ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನೇತ್ರಿಯ ಹೂವುಮುಳ್ಳು

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಪೂಜಾ ಗಾಂಧಿ ನಿರ್ಮಾಣ–ನಟನೆಯ ಚೊಚ್ಚಿಲ ಚಿತ್ರ ‘ಅಭಿನೇತ್ರಿ’ ಇಂದು (ಜ.30) ತೆರೆಗೆ ಬರುತ್ತಿದೆ. ತಮ್ಮ ಹೊಸ ಪಯಣದ ಅನುಭವಗಳನ್ನು ಪೂಜಾ ಗಾಂಧಿ ‘ಸಿನಿಮಾ ರಂಜನೆ’ ಜತೆ ಹಂಚಿಕೊಂಡಿದ್ದಾರೆ.

* ಮೊದಲ ನಿರ್ಮಾಣದ ಅನುಭವ ಹೇಗಿತ್ತು?
ತುಂಬಾ ಚೆನ್ನಾಗಿತ್ತು. ನಿರ್ಮಾಣ ಹೇಗಿರುತ್ತದೆ ಎಂಬುದರ ಗಂಧಗಾಳಿಯೂ ಗೊತ್ತಿರದ ನನಗೆ ಅದೊಂದು ಸವಾಲಿನ ಮತ್ತು ಕುತೂಹಲದ ಸಂಗತಿಯಾಗಿತ್ತು. ನಟಿಯಾಗಿ ಕ್ಯಾಮೆರಾ ಮುಂದಿನ ಅನುಭವಗಳು ಮಾತ್ರ ತಿಳಿದಿದ್ದ ನಾನು ಕ್ಯಾಮೆರಾ ಹಿಂದಿನ ಕಷ್ಟಗಳನ್ನೂ ತಿಳಿದುಕೊಂಡೆ. ಚಿತ್ರವೊಂದರ ತಯಾರಿಕೆಯಲ್ಲಿ ನಿರ್ಮಾಪಕರ ಪಾತ್ರ ಏನು ಎಂಬುದನ್ನು ಅರಿತೆ. ಶೀರ್ಷಿಕೆ ನೋಂದಣಿಯಿಂದ ಹಿಡಿದು ಚಿತ್ರ ಪ್ರದರ್ಶನವಾಗುವವರೆಗೂ ನಿರ್ಮಾಪಕರು ಬಹಳ ಪ್ರಮುಖರಾಗುತ್ತಾರೆ.

* ನಟನೆ–ನಿರ್ಮಾಣ ಎರಡನ್ನೂ ನಿಭಾಯಿಸಿದ್ದು ಹೇಗೆ?
ಶುರುವಿನಿಂದಲೂ ನಿರ್ದೇಶಕ ಸತೀಶ್ ಪ್ರಧಾನ್ ಅವರು ಕಥೆಯನ್ನು ನನ್ನ ತಲೆಗೆ ತುಂಬುತ್ತ ಬಂದಿದ್ದರು. ಹಾಗಾಗಿ ನಿರ್ಮಾಣದಿಂದ ನಟನೆಗೆ, ನಟನೆಯಿಂದ ನಿರ್ಮಾಣದತ್ತ ‘ಸ್ವಿಚ್ ಆನ್–ಸ್ವಿಚ್ ಆಫ್’ ಆಗುವುದು ಅಷ್ಟೇನು ಕಷ್ಟವಿರಲಿಲ್ಲ. ನನ್ನ ಪ್ರಕಾರ ನಾನು ಕೇವಲ ನಟಿಯಾಗಿಲ್ಲ. ನಂದಾ ಪಾತ್ರಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ‘ಪರಕಾಯ ಪ್ರವೇಶ’ ಮಾಡಿದ್ದೇನೆ. ನಿರ್ದೇಶಕರೂ ಅದನ್ನೇ ಹೇಳುತ್ತಾರೆ. ಇನ್ನು ಕೆಲವೊಮ್ಮೆ ಸೆಟ್ಟಲ್ಲಿ ಚಿಕ್ಕಪುಟ್ಟ ಸಮಸ್ಯೆಗಳಿದ್ದಾಗ ಒಂದು ದೃಶ್ಯದ ಚಿತ್ರೀಕರಣ ಆದ ತಕ್ಷಣ ಹೋಗಿ ಅದನ್ನು ನಿಭಾಯಿಸುತ್ತಿದ್ದೆ. ಎರಡೂ ಒಳ್ಳೆಯ ಅನುಭವ. ಅವೆರಡನ್ನೂ ಎಂಜಾಯ್ ಮಾಡಿದ್ದೇನೆ.

* ನಂದಾ ಪಾತ್ರಕ್ಕೆ ತಯಾರಿ ಹೇಗಿತ್ತು?
ಬಹಳ ಸವಾಲಿನ ಪಾತ್ರವದು. ಇಡೀ ಸಿನಿಮಾ ಒಂದು ಪಯಣದ ರೀತಿ. ಕಥೆಗೆ ತಕ್ಕಂತೆ ಒಮ್ಮೆ ತೆಳ್ಳಗಾದೆ, ಮತ್ತೆ ದಪ್ಪಗಾದೆ. ಆಳವಾದ ಪಾತ್ರ. ಒಮ್ಮೊಮ್ಮೆ ತಲೆ ಚಿಟ್ಟು ಹಿಡಿಯುತ್ತಿತ್ತು. ದೀರ್ಘ ಚಿಂತನೆ ನಡೆಸಿ, ಆಯಾ ಸಂದರ್ಭಗಳು ನನ್ನದೇ ಜೀವನದಲ್ಲಿ ಎದುರಾಗಿದ್ದರೆ ನಾನು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದೆ ಎಂಬುದನ್ನು ಯೋಚಿಸಿ ಅಭಿನಯಿಸುತ್ತಿದ್ದೆ. ಆಗ ತೀರಾ ಭಾವುಕಳಾಗಿಬಿಡುತ್ತಿದ್ದೆ. ಒಮ್ಮೊಮ್ಮೆ ನಾನೇ ಈ ಪಾತ್ರ ನಿರ್ವಹಿಸಿದ್ದೀನಾ ಎಂಬಷ್ಟು ಆಶ್ಚರ್ಯವಾಗುತ್ತಿತ್ತು.

* ಡಬ್ಬಿಂಗ್ ಕೂಡ ಮಾಡಿದ್ದೀರಿ!
ಹೂಂ. ಡಬ್ಬಿಂಗ್‌ನ ಒಂದು ತಿಂಗಳ ಅವಧಿ ಸಾಕಷ್ಟು ಒತ್ತಡವಿತ್ತು. ಆ ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ, ಅದಕ್ಕೆ ಪೂರಕ ಭಾವನೆಗಳು, ಅಯ್ಯೋ... ಪ್ರತಿಯೊಂದು ಶಬ್ದ ಉಚ್ಚರಿಸುವಾಗಲೂ ಅದನ್ನು ಸ್ಪಷ್ಟವಾಗಿ ಕಲಿತು ಡಬ್ಬಿಂಗ್ ಮಾಡುತ್ತಲೇ ನನ್ನ ಕನ್ನಡ ಚೆನ್ನಾಗಿ ಆಗಿದೆ ಅನ್ನಿಸುತ್ತದೆ. ಪತ್ರಿಕಾಗೋಷ್ಠಿ, ಸಂದರ್ಶನಗಳಲ್ಲಿ ಮಾತನಾಡುವುದೇ ನನ್ನ ಸಹಜ ಕನ್ನಡ.

* ಹಲವು ತೊಡಕುಗಳನ್ನು ಎದುರಿಸಿದಿರಿ. ಆ ಸಂದರ್ಭದಲ್ಲಿ ನಿಮ್ಮ ಮನಸ್ಥಿತಿ ಹೇಗಿತ್ತು?
ಓ ಗಾಡ್... (ನಗು, ನಿಟ್ಟುಸಿರು). ಆ ಅಡೆತಡೆಗಳನ್ನೆಲ್ಲ ಹೋರಾಡಿ ಇನ್ನಷ್ಟು ಗಟ್ಟಿಗೊಂಡಿದ್ದೇನೆ. ಒಮ್ಮೊಮ್ಮೆ ನಾವೇನೂ ತಪ್ಪು ಮಾಡಿಲ್ಲವಲ್ಲ. ಒಳ್ಳೆಯ ಚಿತ್ರ ಮಾಡಲು ಹೊರಟು ಯಾಕಿಷ್ಟು ಕಷ್ಟ ಪಡುತ್ತಿದ್ದೇವೆ ಎಂದನಿಸಿದ್ದೂ ಇದೆ. ಇನ್ನೊಮ್ಮೆ, ಯಾಕಾದರೂ ಈ ಚಿತ್ರದ ನಿರ್ಮಾಣದ ತಲೆಬಿಸಿ ಹಚ್ಚಿಕೊಂಡೆನೋ, ಹಿಂದೆ ಸರಿದುಬಿಡಬೇಕು ಎನ್ನುವಷ್ಟು ಬೇಸರಿಸಿಕೊಂಡಿದ್ದೂ ಇದೆ. ಒಂದೊಳ್ಳೆ ಚಿತ್ರ ಮಾಡಲು ಹೊರಟಾಗ ಅವನ್ನೆಲ್ಲ ಎದುರಿಸಲೇ ಬೇಕಿತ್ತು. ಎಲ್ಲವನ್ನು ದಾಟಿ ಮುಂದೆ ಬಂದಿದ್ದೇವಲ್ಲ. ಅದು ಖುಷಿ. ನನ್ನ ಪಾಲಿಗೆ ‘ಅಭಿನೇತ್ರಿ’ ದೊಡ್ಡ ಕನಸಾಗಿತ್ತು. ಚಿತ್ರ ಚೆನ್ನಾಗಿ ಬರಬೇಕು ಎಂದುಕೊಂಡಿದ್ದೆ.

ನನ್ನ ಮನಸಿಗೆ ತೀರಾ ಹತ್ತಿರದ ಚಿತ್ರ ಇದು. ಈ ನಿಟ್ಟಿನಲ್ಲಿ ನನ್ನ ಬೆನ್ನಿಗಿದ್ದು ಧೈರ್ಯ ನೀಡಿದವರು ಅನೇಕರು. ಈಗ ಯಾವ ರೀತಿಯ ವಿವಾದವೂ ಇಲ್ಲ. ಎಲ್ಲವೂ ನ್ಯಾಯಾಲಯದಲ್ಲೇ ಬಗೆಹರಿದಿವೆ. ಆದರೆ ಯಾವ ಚಿತ್ರಕ್ಕೂ ಈ ರೀತಿ ವಿವಾದಗಳು ಸುತ್ತಿಕೊಳ್ಳಬಾರದು.

* ಆರಂಭದಲ್ಲಿ ಕಲ್ಪನಾ ಅವರ ಜೀವನದ ಕಥೆ ಇದಲ್ಲ ಎಂದಿದ್ದಿರಿ. ಸೆನ್ಸಾರ್ ಮಂಡಳಿಯೂ ‘ಕಾಲ್ಪನಿಕ ಚಿತ್ರ’ ಎಂದು ತೋರಿಸುವಂತೆ ಹೇಳಿದೆ. ಇತ್ತೀಚೆಗೆ ಮತ್ತೆ ಇದು ಕಲ್ಪನಾ ಅವರ ಜೀವನದಿಂದ ಪ್ರೇರಣೆ ಪಡೆದ ಚಿತ್ರ ಎಂದಿದ್ದೀರಿ. ಇದು ಪ್ರಚಾರದ ಗಿಮಿಕ್ಕೇ?
ಸಿನಿಮಾ ಮಾಡುವ ಯಾರೂ ಜನರ ಮುಂದೆ ಅದರ ಕಥೆ ಹೇಳಲು ಇಷ್ಟಪಡುವುದಿಲ್ಲ. ಅದು ಗೌಪ್ಯವಾಗಿದ್ದರಷ್ಟೇ ಕುತೂಹಲ ಇರುತ್ತದೆ. ಚಿತ್ರದ ಬಗ್ಗೆ ನಾನೇನೂ ಹೇಳಿರಲಿಲ್ಲ. ಇಷ್ಟಕ್ಕೂ ಬಯಸಿ ಬಯಸಿ ಯಾರೂ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲವಲ್ಲ. ಆದರೆ ಛಾಯಾಚಿತ್ರಗಳನ್ನು ನೋಡಿದವರು ಕಲ್ಪನಾರ ಜೀವನದ ಕಥೆ ಎಂದುಕೊಂಡರು. ನಿಜಕ್ಕೂ ಇದು ಕಲ್ಪನಾರ ಜೀವನ ಆಧರಿತ ಚಿತ್ರವಲ್ಲ. ಆದರೆ ನಂದಾ ಎಂಬ ಪಾತ್ರ ಕಲ್ಪನಾ ಅವರಿಂದ ಪ್ರೇರಣೆ ಪಡೆದಿದ್ದು ನಿಜ. ಇದು ಎಲ್ಲಾ ಅಭಿನೇತ್ರಿಯರ ಕಥೆ.

* ನಿರ್ಮಾಪಕರು ‘ಸೇಫ್’ ಆಗಿದ್ದಾರಂತೆ?
ಹೌದು. ಚಿತ್ರ ಬಿಡುಗಡೆಗೂ ಹಲವು ದಿನಗಳ ಮೊದಲೇ ಎಲ್ಲ ವಲಯಗಳಲ್ಲೂ ವಿತರಣಾ ಹಕ್ಕು ಮಾರಾಟವಾಗಿದೆ. ಬಿಡುಗಡೆಗೂ ಮುನ್ನವೇ ಅಭಿಮಾನಿಗಳಲ್ಲಿ ಅಭಿನೇತ್ರಿ ಕುತೂಹಲ ಸಾಕಷ್ಟು ಮೂಡಿಸಿದ್ದಾಳೆ. ಅದು ಒಳ್ಳೆಯ ಬೆಳವಣಿಗೆ. ಉದ್ಯಮದಲ್ಲಿ ಒಬ್ಬ ನಿರ್ಮಾಪಕ ಉಳಿದುಕೊಂಡರೆ ಅವರು ಮತ್ತೆ ಚಿತ್ರಗಳನ್ನು ಮಾಡಿ, ಒಂದಿಷ್ಟು ಜನರಿಗೆ ನೆರವಾಗುತ್ತಾರೆ. ನಾನು ಕೂಡ ಹಾಗೆ ಹಲವು ಒಳ್ಳೊಳ್ಳೆಯ ಚಿತ್ರಗಳನ್ನು ನೀಡಲು ತುದಿಗಾಲಲ್ಲಿದ್ದೇನೆ.

* ಮುಂದಿನ ತಯಾರಿ?
‘ಅಭಿನೇತ್ರಿ’ ತೆರೆಗೆ ಬಂದ ನಂತರ ಮುಂದಿನ ಚಿತ್ರವನ್ನು ಘೋಷಿಸುತ್ತೇನೆ. ನನ್ನ ಸಂಸ್ಥೆ ಮೂಲಕ ವಾಹಿನಿಗಳಿಗೆ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ನಿರ್ಮಿಸಿಕೊಡುವ ಉದ್ದೇಶವೂ ಇದೆ. ‘ಅಭಿನೇತ್ರಿ’ ಸಿಹಿ ನೀಡಿದರೆ ಮುಂದಿನವುಗಳೆಲ್ಲ ಸರಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT