ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಆರ್ಥಿಕ ನೀತಿಯ ಗುರು

ವ್ಯಕ್ತಿ: ಅರವಿಂದ ಸುಬ್ರಹ್ಮಣಿಯನ್
Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಮನ್ನಣೆಗೆ ಪಾತ್ರರಾಗಿರುವ ಆರ್ಥಿಕ ತಜ್ಞರಲ್ಲಿ ಒಬ್ಬರಾಗಿರುವ ಮತ್ತು ಜನಪ್ರಿಯ ಅಂಕಣಕಾರರೂ ಆಗಿರುವ, ‘ಫಾರಿನ್‌ ಪಾಲಿಸಿ’ ನಿಯತಕಾಲಿಕೆಯು ವಿಶ್ವದ ಮುಂಚೂಣಿ 100 ಜಾಗತಿಕ ಚಿಂತಕರಲ್ಲಿ ಒಬ್ಬರು ಎಂದು ಗುರುತಿಸಿರುವ ಅಮೆರಿಕ ಮೂಲದ ಆರ್ಥಿಕ ತಜ್ಞ ಅರವಿಂದ ಸುಬ್ರಹ್ಮಣಿಯನ್ ಅವರು ಈಗ ದೇಶದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ.

ಆರ್ಥಿಕ ನೀತಿ ನಿರೂಪಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಈ ಮಹತ್ವದ ಹುದ್ದೆಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅರವಿಂದ ಅವರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತಿತ್ತು. ಮೋದಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಸಮರ್ಥ ಆರ್ಥಿಕ ಚಿಂತಕರೇ ಇಲ್ಲ ಎನ್ನುವ ಕೊರತೆಯನ್ನು ಈ ಹೊಸ ಗುರು ದೂರ ಮಾಡಲಿದ್ದಾರೆ.

ಎರಡು ಮಹತ್ವದ ರಾಜ್ಯಗಳ ಚುನಾವಣಾ ಪ್ರಚಾರ ಭರಾಟೆ ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈಗ ದೇಶದ ಅರ್ಥವ್ಯವಸ್ಥೆಯ ಆರೋಗ್ಯದತ್ತ ಗಮನ ಕೇಂದ್ರೀಕರಿಸಿದ್ದಾರೆ. ಕೇಂದ್ರ ಸರ್ಕಾರದ ಉನ್ನತ ಮಟ್ಟದ ಆರ್ಥಿಕ ಹುದ್ದೆಗಳ ಬಾಬುಗಳನ್ನು ಬದಲಾಯಿಸುವ ಮಹತ್ವದ ಮತ್ತು ದೂರಗಾಮಿ ಪರಿಣಾಮ ಬೀರುವ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿದ್ದಾರೆ. ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಂಡ ಅಧಿಕಾರಶಾಹಿ ಬದಲಾವಣೆಯ ಮಹತ್ವಾಕಾಂಕ್ಷೆಯ ನಿರ್ಧಾರ ಇದಾಗಿದೆ.

ಅರವಿಂದ ನೇಮಕಾತಿಯು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಪಕ ಪ್ರಮಾಣದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಹೊರಟಿರುವುದರ ಸಂಕೇತವೂ ಆಗಿದೆ.

ಅರವಿಂದ ಸುಬ್ರಹ್ಮಣಿಯನ್ ಅವರನ್ನು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸುವ ಮೂಲಕ, ವ್ಯಾಪಕ ಪ್ರಮಾಣದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳು ಜಾರಿಗೆ ಬರಲಿರುವ ಸ್ಪಷ್ಟ ಸೂಚನೆಯನ್ನೂ ನೀಡಿದ್ದಾರೆ.

ಅರವಿಂದ ಅವರು ಆರ್ಥಿಕ ಬೆಳವಣಿಗೆ ಮತ್ತು ಸುಧಾರಣಾ ಕ್ರಮಗಳ ಪರವಾಗಿರುವ ಆರ್ಥಿಕ ತಜ್ಞರಾಗಿದ್ದು, ತಮಗನಿಸಿದ್ದನ್ನು ಯಾವುದೇ ಮುಚ್ಚುಮರೆ ಇಲ್ಲದೇ ಹೇಳುವ ಎದೆಗಾರಿಕೆಯೂ ಅವರಿಗೆ ಇದೆ ಎಂದು ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ಬಣ್ಣಿಸಿರುವುದು ಇವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.

ಜಾಗತಿಕ ವಾಣಿಜ್ಯ ವಹಿವಾಟಿನ ಅಧ್ಯಯನದ ಪರಿಣತರಾಗಿರುವ ಅರವಿಂದ, ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒದ) ಇತ್ತೀಚಿನ ಸಭೆಯಲ್ಲಿ ಕೇಂದ್ರ ಸರ್ಕಾರ ತಳೆದಿರುವ ಆಹಾರ ಸುರಕ್ಷತೆ ಮತ್ತು ಕೃಷಿ ಸಬ್ಸಿಡಿ ನಿಲುವನ್ನು ಟೀಕಿಸಿ ಗಮನ ಸೆಳೆದಿದ್ದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮೊದಲ ಬಜೆಟ್ ಅನ್ನು ನಿರಾಶಾದಾಯಕವಾಗಿದೆ ಎಂದೂ ಟೀಕಿಸಿದ್ದರು.

ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಇವರ ದಿಟ್ಟತನದ ಹೊರತಾಗಿಯೂ ಅವರ ವಿಶ್ವಾಸಾರ್ಹತೆ ಮತ್ತು ಹಣಕಾಸು, ಆರ್ಥಿಕ ನೀತಿ ನಿರೂಪಣೆ ಸಿದ್ಧಪಡಿಸುವಲ್ಲಿ ಇವರು ಕಠಿಣ ಪರಿಶ್ರಮಿ ಎನ್ನುವ ಪ್ರಶಂಸೆಯೂ ಇವರ ನೇಮಕಾತಿಯಲ್ಲಿ ಪ್ರಮುಖವಾಗಿ ಪರಿಗಣನೆಗೆ ಬಂದಿದೆ.

ಮುಕ್ತ ವ್ಯಾಪಾರವನ್ನು ಬಲವಾಗಿ ಪ್ರತಿಪಾದಿಸುವ, ದೇಶದ ಅರ್ಥ ವ್ಯವಸ್ಥೆಯಲ್ಲಿ ಸರಕುಗಳ ತಯಾರಿಕಾ ರಂಗವು ಅತಿ ದೊಡ್ಡ ಪಾತ್ರ ನಿರ್ವಹಿಸಬೇಕು, ಅಮೆರಿಕ ಜತೆಗಿನ ವಾಣಿಜ್ಯ ಸಂಬಂಧ ವೃದ್ಧಿಯಾಗಬೇಕು ಮತ್ತು ಚೀನಾದ ಅರ್ಥ ವ್ಯವಸ್ಥೆ ಮೇಲೆ ನಿರಂತರವಾಗಿ ಕಣ್ಣು ನೆಟ್ಟಿರಲೇಬೇಕು ಎನ್ನುವುದು ಅರವಿಂದ ಅವರ ಆಲೋಚನಾ ಲಹರಿಯಾಗಿದೆ.

ಬಹುರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಿಇಎ ನಡುವೆ ಭಿನ್ನಮತ ಸ್ಫೋಟಿಸುವುದೇ ಎನ್ನುವುದು ಇವರ ಅಧಿಕಾರಾವಧಿಯಲ್ಲಿ ಪರೀಕ್ಷೆಗೆ ಒಳಪಡಲಿದೆ.

ಬದಲಾವಣೆ ಮತ್ತು ಸುಧಾರಣೆಗೆ ಸ್ಪಷ್ಟ ಜನಾದೇಶ ಪಡೆದಿರುವ ನರೇಂದ್ರ ಮೋದಿ ಸರ್ಕಾರದ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ತಮಗೆ ಸಂದ ಗೌರವ ಎಂದೇ ಬಣ್ಣಿಸಿರುವ ಅರವಿಂದ, ದೇಶಿ ಅರ್ಥ ವ್ಯವಸ್ಥೆಯು ಪುಟಿದೇಳುವ ಬಗ್ಗೆ ಭಾರಿ ಆಶಾವಾದಿಯಾಗಿದ್ದಾರೆ.

ಭಾರತದಂತಹ ಅರ್ಥ ವ್ಯವಸ್ಥೆ ಹೊಂದಿರುವ ಯಾವುದೇ ದೇಶದ ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ಇರಬೇಕು ಮತ್ತು ಆರ್ಥಿಕತೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ವ್ಯಾಪಕ ಪ್ರಮಾಣದ ಬಂಡವಾಳ ಹೂಡಿಕೆಗೆ ಅಗತ್ಯವಾದ ಪೂರಕ ವಾತಾವರಣವೂ ಇರಬೇಕು. ಜತೆಗೆ ದೇಶದ ಎಲ್ಲ ಸಮುದಾಯಗಳಿಗೆ ಅವಕಾಶ ಒದಗಿಸಿ ಕೊಡುವ ಪ್ರಕ್ರಿಯೆಯಲ್ಲಿ ಯಾರೊಬ್ಬರನ್ನೂ ಕೈಬಿಡಬಾರದು ಎನ್ನುವುದು ಅರವಿಂದ ಅವರ ಆಶಯವಾಗಿದೆ.

ಕಠಿಣ ಸ್ವರೂಪದ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡಿರುವ ದೇಶಗಳಲ್ಲಿ ಇವರು ಇದುವರೆಗೂ ಕೆಲಸ ಮಾಡಿಲ್ಲ. ಹೀಗಾಗಿ ಇವರು ತಮ್ಮ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವರೇ ಎನ್ನುವ ಅನುಮಾನ ಕೆಲವರಲ್ಲಿ ಇದೆ. ಇದೇ ಕಾರಣಕ್ಕೆ, ದೇಶಿ ಅರ್ಥ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಲು ಇವರಿಗೆ ಕೆಲಮಟ್ಟಿಗೆ ಕಾಲಾವಕಾಶವನ್ನೂ ಕೊಡಬೇಕಾಗುತ್ತದೆ.

ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆ ನಿಭಾಯಿಸುವಲ್ಲಿ ಆರ್ಥಿಕ ಪರಿಣತಿಯೊಂದೇ ಕೆಲಸಕ್ಕೆ ಬರುವುದಿಲ್ಲ. ರಾಜಕೀಯ ಪರಿಮಿತಿ ಒಳಗೇ ಕಾರ್ಯ ಇವರು ನಿರ್ವಹಿಸಬೇಕಾಗುತ್ತದೆ. ದೆಹಲಿಯಲ್ಲಿನ ರಾಜಕೀಯ ವಾತಾವರಣಕ್ಕೂ ಅವರು ಇನ್ನೂ ಒಗ್ಗಿಕೊಳ್ಳಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಅವರಿಂದ ಅಲ್ಪಾವಧಿಯಲ್ಲಿ ಅತಿಯಾದ ನಿರೀಕ್ಷೆ ಮಾಡುವುದು ಸರಿಯಾಗದು.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಆರ್ಥಿಕ ತಜ್ಞನ ಹುದ್ದೆ ನಿರ್ವಹಿಸುತ್ತಿದ್ದ ಅರವಿಂದ ಅವರು ಭಾರತ, ಚೀನಾ ಅರ್ಥ ವ್ಯವಸ್ಥೆ ಮತ್ತು ಜಾಗತಿಕ ಆರ್ಥಿಕ ಶಕ್ತಿಯ ಸಮತೋಲನದಲ್ಲಿನ ಬದಲಾವಣೆ ಬಗೆಗಿನ ಪರಿಣತರು ಎಂದೇ ಖ್ಯಾತರಾಗಿದ್ದಾರೆ.

ಕೃತಿಗಳು
ಎರಡು ಸ್ವತಂತ್ರ ಪುಸ್ತಕಗಳನ್ನು ಅರವಿಂದ ಸುಬ್ರಹ್ಮಣಿಯನ್ ಅವರು ರಚಿಸಿದ್ದಾರೆ. ಇಂಡಿಯಾಸ್ ಟರ್ನ್: ಅಂಡರ್‌ಸ್ಟ್ಯಾಂಡಿಂಗ್ ದ ಇಕನಾಮಿಕ್ ಟ್ರಾನ್ಸ್ ಫಾರ್ಮೇಶನ್ (ಭಾರತದ ಸರದಿ: ಆರ್ಥಿಕ ಪರಿವರ್ತನೆ ತಿಳಿದುಕೊಳ್ಳುವುದು) - 2008ರಲ್ಲಿ ಪ್ರಕಟವಾಗಿದೆ.
‘ಎಕ್ಲಿಪ್ಸ್‌: ಲಿವಿಂಗ್‌ ಇನ್‌ ದ ಶಾಡೊ ಆಫ್‌ ಚೀನಾಸ್ ಇಕನಾಮಿಕ್‌ ಡಾಮಿನನ್ಸ್‌’ (ಗ್ರಹಣ: ಚೀನಾದ ಆರ್ಥಿಕ ಪ್ರಾಬಲ್ಯದ ನೆರಳಿನಲ್ಲಿನ ಬದುಕು) ಮತ್ತು ‘ಹೂ ನೀಡ್ಸ್‌ ಟು ಓಪನ್‌ ದ ಕ್ಯಾಪಿಟಲ್‌ ಅಕೌಂಟ್‌’  (ಬಂಡವಾಳ ಖಾತೆ ತೆರೆಯಲು ಯಾರಿಗೆ ಅಗತ್ಯ ಇದೆ) ಕೃತಿಯ ಸಹ ಲೇಖಕರಾಗಿದ್ದಾರೆ.

ಆರ್ಥಿಕ ಬೆಳವಣಿಗೆ, ವ್ಯಾಪಾರ, ಅಭಿವೃದ್ಧಿ, ನೆರವು, ತೈಲ ವಹಿವಾಟು, ವಿಶ್ವ ವ್ಯಾಪಾರ ಸಂಘಟನೆಗೆ ಸಂಬಂಧಿಸಿದಂತೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರೆ.

ಮೂಲತಃ ತಮಿಳುನಾಡಿನವರಾದ ಅರವಿಂದ, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್‌ನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ, ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇಂಗ್ಲೆಂಡ್‌ನ ಯುನಿವರ್ಸಿಟಿ ಆಫ್ ಆಕ್ಸ್‌ಫರ್ಡ್‌ನಿಂದ ಎಂ.ಫಿಲ್ ಮತ್ತು ಡಿ.ಫಿಲ್ ಪಡೆದುಕೊಂಡಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಸಂಶೋಧನಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಹುರಾಷ್ಟ್ರೀಯ ವ್ಯಾಪಾರ ಸಂಧಾನಕ್ಕೆ ಸಂಬಂಧಿಸಿದ ಉರುಗ್ವೆ ಸುತ್ತಿನ ಮಾತುಕತೆಗಳಲ್ಲೂ (1988ರಿಂದ 92) ಅವರು ತೊಡಗಿಕೊಂಡಿದ್ದರು.

ಹಾರ್ವರ್ಡ್‌ ವಿಶ್ವವಿದ್ಯಾಲಯದ ಕೆನೆಡಿ ಸ್ಕೂಲ್‌ ಆಫ್‌ ಗವರ್ನಮೆಂಟ್‌ (1999–2000) ಮತ್ತು  ಜಾನ್‌ ಹಾಪ್‌ಕಿನ್ಸ್‌ ಸ್ಕೂಲ್‌ ಫಾರ್ ಅಡ್ವಾನ್ಸಡ್‌ ಇಂಟರ್‌ನ್ಯಾಷನಲ್ ಸ್ಟಡೀಸ್‌ನಲ್ಲಿ 2008ರಿಂದ 2010ರವರೆಗೆ ಬೋಧಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಅಂಕಣಕಾರ
ವಿಶ್ವದ ಪ್ರಮುಖ ಆರ್ಥಿಕ ನಿಯತಕಾಲಿಕೆಗಳಲ್ಲಿ ಅಂಕಣಕಾರಾಗಿಯೂ ಇವರು ಮನ್ನಣೆ ಗಳಿಸಿದ್ದಾರೆ. ಇಕನಾಮಿಸ್ಟ್, ಫೈನಾನ್ಶಿಯಲ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮತ್ತು ದೇಶದ ಪ್ರಮುಖ ಹಣಕಾಸು ದೈನಿಕ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಸೇರಿದಂತೆ ವಿಶ್ವದ ಪ್ರಮುಖ ಅಂಕಣಕಾರರಾಗಿಯೂ ಇವರು ಜನಪ್ರಿಯರಾಗಿದ್ದಾರೆ.

‘ಜಿ-20’ಗೆ ಸಂಬಂಧಿಸಿದ ಹಣಕಾಸು ಸಚಿವರ ಪರಿಣತರ ತಂಡದ ಸದಸ್ಯ ಸೇರಿದಂತೆ ಹಲವಾರು ಹುದ್ದೆಗಳನ್ನು ನಿಭಾಯಿಸುವ ಮೂಲಕವೂ ಇವರು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ.

ಇವರಲ್ಲೊಬ್ಬ ‘ಅಭಿವೃದ್ಧಿ ಆರ್ಥಿಕ ತಜ್ಞ’ ಇದ್ದಾನೆ. ಭಾರತೀಯ ರಿಸರ್ವ್‌ ಬ್ಯಾಂಕ್ ಸದ್ಯದ ಗವರ್ನರ್ ರಘುರಾಂ ರಾಜನ್ ಜತೆಗೂ  ಐಎಂಎಫ್‌ನಲ್ಲಿ ಕೆಲಸ ಮಾಡಿದ್ದಾರೆ. ರಾಜನ್ ಅವರು ಆರ್‌ಬಿಐಗೆ ತೆರಳಿದ ನಂತರ ತೆರವಾಗಿದ್ದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯು ಇವರನ್ನೇ ಹುಡುಕಿಕೊಂಡು ಬಂದಿರುವುದು ಕಾಕತಾಳೀಯವೂ ಇದ್ದೀತು.

ಅರವಿಂದ ಅವರನ್ನು ನೇಮಕ ಮಾಡುವ ಮೂಲಕ ನರೇಂದ್ರ ಮೋದಿ ಅವರು ಸರ್ಕಾರದ ಬೌದ್ಧಿಕ ಸಾಮರ್ಥ್ಯಕ್ಕೆ ಇನ್ನಷ್ಟು ಸಾಣೆ ಹಿಡಿದಿದ್ದಾರೆ.

ಆರ್ಥಿಕ ತಜ್ಞ ಜತೆಗೆ ಸಂಶೋಧನಾ ಆರ್ಥಿಕ ತಜ್ಞರೂ ಆಗಿರುವ ಅರವಿಂದ, ದೇಶಿ ಅರ್ಥ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಸರಿದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ತಮ್ಮೆಲ್ಲ ಅನುಭವವನ್ನು ಧಾರೆ ಎರೆದರೆ, ಸರ್ಕಾರವೂ ಅವರ ಚಿಂತನೆಗೆ ಸೂಕ್ತವಾಗಿ ಸ್ಪಂದಿಸಿದರೆ ದೇಶಿ ಅರ್ಥ ವ್ಯವಸ್ಥೆಯ ಅಭಿವೃದ್ಧಿ ಓಘ ಇನ್ನಷ್ಟು ತೀವ್ರಗೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT