ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

Last Updated 18 ಏಪ್ರಿಲ್ 2014, 9:52 IST
ಅಕ್ಷರ ಗಾತ್ರ

ಹಾಸನ: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ‘ಚುನಾವಣೆ’ಯ ಮೊದಲ ಮತ್ತು ಅತಿ ಮುಖ್ಯವಾದ ಹಂತ ಗುರುವಾರ ಮುಕ್ತಾಯವಾಗಿದ್ದು, ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಶಾಂತವಾಗಿ ನಡೆದಿದೆ. ಎಲ್ಲೂ ಹಿಂಸಾಚಾರ ಅಥವಾ ಇನ್ಯಾವುದೇ ಅಪ್ರಿಯ ಘಟನೆಗಳು ವರದಿಯಾಗಿಲ್ಲ. ಆದರೆ, ಪ್ರತಿ ಬಾರಿಯಂತೆ ಮತದಾರರ ಗುರುತಿನ ಚೀಟಿ ಇದ್ದರೂ ಪಟ್ಟಿಯಲ್ಲಿ ಹೆಸರಿಲ್ಲದೆ ಮತದಾರರು ನಿರಾಶರಾಗಿ ಮರಳಿದಂಥ ಘಟನೆಗಳು ಅನೇಕ ಮತಗಟ್ಟೆಗಳಲ್ಲಿ ನಡೆದವು. ಎಲ್ಲ ಮತಗಟ್ಟೆಗಳಿಂದ ಮಾಹಿತಿ ಬರುವುದು ವಿಳಂಬವಾಗಿದ್ದರಿಂದ ಜಿಲ್ಲೆಯಲ್ಲಿ ಒಟ್ಟಾರೆ ಮತದಾನದ ಪ್ರಮಾಣ ನಿಖರವಾಗಿ ತಿಳಿಯುವುದು ತಡವಾಗಿದೆ. ಆದರೆ ಸುಮಾರು ಶೇ 73ರಷ್ಟು ಮತದಾನ ಆಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಸೀಕರೆಯ 95ನೇ ಮತಗಟ್ಟೆ ಸೇರಿದಂತೆ ಕೆಲವೆಡೆ ಮುಂಜಾನೆ ಮತಯಂತ್ರ ಕೈಕೊಟ್ಟು, ಸ್ವಲ್ಪ ಹೊತ್ತಿನಲ್ಲೇ ಹೊಸ ಮತಯಂತ್ರವನ್ನು ಅಳವಡಿಸಿದ ಘಟನೆ ನಡೆದಿದೆ. ಆದರೆ, ಇದರಿಂದ ಮತದಾನಕ್ಕೆ ಅಂಥ ಸಮಸ್ಯೆ ಆಗಿಲ್ಲ. ಸಕಲೇಶಪುರ, ಬೇಲೂರು ಸೇರಿದಂತೆ ಕೆಲವು ತಾಲ್ಲೂಕುಗಳಲ್ಲಿ ಸಂಜೆ ಮಳೆಯಾದರೂ ಅದನ್ನು ಪರಿಗಣಿಸದೆ ಮತದಾರರು ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ.

ಬಹುತೇಕ ಎಲ್ಲ ಮತಗಟ್ಟೆಗಳಲ್ಲೂ ಸರಿಯಾಗಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 12 ಗಂಟೆಗೆ ವೇಳೆಗೆ ಶೇ 50 ರಷ್ಟು ಮತದಾನ ನಡೆದಿತ್ತು. ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯೆತ್ಯಯವಾಗಿದದರಿಂದ ಬೂತ್‌ ಒಳಗೆ ಗ್ಯಾಸ್‌ ಲೈಟ್‌ಗಳನ್ನಿಟ್ಟುಕೊಂಡು ಮತದಾನ ಪ್ರಕ್ರಿಯೆ ಮುಂದುವರಿಸಬೇಕಾಯಿತು. ಮಳೆಯಿಂದಾಗಿ ಕೆಲವೆಡೆ ನೆಟ್‌ವರ್ಕ್‌ ಸಮಸ್ಯೆ ಆಗಿದ್ದರಿಂದ ಒಟ್ಟಾರೆ ಮತದಾನದ ಪ್ರಮಾಣದ ಮಾಹಿತಿ ಕೊಡಲೂ ತುಂಬ ವಿಳಂಬವಾಗಿದೆ.

‘ಸ್ವೀಪ್‌’ ಸೇವೆ ಸಾರ್ಥಕ
ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ರಚಿಸಿದ್ದ ಸಮಿತಿ (ಸ್ವೀಪ್‌) ಕಳೆದ ಒಂದೂವರೆ ತಿಂಗಳಿಂದ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಹಾಸನ ಕ್ಷೇತ್ರದ ಮಟ್ಟಿಗೆ ಫಲ ನೀಡಿದಂತಾಗಿದೆ. ಕಳೆದ ಬಾರಿ (2009) ಈ ಕ್ಷೇತ್ರದಲ್ಲಿ ಶೇ 69 ಮತದಾನವಾಗಿದ್ದರೆ, ಈ ಬಾರಿ ಅದರ ಪ್ರಮಾಣ 73ಕ್ಕೆ ಏರಿದೆ.

ಸಮಿತಿ ಜಿಲ್ಲೆಯ ಹಲವು ಭಾಗದಲ್ಲಿ ಜಗೃತಿ ಜಾಥಾ, ಬೀದಿ ನಾಟಕ, ಪಂಜಿನ ಮೆರವಣಿಗೆ ಮುಂತಾದ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಜತೆಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಪ್ರತಿ ಕಾಲೇಜುಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ, ಮತದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಮಾಣವಚನ ನೀಡುವುದೇ ಮುಂತಾದ ಕಾರ್ಯಕ್ರಮಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ಶೇ 80ಕ್ಕಿಂತ ಹೆಚ್ಚು ಮತದಾನವಾಗಬಹುದು ಎಂದು ಚುನಾವಣಾ ಆಯೋಗ ನಿರೀಕ್ಷಿಸಿತ್ತು.
ಜಿಲ್ಲಾಧಿಕಾರಿ ಕೃತಜ್ಞತೆ

ಮತದಾನ ಶಾಂತಿಯುತವಾಗಿ ನಡೆಸಲು ಸಹಕರಿಸಿದ ಎಲ್ಲ ಸಿಬ್ಬಂದಿಗೆ ಹಾಗೂ ಜಿಲ್ಲೆಯ ಮತದಾರರಿಗೆ  ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿ ಅನ್ಬುಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT