ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಚಿತ್ತ ರಾಜ್‌ ಸ್ಮಾರಕದತ್ತ...

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಂಠೀರವ ಸ್ಟುಡಿಯೊ ಎನ್ನುವ ಸಿನಿಮಾ ನಿರ್ಮಾಣದ ಪ್ರಮುಖ ಸ್ಥಳದೊಳಗೆ ಸಂತನನ್ನು ಆರಾಧಿಸುವ ಸಂಭ್ರಮ. ಅಧಿಕಾರಿಗಳು, ಚಿತ್ರರಂಗದವರು, ಕೂಲಿ ಕಾರ್ಮಿಕರು ಹೀಗೆ ಎಲ್ಲರೂ ಶ್ರದ್ಧಾಭಾವದಲ್ಲಿ ಕಳೆದ ಮೂರು ದಿನಗಳಿಂದ ಹಗಲಿರುಳು ದುಡಿದಿರುವುದಕ್ಕೆ ಶನಿವಾರ ಸಾರ್ಥಕ್ಯ ಸಿಗುತ್ತಿದೆ. ಸ್ಟುಡಿಯೊ ಆವರಣದಲ್ಲಿನ ವರನಟ ಡಾ. ರಾಜ್‌ಕುಮಾರ್ ಸ್ಮಾರಕ ಇಂದು (ನ.29) ಬೆಳಿಗ್ಗೆ 10.30ಕ್ಕೆ ಲೋಕಾಪರ್ಣೆಗೊಳ್ಳಲಿದೆ.

ಅಭಿಮಾನಿ ದೇವರುಗಳು ಮತ್ತು ಕನ್ನಡ ಚಿತ್ರರಸಿಕರ ಪಾಲಿಗೆ ಇದು ಐತಿಹಾಸಿಕ ಕ್ಷಣವಾಗಲಿದೆ. ವರನಟನ ಸಮಾಧಿ ನಗರದಲ್ಲಿ ಒಂದು ಪ್ರವಾಸಿ ಸ್ಥಳದಂತೆ ಆಗಿದೆ. ನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. 1954ರಲ್ಲಿ ತೆರೆಗೆ ಬಂದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ನಿಂದ ಹಿಡಿದು 2000ರಲ್ಲಿ ತೆರೆಗೆ ಬಂದ ಕೊನೆಯ ‘ಶಬ್ದವೇಧಿ’ ಚಿತ್ರದವರೆಗಿನ ಪೋಸ್ಟರ್‌ಗಳನ್ನು ಕಣ್ತುಂಬಿಕೊಂಡು ರಾಜ್‌ ಅವರನ್ನು ನೆನಪಿಸಿಕೊಂಡು ಗುಣಗಾನ ಮಾಡುತ್ತಾರೆ. ಕನ್ನಡ ಚಿತ್ರರಂಗದ ಆರಾಧ್ಯ ಪುರುಷನ ಸ್ಥಾನದಲ್ಲಿರುವವರು ರಾಜ್‌ಕುಮಾರ್‌. ಅವರ ಸಮಾಧಿಗೆ ಸ್ಮಾರಕದ ರೂಪು ಸಿಕ್ಕಿದ ನಂತರ ಅದರ ಮೆರುಗು ಮತ್ತಷ್ಟು ಹೆಚ್ಚಲಿದೆ. ‘ಸಮಾಧಿ’ ಎನ್ನುವ ಪದ ಮರೆಯಾಗಿ ‘ಸ್ಮಾರಕ’ ಪದ ಬರುತ್ತಿರುವುದು ಕನ್ನಡ ಚಿತ್ರರಂಗಕ್ಕೆ ವರನಟನ ಕೊಡುಗೆ ಯಾವ ಮಟ್ಟದ್ದು ಎನ್ನುವುದನ್ನು ಹೊರ ಜಗತ್ತಿಗೆ ಸಾರಿ ಸಾರಿ ಹೇಳುತ್ತಿದೆ.  

‘ರಣಧೀರ ಕಂಠೀರವ’ ಮಲಗಿರುವ ಕಂಠೀರವ ಸ್ಟುಡಿಯೊ ಅಂಗಳ ಬಣ್ಣಬಣ್ಣದ ತಳಿರು-–ತೋರಣಗಳಿಂದ ಜಗಮಗಿಸುತ್ತಿದೆ. ಡಾ. ರಾಜ್ ಸಮಾಧಿಯ ಸುತ್ತ ಈಗಾಗಲೇ ಬೆಳೆಸಿರುವ ಗಿಡಗಳು ಮೈ ಅರಳಿ ನಿಲ್ಲುವಂತೆ ನೀರುಣಿಸಲಾಗಿದೆ. ಸ್ಮಾರಕದ ಹಿನ್ನೆಲೆಯಲ್ಲಿ ಮತ್ತಷ್ಟು ಹೂ ಗಿಡಗಳು ಅಂಗಳಕ್ಕೆ ಪ್ರವೇಶ ಪಡೆದಿವೆ. ಸಮಾಧಿಯ ಬಳಿ ಗಣ್ಯರ ಸ್ವಾಗತಕ್ಕೆ ಕೆಂಪು ಮತ್ತು ಹಸಿರು ನೆಲಹಾಸು ಹಾಕಲಾಗಿದೆ. ಸ್ಮಾರಕ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಕಂಠೀರವದ ಅಂಗಳದಲ್ಲಿ ಕೆಲಸಗಳು ಭರದಿಂದ ನಡೆದಿದ್ದವು. ಕಲಾ ನಿರ್ದೇಶಕ ಶಶಿಧರ ಅಡಪ ಅವರು ಸಮಾಧಿ ಸ್ಥಳದ ಬಳಿ ಅಲಂಕಾರ–ವಿನ್ಯಾಸದ ಹೊಣೆ ಹೊತ್ತಿದ್ದಾರೆ.

ಅಲ್ಲಿ ಎಂಟು ಅಡಿ ಪೀಠದ ಮೇಲಿರುವ ಎರಡೂವರೆ ಅಡಿ ಎತ್ತರದ ರಾಜ್ ಪುತ್ಥಳಿಯೂ ಅನಾವರಣಗೊಳ್ಳಲಿದೆ. ಸ್ಟುಡಿಯೊ ಮಹಾದ್ವಾರದಲ್ಲಿ ಹಾಗೂ ಅಂಗಳದಲ್ಲಿ ರಾಜ್‌ಕುಮಾರ್‌ ಅವರ ಬೃಹತ್ ಕಟೌಟ್‌ಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ. ಹಿರಣ್ಯ ಕಶಿಪು ಸೇರಿದಂತೆ ಅವರು ಅಬ್ಬರಿಸಿದ ಸಿನಿಮಾ ಪಾತ್ರಗಳಲ್ಲಿನ ಗೆಟಪ್‌ಗಳು ಗಮನ ಸೆಳೆಯುತ್ತವೆ. ಸಭಾ ಕಾರ್ಯಕ್ರಮ ನಡೆಯುವ ವೇದಿಕೆಯನ್ನು ಹೊಯ್ಸಳ ಶೈಲಿಯಲ್ಲಿ ರೂಪಿಸಿರುವುದು ವಿಶೇಷ. ಹಿಂಬದಿಯಲ್ಲಿ ‘ಜೀವನ ಚೈತ್ರ’, ‘ಭಕ್ತ ಕುಂಬಾರ’ ಮತ್ತಿತರ ಸಿನಿಮಾಗಳ ಚಿತ್ರಗಳನ್ನು ಹಾಕಲಾಗಿದೆ. 32 ಅಡಿ ಅಗಲ, 48 ಅಡಿ ಉದ್ದದ ಸಭಾವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಆರು ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದೆ.

ಸ್ಮಾರಕಕ್ಕೆ ಖ್ಯಾತನಾಮರ ಸಲಾಂ...
ಇಬ್ಬರು ಡಿಸಿಪಿ, ನಾಲ್ವರು ಎಸಿಪಿ, ಇನ್‌ಸ್ಪೆಕ್ಟರ್, ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಒಟ್ಟು ಮೂರು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜನಸಂದಣೆಯಿಂದ ಸ್ಟುಡಿಯೊ ಆವರಣಕ್ಕೆ, ಅಲ್ಲಿನ ಚಿತ್ರೀಕರಣ ಸ್ಥಳಗಳಿಗೆ ಯಾವುದೇ ರೀತಿ ಧಕ್ಕೆಯಾಗದಂತೆ ಮುಖ್ಯದ್ವಾರರಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಕಬ್ಬಿಣದ ತಡೆಗೋಡೆಗಳನ್ನು ಹಾಕಲಾಗಿದೆ. ದಕ್ಷಿಣ ಭಾರತದ ಖ್ಯಾತ ನಟರಾದ ರಜನಿಕಾಂತ್‌ ಮತ್ತು ಚಿರಂಜೀವಿ ಸ್ಮಾರಕ ಅನಾವರಣಕ್ಕೆ ಸಾಕ್ಷಿಯಾಗುವುದು ಮತ್ತಷ್ಟು ಮೆರಗು ತರಲಿದೆ.

ಸ್ಟುಡಿಯೊ ಸುತ್ತಮುತ್ತಲಿನ ಕಾಲೋನಿಗಳಲ್ಲಿ ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ರಜನಿಯನ್ನು ಕಾಣುವ ತವಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ‘ಮುಖ್ಯವಾಗಿ ಸ್ವಚ್ಛತೆಗೆ ಗಮನ ನೀಡಲಾಗಿದೆ. ಇಡೀ ಸ್ಟುಡಿಯೊದಲ್ಲಿನ ಕಸಕಡ್ಡಿ ತೆಗೆಯಲಾಗಿದೆ. ಸಮಾಧಿ ಮತ್ತು ಅಲ್ಲಿನ ಉದ್ಯಾನ ಇನ್ನೂ ಸುಂದರವಾಗಿ ಕಾಣುವಂತೆ ಮಾಡಿದ್ದೇವೆ. ಮೂರು ದಿನಗಳಿಂದ ಬಿಡುವಿಲ್ಲದೆ ಸ್ವಚ್ಛತೆ ಕೆಲಸದಲ್ಲಿ ತೊಡಗಿದ್ದೇವೆ. ಈ ಸ್ಮಾರಕ ಅನಾವರಣ ಸಂದರ್ಭಕ್ಕೆ ಕೆಲಸ ಮಾಡುತ್ತಿರುವುದು ನಮಗೆ ಖುಷಿಯ ವಿಷಯ’ ಎನ್ನುತ್ತಾರೆ ಕಂಠೀರವ ಸ್ಟುಡಿಯೊದಲ್ಲಿ ಕೆಲಸಕ್ಕಿರುವ ವಸಂತ ಕುಮಾರ್.

ಈಗ ಇಷ್ಟು, ಮುಂದೆ ಮತ್ತಷ್ಟು
ರಾಜ್ಯ ಸರ್ಕಾರ 2007ರ ಆಗಸ್ಟ್‌ನಲ್ಲಿ ‘ಡಾ. ರಾಜ್‌ ಸ್ಮಾರಕ ನಿರ್ಮಾಣ ಟ್ರಸ್ಟ್‌’ ರಚಿಸಿ ಸ್ಮಾರಕ ನಿರ್ಮಾಣಕ್ಕೆ ಮುನ್ನುಡಿ ಬರೆದಿತ್ತು. ಅಲ್ಲಿಂದ ಹಂತ ಹಂತವಾಗಿ ಕೆಲಸಗಳು ನಡೆದಿವೆ. ಸ್ಮಾರಕ ನಿರ್ಮಾಣಕ್ಕೆ ಇಷ್ಟು ದೀರ್ಘ ಅವಧಿ ತೆಗೆದುಕೊಂಡಿದ್ದರೂ ಒಂದು ಉತ್ತಮ ರೂಪು ಸಿಕ್ಕಿದೆ, ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ ಎನ್ನುವ ಭಾವನೆ ಅಭಿಮಾನಿಗಳಲ್ಲಿದೆ. ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರ 2008–-09ರಲ್ಲಿ ರೂ.1 ಕೋಟಿ, 2009–-10ರಲ್ಲಿ ರೂ.1 ಕೋಟಿ, 2010–11ರಲ್ಲಿ ರೂ.2 ಕೋಟಿ ರೂಪಾಯಿ ಬಿಡುಗಡೆ ಮಾಡಿತು. ರಾಜ್ ಸಮಾಧಿ ಇರುವ 2.5 ಎಕರೆ ಪ್ರದೇಶದಲ್ಲಿ ಈ ಹಿಂದೆ ಕಾಂಪೌಂಡ್ ಮತ್ತು ಉದ್ಯಾನ ನಿರ್ಮಿಸಲಾಗಿತ್ತು.

ಈಗ ಸ್ಮಾರಕವನ್ನಾಗಿಸಿರುವುದರಿಂದ ಗಿಡಗಳನ್ನು ಮತ್ತಷ್ಟು ಆಕರ್ಷಕವಾಗಿ ಬೆಳೆಸಲಾಗುತ್ತದೆ. ಸ್ಮಾರಕ ವೀಕ್ಷಿಸಲು ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ರಾಜ್‌ಕುಮಾರ್‌ ಅವರ ಸಮಾಧಿ ಬಳಿ ಅವರ ಪುತ್ಥಳಿ, ಸಮಾಧಿ ಸ್ಥಳ ಮತ್ತು ಓಪನ್‌ ಥಿಯೇಟರ್‌ ಒಳಗೊಂಡ ಮೊದಲ ಹಂತದ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ. ಸ್ಮಾರಕಕ್ಕೆ ಮತ್ತಷ್ಟು ಹೊಳಪು ಕೊಡುವ ಯೋಜನೆಗಳು ಸಮಿತಿ ಮಂದಿವೆ. ರಾಜ್‌ ಮತ್ತು ಕನ್ನಡ ಚಿತ್ರರಂಗದ ಪಕ್ಷಿನೋಟದ ಮ್ಯೂಸಿಯಂ, ರಾಜ್‌ ಸೇರಿದಂತೆ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ಸಭಾಂಗಣ ನಿರ್ಮಿಸುವುದು ಇತ್ಯಾದಿ ಹಲವು ಕೆಲಸಗಳು ಎರಡನೇ ಹಂತದಲ್ಲಿ ನಡೆಯಲಿವೆ.  ‘ಕಂಠೀರವ ಸ್ಟುಡಿಯೊ ಸಿಬ್ಬಂದಿ ಸ್ಮಾರಕದ ನಿರ್ವಹಣೆ ಹೊಣೆ ಹೊತ್ತಿದ್ದು, ಉದ್ಘಾಟನೆ ಬಳಿಕ ಸರ್ಕಾರದ ಮೂಲಕ ಸ್ಮಾರಕದ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲು ಕೋರಲಾಗುವುದು’ ಎಂದು ಈ ಹಿಂದೆ ವಾರ್ತಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT