂರ ವಿರುವ ಕ್ರಿಯೆಯೇ ಹೊಸ ದಾರಿಯತ್ತ ಬೆಳಕು ಚೆಲ್ಲುತ್ತದೆ. ಇಂಥ ವಿಚಾರಗಳನ್ನು ತಾತ್ವಿಕವಾಗಿ ಮಂಡಿಸುವುದು ಸುಲಭ. ಆದರೆ ಪ್ರಾಯೋಗಿಕವಾಗಿ ಕಷ್ಟ ಎಂಬ ವಾದ ಅನೇಕ ಸಾರಿ ನಮ್ಮನ್ನು ಕಟ್ಟಿ ಹಾಕುತ್ತದೆ. ಈ ಕಟ್ಟನ್ನು ಬಿಚ್ಚುವುದು ಅತಿ ಮುಖ್ಯ. ಏಕೆಂದರೆ ಸೋಲು ಯಾವಾಗಲೂ ಪ್ರಯತ್ನಕ್ಕೆ ಮುಂದಾಗುವ ಶಕ್ತಿಯನ್ನು ಕುಂದಿಸುತ್ತಿರುತ್ತದೆ. ಇದರ ಅರಿವು ನಮಗಿಲ್ಲದೇ ಹೋದರೆ ನಾವು ಅಭಾವ ವೈರಾಗ್ಯದ ಸುಳಿಯೊಳಗೆ ಸಿಕ್ಕಿಬೀಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT