ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಗಳು

Last Updated 5 ಆಗಸ್ಟ್ 2015, 19:44 IST
ಅಕ್ಷರ ಗಾತ್ರ

ಮಾರುಕಟ್ಟೆಯ ಸರಕಾಗದಿರಲಿ
ತನಗನಿಸಿದ್ದನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ. ಮನೆಯಲ್ಲಿ ರಚ್ಚೆ ಹಿಡಿಯುವ ಮಗುವಿನಿಂದ ಮೊದಲುಗೊಂಡು ರಾಷ್ಟ್ರದ ಮುಖ್ಯಸ್ಥರ ತನಕ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಅದನ್ನು ಅನುಭವಿಸುತ್ತಿರುವುದು ವಾಸ್ತವ. ಆಧುನಿಕ ಆವಿಷ್ಕಾರಗಳು ನೀಡುತ್ತಿರುವ ಪ್ರೋತ್ಸಾಹ ವರ್ಣನಾತೀತ, ನವನವೋನ್ಮೇಷ, ವರ್ಣಿಸಲಸದಳ. 

ವೈಯಕ್ತಿಕ ಸಂಗತಿ, ಸಿನಿಮಾ, ರಾಜಕೀಯ, ಕ್ರೀಡೆಯಂತಹ ಜನಪ್ರಿಯ ವಿಷಯಗಳ ಜೊತೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿನ ಘಟನೆಗಳಿಗೂ ನಾವು ಇಂದು ಅಭಿಪ್ರಾಯ, ಅನಿಸಿಕೆ, ಟೀಕೆ– ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿರುವುದು ಈ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಮನಗಾಣಿಸುತ್ತದೆ. ಇದಕ್ಕೆ ಪೂರಕವಾಗಿ ‘ನೆಟಿಜನ್‌’ಗಳೆಂಬ ಒಂದು ಹೊಸ ವರ್ಗವನ್ನೇ ಸೃಷ್ಟಿಸಿರುವುದು ಆಶ್ಚರ್ಯವಾದರೂ ಸತ್ಯ.

ರಾತ್ರಿ ಕಳೆದು ದಿನ ಬೆಳಗಾಗುವುದರೊಳಗೆ ಈ ಪರಿಯ ಸ್ವಾತಂತ್ರ್ಯದ ಬೆಳವಣಿಗೆ ಸಾಧ್ಯವಾದುದಲ್ಲ. ರಾಜ ಮಹಾರಾಜರುಗಳ ಮುಂದೆ ದೈನೇಸಿ ಸ್ಥಿತಿಯಲ್ಲಿ ನಡುಬಗ್ಗಿಸಿ ನಿಲ್ಲುತ್ತಿದ್ದ ಕಾಲದಿಂದ ಪ್ರಸ್ತುತದ ಪ್ರಜಾಪ್ರಭುತ್ವದ ಪ್ರಶ್ನಿಸುವ, ವ್ಯಕ್ತಪಡಿಸುವ, ಟೀಕಿಸುವವರೆಗಿನ ಶತಮಾನಗಳ ಕಾಲದ ರಾಜಕೀಯ ‘ಸ್ಥಿತ್ಯಂತರ’ದ ಪ್ರಯಾಣದ ಅವಧಿ ಅಷ್ಟೇ ರೋಚಕ.

ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಿನ ವ್ಯತ್ಯಾಸ ಸೂಕ್ಷ್ಮವಾದುದು ಮತ್ತು ತೆಳುವಾದುದು ಎಂಬ ಸಾರ್ವಕಾಲಿಕ ಸತ್ಯವನ್ನು ಅರಿಯಲು ವಿಫಲಗೊಂಡಾಗ ಈ ಸ್ವಾತಂತ್ರ್ಯಕ್ಕೂ ಮಿತಿ ಹೇರಬೇಕೆಂಬ ಕೂಗು ಕೇಳಿಸುವುದು ಸಹಜ.

ಆದರೆ ಪ್ರಶ್ನೆಯಿರುವುದು ಹೇರುವವರು ಯಾರು ಎಂಬುದರಲ್ಲಿ. ಸಾಂಸ್ಥಿಕ ರೂಪ ಪಡೆದುಕೊಂಡಿರುವ ರಾಜಕೀಯ, ಸಮಾಜೋಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಗತಿಗಳು ಪ್ರಜಾಪ್ರಭುತ್ವದ ವಕ್ತಾರರಂತೆ, ರಾಷ್ಟ್ರಭಕ್ತಿ, ಸನ್ನಡತೆಯನ್ನು ಗುತ್ತಿಗೆ ಹಿಡಿದವರಂತೆ  ವರ್ತಿಸುವುದರ ಜೊತೆಗೆ ಸಾಂವಿಧಾನಿಕ ನೀತಿಗಳಿಗೆ ವಿರುದ್ಧವಾಗಿ ಈ ಸ್ವಾತಂತ್ರ್ಯದ ಮೇಲೆ ಸವಾರಿ ಮಾಡುತ್ತಿರುವುದು ದುರಂತ.

ಆಳುವ ವರ್ಗ ತನ್ನ ಗುಪ್ತ ಕಾರ್ಯಗಳ ಸಾಧನೆಗಾಗಿ ಪ್ರಜೆಗಳಿಗಿರುವ ಸಾಂವಿಧಾನಿಕ ಹಕ್ಕನ್ನು ಕಾಯ್ದೆ ಕಾನೂನುಗಳ ಮೂಲಕ ನಿಯಂತ್ರಿಸುತ್ತಿರುವುದು, ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದರೆ ಚರ್ಚೆಯ ಬದಲಾಗಿ ಪ್ರತಿಭಟನೆಗಳೇ ಪ್ರತಿಕ್ರಿಯೆಗಳಾಗುತ್ತಿರುವುದು, ಧರ್ಮನಿಂದನೆ, ರಾಷ್ಟ್ರ ನಾಯಕರುಗಳ ಬಗೆಗಿನ ವ್ಯಂಗ್ಯ, ಸಮಾಜದ ಮುಖ್ಯವಾಹಿನಿಯಲ್ಲಿ ಶ್ರೀ ಸಾಮಾನ್ಯನ ಕುರಿತಾದ ಅಸಡ್ಡೆಯ, ಜವಾವ್ದಾರಿಹೀನ ಮಾತುಗಳು, ಜನಸಾಮಾನ್ಯರ ಕಷ್ಟ ಸುಖಗಳನ್ನು ರಾಜಕಾರಣಿಗಳಿಗೆ ತಿಳಿಸಬೇಕಾದ ಮಾಧ್ಯಮಗಳು ತದ್ವಿರುದ್ಧವಾಗಿ ವರ್ತಿಸುತ್ತಿರುವುದು, ವ್ಯಕ್ತಿಗತ ಸಂಗತಿಗಳಿಂದ ಹಿಡಿದು ಪ್ರೀತಿ ಪ್ರೇಮದಂತಹ ಭಾವನಾತ್ಮಕ ಸೂಕ್ಷ್ಮ ಸಂಗತಿಗಳನ್ನೂ ಮಾರುಕಟ್ಟೆಯ ಸರಕನ್ನಾಗಿಸಿರುವುದು ಈ ಸ್ವಾತಂತ್ರ್ಯದ ಚೌಕಟ್ಟಿನೊಳಗಡೆಯೇ ಎಂಬುದು ಚಿಂತಿಸಬೇಕಾದ ಹಾಗೂ ವಿಪರ್ಯಾಸದ ಸಂಗತಿ.

ಇದು ಉದಾರೀಕರಣದ ಕಾಲ. ಸತ್ವ ಇರುವವನು ತನ್ನ ಹಾಗೂ ತನಗೆ ಸರಿಯೆನಿಸಿದ ಪ್ರಚಾರವನ್ನು ಮಾಡಿಕೊಳ್ಳುತ್ತಾನೆ. ಇತರರು ಅವನನ್ನು ಒಪ್ಪುತ್ತಾರೆ ಮತ್ತು ಸ್ವೀಕರಿಸುತ್ತಾರೆ. ಇಲ್ಲಿ ಗೆಲ್ಲದವನು ತೆರೆಯಿಂದ ಮರೆಯಾಗುತ್ತಾನೆ. ಹಾಗೆಯೇ ನಿಮ್ಮಲ್ಲಿ ಸತ್ವ ಇದ್ದರೆ ಅದನ್ನು ತೋರಿಸಿ, ಅದನ್ನು ಬಿಟ್ಟು ಮೈಪರಚಿಕೊಳ್ಳುವುದೇಕೆ? ಎನ್ನುವ ವಿತಂಡವಾದಿಗಳ ಸಂಖ್ಯೆಯೂ ಕಡಿಮೆ ಇಲ್ಲದೇನಿಲ್ಲ. ವಾಸ್ತವ ಜೀವನದ ಅರಿವಿಲ್ಲದೆ ಶುಷ್ಕ ನೀತಿ ಬೋಧೆಗಳು ಅತಿಯಾಗಿ ಆತ್ಮಾನಂದ ಪಡೆಯುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ.

ಸಮೂಹ ಸನ್ನಿಗೊಳಗಾಗಿ ಆವೇಶಭರಿತ, ಅಧ್ಯಯನ ರಹಿತ ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿಸುವುದರ ಬದಲಾಗಿ ಸಹನೆ, ಸದ್ಭಾವನೆಯ ಜೊತೆಗೆ ಇತರರನ್ನು ಗೌರವಿಸುವುದಕ್ಕಾಗಿ ಸ್ವ–ನಿಯಂತ್ರಣವನ್ನು ಹೇರಿಕೊಂಡಲ್ಲಿ ಈ ಸ್ವಾತಂತ್ರ್ಯ ಗರಿಗೆದರುವುದರಲ್ಲಿ ಸಂದೇಹವಿಲ್ಲ.
-ಸಂತೋಷ್‌ ಕುಮಾರ್‌. ಎಚ್‌,
ಕಲಬುರ್ಗಿ


***
ಪ್ರಶ್ನಿಸುವ ವೇದಿಕೆ ಇನ್ನಾವುದು?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಭಿವೃದ್ಧಿಯ ಪರ್ಯಾಯ ಮಾದರಿಗಳನ್ನು ಮನಗಾಣಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಕಾಣಬಹುದು.  ಮುಖ್ಯವಾಹಿನಿಯ ಮಾಧ್ಯಮಗಳು ಅಭಿವೃದ್ಧಿಯ ಏಕಮುಖ ವಿವರ ನೀಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಬದಲಾವಣೆಯ ಪರ್ಯಾಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿವೆ. 

ಇತ್ತೀಚಿನ ದಶಕಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಸನ್ನಿವೇಶಗಳನ್ನು ನೋಡುತ್ತಲೇ ಬಂದಿದ್ದೇವೆ. ಸಾಮಾಜಿಕ ಜಾಲತಾಣಗಳು ಈಗ ಕೇವಲ ವೈಯಕ್ತಿಕವಾಗಿ ಉಳಿದಿಲ್ಲ. ಸಾಮಾಜಿಕ ಅಭಿಪ್ರಾಯ, ಕುಂದು-ಕೊರತೆಯನ್ನು ಪ್ರಶ್ನಿಸುವ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಒಂದು ಮಾರ್ಗವಾಗಿ ಮಾರ್ಪಟ್ಟಿದೆ. ಸರ್ಕಾರಗಳ ಭೂಸ್ವಾಧೀನ ಕಾಯ್ದೆ, ಗೋಮಾಂಸ ನಿಷೇಧ, ಅನ್ನಭಾಗ್ಯ, ಶಾದಿಭಾಗ್ಯ  ಹೀಗೆ ಹತ್ತು ಹಲವು ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶವಿರಬೇಕು. ಈ ಚರ್ಚೆಗಳನ್ನು ಸರ್ಕಾರಗಳು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಅದನ್ನು ನಿಷೇಧಿಸುವುದು ಮುಕ್ತ ಸ್ವತಂತ್ರ್ಯಕ್ಕೆ ಧಕ್ಕೆಯಾದಂತೆ.

ಮುಖ್ಯವಾಹಿನಿಯಲ್ಲಿ ಪ್ರಶ್ನಿಸುವ ಅವಕಾಶಗಳೇ ತೀರಾ ಕಡಿಮೆ ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡು ಸಾಮಾಜಿಕ ಕಾಳಜಿ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶವಾಗಬೇಕು. ಜಾಲತಾಣಗಳನ್ನು ತ್ವರಿತಗತಿಯಲ್ಲಿ ಬಳಸಿಕೊಳ್ಳುವುದರಿಂದ ಮಾತ್ರ ತ್ವರಿತಗತಿಯಲ್ಲಿ ಅಭಿವೃದ್ಧಿ ಸಾಧಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೇಖನ, ಅಭಿಪ್ರಾಯ, ಪುಸ್ತಕ, ವ್ಯಕ್ತಿಯನ್ನು ನಿಷೇಧಿಸುವ ಮತ್ತು ಕಡಿವಾಣ ಹಾಕುವ ಪ್ರವೃತ್ತಿ ಸರಿಯಲ್ಲ. 

ಇತ್ತೀಚಿಗೆ ಸಾರ್ವಜನಿಕವಾಗಿ ಚರ್ಚಿಸಲು ಇರುವಂತಹ ಏಕೈಕ ದಾರಿ ಎಂದರೆ ಸಾಮಾಜಿಕ ಜಾಲತಾಣ ಮಾತ್ರ. ಅದರ ಮೇಲೂ ಕಡಿವಾಣ ಹಾಕಿದರೆ ಚರ್ಚೆಗೆ ಅವಕಾಶವೇ ಇಲ್ಲವಾಗುತ್ತದೆ. ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ನಕಾರಾತ್ಮಕವಾಗಿ ಬಳಸಿಕೊಳ್ಳುವುದು ನಮ್ಮ ಕೈಯಲ್ಲಿರುವುದರಿಂದ ಬೇಕಾದ ವಿಚಾರಗಳನ್ನು ಆರಿಸಿ ಬೇಡದ್ದನ್ನು ತಿರಸ್ಕರಿಸುವುದು ಒಳಿತು.
- ಹಾಲೇಶ್ ಎಂ.ಎಸ್,
ಹುಣಸನಹಳ್ಳಿ.


***
ತೇಜೋವಧೆ ಮಾಡುವ ಸ್ವಾತಂತ್ರ್ಯ
ಸಾಮಾಜಿಕ ಜಾಲತಾಣಗಳು ವ್ಯಕ್ತಿಗಳ ನಡುವಿನ ಸಂಬಂಧವನ್ನು ಬೆಸೆದು, ಭೌಗೋಳಿಕ ಅಂತರವನ್ನೂ ಲೆಕ್ಕಕ್ಕಿಲ್ಲದಂತೆ ಮಾಡಿರುವ ಈ ಕಾಲಘಟ್ಟದಲ್ಲಿ, ಅವುಗಳ ಒಳಿತು-ಕೆಡುಕುಗಳ ಬಗ್ಗೆಯೂ ನಾವು ಚಿಂತಿಸಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಈ ವಿಭಿನ್ನ ಮಾರ್ಗಗಳು, ಅತಿ ತುರ್ತಿನ, ಅತ್ಯಗತ್ಯದ, ಅತ್ಯುಪಯುಕ್ತವಾದ ಸಂದೇಶಗಳನ್ನು, ಮಾಹಿತಿಗಳನ್ನು, ಫೋಟೊಗಳನ್ನು, ವಿಡಿಯೊಗಳನ್ನು ಅತಿ ಶೀಘ್ರವಾಗಿ ಸಂಬಂಧಪಟ್ಟವರಿಗೆ ತಲುಪಿಸುತ್ತವೆ.

ಒಂದು ನಿರ್ದಿಷ್ಟ ವಿಷಯದ ಬಗ್ಗೆ ವಿಭಿನ್ನ ವ್ಯಕ್ತಿಗಳ, ಭಿನ್ನ ರೀತಿಯ, ಭಿನ್ನ ದೃಷ್ಟಿಕೋನದ ವಿಮರ್ಶೆ, ಅಭಿಪ್ರಾಯಗಳಿಂದಾಗಿ ಆ ವಿಷಯದ ಅಮೂಲಾಗ್ರ ಅಧ್ಯಯನವೇ ಸಾಧ್ಯವಾಗುತ್ತದೆ. ಜವಾಬ್ದಾರಿಯುತ, ವಿವೇಕದ ಪ್ರತಿಕ್ರಿಯೆಗಳ ಕೊಡುಕೊಳ್ಳುವಿಕೆಯಿಂದ ವ್ಯಕ್ತಿಗಳ ಬೆಳವಣಿಗೆ ಸಾಧ್ಯ.

ಆದರೆ ಇಂತಹ ವಿವೇಕಯುತ ಬಳಕೆ, ಸದುದ್ದೇಶದ ಅಭಿವ್ಯಕ್ತಿಗಳು ಬಹಳ ಕಡಿಮೆಯೆಂದೇ ಹೇಳಬೇಕು. ಕೆಲವರಿಗೆ ಆನ್‌ಲೈನ್ ಅಭಿವ್ಯಕ್ತಿ ಪ್ರತಿಷ್ಠೆಯ ಸಂಕೇತವಾಗಿದ್ದರೆ, ಇನ್ನು ಕೆಲವರಿಗೆ ತಮ್ಮ ಕೀಳು ಅಭಿರುಚಿಯನ್ನು ಹೊರಹಾಕುವ ದಾರಿಯಾಗಿರುತ್ತದೆ.  ಗಾಸಿಪ್ ಹರಡುವುದನ್ನೇ ಅಭ್ಯಾಸವಾಗಿಸಿಕೊಂಡವರಿಗೆ ಅವು ಹೈಟೆಕ್ ಗಾಸಿಪ್ ಪ್ರಚಾರ ತಂತ್ರವಾಗಿವೆ. ದ್ವೇಷಸಾಧನೆಗೆ, ತುಂಟಾಟಕ್ಕೆ, ಪ್ರೇಮ ನಿವೇದನೆಗೆ, ತೇಜೋವಧೆಗೆ-ಎಲ್ಲಕ್ಕೂ ಇದೊಂದು ಸಾಧನವಾಗಿದೆ.

ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆಪ್ ಸಂದೇಶಗಳಿಂದ, ಫೋಟೊ-ವಿಡಿಯೊಗಳಿಂದ ಮನನೊಂದು ಅವಮಾನಿತರಾಗಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕೇಳುತ್ತಿದ್ದೇವೆ, ಓದುತ್ತಿದ್ದೇವೆ. ಯಾವುದಾದರೂ ದಿನದ ನೆಪದಲ್ಲಿ ವಾಟ್ಸ್‌ಆಪ್‌ನಲ್ಲಿ ಹರಿದಾಡುವ ವ್ಯಂಗ್ಯ ಚಿತ್ರಗಳು, ಫೋಟೊಗಳು ನಗುಉಕ್ಕಿಸುವ ಬದಲು ಅಸಹ್ಯ ಉಂಟುಮಾಡಿತ್ತು. ಇಂತಹ ತೇಜೋವಧೆ ಮಾಡುವ ಅಭಿವ್ಯಕ್ತಿಗಳು ಸ್ವಾತಂತ್ರ್ಯವೆನಿಸಲಾರದು.

ಜನರ ಮನಸ್ಸನ್ನು ಘಾಸಿಗೊಳಿಸುವ, ಅನೈತಿಕ ಚಟುವಟಿಕೆಗಳಿಗೆ ಪ್ರೇರೇಪಿಸುವ, ಅವಮಾನಿಸುವ, ಆತ್ಮಹತ್ಯೆಗೆ ಪ್ರಚೋದಿಸುವ ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಥವಾ ಸ್ವಾತಂತ್ರ್ಯವನ್ನೂ ಮೀರಿದ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಲೇಬೇಕು. ಆನ್ ಲೈನ್ ಅಭಿವ್ಯಕ್ತಿಗೆ ಗಡಿ ಇರಲೇಬೇಕು. ಸ್ವಯಂ ಶಿಸ್ತಿನಿಂದ, ಸದಭಿರುಚಿಯಿಂದ ಜನರು ಆ ಮಿತಿಯನ್ನು ಹೇರಿಕೊಂಡರೆ ಒಳ್ಳೆಯದು. ಆದರೆ ‘ಲೋಕೋ ಭಿನ್ನ ರುಚಿ’ ಎಂಬಂತೆ ಇದು ಅಸಾಧ್ಯವಾದ ಮಾತು.

ಹಾಗಾಗಿ ಸೈಬರ್ ಕ್ರೈಂ ನಿಯಂತ್ರಣ ಸೆಲ್‌ನಿಂದಷ್ಟೇ ಈ ನಿಯಂತ್ರಣ ಸಾಧ್ಯ. ಸಭ್ಯತೆಯ ಮಿತಿಗಿಂತ ಆಚೆಗಿರುವ, ಸ್ವಾತಂತ್ರ್ಯದ ಪರಿಧಿಯನ್ನೂ ಮೀರಿದ, ವ್ಯಕ್ತಿ, ಸಂಸ್ಥೆ, ಸಮುದಾಯ, ದೇಶಗಳ ಹಿತಕ್ಕೆ ಧಕ್ಕೆ ತರುವ ಎಲ್ಲಾ ಅಭಿವ್ಯಕ್ತಿಗಳ ಮೇಲೂ ನಿಯಂತ್ರಣ ಪ್ರಾಧಿಕಾರವೊಂದು ಕಣ್ಣಿಟ್ಟಿರಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು. ವಿವಿಧ ಜಾಲತಾಣಗಳಿಗೂ ಏಕರೀತಿಯ ನೀತಿಸಂಹಿತೆ ಅಥವಾ ತಮ್ಮ ಫಲಾನುಭವಿಗಳ ಅಭಿವ್ಯಕ್ತಿಗಳಿಗೆ ಮಿತಿಹೇರುವ ಒಂದು ಕಾನೂನು ಜಾರಿಯಾಗಬೇಕು. 

ಈಗಿರುವ ಸೈಬರ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸುವವರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರ ಹಕ್ಕು ನಿಜ. ಆದರೆ ಅದು ಇನ್ನೊಬ್ಬರ ಹಕ್ಕಿನ ಆಸ್ವಾದನೆಗೆ ಅಡ್ಡಿಯಾಗದಿರಲು, ಅದಕ್ಕೊಂದು ಎಲ್ಲೆ ಇರಬೇಕಾದ್ದೂ ನಿಜ.­
-ಜೆಸ್ಸಿ.ಪಿ.ವಿ.
ಪುತ್ತೂರು


***
ಹೃದಯವೇ ವೇದಿಕೆ
ನಿಜ. ಇಂದು ಮಾಹಿತಿ ತಂತ್ರಜ್ಞಾನ ಎಷ್ಟು ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂದರೆ ಮಾನವ ಅದರ ಮುಂದೆ ಕುಬ್ಜನಾಗಿದ್ದಾನೆ. ವಾಟ್ಸಾಪ್‌ನಲ್ಲಿ ಮೆಸೇಜ್ ಬರೆದು ಕಳಿಸುವುದು, ಫೇಸ್ ಬುಕ್‌ನಲ್ಲಿ ತಮ್ಮ ಸ್ಟೇಟಸ್ ಅಪ್‌ಡೇಟ್ ಮಾಡಿಕೊಂಡು ಅದಕ್ಕೆ ಸ್ನೇಹಿತರು, ಪರಿಚಯದವರು ಇನ್ನಿತರ ಹೊಸಬರು ಎಲ್ಲಾ ಸೇರಿ ಎಷ್ಟು ಲೈಕ್ಸ್ ಗಳಿಸಿದ್ರು ಅಂತ ನೋಡೋದು, ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಬೀಗುವುದು ಸರ್ವೇ ಸಾಮಾನ್ಯ ವಿಷಯವಾಗಿದೆ.

ಈ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿ ತುಸು ಹೆಚ್ಚಾಗಿದೆಯೇನೋ ಅನ್ನಿಸೋದು ಸಹಜ.  ಜನ್ಮ ದಿನ, ಮದುವೆಯ ದಿನ, ಹಬ್ಬ ಹರಿದಿನಗಳು ಅರ್ಥಪೂರ್ಣ ಆಚರಣೆ ಕಳೆದುಕೊಂಡು  ಯಾಂತ್ರಿಕತೆ ತುಂಬಿ ಒಂದೇ ಮನೆಯಲ್ಲಿರುವ ಪತಿ ಪತ್ನಿ ಮಕ್ಕಳೂ ತಮ್ಮ ಭಾವನೆ ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗುವುದು ಎಂಥ ಶೋಚನೀಯ ಸಂಗತಿ. ವಾಟ್ಸ್ ಆಪ್, ಫೇಸ್ ಬುಕ್, ರೆಡ್ ಇಟ್, ಗುಡ್ ರೀಡ್ಸ್ ಇಂಥ ಅನೇಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದಾರಿಯಲ್ಲಿ ನಮ್ಮ ಜೀವನವನ್ನು ಯಾಂತ್ರೀಕತೆಯತ್ತ ಕರೆದೊಯ್ಯುತ್ತಿವೆ.

ಒಂದು ಕಡೆ ಜಾಲತಾಣಗಳಲ್ಲಿ ಸದಭಿರುಚಿಯ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹೀಗೆ ಹಲವು ವಿಷಯಗಳಲ್ಲಿ ಸಮಾನ ಮನಸ್ಕರ ಉನ್ನತ ವಿಚಾರಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮನಸ್ಸಿಗೆ ಮುದ ನೀಡುತ್ತವೆ. ಆದರೆ ಇನ್ನೂ ಕೆಲವರಿಂದ ಜಾಲತಾಣಗಳ ದುರ್ಬಳಕೆ ಆಗುತ್ತಿರುವುದು ಸತ್ಯ. 

ನಮ್ಮ ವಿಚಾರ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಸಾಮಾಜಿಕ ಜಾಲತಾಣಗಳ ಮೇಲೇ ಅವಲಂಬಿತರಾಗುವುದು ಎಷ್ಟು ಸರಿ ಎಂದು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ವೈಯಕ್ತಿಕ ಬದುಕು ಕೂಡ ಆನ್ ಲೈನ್ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಬಹಿರಂಗ ಸ್ವರೂಪ ಪಡೆದಿರುವುದು ವಿಷಾದಕರ. ತಂದೆಯ ಕುರಿತಾದ ಗೌರವ, ತಾಯಿಯ ವಾತ್ಸಲ್ಯ, ಗಂಡನ ಅನುರಾಗ, ಹೆಂಡತಿಯ ಪ್ರೇಮ, ಪ್ರೀತಿಸುವ ಜೀವಗಳ ಒಲವು ಹೀಗೆ ಹೃದಯದ ಭಾವನೆಗಳಿಗೆ ಈ ಸಾಮಾಜಿಕ ಜಾಲತಾಣಗಳು ಬಳಕೆ ಆಗುತ್ತಿವೆ.

ಆದರೆ ಹೃದಯದ ಭಾಷೆಗೆ ಹೃದಯವೇ ವೇದಿಕೆಯಾದರೆ ನಮ್ಮ ಬದುಕೇ ಬೆಲೆ ಕಟ್ಟಲಾಗದ ಸುಂದರ ತಾಣ ಆಗುವುದರಲ್ಲಿ ಸಂಶಯವಿಲ್ಲ. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವ ಜಾಣರೇ ಇದನ್ನು ನಿರ್ಧರಿಸಬೇಕು.‌‌ ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಬದುಕನ್ನು ಜೀವಿಸುವ ಅಧಿಕಾರ ಇರುತ್ತದೆ. ಆದರೆ ಅದು ಕಳೆದುಹೋಗದಂತೆ ಸ್ವ ವಿಮರ್ಶೆ ಮಾಡಿಕೊಂಡರೆ ಉತ್ತಮ. ಹಿರಿಯರ ಮಾತಿನಂತೆ ಅತಿಯಾದರೆ ಅಮೃತವೂ ವಿಷ.
-ಶೋಭಾ ಶಂಕರಾನಂದ,
ಬಳ್ಳಾರಿ


***
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೊಂದು ರೇಖೆ
ಹುಡುಗ ಸುಮ್ಮನೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾನೆ. ಅವನಿಗೊಂದು ಸುಂದರ ಉದ್ಯಾನವನ ಕಾಣುತ್ತದೆ. ಆಕರ್ಷಿತಗೊಂಡು ಒಳ ನಡೆಯುತ್ತಾನೆ. ಸ್ವಲ್ಪ ಒಳ ಹೋದಂತೆ ಒಂದು ಸುಂದರ ಜಿಂಕೆ ಕಾಣುತ್ತದೆ. ಅದನ್ನು ಬೆಂಬತ್ತಿ ಉಬ್ಬು ತಗ್ಗು ಕೊರಕಲುಗಳನ್ನೂ ಲೆಕ್ಕಿಸದೆ ಓಡುತ್ತಾನೆ. ಉದ್ಯಾನವನ ಗೊಂಡಾರಣ್ಯವಾಗುತ್ತದೆ.

ಜಿಂಕೆ ಮರೆಯಾಗಿ ಮೊಲ ಕಾಣುತ್ತದೆ, ಅದನ್ನು ಬೆಂಬತ್ತುತ್ತಾನೆ. ಮೊಲ ನವಿಲಾಗುತ್ತದೆ, ನವಿಲು ತೋಳವಾಗುತ್ತದೆ, ತೋಳ ಚಿರತೆಯಾಗುತ್ತದೆ, ಚಿರತೆ ಹುಲಿಯಾಗುತ್ತದೆ... ಆ ಹುಲಿ ಈ ಅಮಾಯಕನ ರಕ್ತ ಹೀರಿ ಬಲಿ ಪಡೆಯುತ್ತದೆ. ಇಲ್ಲಿ ಉದ್ಯಾನವೆಂಬುದು ಅಪ್ಪ ಕೊಡಿಸಿದ ಸ್ಮಾರ್ಟ್ ಫೋನ್. ಉಳಿದೆಲ್ಲಾ ಆ್ಯಪ್‌ಗಳು ಜಿಂಕೆ ವೇಷದ ಮಾಯಾಮೃಗಗಳು.

ಅಪ್ಪನಿಗೆ ತನ್ನ ಮಗ ಫೋನ್‌ನಲ್ಲಿ ತುಂಬಾ ಚತುರನೆಂಬ ಹೆಮ್ಮೆ, ಅಮ್ಮ ಅದನ್ನೊಂದು ದೊಡ್ಡ ಸಾಧನೆಯೆಂಬಂತೆ ಬೀಗಿ ಬೀಗಿ ಹೇಳಿಕೊಳ್ಳುತ್ತಿದ್ದಾಳೆ. ಕಾರ್ಟೂನ್ ನೋಡುವುದರಿಂದ ಶುರುವಾದ ಮಗನ ಅಂತರ್ಜಾಲ ಪ್ರವೇಶ ಅಪ್ಪ-ಅಮ್ಮರ ಕಣ್ಣು ತಪ್ಪಿಸಿ ಅಶ್ಲೀಲ ಚಿತ್ರ ವೀಕ್ಷಣೆವರೆಗೆ ಬಂದು ನಿಲ್ಲುತ್ತದೆ. ಮಗ ದೊಡ್ಡವನಾದಂತೆ ಫೇಸ್‌ಬುಕ್ಕು, ವಾಟ್ಸಾಪ್, ಟ್ವಿಟ್ಟರ್, ಬ್ಲಾಗುಗಳೆಂಬ ಹುಲಿ ಬಾಯೊಳಗೆ ನುಗ್ಗುತ್ತಾನೆ. ಡೇಟಿಂಗ್, ಸೆಕ್ಸ್ ಚಾಟ್, ತಡ ರಾತ್ರಿ ಅಪ್‌ಲೋಡ್‌ಗಳು ಮುಂತಾದವುಗಳಿಗೆ ಅಪ್ಪ ಅಮ್ಮಂದಿರ ಊಹೆಗೂ ನಿಲುಕದ ಆಳದ ಕೂಪಕ್ಕೆ ಮಗ ಅಥವಾ ಮಗಳು ಬಿದ್ದು ಹೋಗಿರುತ್ತಾರೆ.

ಇದು ಈಗಿನ ಸತ್ಯ. ಅಭಿವ್ಯಕ್ತಿಸಲು ಸ್ವಾತಂತ್ರ್ಯ ಬೇಕು. ಆದರೆ ಅದೇ ನಮ್ಮೆಲ್ಲಾ ನಿಲುವುಗಳನ್ನೂ ಹೇಳಿಬಿಡುವ, ಆ ಹೇಳಿಕೆಯನ್ನು ಇನ್ನೊಬ್ಬರ ಮೇಲೆ ಹೇರಿಬಿಡುವ ಸಾಧನವಾಗಬಾರದು ಅಷ್ಟೆ. ಈ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಹೆಚ್ಚು ತೊಡಗಿಕೊಂಡಿರುವವರು ಯುವ ಪೀಳಿಗೆ ಆದ ಕಾರಣ ಅವರ ಕುರಿತು ತಂದೆ ತಾಯಿಯರು ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹೆಚ್ಚಿನ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲೇಬೇಕು.

ತಂದೆ ತಾಯಿಯರು ತಮ್ಮ ಮಗ/ಮಗಳ ಅಂತರ್ಜಾಲ ಬಳಕೆ ಮತ್ತು ಅವರ ಖಾಸಗಿ ಬದುಕಿನಲ್ಲಿ ಪ್ರವೇಶವಾಗಿರಬಹುದಾದ ಅಪರಿಚಿತ ಮತ್ತು ಅಪಾಯಕಾರಿ ವೈರಸ್ಸುಗಳನ್ನು ಆಗಾಗ ಅವರಿಗೆ ಆಪ್ತ ಸಮಾಲೋಚನೆಯೆಂಬ ಆ್ಯಂಟಿ ವೈರಸ್ಸನ್ನು ಅಪ್‌ಲೋಡ್ ಮಾಡುವ ಮೂಲಕ ಸ್ಕ್ಯಾನ್ ಮಾಡಿ ಅನಗತ್ಯವಾದುದನ್ನು ಡಿಲೀಟ್ ಮಾಡುತ್ತಲೇ ಇರಬೇಕು.

ಅಭಿವ್ಯಕ್ತಿ ಹೆಸರಿನಲ್ಲಿ ಇನ್ನೊಬ್ಬರ ಖಾಸಗಿ ಬದುಕಿಗೆ ಲಗ್ಗೆ ಹಾಕಿ ಅವರ ಇಡೀ ಬದುಕನ್ನೇ ಅನಾವರಣಗೊಳಿಸಿ ಅವರ ಆತ್ಮಹತ್ಯೆಗೂ ಕಾರಣವಾಗುವ, ಇಲ್ಲವೇ ತೇಜೋವಧೆ ಮಾಡುವ, ಗುಟ್ಟುಗಳನ್ನು ರಟ್ಟು ಮಾಡುವ ಭರದಲ್ಲಿ ತನ್ನ ಕೊಳಕನ್ನೂ ಹಬ್ಬಿಸಿ ಇಡೀ ವಾತಾವರಣವನ್ನು ಕಲುಷಿತಗೊಳಿಸುವ ಮನೋದೈಹಿಕ ಬೇತಾಳರನ್ನು ನಿಯಂತ್ರಿಸುವ ಅಗತ್ಯ ತುಂಬಾ ಇದೆ.

‘ಅಂತರ್ಜಾಲದ ಅಭಿವ್ಯಕ್ತಿ ಮಿತಿ’ ಯೆಂಬ ರಾವಣ ರೇಖೆಯನ್ನು (ಲಕ್ಷ್ಮಣ ರೇಖೆಯನ್ನು ಸೀತೆಯೇ ದಾಟಿದ್ದರಿಂದ ಆದ ಅನಾಹುತಕ್ಕೆ ಪ್ರತಿಯಾಗಿ ರಾವಣನೇ ತನ್ನ ಸುತ್ತ ಹಾಕಿದ ರೇಖೆಯಿಂದ ಹೊರಬರದಂತೆ ತಡೆಯುವ ರಾವಣ ರೇಖೆ!) ಹಾಕಬೇಕಿದೆ.
-ಜಿ.ಎಸ್. ಸತೀಶ್ ಹೊಸಕೆರೆ,
ದಾವಣಗೆರೆ


***
ಸ್ವಯಂ ನಿಯಂತ್ರಣ ಅಗತ್ಯ
ಅನಾದಿ ಕಾಲದಿಂದಲೂ ಮನುಷ್ಯ ಸಂಘಜೀವಿಯಾಗಿಯೇ ಬಂದಿದ್ದಾನೆ. ತನ್ನ ಭಾವನೆಗಳನ್ನು, ಅಭಿಪ್ರಾಯಗಳನ್ನು ಇತರರೊಂದಿಗೆ ವಿನಿಮಯ ಮಾಡಿಕೊಂಡರೇನೇ ಅವನಿಗೆ ತೃಪ್ತಿ. ಇದಕ್ಕಾಗಿ ಅವನು ಕಂಡುಕೊಂಡ ಸಾಧನಗಳೂ ಹಲವು. ಮೂಕ ಸಂಜ್ಞೆಯಿಂದ ಹಿಡಿದು ಚಿತ್ರಲಿಪಿ, ಬಾಯಿಮಾತು, ಅಕ್ಷರ ಹೀಗೇ ಮುಂದುವರೆಯುತ್ತಾ ಇಂದು ಬೆರಳ ತುದಿಯಿಂದಲೇ ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲೇ ತನಗೆ ಅನ್ನಿಸಿದ್ದನ್ನು ಜಗತ್ತಿಗೆಲ್ಲಾ ಹರಡಿಬಿಡಬಲ್ಲ ಮಾಧ್ಯಮಗಳವರೆಗೆ. 

ಆದರೆ ಈ ವೇಗಕ್ಕೊಂದು ತಡೆಗೋಡೆಯಿರದಿದ್ದರೆ ಸಾಕಷ್ಟು ಅನಾಹುತಗಳೇ ನಡೆದೀತು. ಯಾವುದನ್ನು ಹೇಳಬೇಕು, ಯಾರಿಗೆ ಹೇಳಬೇಕು, ಎಷ್ಟು ಹೇಳಬೇಕು, ಯಾವಾಗ ಹೇಳಬೇಕು ಈ ನಾಲ್ಕು ಅಂಶಗಳ ಅಂಕುಶ ಇಲ್ಲಿ ತುಂಬಾ ಅಗತ್ಯ. ಮನರಂಜನೆಗಾಗಿಯಾದರೆ ಹಲವರಲ್ಲಿ ಹಂಚಿಕೊಳ್ಳಬಹುದು. ವಾದ ಮಾಡುವ ವಿಷಯವಾದರೆ ಸಮಾನ ಆಸಕ್ತಿಯುಳ್ಳವರೊಂದಿಗೆ ಮಾಡಬೇಕು.

ಆಲೋಚಿಸಿ ಸರಿಯಾದ ನಿರ್ಣಯಕ್ಕೆ ಬರುವುದಾದಲ್ಲಿ ಏಕಾಂಗಿಯಾಗಿ ತನ್ನಲ್ಲಿಯೇ ಮಥಿಸಬೇಕು. ಜಾಲತಾಣಗಳ ಮುಂದೆ ನಮ್ಮನ್ನು ನಾವು ತೆರೆದುಕೊಳ್ಳುವ ಮೊದಲು ಸಾಧ್ಯಾಸಾಧ್ಯತೆಗಳನ್ನು ವಿವೇಚಿಸುವುದು  ಇಂದಿನ ಅಗತ್ಯ. ಏಕೆಂದರೆ ಒಮ್ಮೆ ಆಡಿದ ಮಾತು ಮರಳಿ ಬಾರದೆನ್ನುವುದು ಸತ್ಯ. ಬುದ್ಧಿಯ ಲಗಾಮು ನಮ್ಮ ಕೈಯಲ್ಲಿರಬೇಕು. ಅಭಿವ್ಯಕ್ತಿ ಸ್ವಾತಂತ್ಯ್ರ ಬೇಕು, ಆದರೆ ಅದಕ್ಕೆ ಒಂದು ಎಲ್ಲೆಯೂ ಇರಬೇಕು.
-ಹೆಚ್.ಕೆ.ಸುಬ್ಬಲಕ್ಷ್ಮಿ,
ಮಲ್ಲಾಡಿಹಳ್ಳಿ

***
ಕಾವು, ಕರಕಲು
ತನ್ನೊಡಲ ತಲ್ಲಣಗಳ ಕೇಳುವವರು ಯಾರು? ತನ್ನೆದೆಯ ಪಿಸುಮಾತುಗಳ ಆಲಿಸುವವರು ಯಾರು? ಅಂತರ್ಗತ ಭಾವಗಳಿಗೆ ಸ್ಪಂದಿಸುವ, ಕೇಳುವ ಹೃದಯಗಳು ಇದ್ದರೆ ಹೃದಯದ ಕಾವು, ಒಡಲ ಉರಿ ಸಮಾಧಾನಗೊಂಡೀತು. ಜಾಗತಿಕ ವೈಭವದಲ್ಲಿ ಜಾಲತಾಣಗಳ ಮೆರವಣಿಗೆ ಅಪೂರ್ವ ಸಂತುಷ್ಟತೆ ಮೆರೆಯುತ್ತಿದ್ದು, ಪಿಸುಮಾತುಗಳ ಸಮ್ಮಿಲನಕ್ಕೆ ಬೆಸುಗೆ ಮೂಡಿಸಿವೆ.

ಆದರೆ ಬೆಸುಗೆಗಳ ಸೇತುವೆಯಲ್ಲಿ ಕಾಮಸೇತುಗಳೇ ಆರ್ಭಟಗೊಂಡದ್ದು ಪಿಸುಮಾತುಗಳ ಜಗದಲ್ಲಿ ವಿಕೃತ ಧಾಟಿ ಎನಿಸಿದೆ. ಇದಕ್ಕೆ ಜಾಲತಾಣಗಳೇ ವೇದಿಕೆಯಾಗಿರುವುದು ಸತ್ಯ. ಈ ಯುಗದ ತಂತ್ರಜ್ಞಾನ ಪರಿಧಿಗಳಲ್ಲಿ ಅಭಿವ್ಯಕ್ತಿ ಎನ್ನುವುದು ಒಂದು ರೀತಿ ಮಾಧ್ಯಮಗಳ ಸರಕು. ಜಾಲತಾಣಗಳ ಜೀಕಿನಲ್ಲಿ ಬ್ರೇಕಿಲ್ಲದ ಪಯಣ. ಮೂರುಹೊತ್ತೂ ಮಂಡಕ್ಕಿ ಮೆಲ್ಲುವ ಶೋಕಿಗರಂತೆ ಪ್ರತಿಹೊತ್ತೂ ಅನಿಸಿಕೆಗಳ ಟ್ವಿಟರ್‌ ಟ್ವಿಟರ್‌. ಅವನದ್ದು ವಿಪರೀತ ಕಳಕಳಿ, ಅವಳದ್ದು ವಿನಮ್ರ ಬೇಡಿಕೆ.

ಎಲ್ಲವ ತೊರೆಯೆಂದು ಅಭಿವ್ಯಕ್ತತೆಯ ಕಚಗುಳಿ ಆಸೆಯ ಜೊಲ್ಲು, ಕೇಳಿಕೆಯ ಕರ್ಣ ಬಯಕೆಯ ಮಿತ್ರ. ವಿಪ್ಲವಗಳ ಕೂಗಿಗೆ ಶರಧಿಗಟ್ಟಿ ನಿಂತಸಾಲು ಓಗೊಡುವ ಒಗ್ಗಟ್ಟಿಗೆ ಓ.ಕೆ ಇಲ್ಲಿ. ರಾಜಕೀಯ ಪ್ರಹಸನಗಳಿಗೆ ತಾರ್ಕಿಕ ದಿಟ್ಟತೆ ಇದೆ. ರಾಜಕೀಯ ನಾಯಕರು, ರಂಗಕರ್ಮಿಗಳು, ಅಸೀಮ ಬುದ್ಧಿಜೀವಿಗಳು ಇಲ್ಲಿ ಅಭಿಮಾನಿಗಳ ತಾರಕತೆಯಲ್ಲಿ, ಗುರುತಿಸುವ, ಘರ್ಷಿಸುವ, ಗಮನಿಸುವ, ಗರಿಗರಿಸುವ ಅಭಿವ್ಯಕ್ತ ಆಪ್ತತೆಗಳು ಓ.ಕೆ. ಅಭಿಲಾಷಿತ ಅಭಿವ್ಯಕ್ತ ಸಾಗರದುದ್ದಕ್ಕು ಅನಿಸಿಕೆಗಳ ಮಹಾಪೂರದಲ್ಲಿ ಓ.ಕೆ ಪಾಲು ಕಡಿಮೆ, ವಾಕರಿಕೆಯದ್ದು ಅಪರಿಮಿತ ಪಾಲು. ಅಭಿವ್ಯಕ್ತತೆಗೂ ಒಂದು ಸೀಮೆ ಇರಬೇಕು. ಅನಿಸಿದ್ದನ್ನೆಲ್ಲ ಟ್ವೀಟ್‌ ಮಾಡಿದರೆ ಸ್ವೇಚ್ಛಾಚಾರ.

ಕಡಿವಾಣ ಎನ್ನುವ ಪದಪುಂಜಕ್ಕೆ ಮನಸ್ಸಿನ ಮಿಡಿತವೇ ವ್ಯಾಕರಣ. ಚಿತ್ರಿಸುವುದು ಕಲೆ, ವಿಕೃತಿಸುವುದು ಸುಡುವ ಬೆಂಕಿ. ಬೆಂಕಿಗಳ ಗಾಳಿ ಗುದ್ದಿನಲ್ಲಿ ಜಾಲತಾಣಗಳು ಹೌಸ್‌ಫುಲ್‌ ಪ್ರದರ್ಶನಗೊಳ್ಳುತ್ತಿವೆ. ಬೆಂಕಿಯ ಗುಣ ಕರಕಲಾಗಿಸುವುದು. ಸುಕೃತಿಗಳು ಪ್ರಸರತೆಯಲ್ಲಿ ಇವೆ ನಿಜ, ಸುಭೋದಕಗಳ ಸಬ್ಜೆಕ್ಟ ವ್ಯಾಪ್ತಿ ಕಡಿಮೆ ಅಥವಾ ಅಪ್ರಿಯಗೊಳ್ಳುವ ಸರಕು.
-ಎಚ್‌. ಆನಂದ್‌ ಕುಮಾರ್‌,
ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT