ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಭ್‌ ಚಿತ್ರಪ್ರವಾಸ ಕಥನ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬಿಗ್‌–ಬಿ ಅಮಿತಾಭ್‌ ಬಚ್ಚನ್‌ ಅವರು ಕೋಲ್ಕತ್ತಕ್ಕೆ ಭೇಟಿ ನೀಡಲು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಅವರು ಕೋಲ್ಕತ್ತಕ್ಕೆ ತೆರಳುತ್ತಿರುವುದು ಮೋಜಿನ ಪ್ರವಾಸಕ್ಕಲ್ಲ. ಬದಲಾಗಿ ಶೂಜಿತ್‌ ಸರ್ಕಾರ್‌ ನಿರ್ದೇಶನದ ‘ನೆಕ್ಸ್ಟ್‌ –ಪಿಕು’ ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕಾಗಿ. ‘ಈ ಪ್ರವಾಸಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಇವರ ಕಾತರಕ್ಕೂ ಕಾರಣವಿದೆ.

ಅಮಿತಾಭ್‌ ಮತ್ತು ಕೋಲ್ಕತ್ತಾಕ್ಕೂ ಇರುವ ಸಂಬಂಧ ಹೊಸದೇನಲ್ಲ. 72 ವರ್ಷದ ಈ ಹಿರಿಯ ನಟ ಕಂಪೆನಿಯೊಂದರಲ್ಲಿ ಎಕ್ಸಿಕ್ಯೂಟಿವ್‌ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅಲ್ಲದೇ ತಮ್ಮ ಸಿನಿಪಯಣದಲ್ಲಿ ಅನೇಕ ಚಿತ್ರಗಳನ್ನು ಕೋಲ್ಕತ್ತದಲ್ಲಿಯೇ ಚಿತ್ರಿಕರಿಸಲಾಗಿದೆ.

ಈ ಚಿತ್ರೀಕರಣದ ಪ್ರವಾಸದ ಜತೆಗೇ ಪಿಕು ಚಿತ್ರದ ಕುರಿತೂ ಪಿಟಿಐ ಜತೆ ಬಿಗ್‌ ಬಚ್ಚನ್‌ ಮುಕ್ತವಾಗಿ ಮಾತನಾಡಿದ್ದಾರೆ. ‘ನಾನು ಈಗಾಗಲೇ ಶೂಜಿತ್‌ ಸರ್ಕಾರ್‌ ಅವರೊಂದಿಗೆ ಕುಳಿತು ಪಿಕು ಚಿತ್ರದ ಕೆಲವು ದೃಶ್ಯ ತುಣುಕುಗಳನ್ನು ನೋಡಿದ್ದೇನೆ. ನಾವಿಬ್ಬರೂ ಚರ್ಚಿಸಿ ಮುಂದಿನ ಭಾಗವನ್ನು ಕೋಲ್ಕತ್ತ, ದೆಹಲಿ ಮತ್ತು ಗುಜರಾತ್‌ನಲ್ಲಿ ನಡೆಸುವುದೆಂದು ನಿರ್ಧರಿಸಿದ್ದೇವೆ. ಈ ಪ್ರವಾಸವು ಕೋಲ್ಕತ್ತದಲ್ಲಿ ನಾನು ಕಂಪೆನಿಯೊಂದರ ಎಕ್ಸಿಕ್ಯುಟೀವ್‌ ಆಗಿ ಕಳೆದ ಏಳು ವರ್ಷಗಳ ಕಾರ್ಪಣ್ಯದ ನೆನಪನ್ನು ಮರುಕಳಿಸಬಹುದು’ ಎಂದಿದ್ದಾರೆ.

‘ಬಂಗಾಳಿಯರ ಪ್ರೀತಿ ಮತ್ತು ಅಭಿಮಾನ ಅಗಾಧವಾದದ್ದು. ನಿಮಗೆ ಎಂದಾದರೂ ನಿಮ್ಮತನದ ಬಗ್ಗೆ ಅನುಮಾನಗಳು ಕಾಡಿದರೆ. ಅಪನಂಬಿಕೆಯುಂಟಾದರೆ ಕೋಲ್ಕತ್ತಗೆ ಭೇಟಿ ನೀಡಿ. ಆ ಜನರು ನಿಮ್ಮನ್ನು ಎಲ್ಲ ಅಪನಂಬಿಕೆಗಳಿಂದ ಎತ್ತಿ ಮಮತೆ ಮತ್ತು ಸಂತೋಷವನ್ನು ತುಂಬುತ್ತಾರೆ’ ಎಂದು ತಮ್ಮ ಬ್ಲಾಗ್‌ನಲ್ಲಿ ಬರೆದಿರುವ ಬರಹದಲ್ಲಿ ಬಚ್ಚನ್‌ ಕೋಲ್ಕತ್ತ ಜನರನ್ನು ಹಾಡಿ ಹೊಗಳಿದ್ದಾರೆ.
ತಂದೆ ಮಗಳ ಸಂಬಂಧದ ವಿವಿಧ ಮಜಲುಗಳನ್ನು ಬಿಚ್ಚಿಡುವ ಕಥಾ ಹಂದರವನ್ನು ಹೊಂದಿರುವ ಪಿಕು ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅಮಿತಾಭ್‌ ಮಗಳಾಗಿ ನಟಿಸುತ್ತಿದ್ದಾರೆ. ಜತೆ ಇರ್ಫಾನ್‌ ಖಾನ್‌, ಮೌಸಮಿ ಚಟರ್ಜಿ ಮತ್ತು ಜಿಶು ಸೇನ್‌ ಗುಪ್ತಾ ತಾರಾಗಣದ ಮೆರುಗು ಈ ಚಿತ್ರಕ್ಕಿರುವುದು ನಿರೀಕ್ಷೆ ಹೆಚ್ಚಿಸಿದೆ.

ಚಿತ್ರದ ಉಳಿದ ಭಾಗವನ್ನು ದೆಹಲಿ ಮತ್ತು ಗುಜರಾತ್‌ನಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ. ಈ ಸ್ಥಳಗಳ ಬಗ್ಗೆಯೂ ಅಮಿತಾಭ್‌ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ದೆಹಲಿ ಹಲವು ವರ್ಷಗಳಿಂದ ನನಗೆ ತವರೇ ಆಗಿಬಿಟ್ಟಿದೆ. ಈ ನಗರ ನನಗೆ ಏನು ಎಂಬುದರ ಬಗ್ಗೆ ಈಗಾಗಲೇ ಸಾಕಷ್ಟು ಸಲ ಹೇಳಿದ್ದೇನೆ. ಆದರೆ ಎಷ್ಟು ಹೇಳಿದರೂ ಇನ್ನೂ ಉಳಿದೇ ಇದೆ’ ಎಂದು ಭಾವುಕರಾಗಿ ನುಡಿದಿದ್ದಾರೆ.
ದೆಹಲಿಯನ್ನು ತನ್ನ ಮನೆ ಎಂದಿರುವ ಇವರು ಗುಜರಾತ್‌ ಬಗ್ಗೆ ಕೂಡ ತಮ್ಮ ಪ್ರೀತಿಯನ್ನು ಹರಿಬಿಟ್ಟಿದ್ದಾರೆ.

‘ಗುಜರಾತ್‌ ನನ್ನ ಹೊಸ ಮನೆ. ಪ್ರವಾಸೋದ್ಯಮ ಅಭಿಯಾನಕ್ಕಾಗಿ ಅಲ್ಲಿಗೆ ಭೇಟಿ ನೀಡಿದ್ದಾಗ ಅಲ್ಲಿ ನನಗೆ ಸಿಕ್ಕ ಪ್ರೀತಿ ಮತ್ತು ವಿನಯಶೀಲ ಆತಿಥ್ಯ ಎಂದೂ ಮರೆಯಲಾರೆ. ಅಲ್ಲಿನ ಜನರು ಸಜ್ಜನಿಕೆ ಯಾವತ್ತಿಗೂ ಮಾದರಿ’ ಎಂದು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT