ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಧಾವಂತ; ಮಸುಕಾದ ರೈತ

ವಿಶ್ಲೇಷಣೆ
ಅಕ್ಷರ ಗಾತ್ರ

ಕೇಂದ್ರದಲ್ಲಿ ಏಕಪಕ್ಷ ಆಡಳಿತ ಸಾಧ್ಯವೇ ಇಲ್ಲವೇನೊ ಎಂಬಂಥ  ಕಾಲಘಟ್ಟದಲ್ಲಿ  ರಾಜಕೀಯ ವಿಶ್ಲೇಷಣೆಗಳನ್ನು ಬುಡಮೇಲು ಮಾಡಿ, 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಬಿಜೆಪಿಗೆ ಭರ್ಜರಿ ಜಯ ತಂದುಕೊಟ್ಟರು. ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರಕ್ಕೆ ಈಗ ಒಂದು ವರ್ಷ ತುಂಬಿದ ಸಂಭ್ರಮ.

ಎಲ್ಲೆಲ್ಲೂ ಸರ್ಕಾರದ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಹಾಗೆ ನೋಡಿದರೆ ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಚುನಾಯಿತ ಸರ್ಕಾರವೊಂದನ್ನು ಕೇವಲ ಒಂದು ವರ್ಷದಲ್ಲಿ ಮೌಲ್ಯಮಾಪನ ಮಾಡಿಬಿಡಬಹುದು ಎಂದುಕೊಳ್ಳುವುದು ತುಂಬಾ ಸರಳವಾದ ವಿಚಾರವಾಗುತ್ತದೆ.

ನನ್ನ ಪ್ರಕಾರ, ಒಂದು ವರ್ಷದಷ್ಟು ಅಲ್ಪ ಅವಧಿಯಲ್ಲಿ ನೂತನ ಸರ್ಕಾರ ರೂಪಿಸಿರುವ ನೀತಿ ನಿರೂಪಣೆಗಳನ್ನು ಆಧರಿಸಿ, ಅದು ನಡೆಯಲು ಉದ್ದೇಶಿಸಿರುವ ದಿಕ್ಕನ್ನು ಗುರುತಿಸುವ ಪ್ರಯತ್ನ ಮಾಡಬಹುದು. ಈ ಹಿನ್ನೆಲೆಯಲ್ಲಿ ಎನ್‌ಡಿಎ ಸರ್ಕಾರದ ಆಡಳಿತ ಸಾಗುತ್ತಿರುವ ದಿಕ್ಕಿನ ಬಗ್ಗೆ ಸಮಕಾಲೀನ ಸಾರ್ವಜನಿಕ ಚರ್ಚೆಯನ್ನು ಗಮನಿಸಿದರೆ, ಅಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದನ್ನು ನಾವು ಗುರುತಿಸಬಹುದು. ಹಾಗಿದ್ದಾಗಿಯೂ, ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿ ನನಗೆ ಮೋದಿ ನೇತೃತ್ವದ ಸರ್ಕಾರ ದೇಶದ ಆಂತರಿಕ ಮತ್ತು ಬಾಹ್ಯ ನೀತಿಗಳಲ್ಲಿ ಹಲವಾರು ಸಕಾರಾತ್ಮಕ ಬದಲಾವಣೆ ಪ್ರಕ್ರಿಯೆಗಳನ್ನು ಆರಂಭಿಸಿರುವಂತೆ ತೋರುತ್ತಿದೆ.

ಅವುಗಳಲ್ಲಿ ನಿರ್ದಿಷ್ಟವಾದ, ಮಹತ್ವಪೂರ್ಣ ಮತ್ತು ದೀರ್ಘಕಾಲೀನ ಪರಿಣಾಮವುಳ್ಳ ಕೆಲವು ಅಂಶಗಳನ್ನು ಗುರುತಿಸುವುದಾದರೆ, ಮೊದಲಿಗೆ ಹಲವು ವರ್ಷಗಳಿಂದ ಅಧಿಕಾರ ರಾಜಕಾರಣದಲ್ಲಿ ಮರೆಯಾಗಿದ್ದ ದೇಶದ ಪ್ರಧಾನ ಮಂತ್ರಿ ಸ್ಥಾನದ ಘನತೆಯನ್ನು ಮರುಸ್ಥಾಪಿಸಿ ನೌಕರಶಾಹಿಯಲ್ಲಿ ಶಿಸ್ತು ತುಂಬುವ ಕೆಲಸ ಮಾಡಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಿದೆ.

ಜೊತೆಗೆ ಈ ಹಿಂದೆ ಇದ್ದಂತೆ ಅಭಿವೃದ್ಧಿಯ ಪರಿಕಲ್ಪನೆಗೆ ತಕ್ಕಂತೆ ಕೇಂದ್ರ ಕಾಯ್ದೆಗಳನ್ನು ರೂಪಿಸುತ್ತದೆ ಮತ್ತು ರಾಜ್ಯಗಳು ಅವುಗಳನ್ನು ಅನುಸರಿಸಬೇಕು ಎಂಬ ಏಕಮುಖ ನೀತಿಗೆ ಬದಲಾಗಿ, ಕೇಂದ್ರ ಮತ್ತು ರಾಜ್ಯಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕುರಿತ ನೀತಿ ನಿರೂಪಣೆಗಳು ರಚನೆಯಾಗಬೇಕು ಎಂಬ ಸಹಕಾರಿ ಒಕ್ಕೂಟ (Co-operative Federalism) ಮಹತ್ವದ ಪರಿಕಲ್ಪನೆಯನ್ನು ಪರಿಚಯಿಸಿದ್ದು ದೇಶದ ವಿಕೇಂದ್ರೀಕರಣದ ನೆಲೆಯಲ್ಲಿ ಮುಖ್ಯವಾದ ಗುಣಾತ್ಮಕ ಅಂಶ.

ಸ್ಥಳೀಯ ಮಟ್ಟದ ಸಾಮಾಜಿಕ, ಆರ್ಥಿಕ ವಿಷಯಗಳಲ್ಲಿ ಬಹಳಷ್ಟು ವೈವಿಧ್ಯ ಇರುವ ಮತ್ತು ವಿವಿಧ ಹಿತಾಸಕ್ತಿಗಳಿಂದ ಕೂಡಿದ ಭಾರತೀಯ ಸಮಾಜಕ್ಕೆ ಈ ಮಾದರಿ ಅಗತ್ಯವಾದ ಸೂತ್ರವಾಗಿದೆ. ಪಕ್ಷ ರಾಜಕೀಯದ ಮೇಲಾಟದಲ್ಲಿ ಅದು ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎಂಬುದನ್ನು ಕಾಲವೇ ನಿರ್ಧರಿಸಬಹುದು. ಆದರೆ ಈ ಪರಿಕಲ್ಪನೆಯನ್ನು ಆದರ್ಶಯುತವಾಗಿ ಅಳವಡಿಸಿಕೊಳ್ಳಲು ಸಾಧ್ಯವಾದರೆ ಸ್ಥಳೀಯ ಜನರ ಬೇಡಿಕೆ ಮತ್ತು ಆಶಯಗಳನ್ನು ಆಧರಿಸಿ ಅಭಿವೃದ್ಧಿಯ ದಿಕ್ಕು, ಮಾದರಿಗಳನ್ನು ರೂಪಿಸಿಕೊಳ್ಳುವ ಅವಕಾಶ ರಾಜ್ಯಗಳಿಗೆ ದೊರೆಯುತ್ತದೆ.

ಇನ್ನು ಮೋದಿಯವರ ಮತ್ತೊಂದು ಸಾಧನೆ ಎಂದರೆ, ಸರ್ಕಾರ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಬಹಳ ಸೂಕ್ಷ್ಮವಾದ ಸಹಭಾಗಿತ್ವ ಪ್ರೋತ್ಸಾಹ ಮಾದರಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ಮೋದಿಯವರ ಇದುವರೆಗಿನ ಎಲ್ಲ ವಿದೇಶ ಪ್ರವಾಸ ಮತ್ತು ಅಲ್ಲಿ ನಡೆದ ಚರ್ಚೆಗಳನ್ನು ಗಮನಿಸಿದರೆ ಅವುಗಳ ಹಿಂದೆ, ಭಾರತವನ್ನು ಸಕಾರಾತ್ಮಕವಾಗಿ ಬಿಂಬಿಸುವ ಮೂಲಕ ಜಗತ್ತಿನ ರಾಷ್ಟ್ರಗಳ ಗಮನ ಮತ್ತು ಹೂಡಿಕೆಯನ್ನು ದೇಶದತ್ತ ಸೆಳೆಯುವ ಧೋರಣೆ ಇರುವುದನ್ನು ನಾವು ಗುರುತಿಸಬಹುದಾಗಿದೆ.

ಈ ನೀತಿಯ ಯಶಸ್ಸು ಮುಂಬರುವ ವರ್ಷಗಳಲ್ಲಿ ನಿಚ್ಚಳವಾಗಲಿದೆ. ಇನ್ನು ಜನ–ಧನ, ಬೇಟಿ ಬಚಾವೊ ಬೇಟಿ ಪಡಾವೊ, ಸ್ಪಚ್ಛ ಭಾರತ, ರಾಷ್ಟ್ರೀಯ ವಿಮಾ ನೀತಿ ಇತ್ಯಾದಿ ಜನಪ್ರಿಯ ಯೋಜನೆಗಳು ಪ್ರಗತಿಪರ ಎನ್ನಿಸಿದರೂ ಜನಸಾಮಾನ್ಯರ ಬದುಕಿನ ಮೇಲೆ ಅವುಗಳ ನಿರ್ದಿಷ್ಟ ಪರಿಣಾಮಗಳನ್ನು ಅಂದಾಜಿಸಲು ಇನ್ನೂ ಕಾಲಾವಕಾಶ ಬೇಕಿದೆ. ಇವು ಈ ಸರ್ಕಾರದ ಒಂದು ವರ್ಷದ ನೀತಿ ನಿರೂಪಣೆಗಳು ಸೂಚಿಸುತ್ತಿರುವ ಸಕಾರಾತ್ಮಕ ಬದಲಾವಣೆಯ ದಿಕ್ಕು ಎಂದು ಗುರುತಿಸಬಹುದಾದ ಪ್ರಮುಖ ಅಂಶಗಳು.

ಇನ್ನು ಮೋದಿ ಕೇವಲ ಉದ್ದಿಮೆದಾರರ ಪರವಾಗಿ ಇದ್ದಾರೆ, ಅವರ ಇದುವರೆಗಿನ ಎಲ್ಲ ಯೋಜನೆ ಮತ್ತು ಯೋಚನೆಗಳು ಹೂಡಿಕೆದಾರರ ಪರವಾಗಿಯೇ ಇವೆ ಎಂಬ ನಕಾರಾತ್ಮಕ ಚರ್ಚೆಯಲ್ಲಿಯೂ ಹುರುಳಿಲ್ಲದಿಲ್ಲ. ಏಕೆಂದರೆ 1990ರ ದಶಕದ ನಂತರ ದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿ ನಡೆದ ಬಹುಪಾಲು ಚರ್ಚೆಗಳೆಲ್ಲವೂ ಕೈಗಾರಿಕೆ ಮತ್ತು ಉದ್ದಿಮೆ ಪ್ರಧಾನ ಆರ್ಥಿಕತೆಯನ್ನೇ ಹೆಚ್ಚು ಪ್ರಭಾವಿಸುತ್ತಿವೆ, ಯಾವ ಸರ್ಕಾರವೂ ಅದಕ್ಕೆ ಹೊರತಲ್ಲ ಎಂಬ ನಿರಾಶಾದಾಯಕ ಕಾಲದಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ಮಹಾರಾಷ್ಟ್ರದಲ್ಲಿ ದೇಶದ ವಿವಿಧ ಭಾಗಗಳ 1500ಕ್ಕೂ ಹೆಚ್ಚು ರೈತರನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದರು.

ಆ ಸಂದರ್ಭದಲ್ಲಿ ‘ಭಾರತ ಸರ್ಕಾರ ರೈತ ಸ್ನೇಹಿ ಮತ್ತು ಕೃಷಿ ಸ್ನೇಹಿ ಆಗಿರಬೇಕು. ಆಗಲೇ ದೇಶಕ್ಕೆ ಭವಿಷ್ಯ’ ಎಂಬರ್ಥದ ಮಾತುಗಳನ್ನು ಅವರು ಆಡಿದ್ದರು. ಜೊತೆಗೆ ‘ಭಾರತದ ಕೃಷಿಕನ ಬದುಕಿನ ಬದಲಾವಣೆ ರೈತ ಮತ್ತು ಕೃಷಿ ಸ್ನೇಹಿ ಸರ್ಕಾರದಿಂದ ಮಾತ್ರ ಸಾಧ್ಯ’ ಎಂಬ ಭರವಸೆಯನ್ನು ನೀಡಿದ್ದರು. ಈ ಮಾತನ್ನು ನಂಬಿದ ದೇಶದಲ್ಲಿ ಶೇ 54ರಷ್ಟಿರುವ ರೈತ ಸಮೂಹ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಿತ್ತು.

ವರ್ಷದಿಂದ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಹಾಗಾದರೆ ಇಂದು ಕೇಂದ್ರ ಸರ್ಕಾರ ಕೃಷಿ ಸ್ನೇಹಿ ಆಗಿದೆಯೇ? ರೈತ ಮತ್ತು ಕೃಷಿಗೆ ಸಂಬಂಧಿಸಿದ ಸಕಾರಾತ್ಮಕ ಚರ್ಚೆಗಳನ್ನು ದೇಶದ ಮುಖ್ಯವಾಹಿನಿಯ ಚರ್ಚೆಗಳಂತೆ ನಿರೂಪಿಸಿದೆಯೇ? ಆಡಳಿತವನ್ನು ಹಳ್ಳಿಯ ರೈತ ಮತ್ತು ಕೃಷಿ ಕಾರ್ಮಿಕನವರೆಗೆ ವಿಸ್ತರಿಸಿ, ನಿಜವಾದ ಅರ್ಥದ ವಿಕೇಂದ್ರೀಕರಣವನ್ನು ಸಾಧಿಸುವ ಪ್ರಯತ್ನಗಳು ನಡೆಯುತ್ತಿವೆಯೆ? ಕೃಷಿಯನ್ನು ಆಧರಿಸಿರುವ ಗ್ರಾಮೀಣ ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಂಡರೆ, ಸ್ವಲ್ಪಮಟ್ಟಿಗೆ ಭ್ರಮನಿರಸನ ಆಗುತ್ತದೆ.

ಏಕೆಂದರೆ ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ನಡೆದ ಪ್ರಮುಖ ಚರ್ಚೆಗಳೆಲ್ಲವೂ ಕೈಗಾರಿಕೆ, ಉದ್ದಿಮೆ, ಖಾಸಗೀಕರಣ, ವಿದೇಶಿ ಬಂಡವಾಳ ಇತ್ಯಾದಿಗಳ ಸುತ್ತಲೇ ನಡೆಯುತ್ತಿವೆ. ಈ ಚರ್ಚೆಯ ಭರಾಟೆಯಲ್ಲಿ ರೈತ ಮತ್ತು ಕೃಷಿ ಸಮಸ್ಯೆಗಳು ನಗಣ್ಯವಾಗಿಬಿಟ್ಟಿವೆ. ನಮ್ಮ ಕಾಲದ ವಿಸಂಗತಿ ಹೇಗಿದೆ ಎಂದರೆ, ಇಂದು ಭೂಮಿ ಸ್ವಾಧೀನಕ್ಕೆ ಮುನ್ನ ಅದರ ಮಾಲೀಕನಾದ ರೈತನ ಒಪ್ಪಿಗೆ ನಮಗೆ ಮುಖ್ಯ ಅನ್ನಿಸುವುದಿಲ್ಲ.

ಕೃಷಿಯನ್ನು ಆಧರಿಸಿರುವ ಬಹಳ ದೊಡ್ಡ ಭೂರಹಿತ ಕೃಷಿ ಕಾರ್ಮಿಕರ ಸಾಮಾಜಿಕ ಬದುಕಿನ ಮೇಲೆ ಭೂಸ್ವಾಧೀನದಿಂದಾಗುವ ಪರಿಣಾಮಗಳನ್ನು ಅಧ್ಯಯನಕ್ಕೆ ಒಳಪಡಿಸಿ ಎಂಬ ಮೂಲಭೂತ ಬೇಡಿಕೆ ಮುಖ್ಯ ಅನ್ನಿಸುವುದಿಲ್ಲ. ಜನರು ಹೋರಾಟ ಮಾಡುವ ಹಂತ ತಲುಪಿದ್ದರೂ ಭೂ-ಸ್ವಾಧೀನ ಸುಗ್ರೀವಾಜ್ಞೆ ಎಂಬ ಕತ್ತಿ, ದೇಶದ ಒಟ್ಟು ರೈತರಲ್ಲಿ ಶೇ 79ರಷ್ಟಿರುವ ಸಣ್ಣ, ಅತಿಸಣ್ಣ ರೈತರ ನೆತ್ತಿಯ ಮೇಲೆ ತೂಗುತ್ತಿರುವ ಸಂಗತಿ ನಮ್ಮೆದುರು ಇದೆ.

ಸರ್ಕಾರವೇನೋ 2014ರ ಆಯವ್ಯಯದಲ್ಲಿ, ಕೃಷಿ ಸಾಲದ ಪ್ರಮಾಣವನ್ನು ಸುಮಾರು ₨ 8 ಲಕ್ಷ ಕೋಟಿಗೆ ಏರಿಸಿರುವುದು, ಗ್ರಾಮೀಣ ಮೂಲ ಸೌಕರ್ಯಕ್ಕೆ ಹೆಚ್ಚುವರಿಯಾಗಿ ಸುಮಾರು ₨ 25 ಸಾವಿರ ಕೋಟಿ  ಮೀಸಲಿಟ್ಟಿರುವುದು, ರೈತರಿಗಾಗಿ ಪ್ರತ್ಯೇಕ ಕೃಷಿ ವಾಹಿನಿ, ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ, ಮಣ್ಣು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವ, ಹಳ್ಳಿಹಳ್ಳಿಗೂ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಪ್ರಧಾನ­ಮಂತ್ರಿ ಕೃಷಿ ಸಿಂಚಾಯಿ ಎಂಬ ಯೋಜನೆ, ಬೆಳೆ ನಷ್ಟದ ಪರಿಹಾರ ಮೊತ್ತವನ್ನು ಒಂದೂವರೆ ಪಟ್ಟು ಹೆಚ್ಚಿಸಿರುವ ಅಂಕಿ-ಅಂಶಗಳನ್ನು ತೋರಿಸುತ್ತಿದೆ.

ಒಂದು ಅರ್ಥದಲ್ಲಿ ಇವೆಲ್ಲವೂ ಪ್ರಗತಿಪರ ಕ್ರಮಗಳಂತೆ ಕಂಡರೂ ಅಂತಿಮವಾಗಿ ಇವುಗಳ ಯಶಸ್ಸು ಯೋಜನೆಯನ್ನು ಜಾರಿಗೊಳಿಸುವುದರಲ್ಲಿ ಇದೆ. ಮುಖ್ಯವಾಗಿ ಸರ್ಕಾರ ಯೋಜನೆಗಳ ವಿತರಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕಿದೆ. ಜಾರಿಯಾದ ಯೋಜನೆಗಳ ಸಾಧಕ– ಬಾಧಕಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವ್ಯವಸ್ಥೆ ರೂಪಿಸಬೇಕಾಗಿದೆ. ಇಲ್ಲವಾದರೆ ಈ ಹಿಂದಿನ ಆಯವ್ಯಯದ ಯೋಜನೆಗಳಂತೆ ಇದೂ ಸಹ ಅರ್ಹರಿಗೆ ತಲುಪದೆ ಉಳ್ಳವರ ಪಾಲಾಗುವ ಸಾಧ್ಯತೆ ಇದೆ. ಆದರೆ ಆ ಮಾದರಿಯ ಚರ್ಚೆಗಳನ್ನು ನೂತನ ಸರ್ಕಾರ ಪರಿಣಾಮಕಾರಿಯಾಗಿ ನಡೆಸುತ್ತಿಲ್ಲ.

ಇಂದು ಜಗತ್ತೇ ಸಾವಯವ ಕೃಷಿ ಮತ್ತು ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ  ಮಾತನಾಡುತ್ತಿದೆ. ದೇಶದಲ್ಲಿ ಅದಕ್ಕೆ ಬೇಕಾದ ಭೂಮಿ ಮತ್ತು ನೈಪುಣ್ಯವುಳ್ಳ ದೊಡ್ಡ ಕೃಷಿ ಕಾರ್ಮಿಕ ವರ್ಗವಿದೆ. ಸರ್ಕಾರ ರೈತ ಸ್ನೇಹಿಯಾಗಿದ್ದರೆ, ಅವರ ಅನುಭವವನ್ನು ಅರಿತಿದ್ದರೆ ಸಾವಯವ ಕೃಷಿಗೆ ಬೇಕಾದ ವಾತಾವರಣ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ನೋಡಲಿ.

ಖಂಡಿತಾ ದೇಶಕ್ಕೆ ಜಗತ್ತಿನ ಮಾರುಕಟ್ಟೆಯಲ್ಲಿ ಸಾವಯವ ಆಹಾರ ಧಾನ್ಯ ಮತ್ತು ಆಯುರ್ವೇದ ಗಿಡಮೂಲಿಕೆಗಳ ಪೂರೈಕೆಯಲ್ಲಿ ಅಗ್ರಸ್ಥಾನ ದೊರೆಯುವ ಎಲ್ಲ ಅವಕಾಶಗಳೂ ಇವೆ. ಆದರೆ ನಾವು ವಿರುದ್ಧ ದಿಕ್ಕಿನಲ್ಲಿ ಭೂಸ್ವಾಧೀನ ಕಾಯ್ದೆ ಕುರಿತು ಚರ್ಚಿಸುತ್ತಿದ್ದೇವೆ. ಕೃಷಿಗೆ ಬದಲು ಕೈಗಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ನೂರಾರು ವರ್ಷಗಳಿಂದ ತಲೆಮಾರುಗಳಿಗೆ ಆಧಾರವಾಗಿದ್ದ ಭೂಮಿಯನ್ನು ಮಾರಲು 4–5 ಪಟ್ಟು ಪರಿಹಾರದ ಆಸೆ ತೋರಿಸುತ್ತಿದ್ದೇವೆ.

ಒಟ್ಟಾರೆ ರಾಜಕೀಯ ಅಧಿಕಾರವನ್ನು ಆರ್ಥಿಕತೆಯ ವೈಚಾರಿಕತೆಯೊಳಗೆ ನಡೆಸುತ್ತಿದ್ದೇವೆ. ಇದಕ್ಕೆಲ್ಲ ಮುಖ್ಯ ಕಾರಣ 90ರ ದಶಕದ ನಂತರ ಬಂದ ಆಧುನಿಕ ಬಂಡವಾಳಶಾಹಿ ಪ್ರಣೀತ ರಾಜಕೀಯ ವಿಶ್ಲೇಷಣೆಗಳು. ಇವು  ಆರ್ಥಿಕ ಅವಕಾಶಗಳನ್ನು ಹೆಚ್ಚು ಹೆಚ್ಚು ಸೃಷ್ಟಿಸುವುದೇ ರಾಜಕೀಯ ನಾಯಕತ್ವದ ಜವಾಬ್ದಾರಿ ಎಂಬ ಸಂಕುಚಿತ ಅರ್ಥದಲ್ಲಿ ರಾಜಕಾರಣವನ್ನು ನಿರ್ವಚಿಸಿದವು. ಈ ಮಾದರಿ ಒಂದು ಪ್ರಜಾಪ್ರಭುತ್ವ ಸರ್ಕಾರವನ್ನು ಕೇವಲ ಮಾರುಕಟ್ಟೆಯ ಅವಕಾಶಗಳನ್ನು ಹೆಚ್ಚಾಗಿ ಸೃಷ್ಟಿಸುವ ಮಧ್ಯವರ್ತಿಯಂತೆ ನೋಡುವ ಮೂಲಕ, ರಾಜಕಾರಣದ ವ್ಯಾಪ್ತಿಯನ್ನೇ ಸಂಕುಚಿತಗೊಳಿಸಿದೆ.

ನಿಜವಾದ ಅರ್ಥದಲ್ಲಿ, ಆಧುನಿಕ ಅಭಿವೃದ್ಧಿಯ ಮಾದರಿಯಿಂದ ಬಂದ ವರಮಾನವನ್ನು ದೇಶದ ಎಲ್ಲ ಜನರಿಗೆ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳ ಹೆಸರಿನಲ್ಲಿ ಸಮಾನವಾಗಿ ವಿತರಿಸುವುದು ರಾಜಕೀಯ ನಾಯಕತ್ವದ ಜವಾಬ್ದಾರಿ ಆಗಬೇಕಿತ್ತು. ಇದಕ್ಕೆ ಬದಲು ಭೂಮಿ, ಅದಿರು, ಅರಣ್ಯ ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಉದ್ಯಮಿಗಳಿಗೆ ಪರಿಣಾಮಕಾರಿಯಾಗಿ ಹಂಚುವುದು ರಾಜಕೀಯ ನಾಯಕತ್ವದ ಹೊಣೆ ಎಂಬಂತೆ ವಿವರಿಸಲಾಗುತ್ತಿದೆ.

ಸರ್ಕಾರ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಸಮಾನವಾಗಿ ನಿರ್ವಹಿಸಬೇಕಾಗಿದ್ದ ಶಿಕ್ಷಣ, ಆರೋಗ್ಯದಂತಹ ಮೂಲ ಅವಶ್ಯಕತೆಗಳ ಕ್ಷೇತ್ರಗಳನ್ನು ಸಂಪನ್ಮೂಲದಂತೆ ಮಾರುಕಟ್ಟೆ ಪರಿಭಾಷೆಯಲ್ಲಿ ಹಂಚುತ್ತಿದ್ದೇವೆ. ಇಂದು ಅವು ಬಡವ-ಶ್ರೀಮಂತ ಎಂಬ ತಾರತಮ್ಯ ಮಾಡದೆ ಎಲ್ಲರಿಂದ ಲಕ್ಷ ಲಕ್ಷ ಹಣ ಕೀಳುವ ಲಾಭದಾಯಕ ಕ್ಷೇತ್ರಗಳಾಗಿ ಬದಲಾಗಿವೆ. ಈ ಅರ್ಥದಲ್ಲಿ ನಾವು ಸಮಾನತೆ ಸಾಧಿಸಿದ್ದೇವೆ!

ಹಾಗೆ ನೋಡಿದರೆ ದಶಕಗಳ ಆರ್ಥಿಕ ಬೆಳವಣಿಗೆ ನಡುವೆಯೂ ನಮ್ಮಲ್ಲಿನ ಸಾಮಾಜಿಕ ತಾರತಮ್ಯಗಳು ಮುಂದುವರಿಯುತ್ತಿವೆ. ಇದನ್ನು ನೋಡಿಯೂ ಆರ್ಥಿಕ ಬೆಳವಣಿಗೆಯೊಂದೇ ಸಾಮಾಜಿಕ ಪರಿವರ್ತನೆಯ ದಾರಿ ಎಂಬಂತೆ ಸಂಕುಚಿತವಾಗಿ ಮಾತನಾಡುತ್ತಿರುವ ರಾಜಕೀಯ ವಿಸಂಗತಿಗೆ ನಾವು ಕಿವಿಯಾಗಿದ್ದೇವೆ. ಈಗಿನ ಸರ್ಕಾರದಲ್ಲಿ ಈ ಮಾದರಿ ಹೆಚ್ಚು ಸದ್ದು ಮಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಎಂದಿನಂತೆ   ಬಡವ, ರೈತ, ದಲಿತರ ಬದುಕು ಚುನಾವಣಾ ಪ್ರಣಾಳಿಕೆ ಮತ್ತು ವರ್ಷಕ್ಕೊಮ್ಮೆ  ಮಂಡಿಸಲಾಗುವ ಮುಂಗಡ ಪತ್ರದ ಆಚೆ ಚರ್ಚೆಗೆ ಒಳಗಾಗುತ್ತಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಈ ಸರ್ಕಾರವೂ ಹೊರತಲ್ಲ ಎಂಬುದನ್ನು ಈವರೆಗಿನ ಕೆಲವು ನೀತಿ ನಿರೂಪಣೆಗಳು ಸೂಚಿಸುತ್ತಿವೆ. ಮುಂದಿನದನ್ನು ಕಾದು ನೋಡಬೇಕಿದೆ.
ಲೇಖಕ ಪೋಸ್ಟ್ ಡಾಕ್ಟೊರಲ್‌ ಫೆಲೊ,
ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT