ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಯ ವಿದ್ಯಾರ್ಥಿನಿಯ ಅಂತರಂಗ

Last Updated 13 ಜನವರಿ 2016, 19:30 IST
ಅಕ್ಷರ ಗಾತ್ರ

‘ಒಂದು ಸಿನಿಮಾ ಚೆನ್ನಾಗಿ ಮೂಡಿಬರಲು ಎಲ್ಲ ಪಾತ್ರಗಳೂ ತುಂಬ ಮುಖ್ಯವಾಗುತ್ತವೆ. ಪಾತ್ರಗಳಲ್ಲಿ ದೊಡ್ಡದು ಚಿಕ್ಕದು ಎಂಬುದಿಲ್ಲ. ಎಲ್ಲವೂ ಮಹತ್ವದ್ದೇ ಆಗಿರುತ್ತವೆ’ -ಹೀಗೆ ಪಾತ್ರ ವ್ಯಾಕರಣದ ಬಗೆಗೆ ತುಂಬು ವಿಶ್ವಾಸದಲ್ಲಿಯೇ ಮಾತನಾಡುವ ನಾಗಲಕ್ಷ್ಮಿ ಶರ್ಮಾ ಚಂದನವನದಲ್ಲಿ ಈಗಷ್ಟೇ ಅರಳಿಕೊಳ್ಳುತ್ತಿರುವ ಮೊಗ್ಗು. 

ನಟನಾವೃತ್ತಿಗಾಗಿಯೇ ತಮ್ಮ ಹೆಸರನ್ನೂ ಬದಲಿಸಿಕೊಂಡಿರುವ ಅವರು ಚಿತ್ರರಂಗದಲ್ಲಿ ಪರಿಚಯವಿರುವುದು ತನಿಶಾ ಎಂಬ ಹೆಸರಿನ ಮೂಲಕ. ಅನೀಶ್‌ ಅಭಿನಯದ ‘ಅಕಿರಾ’ ಸಿನಿಮಾದಲ್ಲಿ ನಾಯಕನ ಸ್ನೇಹಿತೆಯ ಪಾತ್ರ ನಿರ್ವಹಿಸುವ ಮೂಲಕ ಹಿರಿತೆರೆ ಜಗದಲ್ಲಿ ಹೆಜ್ಜೆಯೂರಿರುವ ಅವರಿಗೆ ಆರಂಭದಲ್ಲಿಯೇ ಸಾಕಷ್ಟು ಒಳ್ಳೊಳ್ಳೆ ನಟ, ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಅವಕಾಶಗಳು ದೊರಕುತ್ತಿವೆ. ಇದು ಅವರ ವಿಶ್ವಾಸವನ್ನೂ ಹೆಚ್ಚಿಸಿದೆ.

ಸುನಿಲ್‌ ನಿರ್ದೇಶನದ ‘ಸಿಂಪಲ್‌ ಆಗಿ ಮತ್ತೊಂದು  ಲವ್‌ ಸ್ಟೋರಿ’, ನಿಖಿಲ್‌ ಅಭಿನಯದ ‘ಜಾಗ್ವಾರ್‌’, ಸುದೀಪ್‌ ಅವರ ‘ಹೆಬ್ಬುಲಿ’ ಹೀಗೆ ನಾಗಲಕ್ಷ್ಮಿ ನಟಿಸಿರುವ ಮತ್ತು ನಟಿಸಲಿರುವ ಚಿತ್ರಗಳ ಪಟ್ಟಿಯನ್ನು ನೋಡಿದಾಗಲೇ ಅವರ ವೃತ್ತಿಜೀವನದ ಆರಂಭಿಕ ಅದೃಷ್ಟಗಳು ತಿಳಿಯುತ್ತವೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅವರಿಗೆ ಸಿನಿಜಗತ್ತಿನ ಬಣ್ಣದ ಬೆಳಕು ಕಣ್ಣು ಕುಕ್ಕಿದ್ದು ಹತ್ತನೇ ತರಗತಿಯಲ್ಲಿ. ‘ನಾನು ಹತ್ತನೇ ತರಗತಿಯಲ್ಲಿದ್ದಾಗಲೇ ಸಿನಿಮಾದತ್ತ ಆಕರ್ಷಿತನಾಗಿದ್ದೆ. ಅದೇ ಗೀಳಿನಿಂದ ಸ್ಕೂಲಿನಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡುತ್ತಿದ್ದೆ. ಅದನ್ನು ಉಳಿದವರು ಮೆಚ್ಚಿ ಹೊಗಳುತ್ತಿದ್ದರು. ಅಭಿನಯದ ಮೂಲಕ ನನ್ನನ್ನು ನಾನು ಗುರ್ತಿಸಿಕೊಳ್ಳಬೇಕು ಎಂದು ನಿರ್ಧರಿಸಲು ಇದೇ ಪ್ರೇರಕವಾಯಿತು’ ಎಂದು ನಟನೆಯತ್ತ ಒಲವು ಬೆಳೆಸಿಕೊಂಡ ಬಗೆಯನ್ನು ವಿವರಿಸುವ ನಾಗಲಕ್ಷ್ಮಿ, ಮಾಡೆಲಿಂಗ್‌ ಮತ್ತು ಜಾಹೀರಾತು ಕ್ಷೇತ್ರದಲ್ಲಿಯೂ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ.

ಫ್ಲಿಫ್‌ಕಾರ್ಟ್‌ ಮತ್ತು ಆಕ್ಸೆಂಚರ್‌ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಇವರು, ಅನೇಕ ಮಲಯಾಳಿ ಜಾಹೀರಾತುಗಳಲ್ಲಿಯೂ ರೂಪದರ್ಶಿಯಾಗಿದ್ದಾರೆ. ರಾಜಕುಮಾರ್‌ ಕುಟುಂಬ ಮತ್ತು ನಾಗಲಕ್ಷ್ಮಿ ಕುಟುಂಬ ಪರಸ್ಪರ ಉತ್ತಮ ಸ್ನೇಹ ಸಂಬಂಧ ಹೊಂದಿರುವುದೂ ಇವರಿಗೆ ಚಿತ್ರಜಗತ್ತಿನ ವ್ಯಾಮೋಹ ಹೆಚ್ಚಲು ಕಾರಣ. ‘ರಾಘಣ್ಣ ಮತ್ತು ವಿನಯ್‌ ಇಬ್ಬರೂ ನನಗೆ ತುಂಬ ಸಹಾಯ ಮಾಡಿದ್ದಾರೆ’ ಎಂದು ಅವರು ಕೃತಜ್ಞತೆಯಿಂದ ನೆನೆಯುತ್ತಾರೆ.

‘ನಾನು ಮೊದಲ ಸಲ ಕ್ಯಾಮೆರಾ ಎದುರಿಸಿದಾಗ ಸಿನಿಮಾ ಮಾಧ್ಯಮದ ಎಬಿಸಿಡಿ ತಿಳಿದಿರಲಿಲ್ಲ. ಮೊದಲ ಸಿನಿಮಾದಲ್ಲಿ ಅಕಿರಾ ಚಿತ್ರತಂಡ ನನಗೆ ತುಂಬ ಸಹಾಯ ಮಾಡಿತು. ಅನೀಶ್‌ ಅವರು ಆಡಿಶನ್‌ ಏನೂ ತೆಗೆದುಕೊಳ್ಳದೆ ನೇರವಾಗಿ ಅವಕಾಶ ನೀಡಿದರು.  ನಂತರ ರಾಜೇಶ್‌ ರಾಮಕೃಷ್ಣ ಅವರು ಸುನಿ ಅವರನ್ನು ಪರಿಚಯಿಸಿ ‘ಸಿಂಪಲ್‌ ಆಗಿ ಇನ್ನೊಂದ್‌ ಲವ್‌ ಸ್ಟೋರಿ’ ಚಿತ್ರದಲ್ಲಿ ಅವಕಾಶ ಕೊಡಿಸಿದರು. ಅದರಲ್ಲಿ ನಾಯಕಿ ಮೇಘನಾ ಸ್ನೇಹಿತೆಯ ಪಾತ್ರ ನನ್ನದು. ಸುನಿ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ’ ಎನ್ನುವ ನಾಗಲಕ್ಷ್ಮಿ ಅವರಿಗೆ ಕನ್ನಡ ಚಿತ್ರರಂಗದಲ್ಲಿಯೇ ಹೆಸರು ಗಳಿಸಬೇಕು, ಒಳ್ಳೆಯ ನಟಿ ಎನಿಸಿಕೊಳ್ಳಬೇಕು ಎಂಬ ಕನಸಿದೆ.

ಕಠಿಣ ದೇಹದಂಡನೆ
‘ವ್ಯಾಯಾಮ ಇಲ್ಲದೆ ನನ್ನ ದಿನ ಶುರುವಾಗುವುದೇ ಇಲ್ಲ’ ಎನ್ನುವ  ನಾಗಲಕ್ಷ್ಮಿ , ಪ್ರತಿದಿನ ನಾಲ್ಕು ತಾಸುಗಳನ್ನು ಜಿಮ್‌ ಮತ್ತು ಯೋಗಕ್ಕಾಗಿ ಮೀಸಲಿಡುತ್ತಾರೆ.

‘ನಾನು ಫಿಟ್‌ನೆಸ್‌ ಬಗ್ಗೆ ತುಂಬ ಕಾಳಜಿ ವಹಿಸುತ್ತೇನೆ. ಜಿಮ್‌ ಮತ್ತು ಯೋಗವೇ ನನ್ನ ಫಿಟ್‌ನೆಸ್‌ ಮೂಲಮಂತ್ರ. ಚಿತ್ರೀಕರಣ ಇಲ್ಲದ ದಿನ ಬೆಳಿಗ್ಗೆ ಮತ್ತು ಸಂಜೆ ಸೇರಿ ಪ್ರತಿದಿನ ಕನಿಷ್ಠ ನಾಲ್ಕು ತಾಸುಗಳನ್ನು ಜಿಮ್‌ ಮತ್ತು ಯೋಗಕ್ಕಾಗಿ ಮೀಸಲಿಡುತ್ತೇನೆ.  ಚಿತ್ರೀಕರಣ ಇರುವಾಗ ಅಷ್ಟು ಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ. ಆದರೆ ಕನಿಷ್ಠ ಒಂದೂವರೆ ಗಂಟೆಯಾದರೂ ಜಿಮ್‌ನಲ್ಲಿ ಕಳೆದೇ ಕಳೆಯುತ್ತೇನೆ’ ಎನ್ನುತ್ತಾರೆ.

ವ್ಯಾಯಾಮದ ಬಗ್ಗೆ ಇಷ್ಟು ಕಟ್ಟುನಿಟ್ಟಾಗಿರುವ ಇವರು ಆಹಾರ ಪಥ್ಯದ ವಿಷಯಕ್ಕೆ ಬಂದರೆ ಮಾತ್ರ ಸಡಿಲ ಸಡಿಲ. ‘ನಾನು ತುಂಬಾ ಪುಢ್ಡೀ’ ಎಂದು ಮುಕ್ತವಾಗಿಯೇ ಹೇಳಿಕೊಳ್ಳುವ ನಾಗಲಕ್ಷ್ಮಿಗೆ ಮೀನು ಮತ್ತು ಪಾಸ್ತಾ ಇಷ್ಟದ ತಿನಿಸುಗಳು. ಅವನ್ನು ಬಿಟ್ಟರೆ ಮುದ್ದೆಯೇ ಅಚ್ಚುಮೆಚ್ಚು. ಬರೀ ತಿನ್ನುವುದಷ್ಟೇ ಅಲ್ಲ, ಅಡುಗೆ ಮಾಡುವುದೂ ಇವರಿಗೆ ಅಚ್ಚುಮೆಚ್ಚಿನ ಹವ್ಯಾಸ. ಪ್ರವಾಸವನ್ನೂ ಅಷ್ಟೇ ಇಷ್ಟಪಡುವ ಇವರು ಡಾರ್ಜಿಲಿಂಗ್‌, ಭೂತಾನ್‌, ನೇಪಾಳ ಹೀಗೆ ಅನೇಕ ಪ್ರದೇಶಗಳನ್ನು ಸುತ್ತಿದ್ದಾರೆ. ಲಾಸ್‌ ಏಂಜಲೀಸ್‌ ಅನ್ನು ಮನದಣಿಯೆ ನೋಡಬೇಕು ಎನ್ನುವುದು ಇವರ ಕನಸುಗಳಲ್ಲೊಂದು.

ತುಂಬಾ ಸಿನಿಮಾಗಳನ್ನು ನೋಡುವ ನಾಗಲಕ್ಷ್ಮಿಗೆ ಅದು ಕಲಿಕೆಯ ಮಾರ್ಗವೂ ಹೌದು. ‘ಅಣ್ಣಾವ್ರು (ರಾಜಕುಮಾರ್‌) ಮತ್ತು ರಮ್ಯಾ ನನ್ನ ರೋಲ್‌ ಮಾಡೆಲ್‌ಗಳು’ ಎನ್ನುವ ಅವರು, ‘ಹಿರಿಯರಿಂದ ಕಲಿಯುವುದು ಸಾಕಷ್ಟಿದೆ’ ಎಂದು ವಿನಮ್ರವಾಗಿ ಹೇಳುತ್ತಾರೆ.

‘ನಾಯಕಿಯಾಗಿ ನಟಿಸಲೂ ಕೆಲವು ಅವಕಾಶಗಳು ಬಂದಿವೆ’ ಎನ್ನುವ ಅವರು, ಆ ಬಗ್ಗೆ ಈಗಲೇ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ‘ಕಲಾವಿದ ಎಲ್ಲ ರೀತಿಯ ಪಾತ್ರಗಳನ್ನೂ ನಿರ್ವಹಿಸಬೇಕು. ಆ ಪಾತ್ರದೊಳಗೆ ತನ್ಮಯಗೊಂಡು ಅಭಿನಯಿಸಬೇಕು ಎನ್ನುವುದು ನನ್ನ ನಂಬಿಕೆ. ಆದ್ದರಿಂದಲೇ ನನಗೆ ಬರುವ ಅವಕಾಶಗಳನ್ನು ದೊಡ್ಡದು ಸಣ್ಣದು ಎಂದೆಲ್ಲ ನೋಡದೇ ಒಪ್ಪಿಕೊಳ್ಳುತ್ತೇನೆ. ಮುಂದೆಯೂ ಎಲ್ಲ ರೀತಿಯ ಪಾತ್ರಗಳನ್ನೂ ಮಾಡುತ್ತೇನೆ’ ಎನ್ನುವ ನಾಗಲಕ್ಷ್ಮಿ ಅವರಿಗೆ ತಮ್ಮ ಈ ಬದ್ಧತೆಯೇ ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂಬ ನಂಬಿಕೆಯಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT