ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ ಚೈತನ್ಯದ ಸುತ್ತ...

ಸ್ವಸ್ಥ ಬದುಕು
Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ನೀವು ಯಾವುದಕ್ಕೆ ಗಮನ ನೀಡುತ್ತೀರಿ ಎಂಬುದರ ಬಗ್ಗೆ ಅರಿವಿರಲಿ. ನಿಮ್ಮ ಗಮನ ಮಹತ್ವದ್ದು. ನಿಮ್ಮ ಗಮನ ಸೆಳೆದು ಉತ್ಪನ್ನಗಳನ್ನು ಮಾರಾಟ ಮಾಡಲೆಂದೇ ಜಾಹೀರಾತುಗಳಿಗೆ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತದೆ. ನಿಮಗೆ ಅಗತ್ಯವೇ ಇಲ್ಲದ ವಸ್ತುಗಳನ್ನು ಸಹ ನೀವು ಖರೀದಿಸುತ್ತೀರಿ. ಆ ವ್ಯಕ್ತಿ ಎಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದಾನೆ ಎಂದು ನೀವು ಪದೇ ಪದೇ ಹೇಳುತ್ತಿದ್ದರೆ, ಆತನ ಕೆಟ್ಟ ವರ್ತನೆ ಬಗ್ಗೆ ಯೋಚಿಸುತ್ತಿದ್ದರೆ ನೀವು ಸಹ ಕೆಟ್ಟದಾಗಿ ವರ್ತಿಸಲು ತೊಡಗುತ್ತೀರಿ.

ನಿಮಗೆ ಕಿರಿಕಿರಿಯಾಗುತ್ತಿದ್ದಲ್ಲಿ, ಉದ್ವೇಗ, ಆತಂಕ ಕಾಡುತ್ತಿದ್ದಲ್ಲಿ ತಣ್ಣಗೆ ಕುಳಿತು, ಯಾರಿಗೆ ಹಾಗೂ ಯಾವುದಕ್ಕೆ ನಾನು ಗಮನ ನೀಡುತ್ತಿದ್ದೇನೆ ಎಂದು ಪ್ರಶ್ನೆ ಹಾಕಿಕೊಳ್ಳಿ. ಹಿಂಸಾತ್ಮಕ ದೃಶ್ಯಗಳಿಂದ ಕೂಡಿದ ಯಾವುದೋ ಟಿವಿ ಧಾರಾವಾಹಿ, ಅತಿ ಸಿಟ್ಟು, ಕುತಂತ್ರಗಳಿಂದ ಕೂಡಿದ ಮೆಗಾ ಧಾರಾವಾಹಿ, ಪದೇ ಪದೇ ಸಮಸ್ಯೆಗಳನ್ನು ಹೇಳಿಕೊಳ್ಳುವ, ಟೀಕಿಸುವ ಸಹೋದ್ಯೋಗಿ, ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ನೀವು ಗಮನ ನೀಡಿರುತ್ತೀರಿ.

ಇದರರ್ಥ ಬೇರೆಯವರನ್ನು ದೂರಬೇಕು ಎಂದಲ್ಲ. ನಿಮ್ಮ ಗಮನ ಯಾವ ಕಡೆ ಹೋಗಿದೆ ಎಂಬುದರ ಕುರಿತು ಜಾಗೃತರಾಗಿ ಅದನ್ನು ಸರಿಪಡಿಸಿಕೊಳ್ಳುವುದು. ಕಿರಿಕಿರಿ ಮೂಡಿಸುವ ಸಂಗತಿಗಳಿಂದ ನಿಮ್ಮ ಗಮನ ಬೇರೆಡೆ ಹರಿಸುವುದು ಹೇಗೆ? ಮೊಂಬತ್ತಿಯ ಜ್ವಾಲೆಯನ್ನು ಗಮನಿಸಿ. ಸೂರ್ಯೋದಯ, ಸೂರ್ಯಾಸ್ತದತ್ತ ಗಮನ ನೀಡಿ. ಆಗಸದಲ್ಲಿ ಹಾರಾಡುವ ಪಕ್ಷಿ, ಹಕ್ಕಿಗಳ ಚಿಲಿಪಲಿ, ರೆಂಬೆ-ಕೊಂಬೆಗಳನ್ನು ವಿಶಾಲವಾಗಿ ಹರಡಿಕೊಂಡಿರುವ ಮರ, ಗಾಳಿಗೆ ತೊನೆದಾಡುವ ಹೂವು....

ಇಡೀ ದಿನ ಸುಂದರವಾದ ಶಬ್ದ, ದೃಶ್ಯಗಳಿಗೆ ಗಮನ ನೀಡಿ. ನೀವು ಗಮನ ನೀಡಿದ 101 ಸುಂದರ ಸಂಗತಿಗಳನ್ನು ಒಂದೆಡೆ ಬರೆದು ಇಡಿ. ಟೀಕಿಸುವ, ದೂರುವ ಎಲ್ಲರನ್ನೂ ಆ ದಿನ ದೂರ ಇಡಿ. ಮೊಬೈಲ್ ಸ್ವಿಚ್ ಆಫ್ ಮಾಡಿ. ನಿಮ್ಮ ಸುತ್ತಲಿನ ಸೌಂರ್ದಯ ಆಸ್ವಾದಿಸುವ ಈ ಪ್ರಯೋಗ ಮಾಡಿದ ಮಾರನೇ ದಿನ ನಿಮ್ಮ ಸುತ್ತಲಿನ ಋಣಾತ್ಮಕ ವ್ಯಕ್ತಿಗಳನ್ನು ಸೌಂರ್ದಯ ಆಸ್ವಾದಿಸುವಂತೆ ಪ್ರಚೋದಿಸಿ.

ಮದರ್ ಥೇರೆಸಾ ಹೇಳಿದಂತೆ, ‘ನಿಮ್ಮ ದೃಷ್ಟಿ ಸಕಾರಾತ್ಮಕವಾಗಿದ್ದರೆ ನೀವು ಜಗತ್ತನ್ನು ಪ್ರೀತಿಸುತ್ತೀರಿ. ನಿಮ್ಮ ನಾಲಿಗೆ ಚೆನ್ನಾಗಿದ್ದರೆ ಜಗತ್ತು ನಿಮ್ಮನ್ನು ಪ್ರೀತಿಸುತ್ತದೆ’ ನಿಮ್ಮದೇ ಸೌಂದರ್ಯವನ್ನು ಮೆಚ್ಚಿಕೊಳ್ಳಿ. ಶಾಶ್ವತರಾದ ನೀವು ಅನಂತ ವಿಶ್ವದಿಂದ ಇಲ್ಲಿಗೆ ಇಳಿದು ಬಂದಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಭೂಮಿಯ ಈ ಯಾತ್ರೆಯಲ್ಲಿ ನಿಮಗೆ ಅಹಂಕಾರವೆಂಬ ಎರಡನೇ ತಲೆ ನಿಮಗೆ ಅಂಟಿಕೊಂಡಿದೆ. ಈ ಅಹಂಕಾರ ಮುಂದಿಡುವ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಡಿ.

ಅದಕ್ಕೆ ಗಮನ ನೀಡಬೇಡಿ. ಅಮರವಾಗಿರುವುದು ಹೇಗೆ ಎಂಬುದು, ಅನಂತವಾಗಿರುವುದು ಹೇಗೆ ಎಂಬುದು, ಬದುಕು ಎಷ್ಟು ದೊಡ್ಡದು ಎಂಬುದು ಅಹಂಕಾರಕ್ಕೆ ಗೊತ್ತಿಲ್ಲ. ನಾವೆಲ್ಲರೂ ಒಂದೇ, ನಾವೆಲ್ಲರೂ ಅಮರರು ಎಂಬುದು ಅದಕ್ಕೆ ಗೊತ್ತಿಲ್ಲ. ಸತ್ಯ ಏನೆಂದರೆ ನಮ್ಮ ನಿತ್ಯದ ಬದುಕಿಗೆ ನೆರವು ನೀಡಲೆಂದು ಅಹಂಕಾರ ಇರುತ್ತದೆ. ನಮ್ಮ ಹೆಸರು ನೆನಪಿಟ್ಟುಕೊಳ್ಳಲು, ಈ ಬದುಕಿನಲ್ಲಿ ಭೂಮಿಯ ಮೇಲೆ ನಮ್ಮ ಕೆಲಸ ಏನೆಂದು ನೆನಪಿಟ್ಟುಕೊಳ್ಳಲು ಅಹಂಕಾರ ಇರುತ್ತದೆ.

ದೊಡ್ಡ ದೊಡ್ಡ ಸಂತರು, ವಿಶಾಲ ಹೃದಯಿಗಳು ಸಹ ಅಹಂಕಾರ ಹೊಂದಿರುತ್ತಿದ್ದರು. ಆದರೆ, ಅವರ ಅಹಂಕಾರ ಕಣ್ಣು ರೆಪ್ಪೆಯಷ್ಟು ತೆಳ್ಳಗೆ ಇರುತ್ತಿತ್ತು. ಅವರ ಹೆಸರು ಮಾತ್ರ ಅವರಿಗೆ ತಿಳಿದಿರುತ್ತಿತ್ತು. ಅದೇ ಕಾಲಕ್ಕೆ ಅಮರ, ಅನಂತ ಆತ್ಮವಾಗಿ ಅವರು ಬದುಕಿರುತ್ತಿದ್ದರು. ಸತ್ಯವಾದದ್ದು ಹಾಗೂ ನಮ್ಮೊಳಗಿನ ಅಮರ ಆತ್ಮದ ಗುಣಮಟ್ಟ ಹೆಚ್ಚಿಸುವಂತಹದ್ದಕ್ಕೆ ಮಾತ್ರ ಗಮನ ನೀಡಿ ಎಂದು ಅವರೆಲ್ಲ ನಮಗೆ ಮಾರ್ಗದರ್ಶನ ಮಾಡಿದ್ದಾರೆ.

ನಮ್ಮೊಳಗಿನ ಅಮರ ಆತ್ಮ ಅಥವಾ ಚೈತನ್ಯದತ್ತ ಗಮನ ನೀಡುವುದು ಒಂದು ಅದ್ಭುತ ಅನುಭವ. ಮೂರು ಆಯಾಮದ ಈ ದೇಹದೊಳಗೆ ಇರುವ ಆತ್ಮದತ್ತ ಗಮನ ನೀಡುವುದು ಹೇಗೆ? ಈ ಕ್ಷಣವನ್ನು ಹಾಗೆಯೇ ಗ್ರಹಿಸುವುದರ ಮೂಲಕ ಅಂತಹ ಸ್ಥಿತಿ ತಲುಪಬಹುದು. ಈ ಕ್ಷಣ ಪರಿಪೂರ್ಣವಾಗಿದೆ ಎಂದುಕೊಳ್ಳಿ. ಹಿಂದಿನ ಅಥವಾ ಮುಂದಿನ ಕ್ಷಣಕ್ಕೆ ಗಮನ ನೀಡದೇ ಈ ಕ್ಷಣಕ್ಕಷ್ಟೇ ಗಮನ ನೀಡಿ.

ಈ ಕ್ಷಣಕ್ಕಷ್ಟೇ ಗಮನ ನೀಡಿದಾಗ ನಾವು ಸಮಯಕ್ಕೆ ಗಮನ ನೀಡುವುದಿಲ್ಲ. ಅಹಂಕಾರಕ್ಕೆ ಹಿಂದಿನದ್ದು ಅಥವಾ ಮುಂದಿನದ್ದು ಅಂದರೆ ಬಹುಪ್ರೀತಿ. ಭೂತ ಮತ್ತು ಭವಿಷ್ಯತ್ ಕಾಲದಲ್ಲಿ ಅದು ಓಲಾಡುತ್ತ ಇರುತ್ತದೆ. ಆದರೆ, ಈ ಕ್ಷಣವೆಂಬುದು ಶಾಶ್ವತವಾಗಿರುತ್ತದೆ. ಈ ಕ್ಷಣಕ್ಕೆ ಗಮನ ನೀಡಿದಾಗ ಶಾಂತಿ, ಆನಂದ, ಸೌಹಾರ್ದದ ಅನುಭವವಾಗುತ್ತದೆ.
*
ಶಾಶ್ವತ ಕ್ಷಣಕ್ಕೆ ಗಮನ ನೀಡುವುದರಿಂದ ಆಗುವ ಲಾಭವೇನು ಎಂದು ನೀವು ಪ್ರಶ್ನಿಸಬಹುದು.


ಜನ ನಿಮ್ಮ ಬಳಿ ಒರಟಾಗಿ ನಡೆದುಕೊಂಡಾಗ ನೀವು ಪ್ರತಿಕ್ರಿಯಿಸುವುದಿಲ್ಲ.  ನೀವು ಎಷ್ಟು ಪ್ರಗತಿ ಸಾಧಿಸಿದ್ದೀರಿ ಎಂಬುದನ್ನು ಅವಲಂಬಿಸಿ ಈ ಪ್ರತಿಕ್ರಿಯೆ ಇರುತ್ತದೆ. ಎಚ್ಚರದಿಂದ ಇರುತ್ತೀರಿ. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವುದಿಲ್ಲ. ಪ್ರತ್ಯುತ್ತರ ನೀಡುವುದಿಲ್ಲ.

* ಸಮಸ್ಯೆ ಎದುರಾದಾಗ ಅದು ಸಮಸ್ಯೆಯಂತೆ ಕಾಣುವುದಿಲ್ಲ. ಸೂಕ್ತವಾಗಿ ನಿಭಾಯಿಸಬೇಕಾದ ಸನ್ನಿವೇಶದಂತೆ ಕಾಣುತ್ತದೆ.

* ನಿಮ್ಮ ಶಾಶ್ವತ ಸ್ಥಿತಿಯ ಅರಿವು ನಿಮ್ಮೊಳಗೆ ಹೆಚ್ಚುತ್ತ ಹೋದಂತೆ ನೀವು ಲೌಕಿಕ ವಸ್ತುಗಳು, ನಗು, ಬೆಚ್ಚನೆಯ ಭಾವ ಎಲ್ಲವನ್ನೂ ಇತರರಿಗೆ ನೀಡುತ್ತ ಹೋಗುತ್ತೀರಿ. ನೀವು ನೀಡುತ್ತ ಹೋದಂತೆ ಇವೆಲ್ಲ ನಿಮ್ಮ ಬಳಿ ದ್ವಿಗುಣಗೊಂಡು ನಿಮ್ಮ ಬಳಿ ಬರುತ್ತವೆ. ನೀವು ಕೊಟ್ಟಿದ್ದು ನಿಮಗೆ ಬರುತ್ತದೆ ಎಂದು ಕ್ರಿಸ್ತ ಹೇಳಿದ್ದು ಸುಮ್ಮನೆ ಅಲ್ಲ.

ನಿಮ್ಮ ಅಹಂಕಾರ ಮಧ್ಯ ಎಲ್ಲೋ ಎದ್ದೇಳಬಹುದು. ಬಾಲಿಶವಾಗಿ ಸಿಟ್ಟಿಗೇಳಬಹುದು. ಇಂತಹ ಘಟನೆಗಳು ಮರುಕಳಿಸದೇ ಇರಲು ಶಾಶ್ವತವಾದ ಚೈತನ್ಯದ ಸುತ್ತ ನಿಮ್ಮ ಬದುಕು ಕಟ್ಟಿಕೊಳ್ಳಿ. ನನ್ನೊಳಗಿನ ಅಮರ ಚೈತನ್ಯದ ಸುತ್ತ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳಿ. ನಿತ್ಯ  ವ್ಯಾಯಾಮ ಮಾಡುವ ಮೂಲಕ, ಎಚ್ಚರಿಕೆಯಿಂದ ತಿನ್ನುವ ಮೂಲಕ, ಸೌಹಾರ್ದದಿಂದ ಯೋಚಿಸುವ ಮೂಲಕ ನನ್ನೊಳಗೆ ಹಾಗೂ ನನ್ನ ಸುತ್ತಲಿನ ಎಲ್ಲರಲ್ಲಿ ಶಾಂತಿ, ಸಂತಸ ಮೂಡಿಸುತ್ತೇನೆ ಎಂದು ಹೇಳಿಕೊಳ್ಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT