ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರಾವತಿಗೆ ಸಂಸತ್ತಿನ ಮಣ್ಣು, ಯಮುನಾ ನೀರು

Last Updated 23 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಉದ್ದಂಡರಾಯಪಾಲೆಂ (ಗುಂಟೂರು): ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಕೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುತ್ತಾರೆ ಎಂಬ ರಾಜ್ಯದ ಜನತೆಯ ನಿರೀಕ್ಷೆ ಹುಸಿಯಾಗಿದೆ.

ಶಿಲಾನ್ಯಾಸದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಏನೂ ಮಾತನಾಡದೇ ಇದ್ದದ್ದು ರಾಜ್ಯದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಸತ್ತಿನ ಆವರಣದ ಮಣ್ಣು ಮತ್ತು ಯಮುನಾ ನದಿಯ ನೀರನ್ನು ತಂದಿದ್ದ ಮೋದಿ ಅವರು, ಅವನ್ನು ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹಸ್ತಾಂತರಿಸಿದರು. ಶಿಲಾನ್ಯಾಸ ಸಂದರ್ಭದಲ್ಲಿ ಪ್ರೋಕ್ಷಣೆ ಮಾಡಲು ತಂದಿದ್ದ ರಾಜ್ಯದ 16 ಸಾವಿರ ಹಳ್ಳಿಗಳ ಮಣ್ಣು ಮತ್ತು ದೇಶದ 33 ಪ್ರಮುಖ ನದಿಗಳ ನೀರಿನೊಂದಿಗೆ ಪ್ರಧಾನಿ ಅವರು ತಂದಿದ್ದ ಮಣ್ಣು ಮತ್ತು ನೀರನ್ನು ಸೇರಿಸಲಾಯಿತು.

ಸಾರ್ವಜನಿಕರನ್ನು ಉದ್ದೇಶಿಸಿ ಮಾತು ಆರಂಭಿಸಿದ ಮೋದಿ, ‘ಅಮರಾವತಿಗಾಗಿ ನಾನೂ ಮಣ್ಣು ತಂದಿದ್ದೇನೆ’ ಎಂದರು. ಆಗ ನೆರೆದಿದ್ದ ಜನರ ಕರತಾಡನ ಮುಗಿಲುಮುಟ್ಟಿತು. ಮಾತು ಮುಂದುವರಿಸಿದ ಮೋದಿ, ‘ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಜಾರಿ ಮಾಡುತ್ತದೆ. ಮೋದಿ ಮತ್ತು ವೆಂಕಯ್ಯ ನಾಯ್ಡು ಅವರ ಯಶಸ್ವೀ ಜೋಡಿ ಆಂಧ್ರಕ್ಕೆ ಇನ್ನೂ ಹೆಚ್ಚಿನದನ್ನು ಕೊಡುತ್ತದೆ. ಅಮರಾವತಿ ನಿರ್ಮಾಣ ಮುಗಿಯುವವರೆಗೂ ನಾವು ನಿಮ್ಮೊಂದಿಗಿರುತ್ತೇವೆ’ ಎಂದರು.

‘ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತೆಲಂಗಾಣ ಮುಖ್ಯಮಂತ್ರಿಯನ್ನು ಆಹ್ವಾನಿಸಿದ್ದು ನನಗೆ ಖುಷಿಕೊಟ್ಟಿದೆ. ಯುಪಿಎ ಸರ್ಕಾರ ಕೇವಲ ರಾಜ್ಯವನ್ನು ವಿಭಜಿಸಲಿಲ್ಲ. ಬದಲಿಗೆ ಜನರ ನಡುವೆ ಬಗೆಹರಿಸಲಾಗದಂತಹ ಸಮಸ್ಯೆಗಳ ಬೀಜ ಬಿತ್ತಿತ್ತು. ಆದರೆ ಎರಡೂ ರಾಜ್ಯದ ಮುಖ್ಯಮಂತ್ರಿಗಳು ತೆಲುಗು ಭಾಷಿಕರ ಆತ್ಮ ಒಂದೇ ಎಂದು ಸಾಬೀತು ಮಾಡಿದ್ದಾರೆ’ ಎಂದು ಪ್ರಧಾನಿ ಮೋದಿ ಮಾತು ಮುಗಿಸಿದರು.

ಪ್ರಧಾನಿ ಮೋದಿ ಪ್ರತಿಕೃತಿ ದಹನ
ವಿಜಯವಾಡ (ಪಿಟಿಐ):
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಘೋಷಿಸಿಲ್ಲ ಎಂದು ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಮತ್ತು ಸಿಪಿಐ, ಮೋದಿ ಅವರ ಪ್ರತಿಕೃತಿಗಳನ್ನು ದಹಿಸಿವೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಕಚೇರಿ ಎದುರು ಪ್ರಧಾನಿ ಮೋದಿ ಅವರ  ಪ್ರತಿಕೃತಿಗೆ ಬೆಂಕಿ ಹಚ್ಚಿದರು.


‘ಆಂಧ್ರಪ್ರದೇಶವನ್ನು ವಿಭಜನೆ ಮಾಡುವಾಗ ಯುಪಿಎ ಸರ್ಕಾರ ನೂತನ ಆಂಧ್ರಪ್ರದೇಶಕ್ಕೆ ವಿಶೇಷ ಪ್ರಾತಿನಿಧ್ಯ ಮತ್ತು ಪ್ಯಾಕೇಜ್‌ಗಳನ್ನು ಘೋಷಿಸಿತ್ತು. ಆದರೆ ಅವುಗಳನ್ನು ಜಾರಿ ಮಾಡುವಲ್ಲಿ ಎನ್‌ಡಿಎ ಸರ್ಕಾರ ವಿಫಲವಾಗಿದೆ. ಅವುಗಳನ್ನು ಜಾರಿ ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಈಗ ಸುಮ್ಮನಿದ್ದಾರೆ’ ಎಂದು ಕಾಂಗ್ರೆಸ್ ಮಾಜಿ ಶಾಸಕ ಮಲ್ಲಾಡಿ ವಿಷ್ಣು ಕಿಡಿಕಾರಿದ್ದಾರೆ. ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ರಾಮಕೃಷ್ಣ  ‘ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿಕೆಗೆ ಒತ್ತಾಯಿಸಿ ಒಂದು ವಾರದ ಧರಣಿ ನಡೆಸುತ್ತೇವೆ’ ಎಂದಿದ್ದಾರೆ.

ಸಂಭ್ರಮದ ನಡುವೆ ಸಾಂಸ್ಕೃತಿಕ ಬಿಂಬ
ಅಮರಾವತಿ (ಆಂಧ್ರಪ್ರದೇಶ) (ಪಿಟಿಐ):
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಂಭ್ರಮ ಮನೆಮಾಡಿತ್ತು. ಶಿಲಾನ್ಯಾಸದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸಿದವು.

ಅಮರಾವತಿ ನಿರ್ಮಾಣಕ್ಕೆ 33  ಸಾವಿರ ಎಕರೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಧನ್ಯವಾದ ಸಮರ್ಪಿಸಲಾಯಿತು. ಕಲಾವಿದರು ನೃತ್ಯದ ಮೂಲಕ ‘ರೈತ ವಂದನೆ’ ಕಾರ್ಯಕ್ರಮ ನಡೆಸಿಕೊಟ್ಟರು.  ವಿಜಯವಾಡದ ಕೂಚಿಪುಡಿ ಗ್ರಾಮದ ಹೆಸರಿನಿಂದಲೇ ಗುರುತಿಸಲಾಗುವ ಅಲ್ಲಿನ ನೃತ್ಯ ಪ್ರಕಾರ ಕೂಚಿಪುಡಿಯನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಆಂಧ್ರ ಶೈಲಿಯ ಪುಳಿಯೊಗರೆ, ಸಕ್ಕರೆ ಪೊಂಗಲ್, ಬೂರೆಲು (ಸಿಹಿ), ಗಾರೆಲು (ವಡೆ) ಇದ್ದ ಹಬ್ಬದ ಊಟವನ್ನು ಒದಗಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಬಂಡಾರು ದತ್ತಾತ್ರೇಯ, ನಿರ್ಮಲಾ ಸೀತಾರಾಮನ್, ವೈ.ಎಸ್. ಚೌಧರಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್, ಜಪಾನ್ ಮತ್ತು ಸಿಂಗಪುರ ದೇಶಗಳ ಸಚಿವರು, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

***
ಮೋದಿ, ಚಂದ್ರಬಾಬು ನಾಯ್ಡು, ವೆಂಕಯ್ಯ ನಾಯ್ಡು ಎಂಬ ತ್ರಿಮೂರ್ತಿಗಳು ತಮ್ಮ ಬಣ್ಣದ ಮಾತಿನಿಂದ ಜನರಿಗೆ ಮೋಡಿ ಮಾಡುತ್ತಿದ್ದಾರೆ. ಆದರೆ ಮಾತನ್ನು ಈಡೇರಿಸುತ್ತಿಲ್ಲ.
-ಕೆ. ರಾಮಕೃಷ್ಣ,
ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಆಂಧ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT