ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಜಾತ ಕಲಾವಿದ ಬಾಲಕೃಷ್ಣ

ಮೊದಲ ಓದು
Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ಅಭಿಜಾತ ಕಲಾವಿದ ಬಾಲಕೃಷ್ಣ
ಲೇ: ಸಿ.ವಿ. ಶಿವಶಂಕರ್‌
ಪ್ರ: ಐಬಿಎಚ್‌ ಪ್ರಕಾಶನ,
ನಂ.77, 2ನೇ ಮುಖ್ಯರಸ್ತೆ, ರಾಮರಾವ್‌ ಲೇಔಟ್‌, ಬನಶಂಕರಿ 3ನೇ ಹಂತ, ಬೆಂಗಳೂರು– 560 085

ಕನ್ನಡ ಚಲನಚಿತ್ರ ಸಾಹಿತಿ. ನಿರ್ದೇಶಕ ಸಿ.ವಿ. ಶಿವಶಂಕರ್‌ ನಟ ಟಿ.ಎನ್‌. ಬಾಲಕೃಷ್ಣ ಅವರ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದಾರೆ. ಸುಮಾರು 40 ವರ್ಷಗಳ ಕಾಲ ಬಾಲಕೃಷ್ಣ ಅವರನ್ನು ಹತ್ತಿರದಿಂದ ಕಂಡವರು ಶಿವಶಂಕರ್‌. ಬಾಲಕೃಷ್ಣ ಅವರ ತಮಾಷೆ, ಮುಗ್ಧತೆ, ಕೋಪ, ಸರಳತೆ, ನಟನೆಯ ಜೊತೆಗೇ ಬದುಕುವುದಕ್ಕಾಗಿ ಬಾಲಕೃಷ್ಣ ಚಿತ್ರಗಾರರಾದವರು, ಹಾಡು, ಸಂಭಾಷಣೆ ಬರೆಯುವ ಸಾಹಿತಿಯಾದವರು.

ಸಿನಿಮಾರಂಗದಲ್ಲಿ ಬಹುರೂಪಿ ಪ್ರತಿಭೆಯ ಕಲಾವಿದ ಎಂದರೆ ಬಾಲಕೃಷ್ಣ. ‘ಬಾಲಕೃಷ್ಣರ ಜೀವನ ಚರಿತ್ರೆಯನ್ನು ಬರೆಯುವಾಗ ಯಾವುದೇ ವಾಕ್ಯ ಅವರನ್ನು ಪ್ರಶಂಸಿಸಿ ಹಾಗೂ ವೈಭವೀಕರಿಸಿ ಉತ್ಪ್ರೇಕ್ಷೆ ಮಾಡಿ ಬರೆಯುವುದು ನಮ್ಮ ಲೇಖನಿಗೆ ತಿಳಿದೇ ಇಲ್ಲ. ನಾನು ಬರೆಯುತ್ತಿರುವುದು ಬಾಲಕೃಷ್ಣರ ಬದುಕಿನ ಪ್ರತಿದಿನ, ಪ್ರತಿಗಳಿಗೆಯೂ ಅವರ ನೈಜ ಬದುಕಿನ ಕಷ್ಟ ಜೀವನದ ಹಾಸ್ಯ ಘಟನೆಗಳೇ ಆಗಿವೆಯಷ್ಟೆ’ (ಪು 32) ಎಂದು ತಮ್ಮ ಈ ಬರವಣಿಗೆಯ ಬಗ್ಗೆ ಶಿವಶಂಕರ್‌ ಬರೆದುಕೊಂಡಿದ್ದಾರೆ. ಆದ್ದರಿಂದ ಇದು ಬಾಲಕೃಷ್ಣ ಅವರ ಬದುಕಿನ ಸಮೀಪದ ಚಿತ್ರಗಳನ್ನು, ಅದರಲ್ಲೂ ಬಾಲಕೃಷ್ಣ ಅವರ ವೃತ್ತಿಜೀವನದ ಹಾಗೂ ಚಿತ್ರರಂಗಕ್ಕೆ ಸಂಬಂಧಿಸಿದ ತಮಾಷೆಯ ಘಟನೆಗಳನ್ನು ನಿರೂಪಿಸುತ್ತದೆ.

ಬಾಲಕೃಷ್ಣ ಅವರ ಬದುಕಿನ ಹೋರಾಟದ ಬಗ್ಗೆ, ಅಭಿಮಾನ್‌ ಸ್ಟೂಡಿಯೋ ಕಟ್ಟಿದ್ದು, ಅವರ ಬದುಕಿನ ವಿವಿಧ ಘಟನಾವಳಿಗಳು, ವಿನೋದಾವಳಿಗಳು ಇಲ್ಲಿವೆ. ತಾವು ಹೇಳಿಕೊಂಡ ಮಾತಿನಂತೆ ಶಿವಶಂಕರ್‌ ಅವನ್ನೆಲ್ಲ ಯಾವುದೇ ಉತ್ಪ್ರೇಕ್ಷೆ ಇಲ್ಲದೇ ಸತ್ಯನಿಷ್ಠುರರಾಗಿ ಬರೆದಿದ್ದಾರೆ. ಅವರು ‘ನಾನೇನೂ ಸಾಹಿತ್ಯ ವೃತ್ತಿಯ ಸಾಹಿತಿ ಅಲ್ಲ’ ಎಂದು ಹೇಳಿಕೊಂಡಿದ್ದರೂ ಅವರ ಬರವಣಿಗೆಯಲ್ಲಿ ಒಬ್ಬ ವೃತ್ತಿವಂತ ಸಾಹಿತಿಯ ಛಾಪು ಕಾಣಿಸುತ್ತದೆ. ಅರ್ಧಶತಮಾನಕ್ಕಿಂತಲೂ ಹೆಚ್ಚುಕಾಲ ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ, ಅದರ ಬೆಳವಣಿಗೆಯನ್ನು, ಅಲ್ಲಿ ಕೆಲಸ ಮಾಡಿದ ಹಲವು ಪ್ರತಿಭಾವಂತರ ನಿಕಟ ಸಂಬಂಧ ಇದ್ದ ಶಿವಶಂಕರ್‌, ತಮ್ಮ ವೃತ್ತಿಯ ಅನುಭಗಳನ್ನು ಇದೇ ರೀತಿ ವಿವರವಾಗಿ ದಾಖಲಿಸಿದರೆ ಕನ್ನಡಿಗರಿಗೆ ಉಪಯುಕ್ತವಾದೀತು.
-ಸಂದೀಪ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT