ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಯಕದ ಬಂಧು

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಕಾಯಕ ಬಂಧು–ಈ ಹೆಸರು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈಚೆಗೆ ಪರಿಚಯಿಸಿದ ಪದನಾಮ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿ ಜಾಬ್‌ಕಾರ್ಡ್‌ ಪಡೆದು ಉದ್ಯೋಗಕ್ಕೆ ನಿಯೋಜನೆಗೊಳ್ಳುವ ಕೂಲಿಕಾರ್ಮಿಕರ ಗುಂಪಿನ ಮೇಲುಸ್ತುವಾರಿ ಜವಾಬ್ದಾರಿ ಈ ಕಾಯಕ ಬಂಧುವಿನದು.

ಅಸಲಿಗೆ ಕಾಯಕ ಬಂಧುವೂ ಕೂಡ ಒಬ್ಬ ಕೂಲಿ ಕಾರ್ಮಿಕ. ತನ್ನ ಪಾಲಿನ ಕೆಲಸ ಮಾಡುತ್ತಲೇ ತಮ್ಮ ಗುಂಪಿನ ಮೇಲುಸ್ತುವಾರಿ ನೋಡಿಕೊಳ್ಳುವುದು ಆತನ ಕರ್ತವ್ಯ. ಅದಕ್ಕಾಗಿ ಆವನಿಗೆ ಇತರೆ ಕೂಲಿ ಕಾರ್ಮಿಕರಿಗಿಂತ ಯಾವುದೇ ಹೆಚ್ಚುವರಿ ಕೂಲಿ ದೊರೆಯುವುದಿಲ್ಲ. ಹಾಗಾಗಿ, ಕಾಯಕ ಬಂಧು ಕಲ್ಪನೆ ಜಾರಿಗೆ ಬಂದು ವರ್ಷವಾಗುತ್ತಾ ಬಂದರೂ, ಯಾವ ಗ್ರಾಮ ಪಂಚಾಯಿತಿಯಲ್ಲೂ ಈ ಪದನಾಮಕ್ಕೆ ನಿಯೋಜಿತರಾದವರು ಮೇಲುಸ್ತುವಾರಿ ಉಸಾಬರಿಗೆ ಹೋಗಿಲ್ಲ.
ಲಾಭದಾಯಕವಲ್ಲದ ಹುದ್ದೆಯನ್ನು  ಸ್ವೀಕರಿಸಿ, ಉದ್ಯೋಗ ಖಾತ್ರಿಗೆ ಹೊಳಪು ತಂದವರು ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಗ್ರಾಮದ ಟಿ.ಆರ್‌.ಕೃಷ್ಣಪ್ಪ.

ರಿಪ್ಪನ್‌ಪೇಟೆ ಸರಿಸುಮಾರು 6 ಸಾವಿರ ಜನಸಂಖ್ಯೆ ಇರುವ ಮಲೆನಾಡಿನ ಒಂದು ಗ್ರಾಮ ಪಂಚಾಯಿತಿ. ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಿಂದ ಸಾವಿರ ಸಂಖ್ಯೆಯಲ್ಲಿ ಕೃಷಿ ಕಾರ್ಮಿಕರಿದ್ದರೂ ಒಂದೂವರೆ ವರ್ಷದ ಹಿಂದಿನವರೆಗೂ ಬಹುತೇಕರು ಯೋಜನೆಗೆ ಹೆಸರು ನೋಂದಾಯಿಸಿರಲಿಲ್ಲ.  ಯೋಜನೆಯ ವೈಫಲ್ಯವನ್ನು ನೋಡುತ್ತಿದ್ದ ಕೃಷ್ಣಪ್ಪ, ಒಂದು ದಿನ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ರಿಪ್ಪನ್‌ಪೇಟೆ, ಬರ್ವೆ, ಗೌಡೂರು, ಮುಕಟಿಕೊಪ್ಪ, ಕೆರೆಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಪಟ್ಟಿ ಮಾಡಿಕೊಂಡರು. ಮಲೆನಾಡಿನ ಭಾಗವಾದ ಕಾರಣ ಬಹುಸಂಖ್ಯೆಯ ರೈತರು ದಟ್ಟ ಕಾಡಿನ ನಡುವೆ ತಮ್ಮ ಜಮೀನುಗಳಿಗೆ ಹೋಗಲು ರಸ್ತೆಗಳಿಲ್ಲದೆ ಪರದಾಡುತ್ತಿದ್ದರು. ಅತಿಹೆಚ್ಚು ಮಳೆ ಸುರಿಯುವ ಪ್ರದೇಶವಾದರೂ, ಬೇಸಿಗೆಯಲ್ಲಿ ಜನ ಕುಡಿಯುವ ನೀರಿಗೂ  ಅನುಭವಿಸುತ್ತಿದ್ದ ಬವಣೆ ನೋಡಿದ್ದರು. ಅದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಉದ್ಯೋಗ ಖಾತ್ರಿ ಸದ್ಬಳಕೆ ಮಾಡಿಕೊಳ್ಳುವ ಸಂಕಲ್ಪತೊಟ್ಟು, ಕೈಗೊಳ್ಳಬೇಕಾದ ಕಾಮಗಾರಿಗಳ ಪಟ್ಟಿ ಸಮೇತ ಜಿಲ್ಲಾ ಪಂಚಾಯಿತಿಗೆ ಬಂದು ಸಿಇಒ ಸಸಿಕಾಂತ್ ಸೆಂಥಿಲ್‌ ಅವರನ್ನು ಸಂಪರ್ಕಿಸಿದರು. ಕೃಷ್ಣಪ್ಪ ಅವರ ಕಾಳಜಿಗೆ ಸಸಿಕಾಂತ್‌ ಬೆಂಬಲವಾಗಿ ನಿಂತರು. ಸಂಬಂಧಿಸಿದ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಸೂಚಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಾವಿರದಷ್ಟು ಕೂಲಿ ಕಾರ್ಮಿಕರಿದ್ದರೂ ಉದ್ಯೋಗ ಖಾತ್ರಿ ಅಡಿ ಕೆಲಸ ಮಾಡಲು ಸಿದ್ಧರಿರಲಿಲ್ಲ. ಗಾರೆ, ಕೃಷಿ, ಹಮಾಲಿ ಕೆಲಸದಲ್ಲೇ ಹೆಚ್ಚು ತೊಡಗಿಸಿಕೊಂಡು ದಿನಕ್ಕೆ  500 ಸಂಪಾದಿಸುವ ಅಲ್ಲಿನ ಕಾರ್ಮಿಕರು  191 ಸಿಗುವ ‘ಖಾತ್ರಿ’ ಕೆಲಸಕ್ಕೆ ಬರಲು ಸಿದ್ಧರಿರಲಿಲ್ಲ! ಕೃಷ್ಣಪ್ಪ ಸಮಾನ ಮನಸ್ಕರ ಜತೆ ಗ್ರಾಮಗಳ ಮನೆಮನೆಗೆ ತೆರಳಿ ಕೂಲಿ ಕಾರ್ಮಿಕರ ಮನವೊಲಿಸಿದರು. ಅದರ ಫಲವಾಗಿ ಸುಮಾರು 80 ಕಾರ್ಮಿಕರು ಉದ್ಯೋಗ ಖಾತ್ರಿ ಅಡಿ ಹೆಸರು ನೋಂದಾಯಿಸಿಕೊಂಡು ಜಾಬ್‌ಕಾರ್ಡ್‌ ಕೊಡಿಸಿದರು. ಕಾರ್ಮಿಕರ ಜತೆ ತಾವೂ ಜಾಬ್‌ಕಾರ್ಡ್ ಪಡೆದು ‘ಕಾಯಕ ಬಂಧು’ವಾಗಿ ಖಾತ್ರಿ ಯೋಜನೆ ಅಡಿ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ  ಚಾಲನೆ ನೀಡಿದರು.

ಮೊದಲು ಬೆಳಕೋಡು ರಸ್ತೆ, ತುಕ್ಕೋಜಿ ಮನೆ ರಸ್ತೆ, ಹೆದ್ದಾರಿಪುರ ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿಗೆ ಆದ್ಯತೆ ನೀಡಿದರು. ಅರಮನೆ ಹಳ್ಳದ ನೀರು ವ್ಯರ್ಥವಾಗಿ ಹೋಗುವುದನ್ನು ತಡೆದು, ಅಂತರ್ಜಲ ಹೆಚ್ಚಿಸಲು ಹಾಗೂ ಬೇಸಿಗೆಯಲ್ಲಿ ಜಾನುವಾರುಗಳು ನೀರಿನ ಭವಣೆ ಅನುಭವಿಸುವುದನ್ನು ತಪ್ಪಿಸಲು ಅರಮನೆ ಹಳ್ಳಕ್ಕೆ 56 ಅಡಿ ಎತ್ತರ ಚೆಕ್‌ಡ್ಯಾಂ ನಿರ್ಮಾಣ ಆರಂಭಿಸಿದರು. ಕುಡಿಯುವ ನೀರಿಗಾಗಿ 3 ಕಡೆ 40 ಅಡಿ ಆಳದ ಬಾವಿ ತೋಡಿಸಿದರು. ಕೆಲ ಕಾಮಗಾರಿ ಮುಗಿದಿವೆ. ಕೆಲವು ಪ್ರಗತಿ­ಯಲ್ಲಿವೆ. ಇದೆಲ್ಲವನ್ನೂ ಅವರು ಸಾಧಿಸಿದ್ದು ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ.

ಅಂದಿನ ಕೂಲಿ ಅಂದೇ ಪಡೆದು, ಜೀವನ ನಡೆಸುವ ಕಾರ್ಮಿಕರಿಗೆ ಖಾತ್ರಿ ಅಡಿ ಮಾಡಿದ ಕೆಲಸಕ್ಕೆ ಕೂಲಿ ಪಡೆಯಲು 15 ದಿನದವರೆಗೆ ಕಾಯುವ ತಾಳ್ಮೆ ಇರಲಿಲ್ಲ. ಹಾಗಾಗಿ, ಕೆಲಸ ಆರಂಭಿಸಿದ ಕೆಲ ದಿನಗಳಲ್ಲಿಯೇ 80 ಇದ್ದ ಕಾರ್ಮಿಕರ ಸಂಖ್ಯೆ ಅರ್ಧದಷ್ಟು ಕುಸಿಯಿತು. ಕೆಲವರಿಗೆ ಕೃಷ್ಣಪ್ಪ ಅವರೇ ಖಾಸಗಿ ವ್ಯಕ್ತಿಗಳಿಂದ ಸಾಲ ತಂದು ಕೂಲಿ ನೀಡಲು ಆರಂಭಿಸಿದರು.

ಬಾವಿ ತೆಗೆಸುವ ಕೆಲಸಕ್ಕೆ ಅನುಭವವಿರುವವರು ಮಾತ್ರ ಅಗತ್ಯ ಇದ್ದ ಕಾರಣ, ಕಡಿಮೆ ಕೂಲಿಗೆ ಬಾವಿಗೆ ಇಳಿಯಲು ಅನುಭವಿಗಳು ಸಿದ್ಧರಿರಲಿಲ್ಲ. ಅದಕ್ಕಾಗಿ ಅಂಥವರಿಗೆ ಇವರ ಕೂಲಿಯನ್ನೂ ಸೇರಿಸಿ ನೀಡಿದರು. ಹಾಗೂ ಹೀಗೂ ಮಾಡಿ ಕೊನೆಗೆ  3 ಲಕ್ಷ ವೆಚ್ಚದಲ್ಲಿ ಬಾವಿ,  6.5 ಲಕ್ಷ ವೆಚ್ಚದಲ್ಲಿ ರಸ್ತೆ ಹಾಗೂ  10 ಲಕ್ಷ ವೆಚ್ಚದಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಬಾಕಿ ಕಾಮಗಾರಿ ಪ್ರಗತಿಯಲ್ಲಿದೆ. ಮಾಡಲಾದ ಇಷ್ಟು ವೆಚ್ಚ, ಕೂಲಿಯಲ್ಲಿ ಇದುವರೆಗೂ ಬಂದಿರುವ ಹಣ ಅರ್ಧಕ್ಕಿಂತ ಕಡಿಮೆ.ಇದೆಲ್ಲವನ್ನೂ ಸಾಧಿಸಿದ್ದು ಕೇವಲ ಮಾನವ ಶ್ರಮದ ಮೇಲೆ. ಪ್ರಸ್ತುತ ಈ ಕಾಯಕ ಬಂಧುವಿನ ಬಳಿ ಉಳಿದಿರುವವರು ಕೇವಲ 10 ಕಾರ್ಮಿಕರು!

ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳಿಗೆ ತಿದ್ದುಪಡಿ ತಂದು ಕೆಲಸದ ದಿನಗಳನ್ನು ಈಗಿರುವ 100ಕ್ಕಿಂತ ಹೆಚ್ಚಿಸಿ, ಕೂಲಿ ದ್ವಿಗುಣಗೊಳಿಸಿದರೆ, ಅಂದಿನ ಕೂಲಿ ಅಂದೇ ಕೊಡುವಂತಾದರೆ ರಿಪ್ಪನ್‌ಪೇಟೆಯಂತಹ ಲಕ್ಷಾಂತರ ಗ್ರಾಮಗಳು ಉದ್ಧಾರವಾಗುತ್ತವೆ. ಅಲ್ಲಿನ ಜನರು ಗುಳೆ ಹೋಗುವುದೂ ತಪ್ಪುತ್ತದೆ ಎನ್ನುವುದು ಕೃಷ್ಣಪ್ಪ ಅವರ ಮನದಾಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT